Audio by Mrs. Nandini Sripad
ಶ್ರೀ ಗೋಪಾಲದಾಸಾರ್ಯ ವಿರಚಿತ
ಸಾಧನ ಸುಳಾದಿ
( ಶ್ರೀಹರಿ ಸ್ವತಂತ್ರ ವಿಚಾರ , ಜೀವರು ಅಸ್ವಾತಂತ್ರರು ಎಂಬುವ ವಿಷಯ , ಅನೇಕ ದೃಷ್ಟಾಂತ ಪೂರ್ವಕ ; ಶ್ರೀಹರಿಯೆ ನೀನು ಸ್ವಾತಂತ್ರ , ಅಸ್ವಾತಂತ್ರತರ ನಾನು , ನೀನೇ ದಾತರ ದಾತನೆಂದು ಪ್ರಾರ್ಥನೆ . )
ರಾಗ ಭೈರವಿ
ಧ್ರುವತಾಳ
ದೀನರಕ್ಷಕ ನಿನ್ನಾಧೀನದವ ನಾನು
ದಾನ ಬೇಡಿದೆ ನಾ ಧರ್ಮವಂತ
ಪ್ರಾಣಿ ಮಾತ್ರಕೆ ಹಿಂಸೆ ಪಾಪವೆನ್ನಿಂದನ ಬೇಡ
ನಾನಾ ಜೀವರೆಲ್ಲಿ ನಿನ್ನಂತೆ ತಿಳಿಸೊ
ಗೇಣು ಒಡಲಿಗಾಗಿ ಗೆದ್ದು ಪೋಗುವ ಮಾತು
ಏನಾದರೇನು ಎಂದೆಂದಿಗೂ ಬೇಡ
ಗಾಣಿಗ ತಿಲವ ಪಿಡಿದು ಗಟ್ಟಿಸಿ ತೈಲ ತೆಗೆದು
ದಾನವ ಮಾಡಿದಂತೆ ಧರ್ಮವಲ್ಲೆ
ಮಾನಸದೊಳಗೆ ನಿನ್ನ ಮೂರುತಿ ಎನಗೆ ತೋರಿ
ಹೀನ ಕರ್ಮಗಳೆಲ್ಲ ಹಿಮ್ಮೆಟ್ಟಿಸೋ
ಶ್ರೀನಿವಾಸ ರಂಗ ಗೋಪಾಲವಿಟ್ಠಲ
ಕಾಣೆನೊ ನೀನಲ್ಲದರೊಬ್ಬರಿನ್ನೆಂದಿಗೆ ॥ 1 ॥
ಮಟ್ಟತಾಳ
ಮಾಯಾಧಾರನ ಮಾಯಾ ತಿಳಿಯದನಕಾ
ಮಾಯವ ನೀಗೋ ಉಪಾಯವ ಬಲ್ಲೆನೆ
ಮಾಯಾ ಪೊಂದಿಸುವದು ನಿನ್ನ ಆಧೀನವೊ
ಮಾಯಾ ಬಿಡುವದು ನಿನ್ನ ಆಧೀನವೊ
ಕಾಯಾ ಕ್ಲೇಶವ ಬಟ್ಟು ಕರ್ಮವು ಮಾಡಿದರೆ
ರಾಯಾ ನಿನ್ನ ಒಲಿಮೆ ಆಯಿತಾಗುವದೇ
ಮಾಯಾರಹಿತ ದೇವ ಗೋಪಾಲವಿಟ್ಠಲನ
ಪಾಯಿಸ ತುಪ್ಪೆಂನ್ನಂಥ ನಾಯಿಗೆ ದೊರಕುವ್ಯಾ ॥ 2 ॥
ತ್ರಿವಿಡಿತಾಳ
ಗೋದಿಯ ಹೊಲದೊಳಗೆ ಹಾದಿ ದೊರಕಿದರೆ
ಆದರದಿ ಮನೆ ಮನೆಗೆ ಹೋಗಿ ಔತನ ಪೇಳಿ
ಭೂದೇವಾ ಮೇಲೆ ಭಕ್ಷ ಸಂಖ್ಯೆಯ ಬರದು
ಪೋದ ಪೋದ ಜನಕೆ ಉಣಿಸೋರೇನೋ
ಮಾಧವಗಿನ್ನ ಸಾಧಿಸುತ ಸ್ವಲ್ಪ
ಆದಿತೆಂತು ಇನ್ನು ತಿಳಿಯದಲೆ
ವಾದಿಸುತಲಿ ತತ್ತ್ವವರದೊರದು ಪರರಿಗೆ
ಬಾಧಿಸಿ ಬೋಧಿಸ ಪೇಳಿದೇನೋ
ಆದದ್ದು ಇದರೊಳಗೆ ಒಂದಾದರು ಕಾಣೆ
ಓದನಕೆ ಉಪಾಯ ಆಯಿತಲ್ಲಾ
ಶ್ರೀದೇವಿ ಅರಸ ಗೋಪಾಲವಿಟ್ಠಲ ನಿನ್ನ
ಪಾದ ಕಮಲ ನಿರುತ ಸ್ವಾದವೆನಗೆ ತೋರೊ ॥ 3 ॥
ಅಟ್ಟತಾಳ
ಇಂದು ಎನ್ನೊಳಗೆ ನೀ ಬಂದು ನಿಂದೆಯೊ ದೇವ
ಅಂದು ನಾ ನಿನ್ನವ ಇಂದು ನಿನ್ನವನೆ
ಒಂದಕೆ ಎನಗೊಂದು ಭೌತಿಕ ದೇಹವ
ಛಂದದಲಿತ್ತು ದೂರದಿಂದ ನೋಡುತಲಿದ್ದು
ಅಂದವು ನಿನಗಿದು ಆಟವಾಗಿದೆ ಒಂದು
ಇಂದಿರಾಪತಿ ಎಮ್ಮ ಕುಂದುಗಳೇನಯ್ಯಾ
ಹಿಂದು ಇಂದು ಮುಂದು ಎಂದೆಂದಿಗೆ ನಿನ್ನ
ಪೊಂದಿದವರ ಮನೆ ಕಂದ ನಾನಯ್ಯ ದೇವಾ
ಕಂದರ್ಪ ಜನಕ ಗೋಪಾಲವಿಟ್ಠಲ ನಿನ್ನ
ಸಂದರುಶನದಿಂದ ನಂದವ ಬಡಿಸು ॥ 4 ॥
ಆದಿತಾಳ
ಬೇಡುವರಾನಂತ ನೀಡುವ ನೀನೊಬ್ಬ
ಮಾಡುವಿ ಕರುಣವು ಮಾಡಿದರಿತು ಇನ್ನು
ಬೀಡುವಿ ನೀ ಭಕುತರನ ಭಕುತಿಯನು
ಮಾಡುವ ಸ್ವಾತಂತ್ರ ಕೊಡುವದೆಮಗಿನ್ನು
ನೀಡಿದರೆನಗುಂಟು ನೀಡದಿದ್ದರೆ ಇಲ್ಲ
ಕೋಡಗನ ಕೊರವ ಆಡಿಸಿದಂತೆ ನೀ
ನಾಡ ವಿಷಯಂಗಳಿಗೆ ಓಡಿ ಆಡಿಸಿ ಎನ್ನ
ಕೇಡು ಮಾಡಿಸಿ ದೂರ ನೋಡಿವಿ ಕರುಣದಿ
ಗಾಢಾ ಅಹಂಕಾರವು ನೀಡದಲೆ ಎನ್ನಲ್ಲಿ
ಕಾಡೋ ದುರಿತ ಹೋಗಲಾಡಿಸಿ ಪೊರೆ ಎನ್ನ
ನಾಡ ದೈವರ ಗಂಡ ಗೋಪಾಲವಿಟ್ಠಲ
ಬೇಡುವೆ ನಿನ್ನನು ಬೇಡೆನೊ ಅನ್ಯರ ॥ 5 ॥
ಜತೆ
ಸ್ವತಂತ್ರ ನೀನು ಅಸ್ವಾತಂತ್ರತರ ನಾನು
ದಾತರ ದಾತ ಗೋಪಾಲವಿಟ್ಠಲರೇಯಾ ॥
********
No comments:
Post a Comment