ಶ್ರೀ ವಿಜಯದಾಸಾರ್ಯ ವಿರಚಿತ
ಪದುಮನಾಭ ಅನಂತ ಸುಳಾದಿ
(ಅನಂತಶಯನ ಕ್ಷೇತ್ರ)
ಯಾ ತೈತ್ತಿರೀಯ ನಿಗಮಾಂತಗ ಕಿಂ ವದಂತೀ
ಸೇವಾತ್ರಯೋ ಚಿತಫಲ ತ್ರಿತಿಯಂ ವದಂತೀ l
ತತ್ರತ್ಯ ಸಂಶಯಮಪಾ ಕುರುತೇಂsಘ್ರಿಮಧ್ಯವಕ್ತ್ರಂ
ಕ್ರಮೇಣ ಘಟಿಯನ್ದೃಶಿ ಪದ್ಮನಾಭಃ ll
ರಾಗ : ಸಿಂಧುಭೈರವಿ
ಅನಂತ ಪರಮ ಪುರುಷ ಅನಂತ ಅವತಾರ
ಅನಂತ ಗುಣಾರ್ಣವ ಅನಂತ ಮಹಿಮ
ಅನಂತ ಪರದೈವ ಅನಂತಾದ್ಭುತ ಲೀಲಾ
ಅನಂತ ಅಪ್ರಮೇಯಾ ಅನಂತ ವರ್ನ
ಅನಂತ ವೇದಾ ವಂದ್ಯ ಅನಂತಾಜಾಮರರು
ಅನಂತಕಲ್ಪದಲ್ಲಿ ನಿನ್ನಾಂತ ನೋಡಲಾಗಿ
ನಿನ್ನಂತ ತಿಳಿಯರೊ ಅನಂತ ಶಯನ
ನಿನ್ನಾನಂತ ಬಲ್ಲೆನೆ ಅನಂತ ಶ್ರೀಮದಾ
ಅನಂತ ವಿಜಯವಿಠಲ ಪ್ರಸನ್ನವದನಾ
ಅನಂತಾನಂತ ಅವಾಂತರರಸೆ
ಅನಂತ ಪದುಮನಾಭ ಶ್ರೀ ನಾರಸಿಂಹ ಅನಂತಾನಂತ ॥1॥
ಮಟ್ಟತಾಳ
ಹರಿಪರ ದೇವತಿಯಾ ನಿರೀಕ್ಷಿಸುವೆನೆಂದು
ಪರಮ ಭಕುತಿಯಲ್ಲಿ ಇರತಕ್ಕವನಾಗಿ
ಧರಣಿಯೊಳಗೆ ದಿವಾಕರ ಯತಿ ದ್ವಾರಕಾ
ಪುರಿಯಲ್ಲಿ ತಪಸಿಗೆ ನೆರೆನಂಬಿದನೆಂದು
ಪರ ಚರಿತರಂಗ ವಿಜಯವಿಠಲರೇಯಾ
ತರುಳನಾಗಿ ಬಂದು ಸರಸದಲಿ ಸುಳಿದ ॥2॥
ರೂಪಕತಾಳ
ಹರಿ ಸುಳಿಯಲು ದಿವಾಕರಮುನಿ ವೈರಾಗ್ಯ
ಮರೆದು ಮರುಳಾಗಿ ಪರಮಾ ಮೋಹದಿಂದ
ಕರದು ತೊಡಿಯಲ್ಲಿ ಕುಳ್ಳಿರಿಸಿ ಬೆಸಗೊಳಲು
ಹರಿಮಾಯಾ ಕಲ್ಪಿಸೆ ಚರಿತೆಯ ತೋರಿದ
ಜರಿದು ಅಲ್ಲಿಂದಲ್ಲಿ ಬರುತ ಬರುತ ಮುನಿಗೆ
ಕರ ಪ್ರಾಪ್ತಿಯಾದಂತೆ ಸರಿದು ಬಂದನು ದೂರಾ
ಶರಣರ ಕರುಣಾಳು ವಿಜಯವಿಠಲನು ಕಿಂ -
ಕರನ ಮನೋಭಾವಾ ಅರಿದು ಆ ಕ್ಷಣದಲ್ಲಿ ॥3॥
ಝಂಪೆತಾಳ
ಗಿಡ ಒಂದು ಮೂರು ಯೋಜನ ಪರಿಮಿತವಿರಲು
ಹುಡುಗನಾಗಿದ್ದ ಬಾಹಿರರಂತರಾತ್ಮಕನು
ಅಡಗಿದನು ಯತಿಯ ಕಣ್ಣಿಗೆ ಕಾಣಿಸದಿರಲು
ನಡುಗಿದನು ಅಕಟಕಟ ಎಂದು ಮನದೊಳಗೆ
ಕಡುಪಾಪಿ ನಾನೆಂದು ದಿವಕರನು ಮರುಗಲು
ಒಡನೆ ತೋರಿದ ತನ್ನ ನಿಜರೂಪವ
ಸಡಗರದ ದೈವ ನಮ್ಮ ವಿಜಯವಿಠಲನಂತಾ
ತೊಡೆವನು ನಂಬಿದವರ ಫಣಿಯ ದುರ್ಲೇಖಾ॥4॥
ತ್ರಿವಿಡಿತಾಳ
ಬೇರರಿಸಿ ಕಿತ್ತಿ ಬೀಳಲದರ ಪ್ರಮಾಣ
ತೋರಿದ ಭಕ್ತನ ಮನಕೆ ಸಂತೋಷ
ಮೂರು ಯೋಜನದುದ್ದ ಶ್ರೀ ರಮಣನುದರಾ
ಮೂರುತಿಯಾಗಿ ಪವಳಿಸಿದಾನಂದು ವೇಗ
ಭಾರತಕರ್ತಾನಂತ ವಿಜಯವಿಠಲರೇಯನ
ಆರು ಬಲ್ಲರೈಯ್ಯಾ ಕಾರಣಿಕ ತನವು ॥5॥
ಅಟ್ಟತಾಳ
ಬೆರಗಾಗಿ ಮುನಿನಿಂದು ಕರವ ಮುಗಿದು
ಶಿರಿಧರನ್ನ ರೂಪವನ್ನೂ ನೋಡಿ
ಪರಮಾಶ್ಚರ್ಯವಾನಿರುವ ನೋಡುತ ವಿ -
ಸ್ತರದಿಂದ ಪೊಗಳಿದಾ
ಹರಿ ನಿನ್ನ ರೂಪವೀಪರಿಯಲ್ಲಿ ಉಳ್ಳಾರೆ
ಧರೆ ಮನುಜರು ನಿನ್ನ ಅರಿವದೆಂತೆನ್ನಲಾಗಿ
ಹರಿ ಅಣೋರಣಿರೂಪ ಕರುಣಾದಿಂದಲಿ ದಿವಾ-
ಕರನ ಕರದಲಿಂದ ವರದಂಡಾ ಪರಿಮಿತ
ಎರಡೊಂದರೊಳಗೆ ಆಕಾರತಂದು ನಿಲಿಸಿದ
ನರಸಿಂಹ ವಿಜಯವಿಠಲ ಪದುಮನಾಭಾ
ವರ ಅನಂತಶಯನ ಕ್ಷೇತ್ರನಿವಾಸಾ ॥6॥
ಆದಿತಾಳ
ವರವಿತ್ತು ಒಂದು ಕಲ್ಪಾ ಪರಿಯಂತ ನಿನ್ನಾ
ವರಕರದಿಂದರ್ಚನೆಗೊಂಡು ಇಲ್ಲೆ ಎನುತಾ
ನಿರುತಾವ ನರನೊಮ್ಮೆ ಕರಣ ಶುದ್ಧಿಯಲ್ಲಿ
ಚರಿಸಿ ಯಾತ್ರಿಯ ಎಪ್ಪತ್ತೆರಡು ತೀರಥದಲ್ಲಿ
ಪರಮನಿಷ್ಠೆಗೆ ಮನವೆರಗಿ ಯತಾರ್ಥವಾಗಿ
ಹರಿಗೆ ಕುಡಿತೆಜಲವೆರೆದು ಬಚ್ಚಿಡಲಾಗಿ
ಪರಮ ಪದವಿಗಲ್ಲಿ ನೆರವಾಗಿ ಉಣಿಸೋದು
ಪರಮಪಾವನನಂತ ವಿಜಯವಿಠಲ ಬಲ್ಲ
ಧರೆಯೊಳೀಕ್ಷೇತ್ರಕ್ಕೆ ಸರಿಗಾಣೆ ಎಣಿಸಾಲು ॥7॥
ಜತೆ
ಪದುಮನಾಭಾನಂತಾ ನರಸಿಂಹ ವೈಕುಂಠ
ಸದ್ಮನೆ ವಿಜಯವಿಠಲದಾಸರ ಪ್ರೇಮಾ ll8ll
******
No comments:
Post a Comment