ರಾಗ ಮೋಹನ
ಧ್ರುವತಾಳ
ಸಿರಿದೇವಿ ಅರಸನೆ ಶ್ರೀಕೃಷ್ಣ ನಮೊ ನಮೊ
ಸರಸಿಜಾಸನ ಪಿತ ನಿನಗೆ ನಮೊ
ಹರನಂತರ್ಗತ ಮೂರ್ತಿ ಸಂಕರ್ಷಣನೆ ನಮೊ
ಪುರುಹೂತ ಪಾಲಕ ಉಪೇಂದ್ರ ನಮೊ ನಮೊ
ತರಣಿಯಂತರ್ಗತ ಶ್ರೀನಾರಾಯಣನೆ ನಮೊ
ವರ ಶಶಿ ಅಂತರ್ಗತ ದಧಿವಾಮನ ನಮೊ
ಸಿರಿ ಭಾಗೀರಥಿ ಪೆತ್ತ ವಾಸುದೇವನೆ ನಮೊ
ಸುರರ ಭೂಸುರರೊಡಿಯ ಶ್ರೀಹರಿ ನಮೊ ನಮೊ
ಕರುಣಾಕರ ರಂಗ ಗೋಪಾಲವಿಟ್ಠಲ ನಿನ್ನ
ಪರಿವಾರ ಮೂರ್ತಿಗಳಿಗೆ ನಮೊ ನಮೊ ನಮೊ ಎಂಬೆ ॥ 1 ॥
ಮಟ್ಟತಾಳ
ಜನನಿ ಎಂದು ಒಮ್ಮೆ ಕರೆವೆ ಆನಯ್ಯಾ ನಿನ್ನ.
ಜನಕನೆಂದು ಒಮ್ಮೆ ಕರೆವೆನಯ್ಯಾ
ನಿನ್ನ ಭ್ರಾತನೆಂದು ಒಮ್ಮೆ ಕರೆವೆನಯ್ಯಾ
ನಿನ್ನ ಸೋದರನೆಂದು ಒಮ್ಮೆ ಕರೆವೆನಯ್ಯಾ
ನಿನ್ನ ಬಂಧುವೆಂದು ಒಮ್ಮೆ ಕರೆವೆನಯ್ಯಾ
ನಿನ್ನ ದಾತನೆಂದು ಒಮ್ಮೆ ಕರೆವೆನಯ್ಯಾ
ಎನ್ನ ಇಷ್ಟದೈವ ಗೋಪಾಲವಿಟ್ಠಲ
ನಿನ್ನನ್ನು ಎನ್ನವಯವಗಳಿಗೆ ನೆನೆವೆ ॥ 2 ॥
ರೂಪಕತಾಳ
ನಿನ್ನನ್ನೇವೆ ಎನ್ನ ಶಿರಸು ಎಂದು ಕರೆವೆ
ನಿನ್ನನ್ನೇವೆ ಎನ್ನ ನಯನವೆಂದು ಕರೆವೆ
ನಿನ್ನನ್ನೇವೆ ಎನ್ನ ಕರ್ನವೆಂದು ಕರೆವೆ
ನಿನ್ನನ್ನೇವೆ ಎನ್ನ ನಾಶಿಕವೆಂದು ಕರೆವೆ
ನಿನ್ನನ್ನೇವೆ ಎನ್ನ ವದನಾ ಎಂದು ಕರೆವೆ
ನಿನ್ನನ್ನೇವೆ ಎನ್ನ ಜಿಹ್ವೆ ಎಂದು ಕರೆವೆ
ನಿನ್ನನ್ನೇವೆ ಎನ್ನ ಭುಜವು ಎಂದು ಕರೆವೆ
ನಿನ್ನನ್ನೇವೆ ಎನ್ನ ಬಾಹು ಎಂದು ಕರೆವೆ
ನಿನ್ನನ್ನೇವೆ ಎನ್ನ ಕರಗಳೆಂದು ಕರೆವೆ
ನಿನ್ನನ್ನೇವೆ ಎನ್ನ ಹೃದಯ ಎಂದು ಕರೆವೆ
ನಿನ್ನನ್ನೇವೆ ಎನ್ನ ಊರು ಜಾನು ಎಂದು ಕರೆವೆ
ನಿನ್ನನ್ನೇವೆ ಎನ್ನ ಪಾದಾವೆಂದು ಕರೆವೆ
ನಿನ್ನನ್ನೇವೆ ಎನ್ನ ಸರ್ವ ವ್ಯಾಪಕನೆಂದು
ಬಣ್ಣಿಸಿ ಬಗೆಬಗೆಯಲಿ ನಾ ತಿಳಿಯುವೆ
ಚಿನ್ಮಯ ಮೂರುತಿ ಗೋಪಾಲವಿಟ್ಠಲ
ನಿನ್ನನ್ನು ಎನ್ನವಯವಂಗಳಲ್ಲಿ ನೆನೆವೆ
ನಿನ್ನವರ ಸಹಿತಾಗಿ ಎನ್ನಲ್ಲಿ ಪರಿಪೂರ್ಣ ॥ 3 ॥
ಝಂಪೆತಾಳ
ಸಪ್ತಾವರಣ ಕಾಯಾ ಪ್ರಾಕಾರ ಮನೆಯಲ್ಲಿ
ಸಪ್ತಮ ದ್ವಾರಂಗಳಲ್ಲಿ ನೀನು
ಸಪ್ತಮ ರೂಪದಿ ತನ್ನಿಯಾಮಕನಾಗಿ
ವ್ಯಾಪ್ತಿಸಿ ಅಲ್ಲಿ ಗುಪ್ತನಾಗಿ
ತಪ್ತ ಕಾಂಚನದಂತೆ ಪೊಳೆವುತ್ತ ಸಿರಿಸಹಿತ
ಗುಪ್ತ ತಾ ಗುಣ ಬಂಧನಂತೆ ನೀನು
ಶಪ್ತ ಮಾಡಿ ಸೃಷ್ಟಿ ಸ್ಥಿತಿ ಲಯಗಳನ್ನು ನೀನು
ಕ್ಲಿಪ್ತ ಮೀರದಲೇವೆ ಮಾಡಿಸುವಿ
ಸುಪ್ತ ಜಾಗ್ರತ ಸ್ವಪ್ನಾವಸ್ಥ ಕಾಲಂಗಳಲ್ಲಿ
ಆಪ್ತನಾಗಿ ಆದರಿಸಿ ಎನ್ನ
ಸಪ್ತೆರಡು ಭುವನದೊಡಿಯ ಗೋಪಾಲವಿಟ್ಠಲ
ಕುಪಿತದೊಳಗೇ ಎನ್ನ ಕೂಡಿಸದೆ ಪೊರೆಯೊ ॥ 4 ॥
ತ್ರಿವಿಡಿತಾಳ
ನಿನ್ನ ಮತ್ಸ್ಯರೂಪ ಎನ್ನರಿಷ್ಟವ ಕಳಿವಿ
ನಿನ್ನ ಕೂರ್ಮ ರೂಪ ಎನ್ನ ಭಾರ ವೊಹಿಸುವಿ
ನಿನ್ನ ವರಹ ರೂಪ ಎನಗೆ ವರವಾಗಲಿ
ನಿನ್ನ ನರಮೃಗ ರೂಪ ಎನ್ನ ಅರಿಗಳ ಶೀಳಲಿ
ನಿನ್ನ ವಾಮನ ರೂಪ ಎನ್ನ ಸೇವೆಗೊಳಲಿ
ನಿನ್ನ ಭಾರ್ಗವ ರೂಪ ಎನ್ನ ಅಷ್ಟಮದ ಕಡಿಯಲಿ
ನಿನ್ನ ರಾಮ ರೂಪ ಎನ್ನ ಸ್ಮರಣೆ ಗೊದಗಲಿ
ನಿನ್ನ ಕೃಷ್ಣ ರೂಪ ಎನ್ನಭೀಷ್ಟ ನೀಯಲಿ
ನಿನ್ನ ಬೌದ್ಧ ರೂಪ ಎನ್ನ ವಿಷಯ ಬಿಡಿಸಲಿ
ನಿನ್ನ ಕಲ್ಕಿ ರೂಪವು ಎನ್ನ ಮನ ನಿಲ್ಲಿಸಲಿ
ನಿನ್ನಾಂತ ರೂಪವು ಎನ್ನನುದ್ಧರಿಸಲಿ
ಚಿನ್ಮಯ ಮೂರುತಿ ಗೋಪಾಲವಿಟ್ಠಲ
ನಿನ್ನ ತಿಳಿವ ಧನ್ಯ ಇನ್ನು ಮಾಡಿದ್ದು ಪುಣ್ಯ ॥ 5 ॥
ಮಟ್ಟತಾಳ
ಕಣ್ಣು ಮಾಡುವ ಕಾರ್ಯ ಕರ್ಣ ಮಾಡುವವೊ ನಿನ್ನ
ಕರ್ಣ ಮಾಡುವ ಕಾರ್ಯ ಕಣ್ಣು ಮಾಡುವವಯ್ಯ
ಬೆನ್ನು ಮಾಡುವ ಕಾರ್ಯ ವದನ ಮಾಡುವದು
ನಿನ್ನ ವದನ ಮಾಡುವ ಕಾರ್ಯ ಬೆನ್ನು ಮಾಡುವದು
ನಿನ್ನ ಚರಣ ಮಾಡುವ ಕಾರ್ಯ ಕರವು ಮಾಡುವದು
ನಿನ್ನ ಕರವು ಮಾಡುವ ಕಾರ್ಯ ಚರಣ ಮಾಡುವದಿನ್ನು
ನಿನ್ನ ಅವಯವಂಗಳು ಎಲ್ಲಿ ನೋಡಲು ಅಕ್ಷಿ
ನಿನ್ನ ಅವಯವಂಗಳು ರೂಪ
ಅನಂತಾನಂತವಾಗಿ ತೋರುವವು
ಇನ್ನು ಮೊದಲು ಕೊನೆ ಬಣ್ಣಿಸಿ ನೋಡಲು
ಎನ್ನಿಂದಲೊಶವೆ ಚಿನ್ಮಯ ಚಿದ್ರೂಪ
ಅನಂತ ಮಹಿಮ ಗೋಪಾಲವಿಟ್ಠಲರೇಯಾ
ನಿನ್ನ ನೋಡುವರೊಳಗೆ ಎನ್ನನು ಇಡಿಸೊ ॥ 6 ॥
ಆದಿತಾಳ
ಅನಂತ ಜನರು ನಿನ್ನ ನೋಡಲು
ನ್ಯೂನವಾಗದು ನಿನ್ನ ಕಾಂತಿಗೆ
ಅನಂತ ಜನರು ನಿನ್ನ ಪಾಡಲು
ನ್ಯೂನವಾಗದು ನಿನ್ನ ನಾಮಕ್ಕೆ
ಅನಂತ ಜನರು ನಿನ್ನ ಬೇಡಲು
ನ್ಯೂನವಾಗದು ನಿನ್ನ ವೇಷಕ್ಕೆ
ಅನಂತ ಜನರು ನಿನ್ನ ಸೇವಿಸೆ
ನ್ಯೂನವಾಗದು ನಿನ್ನ ಸೇವಿಯು
ಅನಂತ ಜನಕ್ಕೆ ವರವಿತ್ತರೆ
ನ್ಯೂನವಾಗದು ನಿನ್ನ ಬಲಕೆ
ಅನಂತನೆಂದು ಕರೆದವರಿಗೆ
ಅನಂತವಾಗಿ ತೋರುತಲಿಪ್ಪ
ಅನಂತ ಜನಕೆ ಅನಂತ ಕರ್ಮ
ಅನಂತ ಜನಕೆ ಅನಂತ ಫಲವು
ಅನಂತ ಗುಣನಿಧಿ ಗೋಪಾಲವಿಟ್ಠಲ
ಅನಂತ ಕಾಲಕ್ಕೆ ನೀನೇ ಗತಿಯೋ ॥ 7 ॥
ಜತೆ
ನಿನಗೆ ನಿನ್ನ ಪರಿವಾರ ಮೂರ್ತಿಗಳಿಗೆ
ವಿನಯದಿ ನಮಿಸಿದೆ ಗೋಪಾಲವಿಟ್ಠಲ ಕಾಯೊ ॥
*******
No comments:
Post a Comment