varadendra teertha rayara mutt yati 1785 stutih
ರಾಗ : ಯದುಕುಲಕಾಂಬೋಧಿ ತಾಳ : ಏಕ
ಎದ್ದು ನಿಂತ ಬಗೆಯೇನೊ
ಮೂಲರಾಮ ಪೇಳು ।
ಬುಧ ವರದೇಂದ್ರ ಯತಿ
ಮನ ಕುಮುದ ಸೋಮ ।। ಪಲ್ಲವಿ ।।
ಸೀತೆಯನ್ನು ನೆನಿಸಿ ಶೀಘ್ರದಿ ತಾಹೆನೆಂದೆದ್ದೆಯೊ ।
ಪಾಥೋದಿಪಥ ಕೊಡದ ಕಾತುರದಲಿಂದೆದ್ದೆಯೊ ।
ಯಾತುಧಾನರ ಬಾಲವ ಘಾತಿಸುವೆನೆಂದೆದ್ದೆಯೊ ।।
ಶೀತಾಂಶು ವದನ ಶುಭ ರದನ ತಿಳಿಸು ।
ಪ್ರೀತಿಯಲಿ ವರದೇಂದ್ರ ಯತಿ ಮನೋಧಾಮ ।। ಚರಣ ।।
ಭಕುತರಿಗೆ ಭಯ ಬಾರಗೊಡನೆಂದು ನಿಂತೆಯೊ ।
ಭಕುತಿಯಲಿ ಭಜಕರಿಗೆ ಧೇನಿಸಲು ನಿಂತೆಯೊ ।
ಸಕಲೇಷ್ಟಪ್ರದ ಮಹಾ ಪ್ರಭುಯೆಂದು ನಿಂತೆಯೊ ।।
ಮುಕುತೇಶ ಮೂಲರಘುರಾಮ ಯತಿಯು ।
ಭಕುತಿಯಲಿ ಭಜಿಸೆ ನಿಂತೆಯೊ ಪೂರ್ಣಕಾಮ ।। ಚರಣ ।।
ಶರಚಾಪ ಧರಿಸಿ ದಶಶಿರನ ತರಿಯಲಿ ನಿಂತೆಯೊ ।
ಪರಿಪರಿಯಲಿ ಭಕುತರನ ಪಾಲಿಸಲಿ ನಿಂತೆಯೊ ।
ಶರಣ ಜನರುಗಳು ಕರೆದರೆಂದೆನುತ ನಿಂತೆಯೊ ।।
ವರದ ಗೋಪಾಲವಿಠಲಾ ವರದೇಂದ್ರ ।
ವರದರೀ ಪ್ರಾಕೃತ ಭಯ ಪರಿಹರಿಪ ।। ಚರಣ ।।
****
No comments:
Post a Comment