Wednesday, 13 January 2021

ಒಗತನದೊಳು ಸುಖವಿಲ್ಲ ಇದ ಒಲ್ಲೆನೆಂದರೆ ankita gopala vittala

 ಶ್ರೀ ಗೋಪಾಲದಾಸರ ಕ್ಲಿಷ್ಟ ದೇವರನಾಮ


ಒಗತನದೊಳು ಸುಖವಿಲ್ಲ ಇದ 

ಒಲ್ಲೆನೆಂದರೆ ನೀ ಬಿಡೆಯಲ್ಲ | ಪ |


ಜಗದೊಳು ಹಗರಣ 

ಮಿಗಿಲಾಯಿತು ಪನ್ನಗನಗನಿವಾಸ | ಅ ಪ|


ಮೂರು ಬಣ್ಣಿಗೆಯ ಮನೆಗೆ - 

ಮೂರೆರಡು ಭೂತಗಳು

ಮೂರು ನಾಲ್ಕು ಪ್ರಾಕಾರಕ್ಕೆ - 

ಮೂರಾರು ಛಿದ್ರಗಳು 

ಮೂರು ಅವಸ್ಥೆಯು ದಿನಕೆ - 

ಮೂರು ನೂರಾರು ಹತ್ತರಲಿ 

ಮೂರು ವಿಧದನ್ನದಿಂದ - 

ಮೂರು ತಾಪಕ್ಕಾರೆ | ೧ |


ಐದುಮಂದಿ ಭಾವನವರು 

ಐದು ಮೈದುನರು ಕೂಡಿ

ಐದು ಪರಿತಾನಾಗಿ ಮಾವ -

ನೈದು ಕತ್ತಲೆಕೋಣೆ- 

ಗೈದುವಂತೆ ಮಾಡುವರು 

ಐದು ತಂದು ಬೆಚ್ಚಿಸುವರು 

ಐದನೆ ಬೊಕ್ಕಸದ ಮನೆಯೆ-

ಲ್ಲಿದೆಯೋ ನಾ ಕಾಣೆ| ೨ |


ಆರಾರು ಎರಡು ಸಾವಿರ 

ದಾರಿಯಲಿ ಹೋಗಿ ಬರುವರು 

ಆರು ಮೂರು ಮೂರು 

ಸಾವಿರದಾರು ನೂರು ನಿತ್ಯದಿ 

ಆರು ನಾಲ್ಕು ಮಂದಿ ಹಿರಿಯ 

ಪಾರುಪತ್ಯಗಾರದಿದಕೆ

ಆರು ಎರಡುವಿಧದಲೆನ್ನ-

ಯಾರು ಮಾಡುತಿಪ್ಪರೋ | ೩ |


ಒಬ್ಬ ಬೆಳಕು ಮಾಡುವ ಮ-

ತ್ತೊಬ್ಬ ಕತ್ತಲೆಗೈಸುವ

ಒಬ್ಬ ಎರಡೂ ಮಾಡುವ ಮೇ-

ಲೊಬ್ಬ ಹಬ್ಬಿಕೊಂಡಿಪ್ಪವರಂತೆ

ಒಬ್ಬನ ಕಾಣದೆ ನಾ ತ-

ಬ್ಬಿಬುಗೊಳಗಾದೆ | ೪ |


ಆರು ಹತ್ತರ ಮೂಲದಿ 

ಆರು ಮಂದಿ ಬಿಡದೆ ಎನ್ನ 

ಘೋರೈಸುವರೊ ಮರುಳೊಂದು ವಿ-

ಚಾರ ಮಾಡಲೀಸರೋ 

ಆರು ಮೂರ ವಿಧದ ಸೋಪ -

ಸ್ಕರ ಒಂದಾದರು ಇಲ್ಲ 

ಆರೆ ಇಬ್ಭರ ಸವತೇರ 

ಹೋರಾಟವೇನೆಂಬೆ | ೫ | 


ಹಡೆದ ತಾಯಿ ಮಾಯದಿ 

ಹಿಡಿದು ಬದುಕು ಮಾಡಿಸುವಳು

ಒಡಹುಟ್ಟಿದೈವರು ಎನ್ನ 

ಕಡೆಗಣ್ಣಿಂದೀಕ್ಷಿಪರೋ 

ಬಿಡದೆ ಹತ್ತಿರ ಕಾದಿಪ್ಪ 

ನುಡಿಸಲು ಹಿರಿಯಣ್ಣನವರ 

ಮಡದಿಯ ತ್ಯಾಗಕ್ಕೇನೆಂಬೆ ತನ್ನ 

ಒಡವೆ ಲೇಶವೀಯಳೋ | ೬ |


ಅತ್ತೆ ಅತ್ತಿಗೆಯು ಎನ್ನ 

ಸುತ್ತಮುತ್ತ ಕಾದುಕಟ್ಟಿ

ಎತ್ತ ಹೋಗಲೀಸರೋ ನಿ-

ನ್ನತ್ತ ಭೃತ್ಯರು ಎಳೆದೊಯ್ಯುವಾಗ 

ಹೆತ್ತಯ್ಯ ನೀ ಬಿಡಿಸದಿರಲು 

ಮತ್ತ್ಯಾರು ಗತಿ ಪೇಳೋ | ೭ |


ಮನೆಯೊಳು ನಾಳಿನ ಗ್ರಾಸ-

ಕ್ಕನುಮಾನ ಸಂದೇಹವಿಲ್ಲ 

ಋಣದಿಂದ ಕಡೆ ಹಾಯ್ವ ಮಾರ್ಗ -

ವನು ಲೇಶ ನಾ ಕಾಣೆ 

ಎಣಿಸಲು ಈ ಕಾಳಪುರುಷನ ಬಂ-

ಧನದಿಂದ ನಾನಿನ್ನು

ದಣಿದೆನು ಇನ್ನೇನು

ನಿನ್ನಣುಗರೊಳಾಡಿಸೋ | ೮ |



ನಿನ್ನ ಹೊಂದಿ ಎಷ್ಟು ಬವಣೆ

ಯನ್ನು ಬಡಲೀ ಜನರು

ನಿನ್ನ ದೂರಿ ಜರಿವರೋ ನಾ-

ನಿನ್ನು ತಾಳಲಾರೆ 

ಘನ್ನ ಕರುಣಿ ಸೌಭಾಗ್ಯ ಸಂ-

ಪನ್ನ ಗೋಪಾಲವಿಠಲ 

ಬಿನ್ನಪವ ಚಿತ್ತೇಸಿ ನೀ-

ಮನ್ನಿಸೈಯ್ಯ ಮಾಧವ | ೯ |

***


No comments:

Post a Comment