Wednesday, 11 November 2020

ಹರಿಕಥಾಮೃತಸಾರ ಸಂಧಿ 01 ankita jagannatha vittala ಮಂಗಳಾಚರಣ ಸಂಧಿ HARIKATHAMRUTASARA SANDHI 1 MANGALACHARANA SANDHI


1st Audio by Mrs. Nandini Sripad



ರಚನೆ : ಶ್ರೀ ಜಗನ್ನಾಥ ದಾಸರು  
for saahitya click   ಹರಿಕಥಾಮೃತಸಾರ ಸಂಧಿ 1 to 32  
ಮಂಗಳಾಚರಣ ಸಂಧಿ
" ಶ್ರೀರಮಣಿ ಕರಕಮಲಪೂಜಿತ ಚಾರುಚರಣ " ,
ಶ್ರೀ ಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 

 ಮಂಗಳಾಚರಣ ಸಂಧಿ , ರಾಗ ಭೂಪಾಳಿ

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಶ್ರೀರಮಣಿ ಕರಕಮಲ ಪೂಜಿತ ಚಾರುಚರಣ ಸರೋಜ
ಬ್ರಹ್ಮ ಸಮೀರವಾಣಿ ಫಣೀಂದ್ರವೀಂದ್ರ ಭವ ಇಂದ್ರ ಮುಖ ವಿನುತ
ನೀರಜಭವಾಂಡ ಉದಯ ಸ್ಥಿತಿ ಕಾರಣನೆ ಕೈವಲ್ಯದಾಯಕ
ನಾರಸಿಂಹನೆ ನಮಿಪೆ ಕರುಣಿಪುದು ಎಮಗೆ ಮಂಗಳವ||1||

ಜಗದುದರನ ಅತಿ ವಿಮಲ ಗುಣರೂಪಗಳನು ಆಲೋಚನದಿ
ಭಾರತ ನಿಗಮತತಿಗಳ ಅತಿಕ್ರಮಿಸಿ ಕ್ರಿಯಾ ವಿಶೇಷಗಳ
ಬಗೆಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳಿ ಹಿಗ್ಗುವ
ತ್ರಿಗುಣಮಾನಿ ಮಹಾಲಕುಮಿ ಸಂತೈಸಲಿ ಅನುದಿನವು||2||

ನಿರುಪಮಾನಂದಾತ್ಮ ಭವ ನಿರ್ಜರ ಸಭಾಸಂಸೇವ್ಯ
ಋಜುಗಣದ ಅರಸೆ ಸತ್ವಪ್ರಚುರ ವಾಣೀಮುಖಸರೋಜೇನ
ಗರುಡ ಶೇಷ ಶಶಾಂಕದಳ ಶೇಖರರ ಜನಕ ಜಗದ್ಗುರುವೇ
ತ್ವಚ್ಚರಣಗಳಿಗೆ ಅಭಿವಂದಿಸುವೆ ಪಾಲಿಪುದು ಸನ್ಮತಿಯ||3||

ಆರುಮೂರೆರೆಡೊoದು ಸಾವಿರ ಮೂರೆರೆಡು ಶತಶ್ವಾಸ ಜಪಗಳ
ಮೂರು ವಿಧ ಜೀವರೊಳಗೆ ಅಬ್ಜಜಕಲ್ಪ ಪರಿಯಂತ ತಾ ರಚಿಸಿ
ಸತ್ವರಿಗೆ ಸುಖ ಸಂಸಾರ ಮಿಶ್ರರಿಗೆ ಅಧಮಜನರಿಗೆ
ಅಪಾರ ದುಃಖಗಳ ಈವ ಗುರು ಪವಮಾನ ಸಲಹೆಮ್ಮ||4||

ಚತುರವದನನ ರಾಣಿ ಅತಿರೋಹಿತ ವಿಮಲಾ ವಿಜ್ಞಾನಿ
ನಿಗಮ ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ
ನತಿಸಿ ಬೇಡುವೆ ಜನನಿ ಲಕ್ಷ್ಮೀಪತಿಯ ಗುಣಗಳ ತುತಿಪುದಕೆ
ಸನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ||5||

ಕೃತಿರಮಣ ಪ್ರದ್ಯುಮ್ನನಂದನೆ ಚತುರವಿಂಶತಿ
ದೇವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ
ಸತತ ಹರಿಯಲಿ ಗುರುಗಳಲಿ ಸದ್ಗತಿಯ ಪಾಲಿಸಿ
ಭಾಗವತ ಭಾರತ ಪುರಾಣ ರಹಸ್ಯ ತತ್ವಗಳು ಅರುಪು ಕರುಣದಲಿ ||6||

ವೇದಪೀಠ ವಿರಿಂಚಿ ಭವ ಶುಕ್ರ ಆದಿಸುರ ವಿಜ್ಞಾನದಾಯಕ
ಮೋದ ಚಿನ್ಮಯ ಗಾತ್ರ ಲೋಕಪವಿತ್ರ ಸುಚರಿತ್ರ
ಛೇದ ಭೇದ ವಿಷಾದ ಕುಟಿಲಾಂತಾದಿ ಮಧ್ಯ ವಿದೂರ
ಆದಾನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ||7||

ಕ್ಷಿತಿಯೊಳಗೆ ಮಣಿಮಂತ ಮೊದಲಾದ ಅತಿ ದುರಾತ್ಮರು
ಒಂದಧಿಕ ವಿಂಶತಿ ಕುಭಾಷ್ಯವ ರಚಿಸೆ
ನಡುಮನೆಯೆಂಬ ಬ್ರಾಹ್ಮಣನ ಸತಿಯ ಜಠರದೊಳು ಅವತರಿಸಿ ಭಾರತೀರಮಣ
ಮಧ್ವಭಿದಾನದಿ ಚತುರದಶ ಲೋಕದಲಿ ಮೆರೆದ ಅಪ್ರತಿಮಗೆ ವಂದಿಸುವೆ||8||

ಪಂಚಭೇದಾತ್ಮಕ ಪ್ರಪಂಚಕೆ ಪಂಚರೂಪಾತ್ಮಕನೆ ದೈವಕ
ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ
ಪಂಚವಿಂಶತಿ ತತ್ವ ತರತಮ ಪಂಚಿಕೆಗಳನು ಪೇಳ್ದ
ಭಾವೀ ವಿರಿಂಚಿಯೆನಿಪ ಆನಂದತೀರ್ಥರ ನೆನೆವೆನನುದಿನವು||9||

ವಾಮದೇವ ವಿರಿಂಚಿತನಯ ಉಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನ ವಸನಭೂಷಣ ಸುಮನಸೋತ್ತಂಸ ಕಾಮಹರ ಕೈಲಾಸ ಮಂದಿರ
ಸೋಮಸೂರ್ಯಾನಲ ವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಲವ||10||

ಕೃತ್ತಿವಾಸನೆ ಹಿಂದೆ ನೀ ನಾಲ್ವತ್ತು ಕಲ್ಪಸಮೀರನಲಿ ಶಿಷ್ಯತ್ವವಹಿಸಿ
ಅಖಿಳ ಆಗಮಾರ್ಥಗಳೋದಿ ಜಲಧಿಯೊಳು ಹತ್ತು ಕಲ್ಪದಿ ತಪವಗೈದು
ಆದಿತ್ಯರೊಳಗೆ ಉತ್ತಮನೆನಿಸಿ
ಪುರುಷೋತ್ತಮನ ಪರಿಯಂಕ ಪದವೈದಿದೆಯೋ ಮಹದೇವ||11||

ಪಾಕಶಾಸನ ಮುಖ್ಯ ಸಕಲ ದಿವೌಕಸರಿಗೆ ಅಭಿನಮಿಪೆ
ಋಷಿಗಳಿಗೆ ಏಕಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ
ಆ ಕಮಲನಾಭದಿ ಯತಿಗಳಾನೀಕಕಾನಮಿಸುವೆನು ಬಿಡದೆ
ರಮಾಕಳತ್ರನ ದಾಸವರ್ಗಕೆ ನಮಿಪೆನು ಅನವರತ||12||

ಪರಿಮಳವು ಸುಮನದೊಳಗೆ ಅನಲನು ಅರಣಿಯೊಳಗೆ ಇಪ್ಪಂತೆ
ದಾಮೋದರನು ಬ್ರಹ್ಮಾದಿಗಳ ಮನದಲಿ ತೋರಿತೋರದಲೆ ಇರುತಿಹ
ಜಗನ್ನಾಥ ವಿಠಲನ ಕರುಣ ಪಡೆವ ಮುಮುಕ್ಷುಜೀವರು
ಪರಮ ಭಾಗವತರನು ಕೊಂಡಾಡುವುದು ಪ್ರತಿದಿನವು||13||

||ಇತಿ ಶ್ರೀ ಮಂಗಳಾಚರಣ ಸಂಧಿ ಸಂಪೂರ್ಣಂ||
*********

managala-charana(Kannada)

Hari kathamruta sara gurugala|
Karunadindapanitu heluve |
Parama bhagavadbhaktaridanadradi keluvadu ||

Shriramanikara kamala poojita |
Charucharana saroja brahma sa |
Meeravani phanendra, vindra, bhavendra mukhavinuta |
Neerajabhavan0dodaya sthiti |
Karanane kaivalyadayaka |
Narasimhane namipe karunipudemage mangalava ||1||

Jagadudaranati vimalagunaru |
Pagalanalochanadi bharata |
Nigamatatigala tikramisi kriya visheshanagala |
Bage bageya nutanava kanuta |
Mige harushadim pogali higguva |
Triguna mani mahalakumi santaisalanudinavu ||2||

Nirupamanandatmabhava ni |
Rjarasabha samsevya rujugana |
Darase sattwaprachura vani mukha sarojena ||
Garuda shesha shashankadalashe |
Karara janaka jagadguruve tva ||
Ccharanagaligabhi vandisuve paalipudu sanmatiya ||3||

Aru mooreradondu savira |
Mooreradu shatashwasa japagala ||
Mooru vidha jeevarolagabjakalpa pariyanta |
Ta rachisi sattvarige sukha sam |
Sara mishrarigadhamajanariga ||
Para dukkhagaleeva guru pavamana saluhemma ||4||

Chaturavadanana rani atiro |
Hita vimala vignani nigama |
Pratatigalagabhimani veenapani brahmani |
Nutisi beduve janani lakshmi |
Patiya gunagala tutipudake sa |
Nmatiya palisi nelesu ni madwadana sadanadali ||5||

Kruti ramana pradyumnanandane |
Chaturavimshati tattwapati de |
Vate galige guruvenisutiha marutana nija patni |
Satata hariyali gurugalali sa|
Dratiya palisi bhagavata bha |
Rata purana rahasya tatwagalarupu karunadali ||6||

Vedapeetha virinchi bhava sha |
Kradi sura vignanana dayaka |
Moda chinmayagatra loka pavitra sucharitra |
Cheda bheda vishada kutilam |
Tadi madhya vidura adya |
Nadi karana badarayana pahi satrana ||7||

Kshitiyolage manimanta modala |
Dati duratmaru bandadhika vim |
Shati kubhashyava rachise nadumaneyemba brahmanana |
Satiya jatharadolavatarisi ba |
Rati ramana madhwabhidha nadi |
Chaturadasha lokadali mereda pratimagondisuve ||8||

Pancha bhedatmaka prapanchake |
Pancharupatmakane daivata |
Panchamukha shakradigalu kimkararu shriharige ||
Pancha vimshati tattwataratama |
Panchikegalanu peldabhavi vi |
Ranchiyenipananda tirthara nenevenanudinavu ||9||

Vamadeva virinchitanaya U|
Ma manohara ugra dhoorjati ||
Samajajinavasana bhooshana sumanasottamsa ||
Kama hara kailasa mandira |
Soma suryanala vilochana |
Kamitaprada karunisemage sada sumamgalava ||10||

Krutti vasane hinde nee na |
Lwattu kalpasameeranali shi|
Shyatwavahisyakhilagamarthagalodi jaladhiyolu |
Hattu kalpadi tapavagaida |
Dityaroluguttamanenisi puru |
Shottamane pariyanka padavaidideyo mahadeva ||11||

Pakashasana mukya sakaladi |
Pakasarigabhinamipa rushigale |
Gekachittadi pitrugalige gamdharva kshitiparige ||
A kamalanabhadi yatigala |
Neekakanamisuvenu bidade ra|
Makalatrana dasavargake namipenanaravarata ||12||

Parimalavu sumanadolaganala |
Naraniyoligippente damo |
Daranu brahmadigala manadalli tori toradale ||
Irutiha jaganatha vithalana |
Karuna padeva mumukshujeevaru |
Parama bhagavataranu kondaduvudu pratidinavu ||13|
********


ಹರಿಕಥಾಮೃತಸಾರ ಗುರುಗಳ|
ಕರುಣದಿಂದಾಪನಿತು ಪೇಳುವೆ|
ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ||

ಶ್ರೀರಮಣಿಕರಕಮಲಪೂಜಿತ |
ಚಾರುಚರಣಸರೋಜ ಬ್ರಹ್ಮಸ |
ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ ||
ನೀರಜಭವಾಂಡೋದಯಸ್ಥಿತಿ |
ಕಾರಣನೆ ಕೈವಲ್ಯದಾಯಕ |
ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವ || ೧ ||

ಜಗದುದರನತಿ ವಿಮಲಗುಣರೂ |
ಪಗಳನಾಲೋಚನದಿ ಭಾರತ |
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ ||
ಬಗೆಬಗೆಯ ನೂತನವ ಕಾಣುತ |
ಮಿಗೆ ಹರುಷದಿಂ ಪೊಗಳಿ ಹಿಗ್ಗುವ |
ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು || ೨ ||

ನಿರುಪಮಾನಂದಾತ್ಮಭವ ನಿ |
ರ್ಜರಸಭಾಸಂಸೇವ್ಯ ಋಜುಗಣ ||
ದರಸೆ ಸತ್ತ್ವ ಪ್ರಚುರ ವಾಣೀಮುಖಸರೋಜೇನ ||
ಗರುಡಶೇಷಶಶಾಂಕದಳಶೇ |
ಖರರ ಜನಕ ಜಗದ್ಗುರುವೇ ತ್ವ |
ಚ್ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ || ೩ ||

ಆರು ಮೂರೆರಡೊಂದು ಸಾವಿರ |
ಮೂರೆರಡು ಶತಶ್ವಾಸ ಜಪಗಳ |
ಮೂರುವಿಧ ಜೀವರೊಳಗಬ್ಜಜಕಲ್ಪಪರಿಯಂತ ||
ತಾ ರಚಿಸಿ ಸಾತ್ತ್ವರಿಗೆ ಸುಖ ಸಂ |
ಸಾರ ಮಿಶ್ರರಿಗಧಮಜನರಿಗ |
ಪಾರ ದುಃಖಗಳೀವ ಗುರು ಪವಮಾನ ಸಲಹೆಮ್ಮ || ೪ ||

ಚತುರವದನನ ರಾಣಿ ಅತಿರೋ |
ಹಿತ ವಿಮಲ ವಿಜ್ಞಾನಿ ನಿಗಮ |
ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ ||
ನತಿಸಿ ಬೇಡುವೆ ಜನನಿ ಲಕ್ಷ್ಮೀ |
ಪತಿಯ ಗುಣಗಳ ತುತಿಪುದಕೆ ಸ |
ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ || ೫ ||

ಕೃತಿರಮಣ ಪ್ರದ್ಯುಮ್ನನಂದನೆ |
ಚತುರವಿಶಂತಿ ತತ್ತ್ವಪತಿ ದೇ |
ವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ ||
ಸತತ ಹರಿಯಲಿ ಗುರುಗಳಲಿ ಸ |
ದ್ರತಿಯ ಪಾಲಿಸಿ ಭಾಗವತ ಭಾ |
ರತಪುರಾಣರಹಸ್ಯ ತತ್ತ್ವಗಳರುಪು ಕರುಣದಲಿ || ೬ ||

ವೇದಪೀಠ ವಿರಿಂಚಿ ಭವ ಶ |
ಕ್ರಾದಿ ಸುರ ವಿಜ್ಞಾನದಾಯಕ |
ಮೋದ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ ||
ಛೇದ ಭೇದ ವಿಷಾದ ಕುಟಿಲಾಂ |
ತಾದಿ ಮಧ್ಯ ವಿದೂರ ಆದಾ |
ನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ || ೭ ||

ಕ್ಷಿತಿಯೊಳಗೆ ಮಣಿಮಂತ ಮೊದಲಾ |
ದತಿ ದುರಾತ್ಮರು ಒಂದಧಿಕ ವಿಂ |
ಶತಿ ಕುಭಾಷ್ಯವ ರಚಿಸೆ ನಡುಮನೆಯೆಂಬ ಬ್ರಾಹ್ಮಣನ ||
ಸತಿಯ ಜಠರದೊಳವತರಿಸಿ ಭಾ |
ರತಿ ರಮಣ ಮಧ್ವಾಭಿಧಾನದಿ |
ಚತುರದಶ ಲೋಕದಲಿ ಮೆರೆದಪ್ರತಿಮಗೊಂದಿಸುವೆ || ೮ ||

ಪಂಚ ಭೇದಾತ್ಮಕ ಪ್ರಪಂಚಕೆ |
ಪಂಚರೂಪಾತ್ಮಕನೆ ದೈವಕ |
ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ ||
ಪಂಚವಿಂಶತಿ ತತ್ತ್ವ ತರತಮ |
ಪಂಚಿಕೆಗಳನು ಪೇಳ್ದ ಭಾವಿ ವಿ |
ರಿಂಚಿಯೆನಿಪಾನಂದತೀರ್ಥರ ನೆನೆವೆನನುದಿನವು || ೯ ||

ವಾಮದೇವ ವಿರಿಂಚಿತನಯ ಉ |
ಮಾ ಮನೋಹರ ಉಗ್ರ ಧೂರ್ಜಟಿ |
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ||
ಕಾಮಹರ ಕೈಲಾಸ ಮಂದಿರ |
ಸೋಮಸೂರ್ಯಾನಲ ವಿಲೋಚನ |
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ || ೧೦ ||

ಕೃತ್ತಿವಾಸನೆ ಹಿಂದೆ ನೀ ನಾ |
ಲ್ವತ್ತು ಕಲ್ಪ ಸಮೀರನಲಿ ಶಿ |
ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು ||
ಹತ್ತು ಕಲ್ಪದಿ ತಪವಗೈದಾ |
ದಿತ್ಯರೊಳಗುತ್ತಮನೆನಿಸಿ ಪುರು |
ಷೋತ್ತಮನ ಪರಿಯಂಕ ಪದವೈದಿದೆಯೊ ಮಹದೇವ || ೧೧ ||

ಪಾಕಶಾಸನ ಮುಖ್ಯ ಸಕಲ ದಿ |
ವೌಕಸರಿಗಭಿನಮಿಪೆ ಋಷಿಗಳಿ |
ಗೇಕಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ ||
ಆ ಕಮಲನಾಭಾದಿ ಯತಿಗಳ |
ನೀಕಕಾನಮಿಸುವೆನು ಬಿಡದೆ ರ |
ಮಾಕಳತ್ರನ ದಾಸವರ್ಗಕೆ ನಮಿಪೆನನವರತ || ೧೨ ||

ಪರಿಮಳವು ಸುಮನದೊಳಗನಲ |
ನರಣಿಯೊಳಗಿಪ್ಪಂತೆ ದಾಮೋ |
ದರನು ಬ್ರಹ್ಮಾದಿಗಳ ಮನದಲಿ ತೋರಿ ತೋರದೆಲೆ ||
ಇರುತಿಹ ಜಗನ್ನಾಥ ವಿಠಲನ |
ಕರುಣ ಪಡೆವ ಮುಮುಕ್ಷು ಜೀವರು |
ಪರಮಭಾಗವತರನು ಕೊಂಡಾಡುವುದು ಪ್ರತಿದಿನವು || ೧೩ ||
*********


2 may 2021 - by ಆಚಾರ್ಯ ನಾಗರಾಜು ಹಾವೇರಿ

ಶ್ರೀ ಬೃಹಸ್ಪತಿ ಅಂಶ ಸಂಭೂತರಾದ ಶ್ರೀ ಜಗನ್ನಾಥ ದಾಸರ ವಿರಚಿತ....

ಸಂಸ್ಕೃತ ಹಾಗೂ ಕನ್ನಡ ವ್ಯಾಖ್ಯಾನದೊಂದಿಗೆ....

ಶ್ರೀ ಹರಿಕಥಾಮೃತಸಾರ ವನ್ನು

ಅರ್ಥ ಸಹಿತ ಪ್ರಮಾಣಗಳೊಂದಿಗೆ ನೋಡೋಣ....

ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

.**


" ಶ್ರೀ ಹರಿಕಥಾಮೃತಸಾರ - ಒಂದು ಅಧ್ಯಯನ "

ಅಮೃತ ಮಂಥನ ಸಂಗತಿ ಎಲ್ಲರಿಗೂ ತಿಳಿದಿದೆ. 

ಸುರಾಸುರರ ಯುದ್ಧ. 

ದೇವತೆಗಳ ಜಾಣ್ಮೆ - ಪರಮಾತ್ಮನ ಕಾರುಣ್ಯ - ಸಜ್ಜನರ ಉಳಿವು ದಾಖಲಾದ ವಿಚಾರಗಳಿವು. 

ನಾವು ಯುದ್ಧ ಮಾಡಬೇಕಿಲ್ಲ - ತಲೆಗೆ ಕೆಲಸವೂ ಕೊಡಬೇಕಿಲ್ಲ - ಶ್ರೀ ಹರಿಯ ಕಾರುಣ್ಯವಂತೂ ಇದ್ದೇ ಇದೆ. 

ನಾವು ಮಾಡಬೇಕಾಗಿರುವುದಿಷ್ಟೇ !

ಆಕರ್ಷಣೀಯ ಕಲಿಯ ಬಾಧೆಯಿಂದ ಹೊರಬಂದು.... 

ಕಿಂಚಿತ್ ಭಕುತಿ - ಪ್ರಾಮಾಣಿಕವಾದ ಬದುಕು - ಎಲ್ಲರೊಂದಿಗೂ ಪ್ರೀತಿಯಿಂದ ಹೊಂದುಕೊಂಡು ನಡೆವಂಥಾ ಜೀವನ ಇಷ್ಟಿದ್ದರೆ ಸಾಕು. 

ಸಮುದ್ರ ಮಥನದ ಹೊರತಾಗಿ ಅಮೃತ ಕೊಡಲು ನಮ್ಮ ಬಳಿಯೇ ಒಬ್ಬ ಸಂತರಿದ್ದಾರೆ. 

ಜಗತ್ತಿಗೆ ನಾಥನಾದ ಜಗದೀಶನ [ ಶ್ರೀ ಹರಿಯ ] ನಿಜ ದಾಸರಿದ್ದಾರೆ. 

ಅವರು ಬೇರೆ ಯಾರೂ ಅಲ್ಲ. 

ಅವರೇ ಶ್ರೀ ಜಗನ್ನಾಥದಾಸರು. 

ಅವರ ಬಳಿ ಇರುವ ಅಮೃತ " ಶ್ರೀ ಹರಿಕಥಾsಮೃತ ". 

" ದೇವತೆಗಳ ಅಮೃತ ಸತ್ತವರನ್ನು ಬದುಕಿಸಬಲ್ಲದು - ಆದರೆ ನಮ್ಮ ಶ್ರೀ ದಾಸರಾಯರ ಅಮೃತ ಸಾಯದಂತೆ ಮಾಡಬಲ್ಲದು " !!

ಜಗತೀತಲ ವಿಖ್ಯಾತರಾದ ಶ್ರೀ ಜಗನ್ನಾಥದಾಸರದ್ದು " ಮಾತೃ ಹೃದಯ ". 

ಅವರು ಒಬ್ಬರಲ್ಲಿ ಮೂರು. 

ಅವರು ಮನ - ಧ್ಯಾನ - ದಾನಗಳ " ತ್ರಿವೇಣಿ ಸಂಗಮ ". 

ಶ್ರೀ ಗೋಪಾಲದಾಸರ ಮನ [ ಆಯುಸ್ಸು ] - ಶ್ರೀ ಜಗನ್ನಾಥದಾಸರ ಭಕುತಿ [ ಧ್ಯಾನ ] - ಶ್ರೀ ವಿಜಯರಾಯರ [ ದಾನ ] 

ಹೀಗೆ ಏಕತ್ರ ಒಬ್ಬರಲ್ಲಿಯೇ ಮೂರು ಅದ್ಭುತ ಶಕ್ತಿಗಳು ಮೇಳೈಸಿರುವುದು ತೀರಾ ಅಪರೂಪದ್ದು. 

ಕೇವಲ ಜೀವ ಜಂತುಗಳಂತಿರುವ ನಾವು ಮಾನವರಾಗಬೇಕಿದೆ. 

ನಮ್ಮ ಗುಂಪಿನ ಮಾನ ಉಳಿಸಬೇಕಾಗಿದೆ. 

" ಮಾನವಿ ಕ್ಷೇತ್ರದ ದಾಸ ಸಾಗರದಲ್ಲಿ ಮಿಂದು ಭವ್ಯ ಮಾನವರಾಗಲು ಸಾಧ್ಯವಿದೆ ". 

ಕೀರ್ತನೆ - ಉಗಾಭೋಗಗಳು - ಸುಳಾದಿಗಳು - ದಂಡಕಗಳು ಸುಲಲಿತವಾಗಿ ಹರಿದಿರುವ ಸಂಕೀರ್ತನೆಗಳ ಖಜಾನೆ ಶ್ರೀ ಜಗನ್ನಾಥದಾಸರ ಆಲಯದಲ್ಲಿದೆ. 

ಆ ನೆಲ ಮಾಳಿಗೆಗಳ ಖಜಾನೆಯ ಕೀಲಿಕೈ ಶ್ರೀ ಶ್ಯಾಮಸುಂದರದಾಸರು - ಶ್ರೀ ಗೋರೆಬಾಳು ಹನುಮಂತರಾಯರು - ಶ್ರೀ ಸಿರಿವಾರದ ರಾಮಾಚಾರ್ಯರು - ಶ್ರೀ ಸುವಿದ್ಯೇಂದ್ರ ತೀರ್ಥರು - ಇಂಥವರ ಬಳಿ ಮಾತ್ರ ಇದೆ. 

ತಿರುವನಂತಪುರ೦ನಲ್ಲಿ ದೊರಕಿದ ಬೆಲೆ ಬಾಳುವ ನಗ - ನಾಣ್ಯಗಳಿಗೆ ಬೆಲೆ ಕಟ್ಟುವರಿದ್ದಾರೆ - ಆದರೆ, ಈ ಸಂಪತ್ತು ಬೆಲೆ ಕಟ್ಟಲಾಗದ್ದು. 

ನೆಲೆ ಕೊಡುವಂಥಾದ್ದು. 

ಸ್ಫೂರ್ತಿತ ಸೆಲೆ ಅಲ್ಲಿಯದ್ದು. 

ನಮ್ಮಲ್ಲಿ ಒಂದು ನಂಬಿಕೆ !

ಮುತ್ತು ಮಾಣಿಕ್ಯಗಳ ಭಂಡಾರವನ್ನು ನಾಗರಗಳು [ ನಾಗರ ಹಾವುಗಳು ] ಕಾಯುತ್ತವೆ ಮತ್ತು ಯೋಗ್ಯರು ಬಂದಾಗ ಅವರಿಗೊಪ್ಪಿಸಿ ಸರಿದು ಬಿಡುತ್ತವಂತೆ !

ಅಂಥಹಾ ಸಂಪತ್ತು ಇಲ್ಲಿದೆ. 

ಶ್ರೀ ಜಗನ್ನಾಥದಾಸರ ಚರಿತ್ರೆಯನ್ನೂ - ಅವರ ಕೃತಿ ರತ್ನವಾದ " ಶ್ರೀಮದ್ ಹರಿಕಥಾಮೃತಸಾರವನ್ನೂ - ಅಮೂಲ್ಯ ಪದಗಳ ಸಂಪತ್ತಿನಿಂದ ಕಟ್ಟಿಕೊಟ್ಟಿದ್ದಾರೆ. 

ಕ್ಲಿಷ್ಟ ಪದಗಳಿಂದ ಕಚ್ಚುವುದಿಲ್ಲ. 

ಹೇಳಿದ್ದನ್ನು ಹೇಳುತ್ತಾ ಬುಸು ಗುಟ್ಟುವುದಿಲ್ಲ. 

ತನ್ನಷ್ಟಕ್ಕೆ ತಾನೇ ಸರಿದು ಹೋಗುವಂತೆ ಸುಲಲಿತವಾಗಿ ಅಕ್ಷರಗಳು ಹರಿದಾಡುತ್ತವೆ. 

ಒಪ್ಪಿಸಿ ಹೋಗಲು " ನಾಗರಾಜರು " ಸಿದ್ಧರಿದ್ದಾರೆ. 

ಸ್ವೀಕರಿಸಲು ನೀವು ಸಿದ್ಧರಿದ್ದೀರಾ ?

ನಿಮ್ಮ ಹೆಜ್ಜೆಗಾಗಿ ಗೆಜ್ಜೆ ಕಟ್ಟಿಕೊಂಡು ಕಾಯುತ್ತಿರುವ.... 

ಸಜ್ಜನ ವಿಧೇಯ..... 

ರಾಜಾ ಎಸ್ ರಾಜಗೋಪಾಲಚಾರ್ಯರು 

ಶ್ರೀ ಶ್ರೀಗಳವರ ಆಪ್ತ ಕಾರ್ಯದರ್ಶಿಗಳು 

ಶ್ರೀ ರಾಘವೇಂದ್ರ ಸ್ವಾಮಿಗಳವ ಮಠ - ಮಂತ್ರಾಲಯ. 

" ವಿಶೇಷ ವಿಚಾರ "

ನಾನು [ ಆಚಾರ್ಯ ನಾಗರಾಜು ಹಾವೇರಿ ] ಕ್ರಿ ಶ 2011 ರಲ್ಲಿ ಶ್ರೀ ಜಗನ್ನಾಥದಾಸರ ಜೀವನ ಚರಿತ್ರೆ - ಕೃತಿಗಳ ವಿಮರ್ಶೆ - ಶ್ರೀಮದ್ ಹರಿಕಥಾಮೃತಸಾರ ವೈಭವ ಸಾರುವ " ರಂಗ ಒಲಿದ ದಾಸರಾಯರು - ಶ್ರೀ ಜಗನ್ನಾಥದಾಸರು " ಯೆಂಬ ಕೃತಿರತ್ನಕ್ಕೆ -

ಕೀರ್ತಿಶೇಷ ಪರಮಪೂಜ್ಯ ಶ್ರೀ ರಾಜಾ ಎಸ್ ರಾಜಗೋಪಾಲಾಚಾರ್ಯರು ತುಂಬು ಹೃದಯದಿಂದ ಆಶೀರ್ವದಿಸಿ " ಮುನ್ನುಡಿ " ಕೊಟ್ಟಿದು - ಅದನ್ನು ಸಜ್ಜನರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಇಲ್ಲಿದೆ. 

ನಾನು - ಶ್ರೀ ಹರಿಕಥಾಮೃತಸಾರ ಪಾರಾಯಣ ಹಾಗೂ ಪ್ರತಿದಿನವೂ ಎರಡು ಪದ್ಯಗಳನಂತೆ ಬರೆದು ನನ್ನ ಜೀವನದಲ್ಲಿ ಎಲ್ಲವನ್ನೂ ಪಡೆದಿದ್ದೇನೆ ಯೆಂಬುದನ್ನು ಘಂಟಾಘೋಷವಾಗಿ ಹೇಳುತ್ತಿದ್ದೇನೆ. 

" ಹರಿಕಥಾಮೃತಸಾರ " ಸಜ್ಜನರಿಗೆ ದೊರೆತ ಅಮೃತ. 

ಶ್ರೀ ಮನೋಹರ ವಿಠಲ ದಾಸರು "..... 

ಹರಿಕಥಾಮೃತಸಾರ ಪುಸ್ತಕ ।

ಬರೆದು ಓದುತ ಕೇಳ್ವ ಸುಜನರ ।

ದುರಿತ ಪರಿಹಾರ ಮುಕ್ತಿ । ಯ ।

ವರಿಗೆ ಕರತಲಾಮಲಕ ।।

ಆದ್ದರಿಂದ ನಾಡಿನ ಪ್ರತಿಯೊಬ್ಬ ಸಜ್ಜನರೂ ಪ್ರತಿದಿನ ಪಾರಾಯಣ ಮಾಡಿ ಮತ್ತು ಎರಡು ಪದ್ಯಗಳನ್ನು ಬರೆಯಿರಿ - ಇದರ ಫಲ ಹೇಗಿರುತ್ತದೆ ಎಂದು ತಮಗೆ ತಿಳಿಯುತ್ತದೆ. 

ಇಂದಿನಿಂದಲೇ ಶುರು ಮಾಡಿ !!

ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ

*****


" ಶ್ರೀ ಹರಿಕಥಾಮೃತಸಾರ - 1 "

" ಶ್ರೀ ಜಗನ್ನಾಥದಾಸರ ಮೇರು ಕೃತಿ ಶ್ರೀ ಹರಿಕಥಾಮೃತಸಾರ - ಒಂದು ಅಧ್ಯಯನ "

ಹರಿದಾಸ ಸಾಹಿತ್ಯದ ಮೇರು ಕೃತಿ ಯೆನಿಸಿದ " ಹರಿಕಥಾಮೃತ ಸಾರ " ವು ಶ್ರೀ ಜಗನ್ನಾಥದಾಸರ ಆಧ್ಯಾತ್ಮಿಕ ಕವಿತ್ವದ ಮಂಗಳ ಕಳಸವಾಗಿದೆ. 

ಇಂಥಾ ಮಧುರ - ಗಂಭೀರವಾದ ಸಾತ್ವಿಕ ಸಾಹಿತ್ಯಿಕ ಕೃತಿಯು ಹಿಂದಾಗಲಿಲ್ಲ - ಇಂದಿಲ್ಲ - ಮುಂದೆ ಆಗುವುದಿಲ್ಲ ಎಂದು ಹೇಳಿದರೆ ಸತ್ಯಕ್ಕೆ ವ್ಯತ್ಯಾಸವಾಗಿ ನುಡಿದಂತಾಗಲಿಲ್ಲ.

ಹರಿಕಥಾಮೃತಸಾರ ಒಂದು ಪ್ರಮೇಯ ಪಾರಿಜಾತ. 

ಆಚಾರ್ಯ ಮಧ್ವರ ಸಿದ್ಧಾಂತವೆಲ್ಲವೂ ಇಲ್ಲಿಯ ಮುದ್ದು ಭಾಷೆಯಲ್ಲಿ ಮೂಡಿ ನಿಂತಿವೆ.

ವೇದ ವೇದಾಂತದ ತಿರುಳೆಲ್ಲವೂ ಈ ಕಾವ್ಯದ ಹುರುಳಾಗಿ ಇಲ್ಲಿ ಅರಳಿವೆ.

ವೈದಿಕ ದರ್ಶನದ ನೂರಾರು ಗ್ರಂಥಗಳಲ್ಲಿ ಹೇಳಿದ ತತ್ತ್ವಾರ್ಥಗಳನ್ನೂ

-  ಪ್ರಮೇಯ ರಹಸ್ಯಗಳನ್ನೂ ಮಥಿಸಿ ಈ ತಮ್ಮ ಅನರ್ಘ್ಯವಾದ ಕೃತಿಯಲ್ಲಿ ಎರಕ ಹಾಕಿದ್ದಾರೆ.

ಆಸ್ತಿಕ ದರ್ಶನಗಳನ್ನೆಲ್ಲಾ ಜಾಲಿಸಿ ತತ್ತ್ವಸಾರವಾದ ತತ್ತ್ವಗಳ ಕೆನೆಯನ್ನೆಲ್ಲಾ ಕಡೆದು ಅವುಗಳ ಆರ್ಕದಂತಿದ್ದ ಹೂ ಬೆಣ್ಣೆಯನ್ನೇ ಇಲ್ಲಿ ತೇಲಿಸಿದ್ದಾರೆ.

ಸಾಹಿತ್ಯವು ಸಿದ್ಧಾಂತವನ್ನಪ್ಪಿ ಇಲ್ಲಿ ಸಾರ್ಥಕವಾಗಿದೆ. 

ಸಿದ್ಧಾಂತವು ಸಾಹಿತ್ಯದ ಆಲಿಂಗನದಿಂದ ಮಧುರ ಮೋದಕವಾಗಿದೆ.

ಹರಿಕಥಾಮೃತಸಾರವನ್ನು ಓದಿದ ಜೀವಕ್ಕೆ ಆರೋಗ್ಯ, ಸೌಭಾಗ್ಯ, ರುಚಿ - ರಸ - ಲೌಕಿಕ ಆನಂದ - ಬ್ರಹ್ಮಾನಂದ - ಕಾವ್ಯಾರ್ಥ - ಪುರುಷಾರ್ಥ ಎಲ್ಲವೂ ದೊರಕಿ ಮಾನವೀಯ ಜೀವನವೇ ಪಾವನವಾಗುವದು.

ಈ ಹರಿಕಥಾಮೃತಸಾರದಲ್ಲಿ ೩೨ ಸಂಧಿಗಳಿದ್ದು, 988 ಪದ್ಯಗಳು ಸುಂದರವಾದ ಭಾಮಿನೀ ಷಟ್ಪದಿಯ ಛಂದಸ್ಸಿನಲ್ಲಿ ಸಮಗ್ರ ವೇದಾಂತ ಪ್ರಪಂಚಕ್ಕೆ ಕಂಕಣ ಪರಿಧಿಯನ್ನು ಕಟ್ಟಿ ರಸೋಧಧಿಯನ್ನೇ ಒಟ್ಟೈಸಿದೆ.

1. ಮಂಗಳಾಚರಣ ಸಂಧಿ - 13 ಪದ್ಯಗಳು

2. ಕರುಣಾ ಸಂಧಿ - 31 ಪದ್ಯಗಳು

3. ವ್ಯಾಪ್ತಿ ಸಂಧಿ - 32 ಪದ್ಯಗಳು

4. ಭೋಜನ ಸಂಧಿ - 30 ಪದ್ಯಗಳು

5. ವಿಭೂತಿ ಸಂಧಿ - 40 ಪದ್ಯಗಳು

6. ಪಂಚಾಗಿಹೋತ್ರ ಸಂಧಿ - 35 ಪದ್ಯಗಳು

7. ಪಂಚತನ್ಮಾತ್ರ ಸಂಧಿ - 33 ಪದ್ಯಗಳು

8. ಮಾತೃಕಾ ಸಂಧಿ - 32 ಪದ್ಯಗಳು

9. ವರ್ಣ ಪ್ರಕ್ರಿಯಾ ಸಂಧಿ - 31 ಪದ್ಯಗಳು

10. ಸರ್ವ ಪ್ರತೀಕ ಸಂಧಿ - 25 ಪದ್ಯಗಳು

11. ಧ್ಯಾನ ಪ್ರಕ್ರಿಯಾ ಸಂಧಿ - 32 ಪದ್ಯಗಳು

12. ನಾಡೀ ಪ್ರಕರಣ ಸಂಧಿ - 45 ಪದ್ಯಗಳು

13. ನಾಮ ಸ್ಮರಣ ಸಂಧಿ - 33 ಪದ್ಯಗಳು

14. ಜೀವನ ಪ್ರಕ್ರಿಯಾ ಸಂಧಿ - 31 ಪದ್ಯಗಳು

15. ಶ್ವಾಸ ಸಂಧಿ - 29 ಪದ್ಯಗಳು

16. ದಟ್ಟ ಸ್ವಾತಂತ್ರ್ಯ ಸಂಧಿ - 15 ಪದ್ಯಗಳು

17. ಸ್ವಾತಂತ್ರ್ಯ ವಿಭಜನ ಸಂಧಿ - 37 ಪದ್ಯಗಳು

18. ಬಿಂಬೋಪಾಸನಾ ಸಂಧಿ - 31 ಪದ್ಯಗಳು

19. ಸ್ತೋತ್ರ ಸಂಧಿ - 35 ಪದ್ಯಗಳು

20. ಅವರೋಹಣ ತಾರತಮ್ಯ ಸಂಧಿ - 07 ಪದ್ಯಗಳು

21. ಆವೇಶಾವತಾರ ಸಂಧಿ - 57 ಪದ್ಯಗಳು

22. ಭಕ್ತಾಪರಾಧ ಸಹಿಷ್ಣು ಸಂಧಿ - 35 ಪದ್ಯಗಳು

23. ಬೃಹತ್ತಾರತಮ್ಯ ಸಂಧಿ - 29 ಪದ್ಯಗಳು

24. ಕಲ್ಪನಾ ಸಂಧಿ - 63 ಪದ್ಯಗಳು

25. ಕ್ರೀಡಾವಿಲಾಸ ಸಂಧಿ - 63 ಪದ್ಯಗಳು

26. ಆರೋಹಣ ತಾರತಮ್ಯ ಸಂಧಿ - 19 ಪದ್ಯಗಳು

27. ದೇವತಾನುಕ್ರಮಣಿಕಾ ಸಂಧಿ - 05 ಪದ್ಯಗಳು

28. ವಿಘ್ನೇಶ ಸಂಧಿ - 21 ಪದ್ಯಗಳು

29. ಅಣು ತಾರತಮ್ಯ ಸಂಧಿ - 16 ಪದ್ಯಗಳು

30. ದೈತ್ಯ ತಾರತಮ್ಯ ಸಂಧಿ - 25 ಪದ್ಯಗಳು

31. ನೈವೇದ್ಯ ಪ್ರಕರಣ ಸಂಧಿ - 25 ಪದ್ಯಗಳು

32. ಕಕ್ಷಾ ತಾರತಮ್ಯ ಸಂಧಿ - 36 ಪದ್ಯಗಳು

ಒಟ್ಟು : 988 ಪದ್ಯಗಳು

*****


" ಶ್ರೀ ಹರಿಕಥಾಮೃತಸಾರ - 2 "

" ಶ್ರೀ ಜಗನ್ನಾಥದಾಸರ ಮೇರು ಕೃತಿ ಶ್ರೀ ಹರಿಕಥಾಮೃತಸಾರ - ಒಂದು ಅಧ್ಯಯನ "

ಶ್ರೀ ಜಗನ್ನಾಥದಾಸರು ಪ್ರತಿಯೊಂದು ಸಂಧಿಯ ಪ್ರಾರಂಭದಲ್ಲೂ...

ಹರಿಕಥಾಮೃತಸಾರ ಗುರುಗಳ ।

ಕರುಣದಿಂದಾ ಪಾಣಿತು ಪೇಳುವೆ ।

ಪರಮ ಭಗವದ್ಭಕ್ತರಿದನಾದರದಿ ಕೇಳುವುದು ।।

ಎಂದು ಅನುಬಂಧ ಚತುಷ್ಟಯರನ್ನು ಸುಂದರವಾಗಿ ಹೇಳಿ ತಮ್ಮ ಧ್ಯೇಯ ದರ್ಶನಗಳನ್ನು ಮತ್ತೆ ಮತ್ತೆ ಸಾರಿ ಹೇಳುತ್ತಾರೆ.

" ಹರಿ "

1. ಮುಮುಕ್ಷುಗಳಾದ ಜೀವರು ಪರಮಾತ್ಮನ ಸಾಕ್ಷಾತ್ಕಾರವಾಗಬೇಕಾದರೆ ಭಗವಂತನ ಬಿಂಬೋಪಾಸನೆಯನ್ನು ಮಾಡಲೇಬೇಕು.

2. ಶ್ರೀ ಗಣೇಶನಿಗೆ ತನ್ನ ಬಿಂಬ ರೂಪ " ಶ್ರೀ ವಿಶ್ವ೦ಭರ " ಯೆಂದು ತಿಳಿದಿದೆ. 

ಆದ್ದರಿಂದ ಶ್ರೀ ಗಣೇಶನು ಶ್ರೀ ಶ್ರೀ ವಿಶ್ವ೦ಭರನಾಮಕ ಪರಮಾತ್ಮನನ್ನು ಉಪಾಸನೆ ಮಾಡುತ್ತಾನೆ.

3. ಆದರೆ, ಸಾಮಾನ್ಯ ಜೀವರಿಗೆ ತಮ್ಮ ಬಿಂಬ ರೂಪ ಯಾವುದು ಎಂದು ಗೊತ್ತಿಲ್ಲ. 

ಅದಕ್ಕೆ ಶ್ರೀಮದಾಚಾರ್ಯರು ತಮ್ಮ ಭಾಷ್ಯದಲ್ಲಿ ಸಾಮಾನ್ಯವಾಗಿ ಸರ್ವ ಜೀವರ ಬಿಂಬ ರೂಪ ಪರಮಾತ್ಮನು " ಹರಿ " ಶಬ್ದ ವಾಚ್ಯನಾಗಿದ್ದಾನೆ.

" ಕಥಾ "

" ಕಥಾ " ಎಂದರೆ ಕತೆಯಲ್ಲ. 

ಇಲ್ಲಿ " ಹರಿ ಕಥಾ " ಎಂದರೆ....

" ಕಥ್ಯ೦ತೇ ಪ್ರತಿಪಾದ್ಯ೦ತೇ ಹರೇ: 

ಜ್ಞಾನಾನಂದಾದಿ ಗುಣಾ: 

ಅನಂತ ರೂಪಾಣಿ ಯತ್ರ 

ಪ್ರತಿಪಾದ್ಯ೦ತೇ ತೇ ಹರಿ ಕಥಾ: ಇತಿ " 

ಎಂದರೆ ವೇದಾದಿಗಳು ಯೆಂದರ್ಥ.

" ದ್ವೇ ವಿದ್ಯೇ ವೇದಿತವ್ಯೇ " ...

1. ಅಪರಾ ವಿದ್ಯಾ

" ಅಪರಾ ವಿದ್ಯೆ " ಎಂದರೆ " ಋಗ್ವೇದಾದಿಗಳು ".

2. ಪರ ವಿದ್ಯಾ

" ಪರಾ " ಶ್ರೀ ಪರಮಾತ್ಮನನ್ನೇ ಪ್ರತಿಪಾದನೆ ಮಾಡುವ ಉಪನಿಷತ್ತುಗಳೂ ಬ್ರಹ್ಮಸೂತ್ರಗಳೂ -  ಭಾಗವತ, ಮಹಾಭಾರತ ಮತ್ತು ಮೂಲರಾಮಾಯಣ.

ಪರಮಾತ್ಮನನ್ನೇ ಪ್ರತಿಪಾದನೆ ಮಾಡುವ " ಪರಾ " ವಿದ್ಯೆಗೆ " ಅಮೃತ " ಎಂದು ಹೆಸರು.

ಅಂದರೆ.....

ಅಮೃತ ಸ್ವರೋಪ ಮೋಕ್ಷಕ್ಕೆ ಸಾಧಕವೆನಿಸುತ್ತದೆ.

" ಸಾರ "

ಸಾರ = ರಹಸ್ಯ / ಶ್ರೇಷ್ಠ

ದೇವತೆಗಳು ಪಾನ ಮಾಡುವ ಅಮೃತಕ್ಕಿಂತಲೂ ಈ ಜ್ಞಾನಾಮೃತ ಶ್ರೇಷ್ಠ ಎಂಬುದನ್ನು ತಿಳಿಸುವುದಕ್ಕಾಗಿ " ಸಾರ " ಶಬ್ದ ಪ್ರಯೋಗ ಮಾಡಿದ್ದಾರೆ.

ಅಚ್ಛ ತಿಳಿಗನ್ನಡದಲ್ಲಿ ಅವುಗಳ ಸಾರ ರಹಸ್ಯವನ್ನು ತಿಳಿಸುತ್ತೇನೆಂಬ ಅಭಿಪ್ರಾಯದಿಂದ ಈ ಗ್ರಂಥಕ್ಕೆ " ಹರಿಕಥಾಮೃತಸಾರ " ಯೆಂದು ನಾಮಕರಣ ಮಾಡಿದ್ದಾರೆ.

*****


" ಶ್ರೀ ಹರಿಕಥಾಮೃತಸಾರ - 3 "

" ಶ್ರೀ ಜಗನ್ನಾಥದಾಸರ ಮೇರು ಕೃತಿ ಶ್ರೀ ಹರಿಕಥಾಮೃತಸಾರ - ಒಂದು ಅಧ್ಯಯನ "

ಭಗವಂತನ ಸಾರ್ವತ್ರಿಕ ವ್ಯಾಪ್ತಿಯು ಸಾಮಾನ್ಯವಾಗಿ ತಿಳಿದುಕೊಳ್ಳಲು ಕಠಿಣವಾದರೂ ದೃಷ್ಟಾಂತ ಮುಖಾಂತರ ಸುಲಭ ಗಮ್ಯವಾಗುವಂತೆ ರಮ್ಯವಾಗಿ ಹೇಳುತ್ತಾರೆ ಶ್ರೀ ಜಗನ್ನಾಥದಾಸರು.

ಪರಿಮಳವು ಸುಮನದೊಳಗೆ ಅನಲನು ।

ಅರಣಿಯೊಳಗೆ ಇಪ್ಪಂತೆ । ದಾಮೋ ।

ದರನು ಬ್ರಹ್ಮಾದಿಗಳ ಮನದಲಿ -

ತೋರಿ ತೋರದಲೆ ।।

ಇರುತಿಹ ಜಗನ್ನಾಥವಿಠಲನ ।

ಕರುಣ ಪಡೆವ ಮುಮುಕ್ಷು ಜೀವರು ।

ಪರಮ ಭಾಗವತರನು -

ಕೊಂಡಾಡುವುದು ಪ್ರತಿ ದಿನವು ।। 1/13 ।।

ಸಂಸ್ಕೃತದಲ್ಲಿ " ಉಪಮಾ ಕಾಳಿದಾಸಸ್ಯ " ಎಂಬ ವಚನವಿದ್ದಂತೆ " ಉಪಮಾ ಜಗನ್ನಾಥಸ್ಯ " ಎಂದು ಹೇಳಬೇಕೆನಿಸುತ್ತದೆ.

ಶ್ರೀ ಜಗನ್ನಾಥದಾಸರ ಕೃತಿಗಳನ್ನು ಪರಾಮರ್ಶಿಸಿದ ರಸ ಚೇತನಕ್ಕೆ...

ಭಕ್ತ - ಭಗವಂತರ ರಾಗಾನುರಾಗಗಳನ್ನೂ, ಪ್ರೀತಿ ವಾತ್ಸಲ್ಯಗಳನ್ನೂ, ಎಂಥ ಹೃದಯ ಸ್ಪರ್ಶಿಯಾದ ನಿದರ್ಶನದಿಂದ ಪ್ರದರ್ಶನ ಮಾಡಿದ್ದಾರೆ ಶ್ರೀ ಜಗನ್ನಾಥದಾಸರು.

ಜನನಿಯನು ಕಾಣದಿಹ ಬಾಲಕ ।

ನೆನೆನೆನೆದು ಹಲುಬುತಿರೆ ಕತ್ತಲ ।

ಮನೆಯೊಳಗಿದ್ದವನ ನೋಡುತ -

ನಗುತ ಹರುಷದಲಿ ।।

ತನಯನಂ ಬಿಗಿದಪ್ಪಿ ರಂಬಿಸಿ ।

ಕನಲಿಕೆಯ ಕಳೆವಂತೆ । ಮಧುಸೂ ।

ದನನು ತನ್ನವರಿದ್ದೆಡೆಗೆ -

ಬಂದೊದಗಿ ಸಲಹುವನು ।। 2/11 ।।

ಇದಕ್ಕೆ ಅನೇಕ ಸಾಕ್ಷಿಗಳನ್ನು ಹೇಳಿ ಆರ್ತತ್ರಾಣ ತತ್ಪರತೆಯನ್ನು ಸಿದ್ಧ ಮಾಡಿದ್ದಾರೆ.

ಮಹಾಭಾರತದ ವಿಷಯದಲ್ಲಿ....

" ಯದಿಹಾಸ್ತಿತದನ್ಯತ್ರಯನ್ನೇಹಾಸ್ತಿ ನ ತತ್ ಕ್ವಚಿತ್ "

ಯೆಂದು ಹೇಳಿದಂತೆ ನ್ಯೂನಾರ್ಥದಲ್ಲಿ ಹರಿಕಥಾಮೃತಸಾರ ವಿಷಯದಲ್ಲೂ ಹಾಗೆ ಹೇಳಬಹುದಾಗಿದೆ.

ಶ್ರೀ ಹರಿಕಥಾಮೃತಸಾರದಲ್ಲಿ...

ಬಾರದ ಪ್ರಮೇಯವಿಲ್ಲ.

ತಿಳಿಸದ ತತ್ತ್ವವಿಲ್ಲ.

ಬಣ್ಣಿಸದ ಭಗವನ್ಮಹಿಮಾ ಇಲ್ಲ.

ಸರ್ವ ಸೈದ್ಧಾಂತಿಕ ಜ್ಞಾತವ್ಯಾ೦ಶಗಳ ಒಂದು ಮಂಜುಳ ಮಂಜೂಷಿಕೆಯಂತೆ ಕಂಗೊಳಿಸುತ್ತಿದೆ ಈ ಸತ್ಪ್ರಬಂಧ!!

****


" ಶ್ರೀ ಹರಿಕಥಾಮೃತಸಾರ - 4 "

" ಶ್ರೀ ಜಗನ್ನಾಥದಾಸರ ಮೇರು ಕೃತಿ ಶ್ರೀ ಹರಿಕಥಾಮೃತಸಾರ - ಒಂದು ಅಧ್ಯಯನ "

ಸಂಸ್ಕೃತ ಗ್ರಂಥಗಳಿಗೆ ಕನ್ನಡ ಮತ್ತೂ ಪ್ರಾಂತೀಯ ಭಾಷೆಗಳಲ್ಲಿ ಅನುವಾದ ಗ್ರಂಥಗಳು೦ಟು. 

ಆದರೆ, ಕನ್ನಡ ಗ್ರಂಥಕ್ಕೆ ಸಂಸ್ಕೃತ ವ್ಯಾಖ್ಯಾನಗಳು ಇರುವುದು " ಹರಿಕಥಾಮೃತಸಾರ " ಕ್ಕೆ ಮಾತ್ರ ಉಂಟು. 

ಕಾರಣ ಶ್ರೀಮದ್ ಹರಿಕಥಾಮೃತಸಾರ ಒಂದು ಪ್ರಮೇಯಗಳ ಆಗರ / ಪ್ರಮೇಯ ಪುಂಜ. 

ಹರಿಕಥಾಮೃತಸಾರದಲ್ಲಿ ಇರುವಷ್ಟು ಪ್ರಮೇಯಗಳು ಯಾವ ಸಂಸ್ಕೃತ ಗ್ರಂಥಗಳಲ್ಲಿಯೂ ಇಲ್ಲ. 

ಹರಿಕಥಾಮೃತಸಾರ ಪ್ರತಿ ಪದ್ಯವೂ ಪ್ರಮೇಯಭರಿತವಾಗಿದೆ. 

ಶ್ರೀ ಹರಿಕಥಾಮೃತಸಾರಕ್ಕೆ ವ್ಯಾಖ್ಯಾನಗಳು....

ಸಂಸ್ಕೃತದಲ್ಲಿ...

1. ಶ್ರೀ ತಾಮ್ರಪರ್ಣಿ ಆಚಾರ್ಯರ " ಪದಾರ್ಥ ಚಂದ್ರಿಕಾ ( ಪದ ಪ್ರಕಾಶಿಕಾ )

2. ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ....

a. " ಭಾವ ಸೂಚನ "

b. " ವ್ಯಾಸದಾಸಸಿದ್ಧಾಂತಕೌಮುದೀ " 

c. " ಹರಿಕಥಾಮೃತಸಾರಪಂಚಿಕಾ " 

( 3 ವ್ಯಾಖ್ಯಾನಗಳನ್ನು ಬರೆದಿದ್ದಾರೆ ).

3. ಶ್ರೀ ಗುರು ಜಗನ್ನಾಥದಾಸರು 

( ಇವರು ಪೂರ್ವ ಅಂದರೆ ಹಿಂದಿನ ಆವವತಾರದಲ್ಲಿ ಶ್ರೀ ಶ್ರೀದವಿಠಲರು. ಮುಂದಿನ ಅವತಾರವೇ ಶ್ರೀ ಗುರು ಜಗನ್ನಾಥದಾಸರು )

a. ಹರಿಕಥಾಮೃತಸಾರ ತಾತ್ಪರ್ಯ 8 ಸಂಧಿಗಳಿಗೆ ಸಂಸ್ಕೃತದಲ್ಲಿ ಪೂರ್ಣ ಶ್ಲೋಕಗಳನ್ನು ರಚಿಸಿದ್ದಾರೆ.

b. ಮೊದಲನೇ ಸಂಧಿಗೆ - 42 ಶ್ಲೋಕಗಳೂ - 2ನೇ ಸಂಧಿಗೆ - 64 ಶ್ಲೋಕಗಳೂ - 3ನೇ ಸಂಧಿಗೆ 67 ಶ್ಲೋಕಗಳನ್ನು ರಚಿಸಿದ್ದಾರೆ.

c. 4ನೇ ಸಂಧಿಗೆ ಶ್ರೀ ಹರಿಕಥಾಮೃತಸಾರ ತಾತ್ಪರ್ಯ ಚಂದ್ರಿಕಾ ಎಂಬ ಸಂಸ್ಕೃತ ವ್ಯಾಖ್ಯಾ!

d. 12ನೇ ಸಂಧಿಗೆ ಶ್ರೀ ಹರಿಕಥಾಮೃತಸಾರ ಮಂದಪ್ರಬೋಧಿನಿ ಮೂಲ ಸನಾಭಿ ಸಂಸ್ಕೃತ ಟೀಕಾ

e. ಶ್ರೀ ಹರಿಕಥಾಮೃತಸಾರ ಸಂಗ್ರಹ ಸೃಗ್ಧರಾ ಸಂಸ್ಕೃತ ಶ್ಲೋಕಗಳು - 6 ಪತ್ರ

f. ಹರಿಕಥಾಮೃತಸಾರ ತಾತ್ಪರ್ಯ ಪ್ರಕಾಶಿಕಾ ಸಂಧಿ - 3 ಪತ್ರ

g. ಹರಿಕಥಾಮೃತಸಾರ ಚಂದ್ರಿಕಾ - ಸ್ವಾಮಿರಾಜೀಯ - 8 ಪತ್ರ 

( ಸಂಸ್ಕೃತ ಮತ್ತು ಕನ್ನಡ )

h. ಹರಿಕಥಾಮೃತಸಾರ ಮಂದಬೋಧಿನೀ - 4 ಪತ್ರ.

i. ಹರಿಕಥಾಮೃತಸಾರ ಮಂದಬೋಧಿನೀ - 6 ಪತ್ರ

j. ಹರಿಕಾಥಾಮೃತಸಾರ ಚಂದ್ರಿಕಾ - 6 ಪತ್ರ

k. ಹರಿಕಾಥಾಮೃತಸಾರ ಚಂದ್ರಿಕಾ - 4 ಪತ್ರ

l. ಹರಿಕಥಾಮೃತಸಾರಾಮೋದ - 2 ಪತ್ರ

m. ಹರಿಕಥಾಮೃತಸಾರ ತಾತ್ಪರ್ಯ ಚಂದ್ರಿಕಾ - 2 ಪತ್ರ

n. ಹರಿಕಥಾಮೃತಸಾರ ಚಂದ್ರಿಕಾ - 2 ಪತ್ರ

o. ದತ್ತ ಸ್ವಾತಂತ್ರ್ಯ ಸಂಧಿಗೆ ಸಂಬಂಧ ಪಟ್ಟ ಪತ್ರ

q. ಹರಿಕಥಾಮೃತ ಪರಿಮಳಸನಾಭಿ ಮೂಲ ಪದ್ಯ ಕನ್ನಡಾರ್ಥ - 2 ಪತ್ರ

****


" ಶ್ರೀ ಹರಿಕಥಾಮೃತಸಾರ - 5 "

" ಶ್ರೀ ಜಗನ್ನಾಥದಾಸರ ಮೇರು ಕೃತಿ ಶ್ರೀ ಹರಿಕಥಾಮೃತಸಾರ - ಒಂದು ಅಧ್ಯಯನ "

" ಕನ್ನಡ ವ್ಯಾಖ್ಯಾನಗಳು "

1. ಶ್ರೀ ಶ್ರೀದ ವಿಠಲರು

2. ಶ್ರೀ ಗುರು ಶ್ರೀಶ ವಿಠಲರು

3. ಶ್ರೀ ದ್ರೌಪದೀಶಪತಿವಿಠಲರು

4. ಶ್ರೀ ಸಂಕರ್ಷಣ ಒಡೆಯರು

5. ಶ್ರೀ ಗುರುಯೋಗಿಧ್ಯೇಯವಿಠಲರು

6. ಶ್ರೀ ಕಮಲಾಪತಿವಿಠಲರು

7. ಶ್ರೀ ಮೊದಲಕಲ್ ಶೇಷದಾಸರು

8. ಶ್ರೀ ಪದ್ಮನಾಭದಾಸರು

ಅ) ಶ್ರೀ ಸಂಕರ್ಷಣ ಒಡೆಯರಂಥಾ ಸಂನ್ಯಾಸಿವರೇಣ್ಯರೂ ಇದಕ್ಕೆ ಟೀಕೆ ಬರೆಯಬೇಕಾದರೆ ಹರಿಕಥಾಮೃತದ ಶ್ರೇಷ್ಠತ್ವ ಎಂಥಾದ್ದಿರಬೇಕು. 

ಇದಕ್ಕೆ ಅನೇಕಾನೇಕ ಕನ್ನಡ - ಸಂಸ್ಕೃತ ಪಂಡಿತರ ಟೀಕಾ ಟಿಪ್ಪಣಿಗಳೂ - ಫಲ ಶ್ರುತಿಗಳೂ - ಸಂಧಿ ಸೂಚಕ ಶ್ಲೋಕಗಳೂ - ವ್ಯಾಖ್ಯಾನ ವಿವರಣಗಳೂ ಒಂದರಮೇಲೊಂದು ಅಂದಿನಿಂದ ಇಂದಿನ ವರೆಗೂ ಆಗುತ್ತಲೇ ಇದ್ದು ಅದರ ಉತ್ತಮೋತ್ತಮಿಕೆಯನ್ನು ಎತ್ತಿ ಸಾರುತ್ತದೆ.

ಆ) ಶ್ರೀ ತಾಮ್ರಪರ್ಣಿ ಆಚಾರ್ಯರೂ - ಶ್ರೀ ಜಂಬುಖಂಡಿ ಆಚಾರ್ಯರೂ ಈ ಕನ್ನಡ ಮಹಾತ್ಪ್ರಬಂಧಕ್ಕೆ ಸಂಸ್ಕೃತದಲ್ಲಿ ವೇದ - ವೇದಾಂತ, ನ್ಯಾಯ, ವ್ಯಾಕರಣ, ಮೀಮಾಂಸಾ, ಸಾಹಿತ್ಯಾದಿ ಶಾಸ್ತ್ರೀಯ ವಿಷಯ ವಿವೇಚನಾ ಪ್ರಚುರವಾದ ಪ್ರಗಲ್ಭ ಟೀಕೆಗಳನ್ನು ಬರೆದಿದ್ದನ್ನು ನೋಡಿದರೆ ಈ ಗ್ರಂಥದ ಅಂತಸ್ಸತ್ತ್ವವು - ವಾಸ್ತವಿಕ ಮಹತ್ವವು ಎಷ್ಟು ಘನತರವಾಗಿದೆ ಎಂಬುದು ಗೊತ್ತಾಗದೆ ಇರದು!!

ಇ) ಲಿಂಗಸೂಗೂರಿನ ಶ್ರೀ ವರದೇಂದ್ರ ಹರಿದಾಸ ಸಾಹಿತ್ಯ ಮಂಡಲದವರು ಶ್ರೀ ಗುರುವಿಜಯವಿಠಲ - ಶ್ರೀ ಗುರುಶ್ರೀಶವಿಠಲ - ಶ್ರೀ ದ್ರೌಪದೀಶವಿಠಲರು ಈ ಮೂರು ದಾಸ ಕೂಟ ದೇಶಿಕರ ಕನ್ನಡ ಟಿಪ್ಪಣಿಗಳನ್ನೂ - ಶ್ರೀ ತಾಮ್ರಪರ್ಣಿ ( ಪದಾರ್ಥ ಚಂದ್ರಿಕಾ ) ಮತ್ತು ಶ್ರೀ ಜಂಬುಖಂಡಿ ಆಚಾರ್ಯರ ( ವ್ಯಾಸದಾಸ ಸಿದ್ಧಾಂತ ಕೌಮುದೀ ಮತ್ತು ಭಾವಸೂಚನಾ ) ಹೀಗೆ 3 ಸಂಸ್ಕೃತ ಟಿಪ್ಪಣಿಗಳನ್ನೂ ಸೇರಿಸಿ ಒಟ್ಟು 6 ವ್ಯಾಖ್ಯಾನಗಳಿಂದ ಒಡಗೂಡಿದ " ಹರಿಕಥಾಮೃತಸಾರ " ವನ್ನು ಪ್ರಕಟಿಸಿ ಪರಮೋಪಕಾರ ಮಾಡಿದ್ದಾರೆ.

ಈ ) ಶ್ರೀ ಸಂಕರ್ಷಣ ಒಡೆಯರ ಟೀಕೆಯು ಕನ್ನಡದಲ್ಲಿ ಇದ್ದರೂ ಅದರ ಲಿಪಿ ಮಾತ್ರ - ತೆಲಗು ಲಿಪಿಯಾಗಿದೆ.

ಇದಲ್ಲದೆ ಅನೇಕ ಬೇರೆ ಬೇರೆ ಟೀಕೆ, ಟಿಪ್ಪಣಿಗಳು ಇದಕ್ಕೆ ಇದ್ದು ಅದರಲ್ಲಿ ಕೆಲವು ಪ್ರಕಟವಾಗಿವೆ. 

ಹಲವು ಲುಪ್ತವಾಗಿವೆ. 

ಅವೆಲ್ಲವುಗಳನ್ನೂ ಕ್ರೋಢೀಕರಿಸಿ ಎಲ್ಲಾ ಟೀಕೆಗಳ ಸಾರೋದ್ಧಾರ ಮಾಡಿ ಪ್ರತಿಯೊಂದು ಟೀಕೆಯಲ್ಲಿಯ ಅಪೂರ್ವಾಂಶವನ್ನು ಹೆಕ್ಕಿ ತೆಗದು " ಭಾವರತ್ನಕೋಶ " ದಂತಹ ಹೊಸ ವ್ಯಾಖ್ಯಾನವನ್ನು ನಿರ್ಮಿಸುವುದೂ - ಪ್ರಕಟಿಸುವುದೂ ಅತ್ಯವಶ್ಯವಾಗಿದೆ.

ಉ) ಶ್ರೀ ಹರಿಕಥಾಮೃತಸಾರಕ್ಕೆ ಕರ್ಜಗಿಯ ಶ್ರೀ ಶ್ರೀದವಿಠಲರೂ -  ಶ್ರೀ ಗುರುಶ್ರೀಶವಿಠಲರು -  ಶ್ರೀ ಮನೋಹರವಿಠಲರು ಫಲಶ್ರುತಿಯನ್ನು ಭಾಮಿನೀ ಷಟ್ಪದಿಯಲ್ಲಿ ಸುಂದರವಾಗಿ ಹೇಳಿ ಹೊಗಳಿದ್ದಾರೆ.

ಊ) ಶ್ರೀ ಭೀಮೇಶವಿಠಲರು " ಸಂಧಿಮಾಲಾ ಸಂಧಿ " ಎಂಬ ಪುಟ್ಟ ಪದ್ಯ ಪ್ರಬಂಧವನ್ನು ರಚಿಸಿ ಹರಿಕಥಾಮೃತಸಾರದ 32 ಸಂಧಿಗಳಲ್ಲಿ ಪ್ರತಿಪಾದಿತವಾದ ವಿಷಯಗಳ ಛಂದೋಬದ್ಧವಾದ ದಿಗ್ದರ್ಶನವನ್ನು ಮಾಡಿದ್ದಾರೆ.

ಶ್ರೀಮನ್ನ್ಯಾಯಸುಧೆಯ ಪ್ರತೀಕದಂತಿರುವ ಹರಿಕಥಾಮೃತಸಾರ ಗ್ರಂಥದಿಂದ ಕನ್ನಡ ಸಾಹಿತ್ಯದ ಸ್ಥಾನವು ಉನ್ನತವಾಗಿದೆ.

ಕನ್ನಡ ಆಧ್ಯಾತ್ಮಿಕ ವಾಙ್ಞಯ ಭಾಂಡಾರವು ಸಿರಿ ಸಂಪನ್ನವಾಗುವಂತೆ ಮಾಡಿದೆ.

ಇದರಿಂದ ಕನ್ನಡ ನಾಡು - ನುಡಿ ಪುನೀತವಾಗಿದೆ.

ಮಾಧ್ವ ಪ್ರಪಂಚವೆಲ್ಲವೂ ಈ ವಿಶ್ವಮಾನ್ಯವಾದ ಕೃತಿಯಿಂದ ಧನ್ಯವಾಗಿದೆ.

" ವಿಶೇಷ ವಿಚಾರ "

1. ಬೆಂಗಳೂರಿನ ಪರಮಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸರಾಯರು ಸಜ್ಜನರು ಪಾರಾಯಣ ಮಾಡಲು ಅನುಕೂಲವಾಗುವಂತೆ ಶ್ರೀ ಹರಿಕಥಾಮೃತಸಾರದ ಪ್ರತಿ ಪದಾರ್ಥದೊಂದಿಗೆ ಐದು ವ್ಯಾಖ್ಯಾನಗಳ ಸಹಿತ ಮುದ್ರಿಸಿ ನಾಡಿನ ಸಜ್ಜನರಿಗೆ ಮಹೋಪಕಾರ ಮಾಡಿದ್ದಾರೆ. 

ಅರ್ಥ ಸಹಿತ ಪಾರಾಯಣ ಮಾಡಿದಾಗ್ಗೆ ವಿಶೇಷ ಫಲವುಂಟು. 

ಇವರು ಶ್ರೀಮತಿ ಸರಸ್ವತೀ ವಟ್ಟಂ ಅವರ ಮಾವನವರು!!

2. ಶ್ರೀ ಹರಿ ವಾಯು ರಾಯರು ಮತ್ತು ಶ್ರೀ ವಿಜಯ -  ಶ್ರೀ ಗೋಪಾಲ - ಶ್ರೀ ಜಗನ್ನಾಥದಾಸರ ಪರಮಾನುಗ್ರಹದಿಂದ ವೇದ - ಉಪನಿಷತ್ - ಪುರಾಣ - ಇತಿಹಾಸಗಳ ಸಪ್ರಮಾಣದನ್ವಯ ಕನ್ನಡದಲ್ಲಿ ಅರ್ಥ ವಿವರಣೆಯನ್ನು ಈ ಕೆಳಕಂಡ ಸಂಧಿಗಳಿಗೆ ನನ್ನಲ್ಲಿ ( ಆಚಾರ್ಯ ನಾಗರಾಜು ಹಾವೇರಿ ) ನಿಂತು ಶ್ರೀ ದಾಸಾರ್ಯರು ಮಾಡಿಸಿದ್ದಾರೆ. ಸಂಧಿಗಳು ಹೀಗಿವೆ.... 

1. ಮಂಗಳಾಚರಣ ಸಂಧಿ 

2. ಕರುಣಾ ಸಂಧಿ 

3. ವ್ಯಾಪ್ತಿ ಸಂಧಿ 

4. ಭೋಜನ ಸಂಧಿ 

5. ದೇವತಾನುಕ್ರಮಣಿಕಾ ಸಂಧಿ 

6. ಆರೋಹಣ ತಾರತಮ್ಯ ಸಂಧಿ 

7. ಅವರೋಹಣ ತಾರತಮ್ಯ ಸಂಧಿ 

8. ಶ್ರೀ ವಿಘ್ನೇಶ ಸಂಧಿ 

9. ಅಣು ತಾರತಮ್ಯ ಸಂಧಿ 

10. ದೈತ್ಯ ತಾರತಮ್ಯ ಸಂಧಿ 

11. ಕಕ್ಷ್ಯಾ ತಾರತಮ್ಯ ಸಂಧಿ 

ಶ್ರೀ ಶ್ರೀದವಿಠಲರಿಂದ ರಚಿತವಾದ ಹರಿಕಥಾಮೃತಸಾರ - ಫಲ ಶ್ರುತಿ ಸಂಧಿಯ 13ನೇ ಪದ್ಯ ಹೀಗಿದೆ...

ವ್ಯಾಸತೀರ್ಥರ ಒಲವೋ । ವಿಠಲೋ ।

ಪಾಸಕ ಪ್ರಭುವರ್ಯ ಪುರಂದರ ।

ದಾಸರಾಯರ ದಯವೋ -

ತಿಳಿಯದಿದು ಓದಿ ಕೇಳದಲೆ ।।

ಕೇಶವನ ದಿನ ಮಣಿಗಳನು । ಪ್ರಾ ।

ಣೇಶಗರ್ಪಿಸಿ ವಾದಿರಾಜರ ।

ಕೋಶಕೊಪ್ಪುವ ಹರಿ-

ಕಥಾಮೃತಸಾರ ರಚಿಸಿದರು ।।

ಶ್ರೀ ಪ್ರಹ್ಲಾದಾಂಶ ವ್ಯಾಸರಾಜ ಗುರುಸಾರ್ವಭೌಮರ ಒಲುಮೆಯೋ - ಶ್ರೀ ಪಂಢರಾಪುರಾಧೀಶ ವಿಠ್ಠಲನ ಉಪಾಸಕರಾದ ಶ್ರೀ ನಾರದಾಂಶ ಪುರಂದರದಾಸರ ದಯವೋ ಓದಿ ಕೇಳದಲೆ ಇದು ( ಹರಿಕಥಾಮೃತಸಾರ ) ತಿಳಿಯದು.

ಕೇಶವ 

( ಸರ್ವರ ರಕ್ಷಕ = ಸರ್ವೋತ್ತಮ ಅಂದರೆ ಶ್ರೀ ಮಹಾಲಕ್ಷ್ಮೀ - ಶ್ರೀ ಚತುರ್ಮುಖ ಬ್ರಹ್ಮದೇವರು - ಶ್ರೀ ರುದ್ರದೇವರೇ ಮೊದಲಾದ ಸಕಲ ಚೇತನಗಳನ್ನು ವಶದಲ್ಲಿಟ್ಟುಕೊಂಡಿರುವ ಶ್ರೀ ಮಹಾವಿಷ್ಣು ) 

ಶ್ರೀ ಹರಿಯ ಗುಣಗಳೆಂಬ ಮಣಿಗಳನ್ನು ಪ್ರಾಣೇಶನಾದ ( ಶ್ರೀ ವಾಯುದೇವರ ತಂದೆ ) 

ಶ್ರೀ ಹರಿಗೆ ಅರ್ಪಿಸಿ; ಶ್ರೀ ಭಾವಿಸಮೀರ ವಾದಿರಾಜರ ಕೋಶಕ್ಕೆ ( ಭಂಡಾರ / ಖಜಾನೆ ) ಒಪ್ಪಿಗೆ ಆಗುವಂತೆ ಈ ಹರಿಕಥಾಮೃತಸಾರವನ್ನು ಶ್ರೀ ಜಗನ್ನಾಥದಾಸರು ರಚಿಸಿದರು!!

ಶ್ರೀ ಜಗನ್ನಾಥದಾಸರು...

ರಾಗ : ಪಂತುವರಾಳಿ ತಾಳ : ಆದಿ

ತಾರಕವಿದು ಹರಿಕಥಾ-

ಮೃತಸಾರ ಜನಕೆ ।

ಘೋರತರ ಅಸಾರ 

ಸಂಸಾರವೆಂಬ ವನಧಿಗೆ 

ನವ ।। ಪಲ್ಲವಿ ।।

... ಭೂತ ಭವ್ಯ ಭವತ್ಪ್ರಭು -

ಅನಾಥ ಬಂಧು । ಜಗ ।

ನ್ನಾಥವಿಠಲ ಪಾಹಿ ಎಂದು -

ಮಾತುಮಾತಿಗೆಂಬುವರಿಗೆ ।।

ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

***

" ಮಂಗಳಾಚರಣೆ "

" ಮೋಕ್ಷಪ್ರದ ಗ್ರಂಥ ಶ್ರೀ ಹರಿಕಥಾಮೃತಸಾರ " 

" ಗ್ರಂಥ "

 ಶ್ರೀ ಹರಿಕಥಾಮೃತಸಾರ 

" ರಚನೆ "

ಶ್ರೀ ಜಗನ್ನಾಥದಾಸರು 

"  ಮಂಗಳಾಚರಣ ಸಂಧಿ "

" ಮಂಗಳಾಚರಣ ಸಂಧಿ ಸಾರಾಂಶ "

ಶ್ರೀ ಹರಿ ರೂಪಿ ಪರಮಾತ್ಮ ಬಿಂಬನು. 

ಆ ಬಿಂಬನ ಉಪಾಸನೆ ಮಾಡಲು ಮಂತ್ರವರ್ಣ ಪ್ರಕ್ರಿಯದಂತೆ ಇದು ಮುಖ್ಯವಾದ ಮಂತ್ರ ಕಾರಣ - ಏಕಾದಶ ಗುರುಗಳಿಗೆ - ಮುಖ್ಯ ಗ್ರಂಥ ಪ್ರತಿಪಾದ್ಯನಾದ ಶ್ರೀ ಮಹಾ ವಿಷ್ಣುವಿಗೆ 13 ನಾಂದಿ ಪದ್ಯಗಳಿಂದ ನಮಸ್ಕರಿಸಿದ್ದಾರೆ. 

ಶ್ರೀ ಜಗನ್ನಾಥದಾಸರು ಭಗವದಪರೋಕ್ಷಿಗಳು. 

ದೇವರಿಂದ ಆರಂಭ ಮಾಡಿ ಅವರೋಹಣ ಕ್ರಮದಿಂದ ಶ್ರೀ ನಾರಸಿಂಹ - ಶ್ರೀ ಮಹಾಲಕ್ಷ್ಮೀ - ಶ್ರೀ ಚತುರ್ಮುಖ ಬ್ರಹ್ಮದೇವರು - ಶ್ರೀ ವಾಯುದೇವರು - ಶ್ರೀ ವಾಣೀ, ಶ್ರೀ ಭಾರತೀದೇವಿಯರು - ದೇವತ್ವದಿಂದ ಗುರುಗಳೂ, ವೇದ ಉಪದೇಶಕ ಗುರು ಶ್ರೀ ವೇದವ್ಯಾಸದೇವರು - ಶ್ರೀ ಆನಂದತೀರ್ಥರು - ಶ್ರೀ ರುದ್ರದೇವರು - ಇಂದ್ರಾದಿ ದೇವತೆಗಳಾದ ಸಮಸ್ತ ಗುರುಗಳಿಗೆ ವಂದಿಸಿ - ಮಂಗಳಾಚರಣ ಸಂಧಿ ರಚಿಸಿ 13 ನಾಂದಿ ಪದ್ಯಗಳಿಂದ " ಪ್ರಕಾಶವಾದ ನಂದಾದೀಪ " ವನ್ನು ಹಚ್ಚಿದ್ದಾರೆ. 

ಹರಿಕಥಾಮೃತಸಾರ ಗುರುಗಳ ।

ಕರುಣದಿಂದಾಪನಿತು ಪೇಳುವೆ ।

ಪರಮ ಭಗವದ್ಭಕ್ತರಿದನಾ-

ದರದಿ ಕೇಳುವುದು ।। ಪಲ್ಲವಿ ।।

ಹರಿಕಥಾಮೃತಸಾರವನ್ನು ಗುರುಗಳ ಕರುಣದಿಂದ ಯಥಾಶಕ್ತಿ ಹೇಳುವೆನು. 

ಪರಮ ಭಗವದ್ಭಕ್ತರು ಇದನ್ನು ಭಕ್ತಿಯಿಂದ ಆಲಿಸಬೇಕು. 

ಹರಿಕಥಾಮೃತಸಾರ ಗ್ರಂಥ ರಚನೆಗೆ ಮುಖ್ಯವಾಗಿ ಗುರುಗಳ ಕರುಣಾ ಬಲವೇ ಮುಖ್ಯ ಕಾರುಣವಾಗುವದು. 

" ಯಸ್ಯ ದೇವೇ ಪ್ಯಾರಾ ಭಕ್ತಿ: 

ಯಥಾ ದೇವೇ ತಥಾ ಗುರೌ "

ಯೆಂಬ ಉಕ್ತಿಯಂತೆ ಶ್ರೀ ಹರಿ ಪರಮಾತ್ಮನಲ್ಲಿ ಮತ್ತು  ಶ್ರೀ ಗುರುಗಳಲ್ಲಿ ತಾರತಮ್ಯವಾಗಿ ಭಕ್ತಿಯನ್ನು ಮಾಡಬೇಕು. 

" ಗುರು " ಗಳೆಂದರೆ.... 

" ಗು " ಶಬ್ದಸ್ತ್ವಂಧಕಾರಸ್ಯಾತ್ - 

" ರು " ಶಬ್ದಸ್ತನ್ನಿವರ್ತಕಃ "

" ಗು " ಯೆಂದರೆ.... 

ಶಿಷ್ಯರ ಅಜ್ಞಾನವೆಂಬ ಅಂಧಕಾರ 

" ರು " ಎಂದರೆ... 

ಅಜ್ಞಾನವೆಂಬ ಅಂಧಕಾರವನ್ನು ಪರಿಹರಿಸುವವರು.  

" ಅಸಂಶಯಃ ಸಂಶಯಚ್ಛೇತ್ತಾ 

ಗುರು: ಉಕ್ತ: ಮನಿಷಿಭಿ: 

ಗುರು = ಶ್ರೀಮನ್ಮಧ್ವಾಚಾರ್ಯರು 

" ಶ್ರೀ ಜಯತೀರ್ಥರು ಶ್ರೀಮನ್ನ್ಯಾಯಸುಧಾ ಗ್ರಂಥ " ದಲ್ಲಿ.... 

" ಶ್ರೀಮತ್ಪೂರ್ಣಪ್ರಮತಿ

ಗುರುಕಾರುಣ್ಯಸರಣೀಂ ಪ್ರಪನ್ನಾ: "    

ಗು = 3 [ ಕ ವರ್ಗದಲ್ಲಿ 3 ನೇ ಅಕ್ಷರ - ಗ ]

ರು = 2 [ ಯಾ ವರ್ಗದಲ್ಲಿ 2 ನೇ ಅಕ್ಷರ - ರ ]

ಅಂದರೆ.... 

32 ಲಕ್ಷಣಗಳಿಂದ ಯುಕ್ತರಾದ ಶ್ರೀವಾಯುದೇವರ ಅವತಾರಭೂತರಾದ ಶ್ರೀಮನ್ಮಧ್ವಾಚಾರ್ಯರ ಕರುಣೆಯಿಂದ ರಚಿಸಲಾದ ಈ ಗ್ರಂಥರತ್ನ 32 ಸಂಧಿಗಳಿಂದ ಕೂಡಿದೆ. 

ಈ ಕೃತಿಯು ಶ್ರೀ ಮುಖ್ಯಪ್ರಾಣದೇವರ ಪ್ರತಿಮಾ ರೂಪವಾದ ಗ್ರಂಥವೆಂದು ತಿಳಿದು - ಅದರಲ್ಲಿರುವ ವಿಷಯಗಳನ್ನು ಭಕ್ತಿಯಿಂದ ತಿಳಿದುಕೊಂಡು ಶ್ರೀ ಹರಿ ಪರಮಾತ್ಮನನ್ನು ಕಾಣಬೇಕೆಂದು ಶ್ರೀ ದಾಸರಾಯರು ಅಪ್ಪಣೆ ಮಾಡಿದ್ದಾರೆ.   

ಜಗತ್ತಿನ ಎಲ್ಲಾ ಮಹಾತ್ಮರು ಶ್ರೀ ಹರಿ ಪರಮಾತ್ಮನನ್ನು ಕಾಣುವುದು - ಶ್ರೀ ಹರಿ ಪರಮಾತ್ಮನ ಮಂದಿರವೆನಿಸಿದ ಶ್ರೀ ಮುಖ್ಯಪ್ರಾಣದೇವರಲ್ಲಿಯೇ !

ಆದ್ದರಿಂದಲೇ ಈ ಗ್ರಂಥ 32 ಸಂಧಿಗಳಿಂದ ಯುಕ್ತವಾಗಿದ್ದು - ಗ್ರಂಥವು ಶ್ರೀ ಮುಖ್ಯಪ್ರಾಣದೇವರ ಪ್ರತಿಮಾ ರೂಪವೆಂದು ತಿಳಿದು ಭಗವದ್ವಿಷಯಿಕವಾದ ಈ ಗ್ರಂಥವನ್ನು ಓದುವುದು. 

ಶ್ರೀ ಜಗನ್ನಾಥದಾಸಾರ್ಯರು ಶ್ರೀಮದಾಚಾರ್ಯರ ಅನುಗ್ರಹ ಕರುಣೆಯಿಂದಲೇನೇ ಈ ಗ್ರಂಥ ರಚಿಸಿದ್ದೇನೆಯೆಂದು - " ಸರ್ವಪ್ರತೀಕ ಸಂಧಿ ಮತ್ತು ಬೃಹತ್ತಾರತಮ್ಯ ಸಂಧಿ " ಯಲ್ಲಿ ನೇರವಾಗಿ ನಿರೂಪಿಸಿರುವರು. 

" ತಂತ್ರಸಾರಸಂಗ್ರಹ " ದಲ್ಲಿ.... 

ಸ್ಮೃತ್ವಾ ಗುರುo ಪೂರ್ವ 

ಗುರುಮಾದಿಮೂಲಗುರೂ ತಥಾ ।।

" ಬ್ರಹ್ಮಸೂತ್ರ ಭಾಷ್ಯ " ದಲ್ಲಿ.... 

ಗುರು ಪ್ರಸಾದೋ ಬಲವಾನ್ನ-

ತಸ್ಮಾದ್ಬಲವತ್ತರಮ್ ।।

ಶ್ರೀಮದ್ಭಾಗವತ ಮಹಾ ಪುರಾಣದಲ್ಲಿ.... 

ಭಕ್ತಿಮಾನ್ ಪರಮೇ 

ವಿಷ್ಣೌಯಸ್ತ್ವಧ್ಯಯನವಾನ್ನರಃ 

ಅಧಮಃ ಶಮಾದಿ ಸಂಯುಕ್ತೋ 

ಮಧ್ಯಮಃ ಸಮುದಾಹೃತಃ ।

ಆಬ್ರಹ್ಮಸ್ತಂಭಪರ್ಯಂತಂ 

ಅಸಾರಂಚಾಪ್ಯನಿತ್ಯಕಂ 

ವಿಜ್ಞಾಯ ಜಾತವೈರಾಗ್ಯೋ 

ವಿಷ್ಣು ಪಾದೈಕ ಸಂಶ್ರಯಃ ।।

ಸಉತ್ತಮೋಧಿಕಾರೀಸ್ಯಾತ್ 

ಸನ್ಯಸ್ತಾಖಿಲಕರ್ಮವಾನ್ ।। ಇತಿ ।।

" ಆದರದಿ ಕೇಳುವದು "

ಶ್ರೋತವ್ಯೋ ಮಂತವ್ಯೋ 

ನಿಧಿಧ್ಯಾಸಿತವ್ಯ: ।।

ವಿಶೇಷ ಜ್ಞಾನದಿಂದ ಶ್ರೀ ಹರಿ ಪರಮಾತ್ಮನ ಪರಮ ಪ್ರಸಾದ - ಅದರಿಂದ " ಮೋಕ್ಷ "

ಅನುವ್ಯಾಖ್ಯಾನದಲ್ಲಿ... 

ಜಿಜ್ಞಾಸೋತ್ಥ ಜ್ಞಾನಚಾತ್ ತತ್ 

ಪ್ರಸಾದಾದೇವ ಮುಚ್ಯತೇ ।।

ಆದ್ದರಿಂದ ಈ ಶ್ರೀ ಹರಿಕಥಾಮೃತಸಾರ ಶ್ರವಣದಿಂದ " ಮೋಕ್ಷ " ವಾಗುವುದು ಎಂಬ ದೃಢ ನಿಶ್ಚಯವಾದ " ಆದರದಿಂದ " ಕೇಳುವದು !!

****

******ಶ್ರೀ ಹರಿಕಥಾಮೃತ ಸಂಧಿ - 1 "

ಪ್ರಮೇಯಪುಂಜವಾದ ಶ್ರೀಮದ್ ಹರಿಕಥಾಮೃತಸಾರವನ್ನು ಪ್ರತಿನಿತ್ಯದಲ್ಲಿಯೂ ಯಾರು ಭಕ್ತಿ ಶ್ರದ್ಧೆಗಳಿಂದ ಪಾರಾಯಣ ಮಾಡುತ್ತಾನೋ ಅವನಿಗೆ ಶ್ರೀ ಹರಿ ವರ ಪ್ರಸಾದವಾದ " ಮೋಕ್ಷ " ಕಟ್ಟಿಟ್ಟ ಬುತ್ತಿ. 

" ಸರ್ವಜ್ಞಳೂ - ಜಗನ್ಮಾತೆಯಾದ ಶ್ರೀ ಮಹಾಲಕ್ಷ್ಮೀದೇವಿಯರ ಸ್ತುತಿ "

ಜಗದುದರನತಿವಿಮಲ ಗುಣ । ರೂ ।

ಪಗಳನಾಲೋಚನದಿ ಭಾರತ ।

ನಿಗಮತತಿಗಳತಿಕ್ರಮಿಸಿ -

ಕ್ರಿಯಾ ವಿಶೇಷಗಳ ।।    

ಬಗೆಬಗೆಯ ನೂತನವ ಕಾಣುತ ।

ಮಿಗೆ ಹರುಷದಿಂ ಪೊಗಳಿ ಹಿಗ್ಗುವ ।

ತ್ರಿಗುಣಾಮಾನಿ ಮಹಾಲಕುಮಿ -

ಸಂತೈಸಲನುದಿನವು ।। 2 ।।

ಸ್ವರ್ಗಾ ಪವರ್ಗದೇ ವಿಶ್ವಾಸರ್ಗೇ

ಭೃಗ್ವಾದಿ ವಂದಿತೇ ।

ಹೃದ್ಗೋsಸ್ತುಮೇ ಹಯಗ್ರೀವೋ 

ದುರ್ಗೇ ಭಗವದನುಗ್ರಹಾತ್ ।।     

ಪ್ರತಿ ದಿನದಲ್ಲೂ ಮಾಡತಕ್ಕ ಏಕಾದಶೇಂದ್ರಿಯಗಳಿಂದ ಮಾಡುವ ಕರ್ಮಗಳಲ್ಲಿ ಅಂತರ್ಗತನಾಗಿ ಬಿಂಬರೂಪಿ ಶ್ರೀ  ಪರಮಾತ್ಮ ಯಿದ್ದಾನೆಂಬ ಜ್ಙಾವನೂ - ಭಕ್ತಿಯನ್ನೂ - ವಿರಕ್ತಿಯನ್ನೂ ಕೊಟ್ಟು ಜಗನ್ಮಾತೆಯಾದ ಶ್ರೀ ಮಹಾಲಕ್ಷ್ಮೀದೇವಿಯರು ನಮ್ಮನ್ನು ಸಂತೈಸಲಿಯೆಂದು ಪ್ರಾರ್ಥಿಸಿದ್ದಾರೆ. 

ಶ್ರೀ ಮಹಾಲಕ್ಷ್ಮೀದೇವಿಯರು  ಗುಣಗಳಿಗೆ ಅಭಿಮಾನಿಯಾಗಿದ್ದಾರೆ. 

ಶ್ರೀ ಶ್ರೀದೇವಿಯು - ಸತ್ವ ಗುಣಕ್ಕೆ, ಶ್ರೀ ಭೂದೇವಿಯು - ರಜೋಗುಣಕ್ಕೆ, ಶ್ರೀ ದುರ್ಗಾದೇವಿಯು - ತಮೋ ಗುಣಕ್ಕೆ ಅಭಿಮಾನಿಯಾಗಿದ್ದಾರೆ. 

ಈ ರೂಪತ್ರಯ ಯುಕ್ತಳಾದ ಶ್ರೀ ರಮಾದೇವಿಯರು.... 

ಸಾತ್ವಿಕರಲ್ಲಿ ಸತ್ವ ಗುಣಾಭಿಮಾನಿಯಾದ ಶ್ರೀ ಶ್ರೀದೇವಿಯೂ - ರಾಜಸರಲ್ಲಿ  ರಜೋಗುಣಾಭಿಮಾನಿಯಾದ ಶ್ರೀ ಭೂದೇವಿಯು - ತಾಮಸರಲ್ಲಿ ತಮೋಗುಣಾಭಿಮಾನಿಯಾದ ಶ್ರೀ ದುರ್ಗಾದೇವಿಯು ಸನ್ನಿಹಿತರಾಗಿತ್ತಾರೆ.

" ಶ್ರೀ ಮಹಾಲಕ್ಷ್ಮೀದೇವಿಯರ ಮಹಿಮೆ " ಯೆಂದರೆ...... 

ಮುಕ್ತಿ ಯೋಗ್ಯರು ಪಾರಮೇಷ್ಟ್ಯಾಧಿಕ ಐಶ್ವರ್ಯವನ್ನೂ - ಧ್ಯಾನ, ಭಕ್ತ್ಯಾದಿ ಧರ್ಮಗಳನ್ನೂ - ಆನಂದ ಸಂತತಿ ರೂಪವಾದ " ಮುಕ್ತಿ " ಯನ್ನೂ - ಅನಾದ್ಯನಂತ ಕಾಲದಲ್ಲಿಯೂ ಕೂಡಾ ಯಥಾ ಯೋಗ್ಯವಾಗಿ  ಶ್ರೀ ಮಹಾಲಕ್ಷ್ಮೀದೇವಿಯರ ಕೃಪಾದೃಷ್ಟಿ ಮಾತ್ರದಿಂದ ಹೊಂದುತ್ತಾರೆ. 

ಶ್ರೀ ರಮಾದೇವಯರು ಈ ಅಪೂರ್ವ ಕ್ರಿಯಾ ವಿಶೇಷಗಳನ್ನು ನಿತ್ಯ ನೂತನವಾಗೋ ಆಲೋಚನೆಯಿಂದ ನೋಡುತ್ತಾ - ಆಶ್ಚರ್ಯದಿಂದ ಅತ್ಯಂತ ಆನಂದದಿಂದ ಸ್ತೋತ್ರ ಮಾಡಿ ಹಿಗ್ಗುವರು. 

ಇಂಥಹಾ ಈ ತ್ರಿಗುಣಾಮಾನಿಯಾದ ಶ್ರೀ ಮಹಾಲಕ್ಷ್ಮೀದೇವಿಯರು ನಮ್ಮನ್ನು ನಿತ್ಯ ಸಂತೈಸಲಿ !!

" ಪ್ರಮಾಣ "

" ಗೀತಾ ತಾತ್ಪರ್ಯ " ದಲ್ಲಿ... 

ವಿಷ್ಣುನಾ ಸಹಿತಾ ಧ್ಯಾತಾಸಾಪಿ 

ತುಷ್ಟಿ೦ ಪರಾಂ ವ್ರಜೇತ್ ।।

" ಮಹಾಭಾರತ ತಾತ್ಪರ್ಯ ನಿರ್ಣಯ " ದಲ್ಲಿ... 

ಸಂಶಾಂತಸಂವಿದಖಿಲಂ 

ಜಠರೇ ನಿಧಾಯ ।

ಲಕ್ಷ್ಮೀ ಭುಜಾಂತರಗತಃ 

ಸ್ವರತೋಪಿಚಾಗ್ರೇ ।।

" ದ್ವಾದಶ ಸ್ತೋತ್ರ " ದಲ್ಲಿ.... 

ಉದರಂ ಚಿಂತ್ಯಮೀಶಸ್ಯ 

ತನುತ್ವೇಪ್ಯಖಿಲಂ ಭರಂ ।।

" ಪ್ರಕಾಶ ಸಂಹಿತೆ "    

ಸತ್ವಾಭಿಮಾನಿನಿ ಶ್ರೀ ರೂಪಾ 

ಭೂ ರೂಪಾ ರಜಸಶ್ಚವೈ ।

ತಮೋಭಿಮಾನಿ ದುರ್ಗಾಖ್ಯಾ 

ರೂಪತ್ರಯಯುತಾ ರಮಾ ।।

ಶುಭ್ರೇಷು ಮುಕ್ತಿ ಯೋಗ್ಯೇಷು 

ಶುಭ್ರಾ ಶ್ರೀ ರಮಾಭಿಮಾನಿನೀ ।

ರಕ್ತೇಷು ಸರ್ವ ಬದ್ಧೇಷು 

ರಕ್ತಾಭೂರಭಿಮಾನಿನೀ ।

ನಿಲೇಷ್ವ ಯೋಗ್ಯ ಜೀವೇಷು 

ನೀಲಾ ದುರ್ಗಾಭಿಮಾನಿನೀ ।।

***

ಶ್ರೀ ರಮಣಿ ಕರಕಮಲ ಪೂಜಿತ

ಚಾರುಚರಣ ಸರೋಜ ಬ್ರಹ್ಮ ಸಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ |

ನೀರಜ ಭವಾಂಡೋದಯ ಸ್ಥಿತಿ

ಕಾರಣನೆ ಕೈವಲ್ಯದಾಯಕ

ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವ  ||೧||

ಪ್ರತಿಪದಾರ್ಥ : 

ಶ್ರೀ ಎ೦ದರೆ ಕಾ೦ತಿ ಸ೦ಪನ್ನಳಾದ, ಐಶ್ವರ್ಯ ಪೂರ್ಣಳಾದ ಶ್ರೀನಾರಾಯಣ ದೇವರಿಗೆ ರಮಣಿಯಾದ ಶ್ರೀಲಕ್ಷ್ಮೀ ದೇವಿಯ – ಶ್ರೀ, ಭೂ, ದುರ್ಗಾ ರೂಪಗಳು.  ಕರಕಮಲಪೂಜಿತ – ಶ್ರೀಮಹಾಲಕ್ಷ್ಮೀದೇವಿಯ ಹಸ್ತಗಳಿಂದಲೇ ಸದಾ ಕಾಲ ಶ್ರೀಹರಿಯು ನೇರವಾಗಿ ಪೂಜಿಸಲ್ಪಡುವವನು ಆಗಿದ್ದಾನೆ.ಪ್ರಳಯ ಕಾಲದಲ್ಲಿಯೂ ಕೂಡ ಶ್ರೀರಮಾದೇವಿಯಿ೦ದಲೇ ಸೇವಿತನಾಗುವವನು, ಅನ್ಯರಿ೦ದಲ್ಲ ಎ೦ದು ಅರ್ಥ. 

ಚಾರುಚರಣ ಸರೋಜ- ಮನೋಹರವಾದ ಕಮಲದ೦ತಹ ಪಾದ ಉಳ್ಳ ಶ್ರೀ ಹರಿಯನ್ನು  ಉಳಿದವರೆಲ್ಲಾ ಶ್ರೀಮಹಾಲಕ್ಷ್ಮಿದೇವಿಯ ಮೂಲಕವೇ ಪೂಜಿಸುವರು.  ಅವರಲ್ಲಿ ಶ್ರೀ ಚತುರ್ಮುಖ ಬ್ರಹ್ಮದೇವರು, ಪ್ರಧಾನವಾಗಿ ಶ್ರೀವಾಯುದೇವರು, ನಂತರ ಶ್ರೀಸರಸ್ವತೀದೇವಿ ಮತ್ತು ಶ್ರೀಭಾರತೀ ದೇವಿಯರು, ಫಣೀಂದ್ರ-ಶ್ರೀಶೇಷದೇವ ವೀಂದ್ರ-ಶ್ರೀಗರುಡದೇವ 

ಭವೇ೦ದ್ರ- ಏಕಾದಶರುದ್ರರಲ್ಲಿ ಶ್ರೇಷ್ಠ ರಾದ ಮಹ ರುದ್ರದೇವರು, ಮತ್ತು ಶ್ರೀಇಂದ್ರದೇವ

ಇವರೇ ಮೊದಲಾದ ಸಮೂಹಗಳಿ೦ದ ವಿನುತ- ಸ್ತುತ್ಯನಾದವನು ಶ್ರೀಹರಿ ಎ೦ದು ಅರ್ಥೈಸಲಾಗಿದೆ.  ಶ್ರೀನಾರಸಿಂಹ ದೇವನೇ ಕೈವಲ್ಯದಾಯಕ.ಕೇವಲ ಎಂಬ ಹೆಸರುಳ್ಳ ಶ್ರೀ ಮನ್ನಾರಾಯಣ. “ಕೈವಲ್ಯ” ಎಂದರೆ ಮುಕ್ತಿ ಎಂಬ ಅರ್ಥವೂ ಇದೆ. ಸಾಧನೆಯನ್ನು ಪೂರೈಸಿದ ಸಾತ್ವಿಕ ಜ್ಞಾನಿಗಳಿಗೆ ಮುಕ್ತಿಯನ್ನು ನೀಡುವ ಪ್ರಭು ಎಂದೂ ಆಗುತ್ತದೆ. ನಾರಸಿಂಹನೆಂದರೆ ಅನಿಷ್ಟವನ್ನು ಹೋಗಲಾಡಿಸಿ ಇಷ್ಟಾರ್ಥಗಳನ್ನು ಕರುಣಿಸುವವನು ಎಂದೂ, ಅರ ಎಂದರೆ ದೋಷ – ನಾರ ಎಂದರೆ ದೋಷವಿಲ್ಲದ ಮುಕ್ತನಾದವನು ಎಂದೂ ಆಗುತ್ತದೆ. 

ನಾರ ಎಂದರೆ ಲಕ್ಷ್ಮೀದೇವಿ ಎಂಬ ಅರ್ಥವೂ ಇರುವುದರಿಂದ – ಆಕೆಗೆ ಒಡೆಯ ಮತ್ತು ಶ್ರೇಷ್ಠ  ನಾರಸಿಂಹ (ನಾರಾಯಣ).  ಹೀಗೆ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣ ಕರ್ತನಾದ ನಾರಸಿಂಹ ದೇವರಿಗೆ ಶ್ರೀಲಕ್ಷ್ಮೀ, ಶ್ರೀಬ್ರಹ್ಮ, ಶ್ರೀವಾಯು,  ಶ್ರೀಶೇಷ,  ಶ್ರೀಗರುಡ, ಶ್ರೀರುದ್ರ, ಶ್ರೀಇಂದ್ರ ಮೊದಲಾದ ಮಹಾನ್ ದೇವತೆಗಳಿಂದ ತಾರತಮ್ಯ ಪೂರಕವಾಗಿ ವಂದಿಸಿಕೊಳ್ಳುವವ. ಮಂಗಳವೆಂದರೆ ಮೋಕ್ಷವೆಂಬ ಅರ್ಥದಲ್ಲಿ, ಮಂಗಳವನ್ನು ಕರುಣಿಸು ಎಂದು ಶ್ರೀಜಗನ್ನಾಥ ದಾಸರು ಕೇಳಿಕೊಳ್ಳುತ್ತಿದ್ದಾರೆ.

ದುಷ್ಟ ರೆನ್ನದೆ ದುರ್ವಿಷಯದಿಂ|

ಪುಷ್ಟರೆನ್ನದೆ ಪೂತಕರ್ಮ|

ಭ್ರಷ್ಟರೆನ್ನದೆ ಶ್ರೀದ ವಿಠ್ಠಲ ವೇಣುಗೋಪಾಲ|

ಕೃಷ್ಣ ಕೈ ಪಿಡಿಯುವನು ಸತ್ಯ|

ವಿಶಿಷ್ಟ ದಾಸತ್ವವನ್ನು ಪಾಲಿಸಿ|

ನಿಷ್ಟೆಯಿಂದಲಿ ಹರಿಕಥಾಮೃತ ಸಾರ ಪಠಿಸುವರಾ||

***



No comments:

Post a Comment