ರಾಗ ಶಂಕರಾಭರಣ ಆದಿತಾಳ
Audio by Mrs. Nandini Sripadಶ್ರೀ ವಾದಿರಾಜರ ಕೃತಿ
ತೇಜಿಯೇರಿ ಮೆರೆದು ಬಂದ ಕಸ್ತೂರಿ ರಂಗ ।
ರಾಜಬೀದಿಯೊಳಗಿಂದ ॥ ಪ ॥
ಸುತ್ತಮುತ್ತ ಸಾವಿರಾರು ಸಾಲು ದೀವಟಿಗೆ ।
ಹತ್ತುದಿಕ್ಕಿಲಿ ಬೆಳಗುತಿಹ ಹಗಲುಬತ್ತಿಗಳು ॥
ಇತ್ತೆರಪು ಭೂಸುರರು ಸಾಲುಗಟ್ಟಿ ನಿಂತಿರಲು ।
ಮತ್ತೆ ಸಭಾದಿಂದ ತೇಜಿಯ ಮೆಲ್ಲನೆ ನಡೆಸುತ್ತ ಜಾಣ ॥ 1 ॥
ತಾಳ ಶಂಖ ಭೇರಿ ತಮ್ಮಟೆ ತಂಬೂರಿ ಮೊದಲಾದ ।
ಮೇಲು ಪಂಚಕಂಗಳೆಲ್ಲ ಮಿಗೆ ಪೊಗಳಲು ॥
ಗಾಳಿ ಗೋಪುರದ ಮುಂದೆ ರಾಯಬಿಡದಂತೆ ಸುತ್ತ ।
ಧೂಳುಗಳೆಬ್ಬಿಸಿ ವೈಹಾಳಿನಿಕ್ಕುತ ಜಾಣ ॥ 2 ॥
ಮುತ್ತಿನ ತುರಾಯಿ ಅಂಗಿ ಮುಂಡಾಸು ।
ತತ್ಥಳಿಪ ವಜ್ರಕೆಂಪಿನ ತಾಳಿ ಚೌಕಳಿ ॥
ಮುತ್ತಿನ ಕುಂಡಲವಿಟ್ಟು ಮೋಹಿಸುತ ಬೀದಿಯೊಳು ।
ಕತ್ತಿಯ ಉಡಿಯಲ್ಲಿ ಕಟ್ಟಿ ಕೈಯಲಿ ತೇಜಿಯ ಪಿಡಿದು ॥ 3 ॥
ರಂಭೆ ಮೊದಲಾದ ದೇವ ರಮಣಿಯರು ।
ಕುಂಭದಾರತಿಯೆತ್ತಿ ಕೂಡಿ ಪಾಡಲು ॥
ಶಂಭು ಮುಖ್ಯ ನಿರ್ಜರರೆಲ್ಲ ಸ್ವಾಮಿ ಪರಾಕೆಂದೆನುತ ।
ಅಂಬುಜಭವಾದಿಗಳ ಆಳಿದ ಶ್ರೀರಂಗಧಾಮ ॥ 4 ॥
ವೇದಘೋಷದಿಂದ ವಿಪ್ರರು ಸ್ತುತಿಸಲು ।
ಮೋದದಿಂದ ಗಾಯಕರು ಹಾಡಿ ಪಾಡಲು ॥
ಹಾದಿಬೀದಿಯಲ್ಲಿ ನಿಂತು ಸಜ್ಜನರಿಗೆಲ್ಲ ದೇವ ।
ಆದರದಿಂದಿಷ್ಟಾರ್ಥವಿತ್ತು ಮೋದದಿಂದ ಮನ್ನಿಸುವ ॥ 5 ॥
ಹಚ್ಚನೆ ಹೆಸರುಬೇಳೆ ಹಾಲುಕೆನೆಗಳು ।
ಮುಚ್ಚಿ ತಂದ ಕೆನೆಮೊಸರು ಮೀಸಲು ಬೆಣ್ಣೆಯು ॥
ಅಚ್ಚ ತುಪ್ಪದಿ ಪಕ್ವವಾದ ಅತಿರಸ ಹುಗ್ಗಿಗಳು ।
ಮೆಚ್ಚಿವುಂಡು ಪಾನಕ ನೀರುಮಜ್ಜಿಗೆಗಳನೆ ಕುಡಿದು ॥ 6 ॥
ಸಣ್ಣಮುತ್ತು ತೆತ್ತಿಸಿದ ಸಕಲಾತಿ ಗೊಂಡ್ಯ ।
ಹೊನ್ನ ತೆತ್ತಿಸಿದ ಹೊಸ ಹೊಳೆವ ಸೊಬಗಿನ ॥
ಉನ್ನಂತ ಗುಣರಾಯ ಉತ್ತಮ ರಾಜಾಶ್ವವೇರಿ ।
ಎನ್ನ ಹಯವದನ ರಂಗ ಎಲ್ಲರಿಗಿಷ್ಟಾರ್ಥಕೊಡುವ ॥ 7 ॥
********
No comments:
Post a Comment