Audio by Vidwan Sumukh Moudgalya
ರಾಗ : ಕೇದಾರಗೌಳ
ಧೃವತಾಳ
ಕರಿರಾಜ ಕರೆಯಲು ಗರುಡನಪೆಗಲೇರಿ
ಭರದಿಂದ ಬಂದುದ್ಧರಿಸಿದ ಕರುಣಾಳು
ಕುರುಸಭೆಯಲ್ಲಿ ದುಷ್ಟ ದುರುಳ ದುಶ್ಯಾಸನ
ತರುಣಿ ಪಾಂಚಾಲಿಯಾಂಬರ ಶೆಳೆಯಲು ಭಯ-
ಭರಿತಳಾಗುತ ಸಿರಿಹರಿ ಕೃಷ್ಣಪೊರೆಯೆಂದು
ವರಲುತ್ತ ಬಳಲುತ್ತ ಮೊರೆಯಿಡಲಾಕ್ಷಣ
ತ್ವರಿತಾಕ್ಷಯವಿತ್ತ ಕರುಣಾರ್ಣವ
ಪರಮ ಪಾತಾಕಿಯಾದ ಧರಿದೇವಜಾಮಿಳ
ಮರಣಕಾಲದಿ ನಿನ್ನ ಸ್ಮರಣೆ ಮಾಡಲು ಅವಗೆ
ಪರಮ ಸುಖವನಿತ್ತ ಕರುಣಸಿಂಧು
ಭರಮಶಯ್ಯನು ತನ್ನ ತರುಳನ ಕಾಡಲು
ನರಹರಿ ರೂಪದಿಂದ ಸಲಹಿದ ದಯಾವಂತ
ಬರಮಭವಾದಿ ಮುಖ್ಯಸುರಕರಪೂಜಿತ
ಅರಿಧರ ಅಭಿನವ ಪ್ರಾಣೇಶವಿಠಲ ಖ್ಯಾತ ॥೧॥
ಮಟ್ಟತಾಳ
ಸಿಂಧುರಾಜನ ಮಾವ ಸಿಂಧುಶಯನದೇವ
ಸೈಂಧವಕುಲನಾಶ ಸೈಂಧವಕುಲತಿಲಕ
ಮಂದಜವನಮಾಲ ಮಂದಜಾತಿಲೋಲ
ಬಂಧುರಭಕುತಿಯ ಸುಂದರಪಾಶದಲಿ
ಬಂಧಿಸುವರ ಭವಬಂಧನ ಬಿಡಿಸುವ
ಬಂಧು ಬಾಂಧವ ಮುಚುಕುಂದವರದ ಶ್ಯಾಮ
ಸುಂದರ ಅಭಿನವ ಪ್ರಾಣೇಶವಿಠಲ ದೇವ ॥೨॥
ತ್ರಿವಿಡಿತಾಳ
ಜಲಚರಾಚಲಧರನೆಲವ ತಂದ ಧೀರ
ಒಲಿದು ಪ್ರಹ್ಲಾದನ ಸಲಹಿದ ನರಹರಿ
ಬಲಿಯ ತುಳಿದು ನಭಹೊಳೆಯ ಪಡೆದ ವಟು
ಛಲದಿ ಭೂಭುಜರನ್ನಳಿಸಿದ ರಾಮನೆ
ಇಳಿಜಾರಮಣ ರವಿಕುಲಜ ರಾಘವರಾಮ
ಹಲಧರಾನುಜ ವ್ರಜನಿಲಯಕೃಷ್ಣ
ಖಲತ್ರಿಪುರಾಸುರಬಲಭಂಜನಬುದ್ಧ
ಕಲಿಕುಲಾಂಬುಧಿ ಕರಿರಾಜನೆಕಲ್ಕಿ
ಜಲಜಾಂಬಕ ಅಭಿನವ ಪ್ರಾಣೇಶವಿಠಲ ಪದ-
ಪಲ್ಲವಾರ್ಚನೆಯನೀಯೋ ಘಳಿಗೆ ಘಳಿಗೆಯಲ್ಲಿ ॥೩॥
ಅಟ್ಟತಾಳ
ವನಚರ ಘನಧರ ಕನಕಾಂಬಕಹರ
ಮನುಜ ರಾಜವನವಟುರೂಪಿ ವಾಮನ
ಮುನಿಸುತ ಭಾರ್ಗವ ವನಚರ ರಾಘವ
ಫಣಿಕಾಲಿ ಮರ್ದನ ಗೋವರ್ಧನ
ವನಿತಾವ್ರತಹಾರಿ ದನುಜಾಟವಿಕುಠಾರಿ
ಕನಕೋದರತಾತ ಕನಕಾಂಬರಪ್ರೀತಾ
ಮುನಿಗೇಯ ಅಭಿನವ ಪ್ರಾಣೇಶವಿಠಲ ॥೪॥
ಆದಿತಾಳ
ನಿದ್ರಾರಹಿತ ಮಂದರಾದ್ರಿಧರನೆ ದೇವೋ-
ಪದ್ರವ ಕಳೆದ ಸಮುದ್ರರಾಣಿಯ ಪಿತ
ಕ್ಷುದ್ರಕ್ಷತ್ರಿಯರಘ್ನ ಕದ್ರುವೇಯ ಶಯ್ಯ
ಮಾದ್ರಿಜಾಗ್ರಜ ಸಖ ಭದ್ರೆವೃತ ವಿಮುಖ
ನಿದ್ರಾಕಲಿಕಾಲ ನಿದ್ರಾಸತಿಲೋಲ
ಭದ್ರದಾತಾ ಅಭಿನವ ಪ್ರಾಣೇಶವಿಠಲ ॥೫॥
ಜತೆ
ಕೇಶವ ತವ ಪದದಾಸ್ಯವ ಕರುಣಿಸು
ಶ್ರೀಶಾ ಅಭಿನವ ಪ್ರಾಣೇಶವಿಠಲ ಪಾಹಿ ॥೬॥
********
No comments:
Post a Comment