Friday 18 December 2020

ಚೇತನಾಚೇತನಾಂತರ್ಗತ vijaya vittala ankita suladi ಹಂಸಮಂತ್ರ ಸುಳಾದಿ CHETANACHETANANTA HAMSA MANTRA SULADI

Audio by Mrs. Nandini Sripad

 ಶ್ರೀ ವಿಜಯದಾಸಾರ್ಯ ವಿರಚಿತ 


 ಹಂಸಮಂತ್ರ ಸುಳಾದಿ 

( ಪುರುಷ , ಕಾಲರೂಪಗಳ ದ್ವಿವಿಧ ಉಪಾಸನೆ , ಅಧ್ಯಾತ್ಮದಲ್ಲಿ ಚಕ್ರಾಬ್ಜಾದಿ ಮಂಡಲದ ವಿವರಣೆ. ) 


 ರಾಗ ಭೈರವಿ 


 ಧ್ರುವತಾಳ 


ಚೇತನಾಚೇತನಾಂತರ್ಗತ ಭಗವದ್ರೂಪ

ಚಾತುರ್ಯದಿಂದ ಉಂಟು ಅಣು ಮಹತ್ತು

ಆತುಮದೊಳು ನೆನೆಸಿ ನಾನಾ ಬಗೆಯಿಂದ

ಗಾತುರ ಇಂದ್ರಿಯಂಗಳ ಕಾರ್ಯ ತಿಳಿದು

ಭೌತಿಕ ನೆಚ್ಚದಿರು ಕಾಯ ನಿಂದಿರದು ಜೀ -

ಮೂತ ಛಾಯವೆನ್ನು ಇಹದ ಸೌಖ್ಯ

ಮಾತು ಈ ಪರಿ ತಿಳಿದು ಮುದದಿಂದ ಪುಣ್ಯಕ್ಕೆ ಸಂ -

ಕೇತ ಮಾಡುವೆ ಮಾಳ್ಪ ಮಂತ್ರಗಳಿಗೆ

ಶ್ವೇತದ್ವೀಪವಾಸಿ ವಾಸುದೇವ ಮುಖ್ಯ

ವಾತ ಖದ್ಯೋತ ಗುರು ಇವರಲ್ಲಿಟ್ಟು

ಆ ತರುವಾಯ ತನ್ನ ಹೃತ್ಕಮಲದಲ್ಲಿದ್ದ

ಶ್ರೀತರುಣೀಶನ್ನ ಧ್ಯಾನಗೈದು

ಈತನು ಮಧ್ಯದಲ್ಲಿ ಅನಂತ ಅಂಶಾತ್ಮಕ

ಆತನ್ನ ತಂದು ಏಕ ಚಿಂತನೆಗೈದು

ವಾತ ಸ್ಪರಶವಿಲ್ಲದ ದೀಪದಂತೆ ಕುಳಿತು

ಜ್ಞಾತಾನುಷ್ಠಾನದಿಂದ ಗಮನಾಗಮನವ ನೋಡು

ಕೌತುಕವೆನಿಸುತಿದೆ ಈ ಮಂತ್ರವೊ

ಪೋತತನಾರಭ್ಯ ಯೌವನ ಜರಠವಿಡಿದು

ಪ್ರೇತ ಯಾತನಾ ದೇಹ ನರಕ ಸ್ವರ್ಗ

ಜ್ಯೋತಿರ್ಮಯ ಶರೀರ ಪುನರ್ಜನನ ಮರಣ

ಈ ತೆರದಲ್ಲಿ ಬಲು ಜನುಮ ಬರಲು

ಭೂತಳದೊಳು ನಾಲ್ಕು ಎಂಭತ್ತು ಲಕ್ಷಯೋನಿ

ಜಾತನಾದ ಕಾಲಕ್ಕೂ ಒಳಗಿಪ್ಪದು

ಭೂತಿ ಕೊಡುವದಿದು ಅಪ್ರಯತ್ನ ಮಂತ್ರ

ತಾ ತೋರಗೊಡದಯ್ಯಾ ಅಜ್ಞಾನಿಗೆ

ಪ್ರಾತಃಕಾಲಾರಭ್ಯ ಅಪರೋದಯ ಪರಿಯಂತ

ಆತುಮದೊಳು ಸಿದ್ಧಾ ಶ್ವೇಚ್ಛಾವೃತ್ತಿ

ಜ್ಞಾತ ಕಾಲಾದಿಯಿಂದ ಗತ ಜನ್ಮಗಳು ಮಿಶ್ರ

ಮಾತೃಗರ್ಭಾದಿ ಸ್ಥಾನಾ ಶೇಷಾರಬ್ಧಾ

ಧೌತವಾಗುವ ತನಕ ಇದೆ ಪ್ರಾಣಮಂತ್ರವೆಂದು

ಪ್ರೀತಿಯಿಂದಲಿ ಜಪಿಸು ಧ್ಯಾನೋಕ್ತದಿ

ಪಾತಕ ನಿನಗಿಲ್ಲ ಕಾಲಕಾಲಕ್ಕೆ ಪುಣ್ಯ -

ವ್ರಾತ ಬಂದೊದಗುವದು ಆನಂದಕ್ಕೆ

ಶೀತಾಂಶು ರವಿ ಹಸ್ತ ವಿಜಯವಿಟ್ಠಲರೇಯ 

ಭೀತರಹಿತನ್ನ ಮಾಳ್ಪ ಮಂತ್ರಾನುಸಂಧಾನಕ್ಕೆ ॥ 1 ॥ 


 ಮಟ್ಟತಾಳ 


ಮಂತ್ರ ಮಾಡುವ ಬಗೆ ತಿಳಿವದು ಚನ್ನಾಗಿ

ತಂತ್ರಸಾರದಿಂದ ಅಂಗಾಂಗುಲಿ ನ್ಯಾಸ

ಸಂತೋಷದಲ್ಲಿ ಮಾಡು ಧೃಢತರ ಮನಸಿನಲಿ

ಅಂತರಂಗದಲಿ ಸರ್ವ ರೂಪಾತ್ಮಕ

ಮಂತ್ರದೇವತೆ ಮುಖ್ಯ ಪ್ರಣವ ಮೂರುತಿಯ ಏ -

ಕಾಂತದಲ್ಲಿ ಹೃತ್ಕಮಲ ಕರ್ನಿಕೆಯ ಮಧ್ಯ

ಇಂತಿಹ ಕಮಲಕ್ಕೆ ಚತುರಷ್ಟ ದ್ವಾದಶ

ಮುಂತೆ ಚತುರ್ವಿಂಶತಿ ಐವತ್ತೊಂದು

ಚಿಂತಿಸು ದಳಸಂಖ್ಯೆ ತ್ರಿಕೋಣ ಬೀಜಗಳು

ಯಂತ್ರವಾಹಕ ನಮ್ಮ ವಿಜಯವಿಟ್ಠಲ ಸ್ವ -

ತಂತ್ರ ಪುರುಷ ಸರ್ವ ಮಂತ್ರ ನಿಯಾಮಕನೊ ॥ 2 ॥ 


 ತ್ರಿವಿಡಿತಾಳ 


ಮನವೆ ಲಾಲಿಸಿ ಕೇಳು ಲಬ್ಧ ಮಂತ್ರಕೆ ಜಿತಾ -

ಸನನಾಗು ಜಯವೆಂದು ಹರಿಯ ಸ್ತುತಿಸಿ

ಎಣಿಕೆಯಿಂದಲಿ ನೋಡು ಒಂದೊಂದು ಮಂತ್ರಕ್ಕೆ

ಘನವಾಗಿ ವರ್ಣಗಳು ಇಪ್ಪವೇಸೂ

ಎಣಿಸು ಒಂದೊಂದು ದಳದಲ್ಲೊಂದೊಂದು ವರ್ಣ

ಮಿನಗುವ ಮತಿಯಿಂದ ಇಡಲಾಬಟ್ಟು

ಇನಿತು ಗ್ರಹಿಸು ಇವಕೆ ಒಂದೊಂದು ಹರಿರೂಪ

ಚಿನುಮಯ ಮೂರುತಿ ಸರ್ವಾಭಿನ್ನ

ಗುಣವಂತ ಮಂತ್ರಾತ್ಮಕನನ್ನು ಕೂಡಿಸಿ

ಮಣಿಗಣದಿಂದ ಜಪಿಸುವಾಗಲಿ

ಅನುಭವವಿರಲಿ ಮಂತ್ರದೇವತೆ ಸಹಿತ

ಕ್ಷಣ ಕ್ಷಣಕೆ ನಿನ್ನೊಳು ವಲಯಾಕಾರ

ಗುಣಿಸು ವರ್ಣಾಖ್ಯರ ಆದ್ಯಮೂರುತಿಯಲ್ಲಿ

ಗಣನೆ ಮಾಡುತ ನಿತ್ಯ ಜಿಹ್ವಾಗ್ರದಿ

ಕೊನೆಯಿಂದ ವಾಕ್ಪ್ರಯೋಗ ಮಾಳ್ಪದರೊಳು

ಮಣಿಯಿಂದ ಮಣಿಗೆ ಬೆರಳ ಚಾಚುವದು

ಅನ ಭಾರತಿ ಪ್ರೀಯ ವಿಜಯವಿಟ್ಠಲ ಸ -

ದ್ಗುಣಿಮಣಿ ಖಣಿಯೆಂದು ಅನುದಿನ ನೆನೆ ನೆನೆ ॥ 3 ॥ 


 ಅಟ್ಟತಾಳ 


ಇದೆ ಮಂತ್ರ ಸಾರ್ಥಕ ಇದೆ ಮಂತ್ರಸಿದ್ಧಿಯೊ

ಇದೆ ಇದೆ ಮಂತ್ರವೊ ಇದೆ ಪ್ರಕಾರದಿಂದ ತತ್ತತ್ತು ಮಂತ್ರವ

ವಿಧಿಯಿಂದ ಜಪಿಸುವದು ಹೃದಯದಲ್ಲಿ ಇಟ್ಟು

ಪದೊಪದಗೆ ಬಲುವೊದಗಿ(ರಿ) ಮಾಡುವ ದೇಕೆ

ಮುದ ಭಕುತಿಯಿಂದಲಿದರಂತೆ ಯೊಂದೆ ಸಾ -

ರಿದರೆ ಸತ್ಪುಣ್ಯದ ಉದಧಿ ಸೂಸುವದಯ್ಯಾ

ಮಧುಸೂದನ ಹರಿ ವಿಜಯವಿಟ್ಠಲರೇಯ 

ಪ್ರಧಾನವ ಕೊಡುವನೋ ಒಂದೇ ಉಚ್ಚಾರಣೆಗೆ ॥ 4 ॥ 


 ಆದಿತಾಳ 


ಮಧ್ಯಮೂರುತಿ ಸುತ್ತ ಸೇವಕ ರೂಪದಿಂದ

ಪೊದ್ದಿಕೊಂಡಿಪ್ಪವು ಸ್ವಮೂರ್ತಿ ಪರಿವಾರ

ಸಿದ್ಧವಾದುದೆ ಕೇಳು ಜಪಿಸಿ ತಿಳಿಯಬೇಕು

ಹೃದ್ಗುಹದಲ್ಲಿ ಇನಿತು ಚಕ್ರಾಬ್ಜ ಮಂಡಲ

ಪದ್ಮ ಸುದರ್ಶನ ದಳದ ವಿಚಾರ ತಿಳಿದು

ಪದ್ಧತಿ ತಪ್ಪದಲೆ ಪರಿಭ್ರಮಣವಾಗುವದು

ಪದ್ಮಬಾಂಧವ ನಮ್ಮ ವಿಜಯವಿಟ್ಠಲರೇಯ 

ಉದ್ಧರಿಸುವ ಬಿಡದೆ ಉನ್ನತ ಗತಿಯಿತ್ತು ॥ 5 ॥ 


 ಜತೆ 


ಜನುಮದೊಳಗೆ ಒಮ್ಮೆ ಈ ಪರಿ ಜಪಿಸಲು

ಗುಣತ್ರಯ ನಾಶನ ವಿಜಯವಿಟ್ಠಲ ಪೊಳೆವ ॥

*******

No comments:

Post a Comment