ಶ್ರೀ ವಿಜಯದಾಸಾರ್ಯ ವಿರಚಿತ ತಿರುವೆಂಗಳೇಶ ಸುಳಾದಿ
ರಾಗ ಕಲ್ಯಾಣಿ
ಧ್ರುವತಾಳ
ಕಂಡೆ ಕರುಣಾಕರನ ಕಣ್ಣಾರೆ ಮನದಣಿಯೆ
ಮಂಡೆಯಲಿ ಮಕುಟ ಝಗಝಗಿಸುತಿರೆ ಬಲು ಕರ್ನಾ -
ಕುಂಡಲದ ಬೆಳಗು ಕುಂದದೆ ಶೋಭಿಸೆ ಎರಡು
ಗಂಡ ಸ್ಥಳದಲ್ಲಿ ಮಿಂಚುವ ನಯನ ನಾಸ
ಚಂಡ ಪ್ರಕಾಶ ಅಳಿಗುರುಳು ನೊಸಲಲಿ ತಿಲುಕ
ತಂಡತಂಡದ ದಂತ ಅಧರ ಕೊರಳಲಿ ತುಲಸಿ
ದಂಡೆ ಕೌಸ್ತುಭಮಣಿ ಉರದ ಸಿರಿವತ್ಸವು -
ದಂಡ ಬಲು ಪದಕ ಮುತ್ತಿನ ಸರ ರೇಶಿಮೆ
ಗೊಂಡೆ ತೋಳಲಿ ವಪ್ಪೆ ಚತುರ್ಭುಜದ ಚನ್ನಿಗ
ದುಂಡುಮಲ್ಲಿಗೆ ಉಳದ ಪೂವಾದಿಗಳು ಎಸಿಯೆ
ತೋಂಡರಿಗೆ ಬಿಡದೀವ ಅಭಯಕರ ಶಂಖಚಕ್ರ
ಗಂಡುಗಲಿ ಕಟಿಕರ ಘನವುಡುಗೆ ಶೃಂಗಾರ
ಡಂಡಣದ ಘಂಟೆ ಕಿಂಕಿಣಿ ಜಾನು ಜಂಘೆ ವೀರ
ಪೆಂಡೆ ಪಡದಂದಿಗೆ ಛಂದವಾದದು ಕಂಡೆ
ತೊಂಡಿಗೆ ಗತಿಯನಿತ್ತ ವೆಂಕಟ ವಿಜಯವಿಟ್ಠಲ
ಕುಂಡಲಗಿರಿವಾಸ ತಿರುವೆಂಗಳೇಶ ॥ 1 ॥
ಮಟ್ಟತಾಳ
ಗರುಡ ವಿಶ್ವಕ್ಸೇನ ವರ ಸುದರುಶನ
ಪರಮ ಪುರುಷನ ಎದುರಿಲಿ ಚತುರಬೀದಿ
ಮೆರೆವುತಲಿ ಸುತ್ತ ಬರುವದು ನಾನಾಕ
ಪರಿವಾರ ಕೂಡ ಭರದಿಂದಲಿ ಕಂಡು ದುರಿತ ದೂರನಾದೆ
ಉರಗಗಿರಿಯ ಶ್ರೀನಿವಾಸ ವಿಜಯವಿಟ್ಠಲ
ಪರಿಪರಿ ವೈಭೋಗದರಸೆ ಪರಬೊಮ್ಮಾ ॥ 2 ॥
ತ್ರಿವಿಡಿತಾಳ
ಇಂದು ಧ್ವಜಾರೋಹಣವೆಂದು ತಿಳಿದು ವನಜ -
ನಂದನ ಇಂದುಶೇಖರ ನಿರ್ಜರ
ಸಂದೋಹ ಸನಕಸನಂದಮುನಿ ನಾ -
ರಂದ ತುಂಬರ ಗಂಧರ್ವಸೊಬಗತಿ -
ಚಂದದಿಂದಲೊಪ್ಪುವ ಅಂದವಾದ ನಾರೇರು
ಬಂದಿಮಾಗದರು ನಿಸ್ಸಂದೇಹವಿಲ್ಲದೆ
ನಿಂದೆಡ ಬಲದಲ್ಲಿ ಒಂದೆ ದೈವಾವೆಂದು
ವಂದಿಸಿ ತಮ್ಮ ತಮ್ಮ ಛಂದವಾಗಿ ಪೊಗಳೆ
ಚಂದಿರವದನ ತಿರ್ಮಲ ವಿಜಯವಿಟ್ಠಲ
ತುಂದಿಯಿಂದಲಿ ನೆನಿಯೆ ಅಂದ ವರವನೀವ ॥ 3 ॥
ಅಟ್ಟತಾಳ
ಎಲ್ಲಲ್ಲಿ ನೋಡಿದರಿಲ್ಲ ಇದರ ಸರಿ
ಎಲ್ಲ ನಿಧಿಗಳಿಗೆ ಬಲ್ಲಿದ ನಿಧಿಯೆನ್ನಿ
ಬಲ್ಲವನಾಗಿದ್ದು ನಿಲ್ಲದೊಂದೆ ಸಾರೆ
ಸಲ್ಲಲಿತ ಮನದಲ್ಲಿ ಯಾತ್ರೆ ಮಾಡೆ
ಸಲ್ಲಾನು ನರಕಕ್ಕೆ ಎಲ್ಲಾ ಜನ್ಮದ ಪಾಪ
ತಲ್ಲಣಿಸಿ ಎದ್ದು ನಿಲ್ಲದೆ ಓಡೋವು
ಎಳ್ಳನಿತರ್ಪಿತ ಸೊಲ್ಲಿನಿಂದಲಿ ಎನೆ
ಸಲ್ಲಿಸಿ ಈ ಮಾತ ವಿಜಯವಿಟ್ಠಲ ಸಿರಿ
ವಲ್ಲಭ ತಿರುವೆಂಗಳೆಲ್ಲೆಲ್ಲಿ ನಲಿವಾ ॥ 4 ॥
ಆದಿತಾಳ
ಶ್ರೀನಿವಾಸನ ಕ್ಷೇತ್ರ ಅನಿರ್ಜರರು ಎಣಿಸಿ
ಕಾಣಾರು ಎಣಿಕೆ ಗಣಣೆ ಕ್ಷೋಣಿಯೊಳಗುಳ್ಳ ನಿಧಿಗೆ
ಮಾಣಿಕವಾಗಿದ್ದು ಮೆರದು ಧ್ಯಾನಮಾಡಿದವನ ಮಾತಿಗೆ
ತಾ ನಿಲುಕ ತಿಪ್ಪದೈಯ್ಯಾ
ವಾಣಿಯರಸ ಜನಕ ತಿಮ್ಮಾ ವಿಜಯವಿಟ್ಠಲ್ಲಾ ರತುನ
ತಾನು ತಿರಗಿದ ಫಲವನೀವನು ಮನ್ನಿಸಲೂ ॥ 5 ॥
ಜತೆ
ದಿಲೀಪಾ ವರದ ಪನ್ನಂಗ ಮಹಿಧರಾಧೀಶ
ಲೋಲಾ ವಿಜಯವಿಟ್ಠಲ ತಿಮ್ಮರಾಯನ ಕಂಡೆ ॥
***********
No comments:
Post a Comment