Tuesday, 15 December 2020

ವಿಷಯ ತೃಷ್ಣೆಯ pranesha vittala ankita suladi ಉಪನಿಷದ್ಭಾಷ್ಯ ಸುಳಾದಿ VISHAYA TRUSHNEYA UPANISHADBHASHYA SULADI

Audio by mrs.Nandini Sripad
 

ಶ್ರೀ ಪ್ರಾಣೇಶದಾಸಾರ್ಯ ವಿರಚಿತ  ಈಶಾವಾಸ್ಯ ಉಪನಿಷದ್ಭಾಷ್ಯ ಸುಳಾದಿ 


 ರಾಗ ಪೂರ್ವಿಕಲ್ಯಾಣಿ 


 ಧ್ರುವತಾಳ 


ವಿಷಯ ತೃಷ್ಣೆಯ ಬಿಡು ವಿಶ್ವಾದಲ್ಲಿ ಬಾಳು

ಕುಶಲ ತಪ್ಪದು ನಿನಗೆ ಎಂದೆಂದಿಗೂ

ವಸುಧಿ ಮೊದಲಾದ ಪ್ರಾಕೃತದ ಪದಾರ್ಥವು

ಬಿಸಿಜನಾಭಗೆ ಆವಾಸ ಯೋಗ್ಯ

ವಶದೊಳು ನಿತ್ಯದಲ್ಲಿ ಇರುತಿಪ್ಪವು ಕೇಳು

ಹಸನಾಗಿ ಅದರಿಂದ ಪರರ ಆಧೀನವಲ್ಲ

ಪುಶಿಯ ಆಶೆಯಮಾಡಿ ರಾಜ್ಯಾದ್ಯರಿಂದಲಿ

ವಸುವ ಪಿಡಿಯದೀರೊ ಸಕಲ ಜೀವರನೆಲ್ಲ

ಹಸನಾಗಿ ಸಲಹುವ ಹರಿಯ ಪರಮ ಇಚ್ಛೆ

ವಶದಿಂದ ಬಂಧನದಿಂದ ಜೀವಿಸೋ ಮನುಜಾ

ವಸುಮತಿಯೊಳಗಿದು ಪರಮ ಸೌಖ್ಯ

ಪುಶಿಯೆಲ್ಲ ಈ ಸೊಲ್ಲು ಶ್ರುತಿಯಲ್ಲಿ ಸಿದ್ಧವೊ

ವಿಷಯೇಚ್ಛೆ ಎಂಬೋದೆ ವಿಷದ ಪ್ರಾಯ

ಅಸಮ ಮಹಿಮ ಹರಿಯ ಪ್ರೀತಿ ಅಹುದೊ ಇದರಂತೆ ರಾ -

ಜಸ ತಾಮಸ ಕರ್ಮ ಕಟ್ಟದಲೇ

ವಿಷಯೇಂದ್ರಿಯಂಗಳೆಲ್ಲ ಹರಿಯ ಆಧೀನ ತಿಳಿದು

ಕುಶಲ ನಿವೃತ್ತ ಕರ್ಮಗಳ ಮಾಡುತ ವ -

ರುಷ ಶತ ಪರಿಯಂತ ಜೀವಿಸೆಲೋ

ಹಸನಾಗಿ ಹರಿಯ ಕಾಂಬ ಜ್ಞಾನಿಗಾದರು ಕರ್ಮ

ನೆಸಗದಿದ್ದರೆ ಪಾಪ ಲೇಪವಹದೊ

ಮಿಸುಣಿಯಾದರು ಸರಿ ತಾಪ ವಿರಹಿತವಾಗೆ

ವಸುಧಿಯೊಳಗೆ ರಾಜಸದೊ ರಜಲಿಪ್ತವಾಗಿ

ಅಸಮ ಮುಕುತಿ ಪಥಕ ವಿಘಾತವಾಗದೊ

ಕುಶಲ ಸತ್ಕರ್ಮದ ಕಾರಣದಿಂದ

ಪುಶಿಯಲ್ಲ ಸಿದ್ಧವೆನ್ನು ಮುಕುತಿಯ ನಿಜಾನಂದಕ್ಕೆ

ಪುಶಿಯ ಬಪ್ಪದು ಸ್ವಲ್ಪ ಹ್ರಾಸವಾಗೀ

ಋಷಿಗಳಿಗಾದರು ಇದೆ ಪರಿ ಅಜ್ಞರಿಗೆ

ನೆಸಗದಿದ್ದರೆ ಸೋಚಿತ ಕರ್ಮ ಪಾಪಲೇಪ

ಹಸನಾಗಿ ಬಪ್ಪದು ಆಶ್ಚರ್ಯವೇ

ಅಸಮ ಮಹಿಮ ನಮ್ಮ ಪ್ರಾಣೇಶವಿಟ್ಠಲನ ಭ -

ಜಿಸುವದು ಎಂದೆಂದು ಸ್ವೋಚಿತದಂತಲೆ ॥ 1॥ 


 ಮಟ್ಟತಾಳ 


ಸರುವ ಸ್ವತಂತ್ರನು ಸಿರಿಯ ರಮಣ ಗುಣ -

ಪರಿಪೂರ್ಣ ಹರಿಯ ಮಹಿಮೆ ತಿಳಿಯದಲೆ

ಪರಿ ಮೋಹಿತರಾಗಿ ಪರಿ ಪರಿ ವಿಧದಿಂದ

ಪರಮ ಪುರುಷನ್ನಾವಜ್ಞತೆ ಚಿಂತಿಸುವ

ಪರಮ ಪಾತಕಿ ಜನಕೆ ಹರಿಹರಿ ಏನೆಂಬೆ

ಪರಮ ಕರುಣ ಶರಧೆ ಹರಿ ತಾ ಕೋಪದಲಿ

ಮರುತನ ಕೈಯಿಂದ ಗದೆಯಿಂದಲಿ ಬಡಿದು

ದುರುಳರ ತನುಲಿಂಗ ಪರಿದತಿ ವೇಗದಲಿ

ಹರುಷ ಲೇಶ ರಹಿತ ದುಃಖ ಪರಿಮಿತವಾದ

ಸುರಪತಿ ರಿಪು ಜನಕೆ ಸಂಪ್ರಾಪ್ಯವಾದಾ

ಸುರಿಯ ನಾಮ ಲೋಕ ಅಂಧಕಾರದಲಿಂದ

ಪರಿಪೂರಿತವಾದ ತಮದೊಳು ಬೆಯಿಸುವ

ಹರಿಯ ದ್ವೇಷಿಜನಕ ಫಲಗಳು ಈ ಪರಿಯೊ

ಸುರನದಿ ಪಿತ ನಮ್ಮ ಪ್ರಾಣೇಶವಿಟ್ಠಲ 

ಕರದು ಮುಕ್ತಿಯ ಕೊಡುವ ನಿಜರೂಪ ಧೇನಿಪಗೆ ॥ 2 ॥ 


 ತ್ರಿವಿಡಿತಾಳ 


ವಿರಹಿತ ಭಯರೂಪ ವಿಶ್ವ ಕುಟುಂಬಿಯು

ಪರಮ ಮುಖ್ಯನು ಕಾಣೊ ಜಗಗಳಿಗೆ

ಪರಮ ವೇಗದ ಮನಸಿನಿಂದಲಿ ಅತಿವೇಗ

ಸರಸಿಜ ಭವ ರುದ್ರ ಸುರವರರೂ

ಅರಿಯರು ಬಲು ಕಾಲಾ ಚಿಂತಿಸಿದರು ಇವನಾ -

ಪರಿಮಿತ ಗುಣ ಸಾಕಲ್ಯಾದಿ

ಹರಿಯು ಸುರರನೆಲ್ಲ ಸ್ವಭಾವ ಜ್ಞಾನದಿ

ಅರಮರೆ ಇಲ್ಲದೆ ಅಖಿಳರನೋಳ್ಪನು

ಚರಿಸದೆ ಕುಳಿತು ಓಡುವರನು ಮೀರುವ

ಮರುತನು ನಾನಾ ಜೀವರ ಯೋಗ್ಯತೆಯನು -

ಸರಿಸಿ ಮಾಡಿದ ಕರ್ಮಗಳೆಲ್ಲವ

ಭರದಿ ಭಕುತಿಯಿಂದ ಸಮರ್ಪಿಸುವನು

ಪರರನೆಲ್ಲರ ಭಯ ಬಡಿಸುವ ಭರದಲಿ

ಪರರಿಂದಜಾನಾ ಹರಿ ಎಂದೆಂದಿಗೂ

ಸರುವ ವ್ಯಾಪುತಚಿಂತ್ಯ ಶಕ್ತಿಯಾದದರಿಂದ

ಹೊರಗೆ ಒಳಗೆ ದೂರ ಸಮೀಪದಿ

ಇರುತಿಪ್ಪ ಅನುಗಾಲ ಒಂದು ಕ್ಷಣ ಬಿಡದಲೆ

ಸರುವ ಭೂತಗಳೊಳು ಅಂತರ್ಯಾಮಿಯಾಗಿ

ಪರಮ ಆಕಾಶದಂತಿಪ್ಪನೂ

ಹರಿಯಲ್ಲಿ ಬಿಡದೆ ಸರ್ವದ ವಿಶ್ವವಿರುವದು

ಪರಮ ಭಕುತಿಯಿಂದ ಇದನು ಕೇಳಿ

ಸಿರಿಯ ರಮಣ ಶೋಕವಿರಹಿತ ಸದಾಲಿಂಗ

ಶರೀರ ವಿದೂರ ಸ್ಥೂಲ ಮೊದಲಿಗಿಲ್ಲಾ

ಪರಿಪೂರ್ಣ ದೇಶ ಕಾಲ ಗುಣದಿಂದಲಿ

ಹರಿಯೆ ಎಲ್ಲರ ಪಾವನ ಮಾಳ್ಪದರಿಂದ

ನಿರುತ ಶುದ್ಧನು ಎಂದೆನಿಸಿಕೊಂಬ

ಪರತಂತ್ರ ಮೊದಲಾದ ದೋಷ ಪಾಪರಹಿತ

ಸಿರಿ ಮೊದಲಿಗ ಚೇತನ ಜಡವ

ಪರಿಪರಿ ತಿಳುವ ಸರ್ವಜ್ಞ ಕಾರಣದಿಂದ

ಧರಣಿಯೊಳಗೆ ಕವಿಯೆನಿಸಿಕೊಂಬ

ಸಿರಿದೇವಿ ಬೊಮ್ಮಾದ್ಯರ ಮನ ನಿಯಾಮಕನಾಗಿ

ಸರ್ವದಾ ಮನೀಷಿ ನಾಮದಲಿಪ್ಪನೂ 

ಸುರರ ನರರ ಎಲ್ಲರ ವಶಿಕರಿಸುವ

ಸರುವವು ಈತನ ಪ್ರೇರಣೆಯು

ಪರರ ಆಪೇಕ್ಷಿಸದೆ ಇದ್ದ ಕಾರಣದಿಂದ

ಸ್ವರೂಪ ಪ್ರಮಿತಿ ಪ್ರವರ್ತಿಗಳಲ್ಲಿ ಸ್ವಯಂಭೊ

ಸರಸಿಜ ಭವನಲಿಂಗದಲಿಂದ ಅನಿರುದ್ಧ

ಶರೀರವ ಜನಿಸುವ ಅದೆ ಮಹತತ್ವವು

ಭರದಿ ಆ ತತ್ವದಿಂದ ಎಲ್ಲ ತತ್ವಗಳದು

ಸರಸದಿ ಸೃಜಿಸುವ ಸರ್ವ ಪದಾರ್ಥಗಳ

ಪರಿಯು ಇದೇ ಸಕಲ ಕಲ್ಪಕ್ಕು ಅನಾದಿಯಿಂದ

ಪರಮ ಮಹಿಮನ ಲೀಲೆಯ ಮಾಳ್ಪ

ಪರಮ ಸುಜನರೆಲ್ಲ ಈ ಪರಿ ತಿಳಿದು ಪಾ -

ಮರ ಮತಿ ತೆಜಿಸಿ ಮನದೊಳಗೆ

ಹರಿಯ ಧೇನಿಸಿದರೆ ತನ್ನ ರೂಪವ ತೋರಿ

ಪರಮ ಪದವಿನೀವ ಭಯಶೋಕ ಅಜ್ಞಾನ

ವಿರಹಿತರಾಗುವರು ಹರಿಯ ಪೊಂದಿದ ಜನರು

ತೊರೆದು ದುರ್ಮತಿಯನು ಈ ಪರಿ ಚಿಂತಿಸು

ಪರಿಪರಿ ಗುಣವುಳ್ಳ ಪ್ರಾಣೇಶವಿಟ್ಠಲನು 

ಶರಣದ ಶರಣರ್ಗೆ ಶಮೆದಮೆಕುಲ ಸಖ ॥ 3 ॥ 


 ಅಟ್ಟತಾಳ 


ಶ್ರೀರಮಣನೆ ದೋಷದೂರ ಸುಗುಣನೆ

ಕಾರು ಮತಿಯಲಿ ಜೀವಾ ಭೇದ ಸಾಮ್ಯವ

ಸಾರೆ ಮುಕುತಿಯಲಿ ಮುಕ್ತರಭಿಮತೆ

ಚಾರುಯದಾಪಶ್ಯ ಎಂಬ ಶ್ರುತಿಗೆ

ಸಾರ ಅರ್ಥವನು ಯೋಚಿಸದೆ ಕುಯುಕ್ತಿಲಿ

ನಾರಾಯಣಗೆ ಮುಕ್ತ ಸಾಮ್ಯವ ಪೇಳುವ

ಘೋರ ಪಾಪಿಜನಕೆ ಕ್ರೂರ ಅಂಧತಮಸು

ಭಾರಿ ಭಾರಿಗೆ ತಪ್ಪದಲೆ ಆಗುವ -

ದೀರನಂತರ್ಯಾಮಿ ಹರಿಯಾಜ್ಞದಿ

ಈ ರೀತಿ ವಾಚಕೆ ಸಂಶಯ ವಿಲ್ಲವೊ

ಸಾರ ಮತಾರ್ಥವ ತಿಳಿದು ಈ ಕುಮತವ

ಭೂರಿ ಭಾರಿ ಭಾರಿ ನಿಂದಿಪದಿರೆ ಆ

ಕ್ರೂರ ಜನಕೆ ಪ್ರಾಪ್ಯ ತಮಸಿನಿಂದಧಿಕತೀ

ಪಾರ ದುಃಖತಮವಾಗುವದೆಲೊ ಈ

ಸಾರ ಮಾತಿಗೆ ಸಂಶಯ ನೀ ಬಡದಲೆ

ಆ ರೀತಿ ಜನರ ನಿಂದಿಸುವ ಸರ್ವದ

ಧೀರ ಬುದ್ಧಿಯಲಿ ಶ್ರೀಹರಿಯ ಸುಜ್ಞಾನದಿ

ಪುರಣಾನಂದ ಮೋಕ್ಷವನೈದುವ

ಭಾರಿ ಭಾರಿಗೆ ಪಾತಕರ ನಿಂದೆಯಿಂದ

ಭೂರಿ ದುಃಖಾಜ್ಞಾನ ಮೋಹಗಳುಳ್ಳ ಸಂ -

ಸಾರ ಸಾಗರವ ವೇಗ ದಾಟುವನು

ಈ ರೀತಿಯಿಂದಲಿ ಎರಡು ವಿಧ ಮೋಕ್ಷವರ

ಪೂರೈಸುವದರಿಂದ ಧಾರುಣಿ ಜನರು ವಿ -

ಚಾರಿಸೆ ಜ್ಞಾನ ಮಿಥ್ಯಾ ಜ್ಞಾನ ನಿಂದೆಯ

ವಾರವಾರಕೆ ಆಚರಿಸಬೇಕು

ಶ್ರೀರಮಣಗೆ ಸೃಷ್ಟಿ ಕರ್ತೃತ್ವವುವಿಲ್ಲೆಂದು

ಸಾರುವರಿಗೆ ಸಿದ್ಧ ನಿತ್ಯ ನರಕವು

ಕಾರಣ ಸೃಷ್ಟಿಗೆ ಎಂದು ತಿಳಿದು ಸಂ -

ಹಾರ ಕರ್ತೃತ್ವ ಶ್ರೀಹರಿಗಿಲ್ಲವು

ಈ ರೀತಿಯಲ್ಲಿ ತಿಳಿದವರಿಗೆ ಅದಕಿಂತ

ಘೋರ ಅಂಧತಮಸು ಸರಣಿ ಕಾಣೊ

ಈ ಕಾರಣದಿಂದ ಸೃಷ್ಟಿ ಸ್ಥಿತಿಗಳಿಗೆ ಸಂ -

ಹಾರಾದಿ ನಾನಾ ಕರ್ತೃತ್ವವ ತಿಳಿದು

ನಾರಾಯಣಗೆ ಉದ್ಧಾರನಾಗಬೇಕು

ದೂರದೋಷನ ಸುಖ ಜ್ಞಾನ ಸೃಷ್ಟಿಗೆ

ಕಾರಣನೆಂದು ತಿಳಿದರೆ ಸುಖಜ್ಞಾನ

ಸ್ವರೂಪನಾಗುವ ಸಿದ್ಧವಾ ಹರಿಗೆ ಸಂ -

ಹಾರ ಕರ್ತೃತ್ವ ತಿಳಿದರೆ ಅಜ್ಞಾನ

ದೂರವಾಗುವದೊ ದುಃಖಾದಿಗಳೆಲ್ಲ

ಈ ರೀತಿಯಲಿ ಸಂತತ ತಿಳಿಯಲಿ ಬೇಕು

ಸಾರ ಹೃದಯವಾಸ ಪ್ರಾಣೇಶವಿಟ್ಠಲ 

ಕಾರುಣ್ಯದಿಂದಲ್ಲಿ ಕೊಡುವನೊ ಮುಕುತಿಯ

ಸ್ವರೂಪವನ್ನು ಈ ಪರಿ ಧೇನಿಪಂಗೆ ॥ 4 ॥ 


 ಆದಿತಾಳ 


ವನಜನಾಭನ ಬಿಂಬರೂಪ ಸಾಕ್ಷಾತ್ಕಾರ

ಮಿನಗುವ ಮೋಕ್ಷಕೆ ಕಾರಣ ನಿಃಸಂಶಯ

ಘನಮಹಿಮನ ರೂಪ ಕಾಂಬುವದಕೆ ಹರಿಯ

ಗುಣಕರ್ಮ ಕಥಾ ಶ್ರವಣ ಮನನಾದಿ ಸಾಧನವು

ಸನುಮತಿಯಲಿ ಕೇಳಿ ಇದರೊಳು ವಂದು ಉಂಟು

ಚಿನುಮಯರೂಪನ ಪ್ರಸಾದ ಸಿದ್ಧವಾಗೆ

ತನು ಅಪರೋಕ್ಷ  ಮೋಕ್ಷ ಉಭಯವು ಸಿದ್ಧವಹದು

ಅನುಮಾನ ಸಲ್ಲದು ಇದರೊಳು ವಿವೇಕವು

ಅನುಷ್ಠಿತ ಶ್ರವಣವು ಅಪರೋಕ್ಷವಾಗುವದಕೆ

ದ್ಯುನದಿ ಜನಕನ್ನ ಪ್ರಾರ್ಥಿಪ ಪರಿ ತಿಳಿಯೊ

ಗುಣಪೂರ್ಣ ಮುಖ್ಯ ಜ್ಞಾನ ಜಗನಿಯಾಮಕ

ಮುನಿಜನಗೇಯನೆ ವನಜಸಂಭವನಿಂದ ವಿಶೇಷ ಗಮ್ಯನೆ

ಘನರಸ್ಮಿನಾಮಕ ಸ್ವರೂಪ ಜ್ಞಾನವನು

ಇನಿತು ಮಾತ್ರವಲ್ಲ ಬಾಹ್ಯ ಜ್ಞಾನವ ಸಹ

ಅನಿಮಿತ್ಯ ಬಂಧುವೆ ವಿಸ್ತರಿಸುವದೆಲೊ

ದನುಜದಲ್ಲಣ ನಿನ್ನ ಪರಮ ಕಲ್ಯಾಣರೂಪ

ಅನವರತದಿ ನೋಳ್ಪೆ ಕರುಣಿಸಿ ನಿನ್ನ ರೂಪ

ಕನಕಮಯ ಪಾತ್ರವೆನಿಸಿಕೊಂಬುವ ದಿವ್ಯ

ಇನನ ಮಂಡಲದಿಂದ ಅಚ್ಛಾದಿತವಾದದ್ದು

ಎನಗೆ ನೋಡುವದಕೆ ನಿರಾವರಣವ ಮಾಡು

ಅನನಂತರ್ಯಾಮಿ ಅಹೇಯ ನಿತ್ಯ ಸತ್ಯ

ಅಣು ಜೀವ ದೇಹದೊಳಗೆ ಇದ್ದರು ನೀನೆ ಆ

ತನುಗಳು ಭಸ್ಮಾತ್ ವಾದರೂ ಮಹಾಮಹಿಮನೆ ಉಪಹತಿಯಿಲ್ಲ

ಅನಿಳನೊಳಗೆ ನೀನು ಅಂತರ್ಯಾಮಿತ್ವದಿಂದ

ಅನವರತದಲ್ಲಿ ಇದ್ದ ಕಾರಣ ವಾಯು

ಘನಜ್ಞಾನದಿಂದಲಿ ಅಮೃತನೆನಿಸಿಕೊಂಬ

ಚಿನುಮಯ ನಿನ್ನಾಶ್ರಿತ ಈ ಪರಿಯಿರಲು

ನಿನಗುಪಹತಿ ಉಂಟೆ ಎಲ್ಲಿ ಇದ್ದರು ಸರಿ

ವನಜಲೋಚನ ನೀನು ಮಾಡಿ ಮಾಡಿಸಿದ ಸಾ -

ಧನವನು ಕೈಕೊಂಡು ಅನುಗ್ರಹ ಮಾಡುವದು

ಪ್ರಾಣಪ್ರತೀಕ ವ್ಯಾಪ್ತ 

ಇನಿತು ಸ್ತೋತ್ರವ ಮಾಡಿ ಹರಿ ಪ್ರಸಾದಾಖ್ಯ

ಧನ ಸಂಪಾದಿಸಬೇಕು ಇದರ ತರುವಾಯ ಕೇಳು

ತನುವು ಮಾಡಿದ ಮನುಜ ಮೋಕ್ಷಗೋಸುಗ ಪ್ರಾ -

ರ್ಥನೆ ಮಾಡುವ ಪರಿ ಏಕಾಗ್ರಚಿತ್ತನಾಗಿ

ತನುಗಳ ನಿಯಾಮಕ ಅರ್ಚಿಷ ಮೊದಲಾದ

ಘನ ಮಾರ್ಗಳಿಂದ ಗುಣತ್ರಯ ಶೂನ್ಯ ಮೋಕ್ಷ

ಧನವನೀವದು ದೇವ ಪುನರಾವರ್ತಿರಹಿತ ಪದವಿಗೆ ಕಾರಣ -

ವೆನಿಪ ಜ್ಞಾನಂಗಳ ಅನಿತು ಬಲ್ಲಿಯು ನೀನು

ಅನಿರುದ್ಧೆ ಅದರಿಂದ ಬಿನ್ನೈಸುವೆನು ರಂಗ

ಅನುಪಮ ನಿನ್ನಯ ಅನುಗ್ರಹದಿಂದಲಿ

ಕೊನೆ ಮೊದಲಿಲ್ಲದ ಪೂರ್ವೋತ್ತರ ಪಾಪ

ಅನಭಿಮತ ಪುಣ್ಯ ಸಹಿತ ಪೋದವು ಕರುಣಿ

ಘನ ಪ್ರಾರಬ್ಧವೆಂಬ ಕರ್ಮವ ಕರುಣದಲ್ಲಿ

ಕ್ಷಣದೊಳು ದೂರ ಮಾಡು ಮಾಡೆನೆಂಬದು ನಿನಗೆ

ಮನಸಿನೊಳಗೆ ಇತ್ತೆ ಸತ್ಯ ಸಂಕಲ್ಪನೆ

ಅನಿಮಿತ್ಯ ಉಪಕಾರಿ ಇನಿತು ಎನಗೆ ನೀನು

ಕೊನೆಯಿಲ್ಲದುಪಕಾರ ಮಾಡಿದದಕೆ ಆನು

ನಿನಗೋಸುಗ ಜ್ಞಾನ ಭಕುತ್ಯಾದಿಗಳಿಂ ನಿನ್ನ

ವನಜಯುಗಕೆ ನಮನವ ಮಾಡುವೇನಲ್ಲದೆ

ಪುನಹ ನಿನ್ನಾಜ್ಞವು ಮೀರುವದುಂಟೆ

ಅನನುತ ಪ್ರಾಣೇಶವಿಟ್ಠಲ ನಮೊ ನಮೊ

ವನಜ ಭವಾದಿಗಳು ನಿನ್ನಾಜ್ಞ ಮೀರಲೊಶವೇ ॥ 5 ॥ 


 ಜತೆ 


ನಿರತಿಶಯವಾದ ಪ್ರೀಯ ಉಪಕಾರಿಯೇ ನಮೋ

ಪರಿಪೂರ್ಣ ಗುಣನಿಧಿ ಪ್ರಾಣೇಶವಿಟ್ಠಲ ॥

********



No comments:

Post a Comment