Friday, 23 October 2020

ಪಾಹಿ ನಾರಾಯಣನೇ ಪಾಹಿ ವಾಸುಕಿಶಯನ ankita pranesha vittala ಸಂವತ್ಸರ ಮುಂಡಿಗೆ PAAHI NARAYANANE PAAHI VASUKISHAYANA SAMVASTSARA MUNDIGE


 ರಾಗ : ನಾಟ  ತಾಳ : ಖಂಡಛಾಪು

Audio by Vidwan Sumukh Moudgalya

 ಶ್ರೀ ಪ್ರಾಣೇಶದಾಸರ ಸಂವತ್ಸರ ಮುಂಡಿಗೆ


ಪಾಹಿ ನಾರಾಯಣನೇ ಪಾಹಿ ವಾಸುಕಿಶಯನ।

ಪಾಹಿ ಗರುಡಧ್ವಜನೆ ಪಾಹಿ ಕಮಲಾಕ್ಷ॥ಪ॥


ಸಂವತ್ಸರಾಂಬರಧರ ನತಜನಪಾಲ

ಸಂವತ್ಸರ ಹರೇ ಕಾರುಣ್ಯ ನಿಧಿಯೇ

ಸಂವತ್ಸರಕೆ ನಿನ್ನ ಸಮರಾರೊ ತ್ರಿಜಗದಿ

ಸಂವತ್ಸರ ಜಲಜಕೆ ಸಂವತ್ಸರುಪಮಾ ॥೧॥

ಸಂವತ್ಸರಾಕ್ಷನುತ ಗಜವೈರಿ ಸಂಹರನೆ

ಸಂವತ್ಸರಾದಿ ಸಂವತ್ಸರ ರಿಪು

ಸಂವತ್ಸರ ಕುವರನೆ ಸಂವತ್ಸರನೆ ಯನ್ನ

ಸಂವತ್ಸರವಳಿದು ಕೊಡು ಸಂವತ್ಸರ ಮತಿ ॥೨॥


ಸಂವತ್ಸರ ಸಮಗ್ರ ಪ್ರಾಣೇಶವಿಠಲನೆ 

ಸಂವತ್ಸರ ಸ್ವಾಮಿ ದೋಷ ದೂರ

ಸಂವತ್ಸರ ಪಿತ ಸಿರಿ ಸಂವತ್ಸರನೇ ಕ್ಲೇಶ

ಸಂವತ್ಸರ ಮಾಡು ದೀನ ಕಲ್ಪತರು ॥೩॥

***


ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ

ಶ್ರೀ ಪ್ರಾಣೇಶದಾಸರ ಸಂವತ್ಸರ ಮುಂಡಿಗೆ

ಪಾಹಿ ನಾರಾಯಣನೇ 

ಪಾಹಿ ವಾಸುಕಿಶಯನ

ಪಾಹಿ ಗರುಡಧ್ವಜನೆ

ಪಾಹಿ ಕಮಲಾಕ್ಷ

ಸಂವತ್ಸರಾಂಬರಧರ, ನತಜನಪಾಲ

ಸಂವತ್ಸರ ಹರೇ ಕಾರುಣ್ಯ ನಿಧಿಯೇ

ಸಂವತ್ಸರ ನಿನ್ನ ಸಮರಾರು ತ್ರಿಜಗದಿ

ಸಂವತ್ಸರಕ್ಕೆ ಜಲಜಕ್ಕೆ ಸಂವತ್ಸರೋಪಮಾ

ಸಂವತ್ಸರಾಕ್ಷನುತ ಗಜವೈರಿ ಸಂಹರನೆ

ಸಂವತ್ಸರಾದಿ ಸಂವತ್ಸರರಿಪೂ

ಸಂವತ್ಸರಕುವರನೇ ಸಂವತ್ಸರನೇ ಎನ್ನ

ಸಂವತ್ಸರವಳಿದು ಕೊಡು ಸಂವತ್ಸರ ಮತೀ

ಸಂವತ್ಸರಪಿತಾ ಸಿರಿ ಸಂವತ್ಸರನೇ

ಸಂವತ್ಸರ ಕ್ಲೇಶ ಮಾಡು ದೀನ ಕಲ್ಪತರು

ಸಂವತ್ಸರ ಸಮಗ್ರ ಪ್ರಾಣೇಶ ವಿಠಲನೇ

ಶ್ರೀಪ್ರಾಣೇಶದಾಸರ ಮುಂಡಿಗೆಗಳೇ ಅದ್ಭುತ. ಹಿಂದೆ ಒಮ್ಮೆ ನಾವು ಶ್ರೀ ಪ್ರಾಣೇಶದಾಸರ ರಾಶಿ ಮುಂಡಿಗೆಯ ಅರ್ಥವಿವರಣೆ ನೋಡಿದ್ದಿವಿ ಈಗ ಈ ಅದ್ಭುತ ಸಂವತ್ಸರ ಮುಂಡಿಗೆಯ ಅರ್ಥವನ್ನ ನೋಡೋಣ....

              👇🏽👇🏽👇🏽

ರಾಶಿ, ನಕ್ಷತ್ರ ಮುಂಡಿಗೆಗಳಲ್ಲಿ ಎಲ್ಲಾ ರಾಶಿಗಳ ಹೆಸರಿನಲಿ ಅನುಸಂಧಾನ ಮಾಡಿದ ಹಾಗೇ ಇದರಲ್ಲಿಯೂ ಶ್ರೇಷ್ಠವಾದ ಸಂವತ್ಸರಗಳ ಅರ್ಥಗಳನ್ನು ಸೇರಿಸಿ ಪರಮಾತ್ಮನ ಅದ್ಭುತ ಮಾಹತ್ಮ್ಯವನ್ನು ತಿಳಿಯಬಹುದು....

 ಇಲ್ದಿ ಮೊದಲಿಗೆ 

ಸಂವತ್ಸರಾಂಬರಧರ - ಅಂದರೇ ಸಂವತ್ಸರಗಳಲ್ಲಿ ಮೂರನೇಯದಾದ ಶುಕ್ಲ ನಾಮ ಸಂವತ್ಸರನ್ನ ತಗೊಂಡಾಗ ಶುಕ್ಲಾಂಬರಧರಂ ಅಂತ ಅರ್ಥೈಸಿಕೋಬೇಕು... ಶ್ವೇತ ಹಾಗೂ ಶುಭ್ರ ವಸ್ತ್ರವನ್ನು ಧರಿಸಿದ ಪರಮಾತ್ಮ...

ಶುಕ್ಲಾಂಬರಧರಂ ವಿಷ್ಣುಂ ಅಂತ ಅರ್ಥ.

 ಸಂವತ್ಸರ ಹರೇ - ಇದರಲ್ಲಿ ಐದನೆಯ ಸಂವತ್ಸರವಾದ ಪ್ರಜೋತ್ಪತ್ತಿ ತಗೊಂಡಾಗ ಪಂಚಾತ್ಮಕ ಪ್ರಪಂಚವನ್ನು ಪಂಚರಾಪಾತ್ಮಕನಾಗಿ ಪ್ರಜಗಳನ್ನು ಸೃಷ್ಟಿಸಿ ಪಾಲನ ಮಾಡುವ ಶ್ರೀಹರಿ... ಹೀಗಾಗಿ ಇಲ್ಲಿ ಐದನೇಯ ಸಂವತ್ಸರವಾದ ಪ್ರಜೋತ್ಪತ್ತಿ ತಗೊಳ್ಳಲಾಗಿದೆ... ಮತ್ತೊಂದು...ರೀತಿ...

ಸಂವತ್ಸರ ಹರೇ = "ಓಂ ಜನ್ಮಾದ್ಯಸ್ಯಯತ" ಎಂಬುದರ ಅರ್ಥ

ಪಂಚಾತ್ಮಕ ಪ್ರಪಂಚವನ್ನು ಪಂಚರೂಪಗಳಿಂದ ಸೃಷ್ಟಿಸಿ ಪಾಲನಾದಿಗಳನ್ನು ಮಾಡುವವನು ಎಂದೇ ಐದನೇಯ ಸಂವತ್ಸರವನ್ನು ತೆಗದುಕೊಳ್ಳಲಾಗಿದೆ.

ಸಂವತ್ಸರಕ್ಕೆ ನಿನ್ನ ಸಮರಾರು ತ್ರಿಜಗದಿ

      ಇಲ್ಲಿ ವಿಕ್ರಮ ನಾಮ ಸಂವತ್ಸರವನ್ನು ತಗೊಂಡಾಗ ಸಮಗ್ರ ಲೋಕಗಳೊಳಗೆ ನಿನ್ನ ಅದ್ಭುತ ಪರಾಕ್ರಮಕ್ಕೆ ಸರಿಯಾದವರು ಸಮನಾದವರು ಯಾರು ಸ್ವಾಮೀ ಅಂತ...

ಹದಿನಾಲಕ್ಕು ಲೋಕದೊಳಗೆ ಸಮರಾರು ಎನ್ನುವುದಕ್ಕಾಗಿ ಹದಿನಾಲಕ್ಕನೇ ಸಂವತ್ಸರವಾದ ವಿಕ್ರಮನಾಮ ಸಂವತ್ಸರವನ್ನು ತಗೊಳ್ಳಲಾಗಿದೆ. ....

ಸಂವತ್ಸರ ಜಲಜಕ್ಕೆ - ಇದರಲ್ಲಿ ಏಳನೆಯ ಸಂವತ್ಸರವಾದ ಶ್ರೀಮುಖ ನಾಮ ಸಂವತ್ಸರವನ್ನು ತಗೋಬೇಕು.... ಶ್ರೀ ಅಂದರೇ ನಮ್ಮ ತಾಯಿ ಲಕ್ಷ್ಮೀದೇವಿಯಲ್ಲವೇ... ಆ ತಾಯಿಯ ಮುಖ ಕಮಲಕ್ಕೆ......

 ಸಂವತ್ಸರೋಪಮ - ಇಲ್ಲಿ 16ನೇಯ ಸಂವತ್ಸರವಾದ ಚಿತ್ರಭಾನು ಸಂವತ್ಸರವನ್ನು ತಗೋಬೇಕು.... ಚಿತ್ರಭಾನು ಅಂದರೇ ಸುರ್ಯ .   ಶ್ರೀಮುಖವಾದ ಶ್ರೀಮಹಾಲಕ್ಷಿಗೆ ಸೂರ್ಯನಂತಿರುವನು ಶ್ರೀಹರಿ... ಸೂರ್ಯನ ಕಿರಣಗಳಿಂದ ಕಮಲ ಅರಳುವುದರಿಂದ ಕಮಲಮುಖಿಗೆ ಸೂರ್ಯನಾದ ಶ್ರೀಮನ್ನಾರಾಯಣ ಅಂತ ಅರ್ಥ.... ಮತ್ತೊಂದು...ಅರ್ಥ

 ಕಮಲವು ಅರಳುವುದು ಸೂರ್ಯನ ಕಿರಣದಿಂದ ತಾನೆ.ಶ್ರೀಮುಖ ಕಮಲಕ್ಕೆ ಸೂರ್ಯನಂತಿರುವನು ಎಂದರ್ಥ.ಶ್ರೀಮುಖವು ಏಳನೆಯ ಸಂವತ್ಸರ.ಏಳು ಎಂದರೆ ಸಪ್ತ ಸಪ್ತಮಿ ತಿಥಿಗೆ ಅಧಿಪತಿ ಸೂರ್ಯ.ಹದಿನಾರು ಎಂದರು ಒಂದು +ಆರು=ಏಳು.

ಸೂರ್ಯನಂತಿರುವ ಶ್ರೀಲಕ್ಷ್ಮೀದೇವಿಗೂ ಸೂರ್ಯನಂತಿರುವ ಭಗವಂತ.ಲಕ್ಷ್ಮೀದೇವಿಗೂ ಚೇಷ್ಟಾದಿಪ್ರದನಾಗಿರುವವನಿವನು

 ಸಂವತ್ಸರಾಕ್ಷನುತ - ಇಲ್ಲಿ ಪಿಂಗಳ ನಾಮ ಸಂವತ್ಸರವನ್ನು ತಗೋಬೇಕು.  ಪಿಂಗಲಾಕ್ಷರು ಅಂದರೇ ಕಪಿಗಳು... ಹನುಮಂತ ಮೊದಲಾದ ಕಪಿಗಳಿಂದ ನುತಿಸಲ್ಪಟ್ಟ ಶ್ರೀ ನಾರಾಯಣ... ಹಾಗೂ ಗಜವೈರಿ ಸಂಹರನೇ... ಗಜೇಂದ್ರ ವೈರಿಯನ್ನ ಕೊಂದ ನಾರಾಯಣ ಅಂತ ಅರ್ಥ...

 ಸಂವತ್ಸರಾದಿ ಸಂವತ್ಸರರಿಪೂ ಇಲ್ಲಿ ಎರಡು ಸಂವತ್ಸರಗಳ ಹೆಸರು ಗ್ರಾಹ್ಯವಾಗಿದೆ ನೋಡಿ. ಸಂವತ್ಸರಾದಿ ಅಂದಲ್ಲಿ ಖರ ನಾಮಕ ಸಂವತ್ಸರ ತಗೊಂಡು ಸಂವತ್ಸರರಿಪು ಎನ್ನುವುದಲ್ಲಿ ರಾಕ್ಷಸ ನಾಮ ಸಂವತ್ಸರ ತಗೊಂಡಾಗ ಖರಾದಿ ಅಂದರೇ ಖರ ಮೊದಲಾದ ರಾಕ್ಷಸರ (ಖರ -ದೂಷಣರು) ಸಂಹಾರ ಮಾಡಿದ ಶ್ರೀರಾಮಚಂದ್ರ ಮೂರ್ತಿ ಅಂತ ಅರ್ಥ ಬರುತ್ತದೆ...

ಸಂವತ್ಸರ ಕುವರನೇ ಇದರಲ್ಲಿ ನಂದನ ನಾಮಸಂವತ್ಸರ ತಗೊಂಡಾಗ ನಂದಗೋಪನ ಪುತ್ರನಾದ ಶ್ರೀಕೃಷ್ಣ ಪರಮಾತ್ಮ ಅಂತ ಅರ್ಥ ಆಗ್ತದೆ ..


 ಸಂವತ್ಸರನೇ - ಇದರಲ್ಲಿ ಇಡೀ ಸಂವತ್ಸರ ತಾನೇ ಎಂದು ಪದ ಪ್ರಯೋಗ ಶ್ರೀ ಪ್ರಾಣೇಶದಾಸರು ಎಷ್ಟು ಛಂದ್ ಪ್ರಯೋಗ ಮಾಡಿದ್ದಾರೆ ನೋಡಿ.. ಸರ್ವಧಾರೀ ನಾಮ ಸಂವತ್ಸರ ತಗೊಂಡಾಗ ಸಮಗ್ರ ಬ್ರಹ್ಮಾಂಡವನ್ನೇ ಹೊತ್ತಿರುವ ಶ್ರೀ ಕೂರ್ಮರೂಪಿಯಾದ ಪರಮಾತ್ಮ ಅಂತ ತಿಳಿದು ಬರುತ್ತದೆ. .

 ಸಂವತ್ಸರವಳಿದು - ಇದರಲ್ಲಿ ದುರ್ಮತಿ ನಾಮ ಸಂವತ್ಸರ ತಗೊಂಡಾಗ ಹೇ ಪರಮಾತ್ಮನೇ ನಮ್ಮಲ್ಲಿನ ಎಲ್ಲಾ ದುರ್ಮತಿಗಳನ್ನ ಕಳೆದು ಅರ್ಥಾತ್ ನಾಶಮಾಡಿ ಬಿಸಾಕು ಸ್ವಾಮೀ ಅಂತ ಅರ್ಥ....

(ಸೂಕ್ಷ್ಮ ತಗೊಂಡರೇ ದುರ್ಮತಿ ನಾಮ ಸಂವತ್ಸರ 55ನೇಯದು. ನಮ್ಮಲ್ಲಿನ 5 ಜ್ಞಾನೇಂದ್ರಿಯಗಳ 5 ಕರ್ಮೇಂದ್ರಿಯಗಳನ್ನ control  ಲಿ ತರಲು 5+5 ಹತ್ತಾವತಾರದ ಹರಿಯಿಂದಲೇ ಸಾಧ್ಯ ಅಂತ) 

ಸಂವತ್ಸರ ಮತಿ ನೀಡು ಸೌಮ್ಯ ನಾಮ ಸಂವತ್ಸರ ಬರ್ತದೆ... ಸ್ವಾಮೀ ನನ್ನಲ್ಲಿನ ದುರ್ಮತಿಗಳನ್ನ ಕಳೆದು ಸೌಮ್ಯ ಮತಿಯನ್ನ ನೀಡಿ ಕಾಪಾಡು.... 

(ಇದರಲ್ಲಿಯೂ ಸೂಕ್ಷ್ಮವಿದೆ ನೋಡಿ ಸೌಮ್ಯ ನಾಮ ಸಂವತ್ಸರ 43ನೇಯದು 4+3 = 7 ಅಂದರೇ ಸಪ್ತ. ಏಕಾಕ್ಷರ ಕೋಶದಲ್ಲಿನ ಅರ್ಥ ಪ್ರಕಾರ  ಸ -ಸಹಿತ, ಪ್ತಾ - ಜಟಾ ಅಂತ ಅರ್ಥಗಳು ಬರ್ತವೆ.. ಅಂದರೇ ಕೇಸರಿ ಅಂದರೇ ನಾರಸಿಂಹದೇವರು ಅಂತ ಅರ್ಥ..) ನಮ್ಮಲ್ಲಿ ಸೌಮ್ಯ ಗುಣವನ್ನು ನಿಲ್ಲಿಸಲು ನಾರಸಿಂಹದೇವರನ್ನ ಮೊರೆಹೋಗಬೇಕು ಎಂದು ಅರ್ಥ....


ಸಂವತ್ಸರಪಿತಾ - ಮನ್ಮಥ ನಾಮ ಸಂವತ್ಸರ ತಗೊಂಡರೇ ಮನ್ಮಥನ ಜನಕನೇ ಅಂತ.... 

(ಸೂಕ್ಷ್ಮ ನೋಡಿದಾಗ ಈ ಮನ್ಮಥ ನಾಮ ಸಂವತ್ಸರ 29ನೇಯದು. 2+9=11. 5 ಜ್ಞಾನೇಂದ್ಯಿಯಗಳೂ, 5 ಕರ್ಮೇಂದ್ರಿಯಗಳೂ ಹಾಗೂ 1 ಮನಸ್ಷು ಅಂದರೇ .. ಏಕಾದಶ ಇಂದ್ರಿಯಗಳನ್ನ ಸಹಾ ಅದರಲ್ಲಿಯೂ ಸಹಾ ಪ್ರತ್ಯೇಕವಾಗಿ ಮನಸ್ಸನ್ನ ಮಥನ ಮಾಡಿ ಹಾಳು ಮಾಡಲು ಪ್ರೇರಕನಾಗುವ ಮನ್ಮಥನ ತಂದೆಯಾದ ಶ್ರೀಹರಿಯೇ ನಮ್ಮನ್ನ ಕಾಪಾಡಬೇಕು ಎಂದು ಅರ್ಥ...


 ಸಿರಿಸಂವತ್ಸರನೇ - ಇದರಲ್ಲಿ 27ನೇ ಸಂವತ್ಸರವಾದ ವಿಜಯ ನಾಮ ಸಂವತ್ಸರವನ್ನ ತಗೊಂಡರೇ 2+7=9 ನವ ಅಂದರೇ ಸರ್ವರಿಂದಲೂ ವಿಜಯನು ಅಜೇಯನು ಎಂದು ಸ್ತುತಿಸಲ್ಪಟ್ಟ ಶ್ರೀಹರಿ...


ಕ್ಲೇಶ ಸಂವತ್ಸರ ಮಾಡು - ಕ್ಷಯ ನಾಮ ಸಂವತ್ಸರ ಗ್ರಾಹ್ಯವಾದಾಗ ನಮ್ಮ ಎಲ್ಲಾ ಕ್ಲೇಶಗಳನ್ನೂ ಕ್ಷಯ ಮಾಡು ಅಂದರೇ ಕ್ಷೀಣ ಮಾಡು ಅಂದರೇ ಹರಿಸು ಸ್ವಾಮೀ ಅಂತ...


ಹೀಗೆಲ್ಲಾ ತಿಳಿಸಿದ ಶ್ರೀ ಪ್ರಾಣೇಶದಾಸರು ಕೊನೆಯಲ್ಲಿ

ಸಂವತ್ಸರ ಸಮಗ್ರ ಪ್ರಾಣೇಶವಿಠಲನೇ - ಎಂದು ಆನಂದ ನಾಮ ಸಂವತ್ಸರ ಮುಖಾಂತರ ಇಡೀ ಬ್ರಹ್ಮಾಂಡದ ಎಲ್ಲರ ಆನಂದಕ್ಕೆ ಕಾರಣನೂ ಗುಣಪೂರ್ಣನೂ, ಆನಂದಪ್ರದನೂ, ಆನಂದನಾಮಕನೂ, ಸಜ್ಜನರಿಗೆ ಆನಂದ ನೀಡುವವನೂ ಆದ ಶ್ರೀ ಪ್ರಾಣೇಶವಿಠಲನು ನಮ್ಮ ಬಾಧೆಗಳೆಲ್ಲವನ್ನೂ ದೂರ ಮಾಡಿ ಎಂದೆಂದಿಗೂ ಆತನ ಸ್ಮರಣೆಯಲ್ಲಿ ಸದಾ ನಿರತರಾಗಿರುವಂತೆ ಸಲಹಿ ಸಲಹಲೀ ಎಂದು ಹಾರೈಸಿದರು. ..

ಇಂಥಹಾ ಅದ್ಭುತ ಮುಂಡಿಗೆಗಳ ಅರ್ಥಾನುಸಂಧಾನವೇ ಒಂದು ಅದ್ಭುತ. ಆ ಅರ್ಥಗಳನ್ನ ಅನುಸಂಧಾನಕ್ಕೆ ತರುವುದು ನಮ್ಮ ಕರ್ತವ್ಯ... ಮನೋ ನಿಯಾಮಕನಿಗೆ ಶರಣು ಹೋಗಿ ಶ್ರೀ ವೆಂಕಪ್ಪನಲ್ಲಿ ಸದಾ ಮನಸು ಲಗ್ನವಾಗುವಂತೆ ಕಾಪಾಡು ಎಂದು ಕೇಳಿ ಸದಾ ಇಂಥಹಾ ದಾಸಾರ್ಯರ ಅದ್ಭುತ ವಾಕ್ಯಗಳ ಅರ್ಥ ತಿಳಿದು ಅವರ ಉಕ್ತಿಗಳು ಅನುಸಂಧಾನಕ್ಕೆ ತರುವ ಪ್ರಯತ್ನ ಮಾಡಿಸಲೀ ಎಂದು 

ಅಸ್ಮದ್ ಪತ್ಯಂತರ್ಗತ, ಗುರ್ವಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶನ ಪದಪದ್ಮಗಳಲ್ಲಿ ಶಿರಬಾಗಿ ಬೇಡಿಕೊಳ್ಳುತ್ತಾ......

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***


No comments:

Post a Comment