Audio by Mrs. Nandini Sripad
ರಚನೆ : ಶ್ರೀ ಜಗನ್ನಾಥ ದಾಸರು
for saahitya click ಹರಿಕಥಾಮೃತಸಾರ ಸಂಧಿ 1 to 32
ಪಂಚಮಹಾಯಜ್ಞ ಸಂಧಿ 06
"ಜನನಿ ಪಿತ ಭೂ ವಾರಿದಾಂಬರ " ,
ಶ್ರೀ ಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ ,
ಪಂಚಮಹಾಯಜ್ಞ ಸಂಧಿ 06 ರಾಗ ಸರಸ್ವತಿ
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
ಜನನಿಪಿತಭೂವಾರಿದಾಂಬರವೆನಿಪ ಪಂಚಾಗ್ನಿಯಲಿ
ನಾರಾಯಣನ ತ್ರಿಂಶತಿ ಮೂರ್ತಿಗಳ ವ್ಯಾಪಾರ ವ್ಯಾಪ್ತಿಗಳ ನೆನೆದು
ದಿವಸಾಳು ಎಂಬ ಸಮಿಧೆಗಳು ನಿರಂತರ ಹೋಮಿಸುತ
ಪಾವನಕೆ ಪಾವನನು ಎನಿಪ ಪರಮನ ಬೇಡು ಪರಮಸುಖ||1||
ಗಗನ ಪಾವಕ ಸಮಿಧೆ ರವಿ ರಶ್ಮಿಗಳೇ ಧೂಮವು ಅರ್ಚಿಯೆನಿಪುದು ಹಗಲು
ನಕ್ಷತ್ರಗಳು ಕಿಡಿಗಳು ಚಂದ್ರಮ ಅಂಗಾರ
ಮೃಗವರ ಉದರನೊಳಗೆ ಐದು ರೂಪಗಳ ಚಿಂತಿಸಿ
ಭಕ್ತಿರಸ ಮಾತುಗಳೆ ಮಂತ್ರವ ಮಾಡಿ ಹೋಮಿಸುವರು ವಿಪಶ್ಚಿತರು||2||
ಪಾವಕನು ಪರ್ಜನ್ಯ ಸಮಿಧೆಯು ಪ್ರಾವಹೀಪತಿ ಧೂಮಗಳು ಮೇಘಾವಳಿಗಳು
ಅರ್ಚಿ ಕ್ಷಣಪ್ರಭೆ ಗರ್ಜನವೆ ಕಿಡಿಯು ಭಾವಿಸುವುದು ಅಂಗಾರ ಸಿಡಿಲೆಂದು
ಈ ವಿಧ ಅಗ್ನಿಯೊಳು ಅಬ್ಧಿ ಜಾತನ ಕೋವಿದರು ಹೋಮಿಸುವರು ಅನುದಿನ
ಪರಮ ಭಕುತಿಯಲಿ||3||
ಧರಣಿಯೆಂಬುದೇ ಅಗ್ನಿ ಸಂವತ್ಸರವೇ ಸಮಿಧೆ ವಿಹಾಯಸವೇ ಪೊಗೆ
ಇರಳು ಉರಿ ದಿಶ ಅಂಗಾರ ಅವಾಂತರ ದಿಗ್ವಲಯ ಕಿಡಿಯು
ವರುಷವೆಂಬ ಆಹುತಿಗಳಿಂದಲಿ ಹರಿಯ ಮೆಚ್ಚಿಸಿ
ಸಕಲರೊಳಗೆ ಅಧ್ವರಿಯನಾಗಿರು ಸರ್ವ ರೂಪಾತ್ಮಕನ ಚಿಂತಿಸುತ||4||
ಪುರುಷ ಶಿಖಿ ವಾಕ್ಸಮಿಧೆ ಧೂಮವು ಪರಣ ಅರ್ಚಿಯು ಜಿಹ್ವೆ ಶ್ರೋತ್ರಗಳು ಎರಡು ಕಿಡಿಗಳು
ಲೋಚನಗಳು ಅಂಗಾರವೆನಿಸುವುವು
ನಿರುತ ಭುಂಜಿಸುವನ್ನ ಯದುಕುಲವರನಿಗೆ ಅವದಾನಗಳೆಂದು
ಈ ಪರಿ ಸಮರ್ಪಣೆಗೈಯೆ ಕೈಗೊಂಡು ಅನುದಿನದಿ ಪೊರೆವ||5||
ಮತ್ತೆ ಯೋಷ ಅಗ್ನಿಯೊಳು ತಿಳಿವುದು ಉಪಸ್ಥ ತತ್ತ್ವವೆ ಸಮಿಧೆ
ಕಾಮೋತ್ಪತ್ತಿ ಪರಮಾತುಗಳು ಧೂಮವು ಯೋನಿ ಮಹದರ್ಚಿ
ತತ್ಪ್ರವೇಶ ಅಂಗಾರ ಕಿಡಿಗಳು ಉತ್ಸಹ ಉತ್ಸರ್ಜನವೆ
ಪುರುಷೋತ್ತಮನಿಗೆ ಅವದಾನವನೆ ಕೈಕೊಂಡು ಮನ್ನಿಸುವ||6||
ಐದಗ್ನಿಗಳಲ್ಲಿ ಮರೆಯದೆ ಐದು ರೂಪಾತ್ಮಕನ ಇಪ್ಪತ್ತೈದು ರೂಪಗಳ
ಅನುದಿನದಿ ನೆನೆವರಿಗೆ ಜನ್ಮಗಳ ಐದಿಸನು ನಳಿನಾಕ್ಷ
ರಣದೊಳು ಮೈದುನನ ಕಾಯ್ದಂತೆ ಸಲಹುವ
ಬೈದವಗೆ ಗತಿಯಿತ್ತ ಭಯಹರ ಭಕ್ತವತ್ಸಲನು||7||
ಪಂಚನಾರೀ ತುರಗದಂದದಿ ಪಂಚರೂಪಾತ್ಮಕನು ತಾ ಷಟ್ಪoಚ ರೂಪವ ಧರಿಸಿ
ತತ್ತನ್ನಾಮದಿಂ ಕರೆಸಿ
ಪಂಚ ಪಾವಕ ಮುಖದಿ ಗುಣಮಯ ಪಂಚಭೂತಾತ್ಮಕ ಶರೀರವ
ಪಂಚ ವಿಧ ಜೀವರಿಗೆ ಕೊಟ್ಟು ಅಲ್ಲಲ್ಲೆ ರಮಿಸುವನು||8||
ವಿಧಿ ಭವಾದಿ ಸಮಸ್ತ ಜೀವರ ಹೃದಯದೊಳಗೆ ಏಕಾತ್ಮನೆನಿಸುವ ಪದುಮನಾಭನು
ಅಚ್ಯುತಾನಂತಾದಿರೂಪದಲಿ
ಅಧಿಸುಭೂತಾಧ್ಯಾತ್ಮವ ಅಧಿದೈವದೊಳು ಕರೆಸುವ
ಪ್ರಾಣನಾಗಾಭಿದನು ದಶರೂಪದಲಿ ದಶವಿಧ ಪ್ರಾಣರೊಳಗಿದ್ದು||9||
ಈರೈದು ಸಾವಿರದ ಇಪ್ಪತ್ತು ಆರಧಿಕ ಮುನ್ನೂರು ರೂಪಗಳ
ಈರೆರೆಡು ಸ್ಥಾನದಲಿ ಚಿಂತಿಪುದು ಅನುದಿನದಿ ಬುಧರು
ನೂರಿಪ್ಪತ್ತೇಳು ಅಧಿಕ ಮೂರಾರುಸಾವಿರ ರೂಪದಿಂ
ದಶ ಮಾರುತರೊಳಿದ್ದು ಅವರವರ ಪೆಸರಿಂದ ಕರೆಸುವನು||10||
ಚಿತ್ತೈಸುವುದು ಎಂಟಧಿಕ ಇಪ್ಪತ್ತು ಸಾವಿರ ನಾಲ್ಕು ಶತದ ಇಪ್ಪತ್ತಮೂರು ಸುಮೂರ್ತಿಗಳು
ಅಹವಲ್ಲೇ ಪರಿಯಂತ
ಹತ್ತು ನಾಲ್ಕು ರೂಪಗಳ ನೆರೆಬಿತ್ತವರೀಪರಿ ತಿಳಿದು
ಪುರುಷೋತ್ತಮನ ಸರ್ವತ್ರ ಪೂಜೆಯ ಮಾಡು ಕೊಂಡಾಡು||11||
ಈರೆರೆಡು ಶತದ್ವಿಷ್ಟ ಅಧಿಕ ಹದಿನಾರು ಸಾವಿರ ರೂಪ ಸರ್ವ ಶರೀರದೊಳು
ಶಬ್ಧಾದಿಗಳ ಅಧಿಷ್ಠಾನದೊಳಗೆ ಇಪ್ಪ
ಮಾರುತನು ನಾಗಾದಿ ರೂಪದಿ
ಮೂರನೇ ಗುಣಮಾನಿ ಶ್ರೀ ದುರ್ಗಾರಮಣ ವಿದ್ಯಾಕುಮೋಹವ ಕೊಡುವ ಕರಣಕ್ಕೆ||12||
ಐದವಿದ್ಯೆಗಳೊಳಗೆ ಇಹ ನಾಗಾದಿಗಳ ಅಧಿಷ್ಠಾನದಲಿ ಲಕ್ಷ್ಮೀಧವನು
ಕೃದ್ಧೋಲ್ಕ ಮೊದಲಾದ ಐದು ರೂಪಗಳ ತಾ ಧರಿಸಿ
ಸಜ್ಜನರ ಅವಿದ್ಯವ ಛೇದಿಸುವ ತಾಮಸರಿಗೆ ಅಜ್ಞಾನಾದಿಗಳ ಕೊಟ್ಟು
ಅವರವರ ಸಾಧನವ ಮಾಡಿಸುವ||13||
ಗೋವುಗಳೊಳು ಉದ್ಗೀಥನಿಹ ಪ್ರಸ್ಥಾವ ಹಿಂಕಾರ ಎರಡೂ ರೂಪದಿ ಅವ್ಯಾಜಗಳೊಳಿಹನು
ಪ್ರತಿಹಾರಾಹ್ವ ಹಯಗಳೊಳು
ಜೀವನಪ್ರದ ನಿಧನ ಮನುಜರೊಳು ಈ ವಿಧದೊಳಿಹ ಪಂಚ ಸಾಮವ
ಝಾವ ಝಾವಕೆ ನೆನೆವರಿಗೆ ಐದಿಸನು ಜನ್ಮಗಳ||14||
ಯುಗ ಚತುಷ್ಟಯಗಳಲಿ ತಾನಿದ್ದು ಯುಗ ಪ್ರವರ್ತಕ ಧರ್ಮ ಕರ್ಮಗಳಿಗೆ ಪ್ರವರ್ತಕ
ವಾಸುದೇವಾದಿ ಈರೆರೆಡು ರೂಪ ತೆಗೆದುಕೊಂಡು
ಯುಗಾದಿ ಕೃತು ತಾ ಯುಗ ಪ್ರವರ್ತಕಯೆನಿಸಿ
ಧರ್ಮ ಪ್ರಘಟಕನು ತಾನಾಗಿ ಭಕುತರಿಗೀವ ಸಂಪದವ||15||
ತಲೆಯೊಳಿಹ ನಾರಾಯಣನು ಗಂಟಲಡಿ ಒಡಲೊಳು ವಾಸುದೇವನು
ಬಲದಲಿಹ ಪ್ರದ್ಯುಮ್ನ ಎಡ ಭಾಗದಲಿ ಅನಿರುದ್ಧ
ಕೆಳಗಿನ ಅಂಗದಿ ಸಂಕರುಷಣನ ತಿಳಿದು
ಈ ಪರಿ ಸಕಲ ದೇಹಗಳೊಳಗೆ ಪಂಚಾತ್ಮಕನ ರೂಪವ ನೋಡು ಕೊಂಡಾಡು||16||
ತನು ವಿಶಿಷ್ಟದಿ ಇಪ್ಪ ನಾರಾಯಣನು ಕಟಿ ಪಾದ ಅಂತ ಸಂಕರುಷಣನು
ಶಿರ ಜಘನ ಅಂತವಾಗಿಹ ವಾಸುದೇವಾಖ್ಯ
ಅನಿಮಿಷ ಈಷ ಅನಿರುದ್ಧ ಪ್ರದ್ಯುಮ್ನನ್ನು ಎಡದಿ ಬಲ ಭಾಗದಿ
ಚಿಂತನೆಯ ಮಾಳ್ಪರಿಗೆ ಉಂಟೆ ಮೈಲಿಗೆ ವಿಧಿ ನಿಷೇಧಗಳು||17||
ಪದುಮನಾಭನು ಪಾಣಿಯೊಳಗಿಹ ವದನದಲಿ ಹೃಷಿಕೇಶ
ನಾಸಿಕ ಸದನದಲಿ ಶ್ರೀಧರನು ಜಿಹ್ವೆಯೊಳು ಇಪ್ಪ ವಾಮನನು
ವಿದಿತ ನೇತ್ರದಿ ತ್ರಿವಿಕ್ರಮನು ತ್ವಕ್ದೇಶದೊಳಗಿಹ
ಕರ್ಣದಲಿ ಇಪ್ಪನು ವಿಷ್ಣುನಾಮಕ ಶ್ರವಣನೆಂದೆನಿಸಿ||18||
ಮನದೊಳಿಹ ಗೋವಿಂದ ಮಾಧವ ಧನಪ ಸಖ ತತ್ವದೊಳು
ನಾರಾಯಣ ಮಹತ್ತತ್ವದೊಳು ಅವ್ಯಕ್ತದೊಳು ಕೇಶವನು
ಇನಿತು ರೂಪವ ದೇಹದೊಳು ಚಿಂತನೆಯ ಗೈವ ಮಹಾತ್ಮರು
ಇಳೆಯೊಳು ಮನುಜರು ಅವರಲ್ಲ ಅಮರರೇ ಸರಿ ಹರಿಕೃಪಾಬಲದಿ||19||
ನೆಲದೊಳು ಇಪ್ಪನು ಕೃಷ್ಣ ರೂಪದಿ ಜಲದೊಳು ಇಪ್ಪನು ಹರಿಯೆನಿಸಿ
ಶಿಖಿಯೊಳಗೆ ಇಪ್ಪನು ಪರಶುರಾಮ ಉಪೆನ್ದ್ರನು ಎಂದೆನಿಸಿ ಎಲ್ಲರೊಳು ಇಪ್ಪನು ಜನಾರ್ಧನನು
ಬಾಂದಲದೊಳು ಅಚ್ಯುತ ಗಂಧ ನರಹರಿ
ಪೊಳೆವ ಅಧೋಕ್ಷಜ ರಸಗಳೊಳು ರಸರೂಪ ತಾನಾಗಿ||20||
ರೂಪ ಪುರುಷೋತ್ತಮನು ಸ್ಪರ್ಶ ಪ್ರಾಪಕನು ಅನಿರುದ್ಧ
ಶಬ್ಧದಿ ವ್ಯಾಪಿಸಿಹ ಪ್ರದ್ಯುಮ್ನ ಉಪಸ್ಥದಿ ವಾಸುದೇವನಿಹ
ತಾ ಪೊಳೆವ ಪಾಯುಸ್ಥನಾಗಿ ಜಯಾಪತಿಯು ಸಂಕರುಷಣನು
ಸುಸ್ಥಾಪಕನೆನಿಸಿ ಪಾದದೊಳು ದಾಮೋದರನು ಪೊಳೆವ||21||
ಚತುರ ವಿಂಶತಿ ತತ್ತ್ವದೊಳು ಶ್ರೀಪತಿಯೆ ಅನಿರುದ್ಧಾದಿ ರೂಪದಿ
ವಿದಿತನಾಗಿದ್ದು ಅಖಿಲ ಜೀವರ ಸಂಹನನದೊಳಗೆ
ಪ್ರತತಿಯಂದದಿ ಸುತ್ತು ಸುತ್ತುತ ಪಿತೃಗಳಿಗೆ ತರ್ಪಕನೆನಿಸಿಕೊಂಡು
ಅತುಳ ಮಹಿಮನು ಷಣ್ಣವತಿ ನಾಮದಲಿ ನೆಲೆಸಿಹನು||22||
ಚತುರ ವಿಂಶತಿ ತತ್ತ್ವದೊಳು ತತ್ಪತಿಗಳೆನಿಸುವ ಬ್ರಹ್ಮ ಮುಖ ದೇವತೆಗಳೊಳು
ಹನ್ನೊಂದು ನೂರೈವತ್ತೆರಡು ರೂಪ
ವಿತತನಾಗಿದ್ದೆಲ್ಲ ಜೀವರ ಜತನ ಮಾಡುವ ಗೋಸುಗ
ಜಗತ್ಪತಿಗೆ ಏನಾದರೂ ಪ್ರಯೋಜನವಿಲ್ಲವಿದರಿಂದ||23||
ಇಂದಿರಾಧವ ಶಕ್ತಿ ಮೊದಲಾದ ಒಂದಧಿಕದಶ ರೂಪದಿಂದಲಿ
ಪೊಂದಿಹನು ಸಕಲ ಇಂದ್ರಿಯಗಳಲ್ಲಿ ಪುರುಷನಾಮಕನು
ಸುಂದರಪ್ರದ ಪೂರ್ಣಜ್ಞಾನಾನಂದಮಯ
ಚಿತ್ದೇಹದೊಳು ತಾನೊಂದರೆಕ್ಷಣ ವಗಲದಲೆ ಪರಮಾಪ್ತನು ಆಗಿಪ್ಪ||24||
ಆರಧಿಕ ದಶ ರೂಪದಿಂದಲಿ ತೋರುತ ಇಪ್ಪನು ವಿಶ್ವ
ಲಿಂಗಶರೀರದೊಳು ತೈಜಸನು ಪ್ರಾಜ್ಞನು ತುರ್ಯನಾಮಕನು
ಮೂರೈದು ರೂಪಗಳ ಧರಿಸುತಲಿ ಈರೈದು ಕರಣದೊಳು ಮಾತ್ರದಿ
ಖೈರ ಶಿಖಿ ಜಲ ಭೂಮಿಯೊಳಗಿಹನು ಆತ್ಮನಾಮದಲಿ||25||
ಮನದೊಳು ಅಹಂಕಾರದೊಳು ಚಿಂತನೆಯ ಮಾಳ್ಪುದು ಅಂತರಾತ್ಮನ
ಘನ ಸುತತ್ತ್ವದಿ ಪರಮನ ಅವ್ಯಕ್ತದಲಿ ಜ್ಞಾನಾತ್ಮ
ಇನಿತು ಪಂಚಾಶಯ್ವರಣ ವೇದ್ಯನ ಅಜಾದ್ಯೈವತ್ತು ಮೂರ್ತಿಗಳನು
ಸದಾ ಸರ್ವತ್ರ ದೇಹಗಳಲ್ಲಿ ಪೂಜಿಪುದು||26||
ಚತುರ ವಿಂಶತಿ ತತ್ತ್ವದೊಳು ತತ್ಪತಿಗಳೆನಿಸುವ ಬ್ರಹ್ಮ ಮುಖ ದೇವತೆಗಳೊಳು
ಹದಿಮೂರು ಸಾವಿರದ ಎಂಟು ನೂರಧಿಕ ಚತುರ ವಿಂಶತಿ ರೂಪದಿಂದಲಿ
ವಿತತನಾಗಿದ್ದು ಎಲ್ಲರೊಳು
ಪ್ರಾಕೃತ ಪುರುಷನಂದದಲಿ ಪಂಚಾತ್ಮಕನು ರಮಿಸುವನು||27||
ಕೇಶವಾದಿ ಸುಮೂರ್ತಿ ದ್ವಾದಶ ಮಾಸ ಪುಂಡ್ರಗಳಲ್ಲಿ
ವೇದವ್ಯಾಸ ಅನಿರುದ್ಧಾದಿ ರೂಪಗಳು ಆರು ಋತುಗಳಲಿ
ವಾಸವಾಗಿಹನೆಂದು ತ್ರಿಂಶತಿ ವಾಸರದಿ ಸತ್ಕರ್ಮ ಧರ್ಮ ನಿರಾಶೆಯಿಂದಲಿ ಮಾಡು
ಕರುಣವ ಬೇಡು ಕೊಂಡಾಡು||28||
ಲೋಷ್ಠ ಕಾಂಚನ ಲೋಹ ಶೈಲಜ ಕಾಷ್ಠ ಮೊದಲಾದ ಅಖಿಳ ಜಡ
ಪರಮೇಷ್ಠಿ ಮೊದಲಾದ ಅಖಿಳ ಚೇತನರೊಳಗೆ ಅನುದಿನವು
ಚೇಷ್ಟೆಗಳ ಮಾಡಿಸುತ ತಿಳಿಸದೆ ಪ್ರೇಷ್ಟನಾಗಿದ್ದು ಎಲ್ಲರಿಗೆ
ಸರ್ವೇಷ್ಟ ಆದಾಯಕ ಸಂತೈಸುವನು ಸರ್ವ ಜೀವರನು||29||
ವಾಸುದೇವಾನಿರುದ್ಧ ರೂಪದಿ ಪುಂ ಶರೀರದೊಳಿಹನು ಸರ್ವದ
ಸ್ತ್ರೀ ಶರೀರದೊಳಿಹನು ಸಂಕರುಷಣನು ಪ್ರದ್ಯುಮ್ನ
ದ್ವಾಸುಪರ್ಣ ಶ್ರುತಿ ವಿನುತ ಸರ್ವಸುನಿಲ ನಾರಾಯಣನ
ಸದುಪಾಸನೆಯ ಗೈವರರು ಜೀವನ್ಮುಕ್ತರು ಎನಿಸುವರು||30||
ತನ್ನನಂತ ಅನಂತ ರೂಪ ಹಿರಣ್ಯ ಗರ್ಭಾದಿಗಳೊಳಗೆ
ಕಾರುಣ್ಯ ಸಾಗರ ಹರಹಿ ಅವರವರ ಅಖಿಳ ವ್ಯಾಪಾರ
ಬನ್ನಬಡದಲೆ ಮಾಡಿ ಮಾಡಿಸಿ ಧನ್ಯರೆನಿಸಿ
ಸಮಸ್ತ ದಿವಿಜರ ಪುಣ್ಯಕರ್ಮವ ಸ್ವೀಕರಿಸಿ ಸುಖವಿತ್ತು ಪಾಲಿಸುವ||31||
ಸಾಗರದೊಳಿಹ ನದಿಯ ಜಲ ಭೇದ ಆಗಸದೊಳು ಇಪ್ಪ ಅಬ್ದ ಬಲ್ಲವು
ಕಾಗೆ ಗುಬ್ಬಿಗಳು ಅರಿಯ ಬಲ್ಲವೇ ನದಿಯ ಜಲಸ್ಥಿತಿಯ
ಭೋಗಿವರ ಪರಿಯಂಕ ಶಯನನೊಳು ಈ ಗುಣತ್ರಯ ಬದ್ಧ ಜಗವಿಹುದು
ಆಗಮಜ್ಞರು ತಿಳಿವರು ಅಜ್ಞಾನಿಗಳಿಗೆ ಅಳವಡದು||32||
ಕರಣ ಗುಣ ಭೂತಗಳೊಳಗೆ ತದ್ವರನೆನಿಪ ಬ್ರಹ್ಮಾದಿ ದಿವಿಜರೊಳರಿತು
ರೂಪ ಚತುಷ್ಟಯಗಳ ಅನುದಿನದಿ ಸರ್ವತ್ರ ಸ್ಮರಿಸುತ ಅನುಮೋದಿಸುತ ಹಿಗ್ಗುತ
ಪರವಶದಿ ಪಾಡುವರಿಗೆ ತನ್ನಿರವ ತೋರಿಸಿ
ಭವವಿಮುಕ್ತರ ಮಾಡಿ ಪೋಷಿಸುವ||33||
ಮೂಲರೂಪನು ಮನದೊಳಿಹ ಶ್ರವಣ ಆಲಿಯೊಳಗಿಹ ಮತ್ಸ್ಯ
ಕೂರ್ಮನು ಕೋಲರೂಪನು ತ್ವಕ್ರಸನದೊಳಗೆ ಇಪ್ಪ ನರಸಿಂಹ
ಬಾಲವಟು ವಾಮನನು ನಾಸಿಕ ನಾಳದೊಳು ವದನದಲಿ ಭಾರ್ಗವ
ವಾಲಿಭಂಜನ ಹಸ್ತದೊಳು ಪಾದ ಶ್ರೀ ಕೃಷ್ಣ||34||
ಜಿನ ವಿಮೋಹಕ ಬುದ್ಧ ಪಾಯುಗ ದನುಜ ಭಂಜನ ಕಲ್ಕಿ ಮೇಡ್ರದಿ
ಇನಿತು ದಶ ರೂಪಗಳ ದಶ ಕರಣಂಗಳಲಿ ತಿಳಿದು
ಅನುಭವಿಪ ವಿಷಯಂಗಳು ಕೃಷ್ಣಾರ್ಪಣವೆನಲು ಕೈಕೊಂಬ
ವೃಜಿನ ಅರ್ದನ ವರ ಜಗನ್ನಾಥ ವಿಠಲ ವಿಶ್ವ ವ್ಯಾಪಕನು||35||
********
harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||
jananipitaBUvAridAMbaravenipa pancAgniyali
nArAyaNana trimSati mUrtigaLa vyApAra vyAptigaLa nenedu
divasALu eMba samidhegaLu nirantara hOmisuta
pAvanake pAvananu enipa paramana bEDu paramasuKa||1||
gagana pAvaka samidhe ravi raSmigaLE dhUmavu arciyenipudu hagalu
nakShatragaLu kiDigaLu candrama angAra
mRugavara udaranoLage aidu rUpagaLa cintisi
Baktirasa mAtugaLe mantrava mADi hOmisuvaru vipaScitaru||2||
pAvakanu parjanya samidheyu prAvahIpati dhUmagaLu mEGAvaLigaLu
arci kShaNapraBe garjanave kiDiyu BAvisuvudu angAra siDilendu
I vidha agniyoLu abdhi jAtana kOvidaru hOmisuvaru anudina
parama Bakutiyali||3||
dharaNiyeMbudE agni saMvatsaravE samidhe vihAyasavE poge
iraLu uri diSa aMgAra avAntara digvalaya kiDiyu
varuShaveMba AhutigaLindali hariya meccisi
sakalaroLage adhvariyanAgiru sarva rUpAtmakana cintisuta||4||
puruSha SiKi vAksamidhe dhUmavu paraNa arciyu jihve SrOtragaLu eraDu kiDigaLu
lOcanagaLu angAravenisuvuvu
niruta Bunjisuvanna yadukulavaranige avadAnagaLendu
I pari samarpaNegaiye kaigonDu anudinadi poreva||5||
matte yOSha agniyoLu tiLivudu upastha tattvave samidhe
kAmOtpatti paramAtugaLu dhUmavu yOni mahadarci
tatpravESa angAra kiDigaLu utsaha utsarjanave
puruShOttamanige avadAnavane kaikonDu mannisuva||6||
aidagnigaLalli mareyade aidu rUpAtmakana ippattaidu rUpagaLa
anudinadi nenevarige janmagaLa aidisanu naLinAkSha
raNadoLu maidunana kAydante salahuva
baidavage gatiyitta Bayahara Baktavatsalanu||7||
pancanArI turagadaMdadi pancarUpAtmakanu tA ShaTpaoca rUpava dharisi
tattannAmadiM karesi
panca pAvaka muKadi guNamaya pancaBUtAtmaka SarIrava
panca vidha jIvarige koTTu allalle ramisuvanu||8||
vidhi BavAdi samasta jIvara hRudayadoLage EkAtmanenisuva padumanABanu
acyutAnantAdirUpadali
adhisuBUtAdhyAtmava adhidaivadoLu karesuva
prANanAgABidanu daSarUpadali daSavidha prANaroLagiddu||9||
Iraidu sAvirada ippattu Aradhika munnUru rUpagaLa
IrereDu sthAnadali cintipudu anudinadi budharu
nUrippattELu adhika mUrArusAvira rUpadiM
daSa mArutaroLiddu avaravara pesariMda karesuvanu||10||
cittaisuvudu enTadhika ippattu sAvira nAlku Satada ippattamUru sumUrtigaLu
ahavallE pariyanta
hattu nAlku rUpagaLa nerebittavarIpari tiLidu
puruShOttamana sarvatra pUjeya mADu konDADu||11||
IrereDu SatadviShTa adhika hadinAru sAvira rUpa sarva SarIradoLu
SabdhAdigaLa adhiShThAnadoLage ippa
mArutanu nAgAdi rUpadi
mUranE guNamAni SrI durgAramaNa vidyAkumOhava koDuva karaNakke||12||
aidavidyegaLoLage iha nAgAdigaLa adhiShThAnadali lakShmIdhavanu
kRuddhOlka modalAda aidu rUpagaLa tA dharisi
sajjanara avidyava CEdisuva tAmasarige aj~jAnAdigaLa koTTu
avaravara sAdhanava mADisuva||13||
gOvugaLoLu udgIthaniha prasthAva hiMkAra eraDU rUpadi avyAjagaLoLihanu
pratihArAhva hayagaLoLu
jIvanaprada nidhana manujaroLu I vidhadoLiha panca sAmava
JAva JAvake nenevarige aidisanu janmagaLa||14||
yuga catuShTayagaLali tAniddu yuga pravartaka dharma karmagaLige pravartaka
vAsudEvAdi IrereDu rUpa tegedukonDu
yugAdi kRutu tA yuga pravartakayenisi
dharma praGaTakanu tAnAgi BakutarigIva saMpadava||15||
taleyoLiha nArAyaNanu ganTalaDi oDaloLu vAsudEvanu
baladaliha pradyumna eDa BAgadali aniruddha
keLagina angadi sankaruShaNana tiLidu
I pari sakala dEhagaLoLage pancAtmakana rUpava nODu konDADu||16||
tanu viSiShTadi ippa nArAyaNanu kaTi pAda anta sankaruShaNanu
Sira jaGana antavAgiha vAsudEvAKya
animiSha ISha aniruddha pradyumnannu eDadi bala BAgadi
cintaneya mALparige unTe mailige vidhi niShEdhagaLu||17||
padumanABanu pANiyoLagiha vadanadali hRuShikESa
nAsika sadanadali SrIdharanu jihveyoLu ippa vAmananu
vidita nEtradi trivikramanu tvakdESadoLagiha
karNadali ippanu viShNunAmaka SravaNanendenisi||18||
manadoLiha gOvinda mAdhava dhanapa saKa tatvadoLu
nArAyaNa mahattatvadoLu avyaktadoLu kESavanu
initu rUpava dEhadoLu cintaneya gaiva mahAtmaru
iLeyoLu manujaru avaralla amararE sari harikRupAbaladi||19||
neladoLu ippanu kRuShNa rUpadi jaladoLu ippanu hariyenisi
SiKiyoLage ippanu paraSurAma upendranu endenisi ellaroLu ippanu janArdhananu
bAndaladoLu acyuta gandha narahari
poLeva adhOkShaja rasagaLoLu rasarUpa tAnAgi||20||
rUpa puruShOttamanu sparSa prApakanu aniruddha
Sabdhadi vyApisiha pradyumna upasthadi vAsudEvaniha
tA poLeva pAyusthanAgi jayApatiyu sankaruShaNanu
susthApakanenisi pAdadoLu dAmOdaranu poLeva||21||
catura viMSati tattvadoLu SrIpatiye aniruddhAdi rUpadi
viditanAgiddu aKila jIvara saMhananadoLage
pratatiyandadi suttu suttuta pitRugaLige tarpakanenisikonDu
atuLa mahimanu ShaNNavati nAmadali nelesihanu||22||
catura viMSati tattvadoLu tatpatigaLenisuva brahma muKa dEvategaLoLu
hannondu nUraivatteraDu rUpa
vitatanAgiddella jIvara jatana mADuva gOsuga
jagatpatige EnAdarU prayOjanavillavidarinda||23||
indirAdhava Sakti modalAda oMdadhikadaSa rUpadindali
poMdihanu sakala indriyagaLalli puruShanAmakanu
suMdaraprada pUrNaj~jAnAnandamaya
citdEhadoLu tAnondarekShaNa vagaladale paramAptanu Agippa||24||
Aradhika daSa rUpadindali tOruta ippanu viSva
liMgaSarIradoLu taijasanu prAj~janu turyanAmakanu
mUraidu rUpagaLa dharisutali Iraidu karaNadoLu mAtradi
Kaira SiKi jala BUmiyoLagihanu AtmanAmadali||25||
manadoLu ahaMkAradoLu cintaneya mALpudu antarAtmana
Gana sutattvadi paramana avyaktadali j~jAnAtma
initu pancASayvaraNa vEdyana ajAdyaivattu mUrtigaLanu
sadA sarvatra dEhagaLalli pUjipudu||26||
catura viMSati tattvadoLu tatpatigaLenisuva brahma muKa dEvategaLoLu
hadimUru sAvirada enTu nUradhika catura viMSati rUpadindali
vitatanAgiddu ellaroLu
prAkRuta puruShanaMdadali pancAtmakanu ramisuvanu||27||
kESavAdi sumUrti dvAdaSa mAsa punDragaLalli
vEdavyAsa aniruddhAdi rUpagaLu Aru RutugaLali
vAsavAgihanendu triMSati vAsaradi satkarma dharma nirASeyindali mADu
karuNava bEDu konDADu||28||
lOShTha kAncana lOha Sailaja kAShTha modalAda aKiLa jaDa
paramEShThi modalAda aKiLa cEtanaroLage anudinavu
cEShTegaLa mADisuta tiLisade prEShTanAgiddu ellarige
sarvEShTa AdAyaka santaisuvanu sarva jIvaranu||29||
vAsudEvAniruddha rUpadi puM SarIradoLihanu sarvada
strI SarIradoLihanu sankaruShaNanu pradyumna
dvAsuparNa Sruti vinuta sarvasunila nArAyaNana
sadupAsaneya gaivararu jIvanmuktaru enisuvaru||30||
tannananta ananta rUpa hiraNya garBAdigaLoLage
kAruNya sAgara harahi avaravara aKiLa vyApAra
bannabaDadale mADi mADisi dhanyarenisi
samasta divijara puNyakarmava svIkarisi suKavittu pAlisuva||31||
sAgaradoLiha nadiya jala BEda AgasadoLu ippa abda ballavu
kAge gubbigaLu ariya ballavE nadiya jalasthitiya
BOgivara pariyanka SayananoLu I guNatraya baddha jagavihudu
Agamaj~jaru tiLivaru aj~jAnigaLige aLavaDadu||32||
karaNa guNa BUtagaLoLage tadvaranenipa brahmAdi divijaroLaritu
rUpa catuShTayagaLa anudinadi sarvatra smarisuta anumOdisuta higguta
paravaSadi pADuvarige tannirava tOrisi
Bavavimuktara mADi pOShisuva||33||
mUlarUpanu manadoLiha SravaNa AliyoLagiha matsya
kUrmanu kOlarUpanu tvakrasanadoLage ippa narasiMha
bAlavaTu vAmananu nAsika nALadoLu vadanadali BArgava
vAliBanjana hastadoLu pAda SrI kRuShNa||34||
jina vimOhaka buddha pAyuga danuja Banjana kalki mEDradi
initu daSa rUpagaLa daSa karaNangaLali tiLidu
anuBavipa viShayangaLu kRuShNArpaNavenalu kaikoMba
vRujina ardana vara jagannAtha viThala viSva vyApakanu||35||
************
No comments:
Post a Comment