ಶ್ರೀಗೋಪಾಲದಾಸಾರ್ಯ ವಿರಚಿತ ಉಪಾಸನಾ ಸುಳಾದಿ
( ಒಂದೇ ಅನಂತರೂಪ , ಅನಂತ ಒಂದೇ ರೂಪನಾದ ಶ್ರೀಹರಿಯ ಗುಣ ರೂಪ ಕ್ರಿಯೆ, ಅಧಿಕಾರ ಭೇದದಿಂದ ವಿಶ್ವರೂಪೋಪಾಸನಾ ಕ್ರಮ.)
ರಾಗ ಸಾರಂಗ
ಧ್ರುವತಾಳ
ಒಂದೇ ರೂಪವು ನೋಡಾ ಅನಂತಪೂರ್ಣವಿನ್ನು
ಒಂದೊಂದು ಅವಯವವೆ ಪೂರ್ಣವಯ್ಯಾ
ಒಂದು ರೂಪದೊಳಗೆ ಅನಂತ ರೂಪಂಗಳು
ಒಂದೊಂದು ರೂಪದಿಂದ ಭೇದಾಭೇದನಾಗಿಪ್ಪ
ಒಂದು ಧನುರ್ಧರ ಒಂದು ಅರಿಶಂಖಧರ
ಒಂದು ಚತುರ್ಭುಜ ಒಂದು ದ್ವಿಭುಜ ರೂಪ
ಒಂದು ಚತುರ ಹಸ್ತ ಒಂದು ಸಾಸಿರ ಹಸ್ತ
ಒಂದು ಏಕ ಮುಖ ಒಂದು ಚತುರ್ಮುಖ
ಒಂದು ಸಾಸಿರಮುಖ ಒಂದು ಗಜಮುಖ
ಒಂದು ಮತ್ಸ್ಯಮುಖ ಒಂದು ಸೂಕರಮುಖ
ಒಂದು ಕ್ರೂರಮುಖ ಒಂದು ಶಾಂತ ಮುಖ
ಒಂದು ಶಾಮ ವರ್ನ ಒಂದು ರಜೋವರ್ನ
ಒಂದು ಪೀತವರ್ನ ಒಂದು ಶುಭ್ರವರ್ನ
ಒಂದು ಭಯಪ್ರದ ಒಂದು ಅಭಯಪ್ರದ
ಒಂದು ಅಣುವಾಗಿ ಪುನಃ ಒಂದೊಂದೆ ಮಹತ್ತಹ
ಒಂದು ಕುಳಿತಿಪ್ಪದು ಒಂದು ನಿಂತಿಪ್ಪದು
ಒಂದು ಕೆಲವು ಮಲಗಿ ಒಂದು ಕೆಲವು ಓಡ್ಯಾಟ
ಒಂದು ಕಡೆ ಸಂಹಾರ ಒಂದು ಕಡೆ ಸೃಷ್ಟಿಯು
ಒಂದು ಕಡೆ ಪಾಲಣೆ ಒಂದೆ ರೂಪದಲ್ಲಿನ್ನು
ನಿಂದು ನಾನಾ ವೈಚಿತ್ರನಾಗಿ ತೋರುವ ದೈವ
ಸುಂದರ ಮೂರುತಿ ಗೋಪಾಲವಿಟ್ಠಲ
ಒಂದಾನಂತಾನಂತ ರೂಪ ಅನಂತ ಒಂದೇ ರೂಪ ॥ 1 ॥
ಮಟ್ಟತಾಳ
ಒಂದು ರವಿಯ ತೇಜ ಒಂದು ದ್ವಿ ರವಿತೇಜ
ಒಂದಕ್ಕೊಂದು ಅಧಿಕ ಹತ್ತು ರವಿಯ ತೇಜ
ಒಂದೊಂದೆ ಬಲ ವಿಜ್ಞಾನ ಪೂರ್ಣವಾದ ರೂಪ
ನಿಂದಿವೆ ಮಲಗುವ ಮಲಗಿ ತಿರುಗುವ
ಪೊಂದಿ ಕೊಡುವ ಏಕ ಇಂದ್ರಿಯ ಭೇದಗಳಿಲ್ಲ
ಮಂದಜನರ ಮನಕೆ ಮಹಾ ಅಲೌಕಿಕ
ಗಂಧಾದಿ ಶಬ್ದವೆಲ್ಲ ಸ್ವರೂಪ ಭೂತಾ
ಇಂದ್ರಿಯಂಗಳೆಲ್ಲ ಒಂದೊಂದೆ ಪೂರ್ಣವು
ಪೊಂದಿಪ್ಪವು ನೋಡಾನಂತ ಬೊಮ್ಮಾಂಡಗಳು
ಹಿಂದಿನ ಅತಿತ ಅನಾಗತವೆಲ್ಲಾ
ಒಂದೊಂದೆ ರೂಪದಿ ಹೊಂದಿಕೊಂಡಿಪ್ಪವು
ಒಂದು ಆದರು ಅಂತೆ ಕಂಡೆನೆಂಬವರಾರು
ನಂದನಂದನ ಕಂದ ಗೋಪಾಲವಿಟ್ಠಲ
ಬಂದು ತೋರುವ ತತ್ತತ್ತ್ಯೋಗ್ಯತೆಯನುಸಾರ ॥ 2 ॥
ರೂಪಕತಾಳ
ಒಂದು ಕಡೆಯಲಿ ರಾವಣನ ಹನನ ಮಾಡುವ
ಒಂದು ಕಡೆಯಲಿ ತತ್ವಜ್ಞಾನ ಬೋಧಿಸುತಿಪ್ಪ
ಒಂದು ಕಡೆಯಲಿ ತುರುವುಗಳನು ಕಾಯುವನು
ಒಂದು ಕಡೆಯಲಿ ಕ್ರೂರ ಜನರ ಸದೆ ಬಡಿಯುವ
ಒಂದು ಕಡೆಯಲಿ ಕುರು ಪಾಂಡವರ ಕಡದಾಡಿಸುವ
ಒಂದು ಕಡೆಯಲಿ ಗೋಪ ಸ್ತ್ರೀಯರ ವೊಡನಾಟ
ಒಂದು ಕಡೆಯಲಿ ಗೋವರ್ಧನ ಗಿರಿಯನೆತ್ತಿಹ
ಒಂದು ಕಡೆಯಲಿ ಬ್ರಹ್ಮಾದ್ಯರಿಂದ ಪೂಜಿಸಿಕೊಂಬ
ಒಂದು ಕಡೆ ಕಂಸನ ಹನನ ಮಾಡುತಿಪ್ಪ
ಒಂದು ಕಡೆಯಲಿ ಪಾಲು ಬೆಣ್ಣೆ ಕದ್ದದ್ದು ತಿಂದು
ಒಂದು ರೂಪದಿ ಯಶೋದೆ ಮುಂದಾಡುತಿಪ್ಪ
ಇಂದುಮುಖಿಯರ ಮುಂದೆ ಇಲ್ಲೆಂದಾಡುತಿಪ್ಪ
ಒಂದು ರೂಪದಲ್ಲೆ ಈ ಪರಿಪರಿ ರೂಪ
ಛಂದದಿ ತೋರುವ ಒಂದೆರಡು ಎನಸಲ್ಲ
ಕಂದರ್ಪಜನಕ ಗೋಪಾಲವಿಟ್ಠಲ ತನ್ನ
ಹೊಂದಿದವರ ಮನಕೆ ಒಂದಾನಂತಾಗಿ ತೋರ್ಪಾ ॥ 3 ॥
ಝಂಪಿತಾಳ
ಒಂದು ಕಡೆಯಲಿ ದ್ರೋಣ ಭೀಷ್ಮಾದಿಗಳನೆಲ್ಲ
ಕೊಂದು ಕೊಂದರ್ಜುನ ಕೊಲ್ಲೊ ನೀಯಂತಿಪ್ಪ
ಒಂದು ಕಡೆಯಲಿ ಅರಿ ಸೈನ್ಯಕ್ಕೆ ಬಲವಾಗಿ
ಮುಂದರಿದು ಮತ್ತವರ ಮೋಹ ಗೊಳಿಸುತಲಿಪ್ಪ
ಒಂದು ರೂಪದಿ ಪಾರ್ಥನಿಗೆ ತತ್ವ ತಿಳಿಸುತ್ತಾ
ಬಂದ ಅರಿಗಳ ಅಸ್ತ್ರ ತಾನೆ ಧರಿಸುತಲಿಪ್ಪ
ಒಂದು ರೂಪದಿ ಅರ್ಜುನನ್ನ ಆಲಿಂಗಿಸಿ
ಬಂದ ಆಯಾಸಗಳ ಬಡಸದೆ ನಿಂತಿಪ್ಪ
ಒಂದು ರೂಪದಿ ದೇವದತ್ತ ಶಂಖವನೂದಿ
ತಂದೀವ ಬಲವ ಪ್ರತಿಕ್ಷಣಕೆ ಪಾರ್ಥನಿಗಿನ್ನು
ಮಂದ ಅಸುರರಿಗೆ ಇದೇ ಶಬ್ದದಿಂದ ಅವರ
ಕುಂದು ಮಾಡುವ ಬಲ ಒಂದು ರೂಪದಲ್ಲಿನ್ನು
ಒಂದೊಂದು ಅನಂತ ರೂಪನು ಆಗಿ
ಮುಂದರಿದು ಆ ಕುರುಸೈನ್ಯ ಕೊಂದು ಕೊಂದ್ಹಾಕುತಿಹ
ಮಂದಾಕಿನಿಯ ಜನಕ ಗೋಪಾಲವಿಟ್ಠಲಗೆ ಹೀ -
ಗೆಂದು ತಿಳಿದರ್ಚಿಪಗೆ ಬಂಧನವ ಕಡಿವಾ ॥ 4 ॥
ತ್ರಿವಿಡಿತಾಳ
ಮತ್ಸ್ಯಾದಿ ಅಜಾದಿ ಕೇಶವಾದಿ ಚತುರಾದಿ
ವಿಶ್ವಾದಿ ಹಯ ಶಿಂಶುಮಾರ ಕಪಿಲ ವ್ಯಾಸ
ಸ್ವಚ್ಛವಾದಾನಂತ ರೂಪಂಗಳೆಲ್ಲವು
ನಿಚ್ಚ ನಿಚ್ಚ ಕೃಷ್ಣನಲ್ಲೇ ನಿತ್ಯವಾಗಿ
ಎಚ್ಚತ್ತಿಹವು ಕಾಣೊ ಲೇಶ ಸಂಶಯ ಸಲ್ಲಾ
ಅಚ್ಚನಿಟ್ಟಂತೆ ಮತ್ತೊಂದೆ ಪಟ್ಟದಲ್ಲಿನ್ನೂ
ಅಚ್ಯುತನ ರೂಪ ಒಂದು ದುರ್ಲಭ ಪ್ರಬಲ
ನೀಚೋಚ್ಛವಿಲ್ಲವೊ ನಿತ್ಯ ವ್ಯಕ್ತಾ
ಅಚ್ಚುಬೆಲ್ಲವು ಒಂದು ಆವ ಕಡೆ ತಿಂದರು
ಅಚ್ಚು ಒಂದು ಕಡೆ ಹುಳಿ ಸೀಯು ಎನಿಪದೇ
ಮಚ್ಚರ ಜನರಿಗೆ ಮರುಳುಗೊಳಿಸಿ ಹೀಗೆ
ನಿಚ್ಚವಾದ ನಿರಯ ಪೊಂದಿಸುವ
ಸ್ವಚ್ಛ ಮೂರುತಿ ನಮ್ಮ ಗೋಪಾಲವಿಟ್ಠಲ
ಅಚ್ಚ ಕರುಣಿ ಕಾಣೊ ಆರ್ತ ಜನಕೆ ನಿತ್ಯ ॥ 5 ॥
ಅಟ್ಟತಾಳ
ಅಣು ಅಣು ಪರಮಾಣು ಅತ್ಯಣು ಬಲು ಅಣು
ಘನ ಘನ ಘನ ರೂಪ ಘನ ತಾನು ಘನ ತಾನು
ಅಣುರೂಪದಾ ದ್ರವ್ಯ ಮನಸ್ಸಿಗೆ ವಂದನ್ನ
ಎಣಿಕೆ ಹಿಡಿದೆನೆನಲು ಮನಕೆ ನಿಲ್ಲುವದಲ್ಲಾ
ಘನರೂಪದಾ ದ್ರವ್ಯ ಆಕಾರದೊಳಗಿನ್ನು
ಅಣುವಾಗಿ ತೋರೋದು ಅವ್ಯಾಕೃತ ದ್ರವ್ಯ
ಘನವ್ಯಾಪ್ತಿ ವುಳ್ಳದಾದರು ಸರಿಯೆವೆ
ಘನ ಹರಿ ದ್ರವ್ಯದಲ್ಲಿ ಅಣುವಾಗಿ ತೋರೋದು
ಚಿನುಮಯ ಹರಿ ತಾನು ಚಿದ್ರೂಪಕೆ ಬಿಂಬ
ಎನಸಲ್ಲ ಮನುಜಾ ಘನ ಸೋಜಿಗವುಂಟು
ಅನುವಾದ ಪಂಚಮಹಾಭೂತ ಅವ್ಯಕ್ತಕೆ
ಮನಸಿಜನಯ್ಯಾ ತಾ ಬಿಂಬನಾಗಿಪ್ಪನು
ಎಣಿಸಿ ಧೇನಿಸಿಪ್ಪಂಗೆ ಎಲ್ಲಕ್ಕೆ ಹರಿ ಬಿಂಬ
ಘನ ಜಾಗ್ರತನಯ್ಯಾ ಗಣನೆ ಮಾಡನು ಅನ್ಯ
ಸನಕಾದಿಗಳೊಡೆಯಾ ಗೋಪಾಲವಿಟ್ಠಲ
ಅನಿಮಿಷರಿಗೆ ತಿಳಿಯಾ ಅಗೋಚರನಯ್ಯಾ ॥ 6 ॥
ಆದಿತಾಳ
ಚತುರವಿಂಶತಿ ತತ್ವ ಸ್ವರೂಪ ಭೂತವು
ಪತಿತಪಾವನನಾದ ಹರಿಯಲ್ಲಿ ಯಿಪ್ಪುದು
ತತು ತತುರೂಪ ತದ್ವರ್ಣ ತದಾಕಾರ
ಗತಿಗೆ ನಿಯಾಮಕ ಸತತ ಬಿಂಬನಾಗಿ
ಖತಿಗೊಳಗಾಗದ ಖಂಡಾಖಂಡನಾಗಿ
ಜಿತವಾದ ತನ್ನ ಸ್ವರೂಪದಿಂದಲೇ
ಇತರಾಪೇಕ್ಷೆಯು ಇಲ್ಲ ಈರ್ವರಿಂದಲಿ ಬಂದ
ಅತಿಶಯ ಬೇಕಿಲ್ಲ ಆಶ್ರಿತ ಜನಪಾಲಾ
ಜಿತವಾದ ಜಡಕ್ಕೆ ಬಿಂಬನಾದ ಬಳಿಕಿನ್ನು
ತತುವ ಜೀವರಿಗೆಲ್ಲ ಬಿಂಬನಾಗೋದಾಶ್ಚರ್ಯ
ಇತರ ಜೀವರಿಗೆಲ್ಲಾ ನಿಶ್ಚಯ ನಿತ್ಯದಿ
ಗತಿ ಬೇಕಾದವನಿಗೆ ಇದೆ ಚಿಂತನೋಪಾಯ
ಇತರ ದೈವರಗಂಡ ಗೋಪಾಲವಿಟ್ಠಲ
ಚ್ಯುತದೂರ ನಿತ್ಯ ಆಶ್ರಿತ ಜನಪಾಲ ॥ 7 ॥
ಜತೆ
ವಿಶ್ವರೂಪ ದರುಶನಾಧಿಕಾರಿಗಳು ಅರಿದು
ವಿಶ್ವನಾಮಕ ಗೋಪಾಲವಿಟ್ಠಲನ ಭಜಿಸಿ ॥
***
No comments:
Post a Comment