Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ
ಗರ್ಭವಾಸ ಸುಳಾದಿ
( ಭೌತಿಕ ದೇಹ , ಗರ್ಭ ಉತ್ಪತ್ತಿ ಮತ್ತು ಯಾತನಾ )
ರಾಗ ವರಾಳಿ
ಧ್ರುವತಾಳ
ಆಗರ ಸತಿ ಸುತ ಸೌಖ್ಯವೆಂದೆಂಬೊ ದುಃಖ
ಸಾಗರದೊಳಗೆ ಮುಳುಗಿ ಇರಳು ಹಗಲು
ಲೋಗರಗೋಸುಗ ಚಿಂತಿಸಿ ಕಂಡ ಕಡೆ
ವಾಗರಕೆ ತಿರುಗಿ ಬೆಂಡಾಗುವೆ
ಭೋಗ ರಹಸ್ಯದಿಂದ ಭ್ರಮಣನಾಗಿ ಪ್ರ -
ಜಾಗರವನ್ನು ಮರೆದು ಮಂದನಾದೆ
ಭಾಗಾರಮಾಡಿದರು ಸತ್ಸಾಧನ ಧರ್ಮ
ಯೋಗಾರಾಧನೆ ಕಾಣೆನಕಟಕಟ
ರಾಗರಾಗದಿಂದ ನಾನು ನನ್ನದು ಯೆಂಬೊ
ಈಗಾರಣ್ಯದ ಮಧ್ಯ ಸುತ್ತುವೆನೊ
ಹಾಗರ ಹಾಗದಾಸೆ ಮಲದಿಂದ ಮಾತು ಪೇಳಿ
ವೇಗ ರಾಜ್ಯ ಸಂಚರಿಸಿ ಜಠರ ಪೊರೆದೆ
ನಾಗರಾಜನ ಪೆಡೆಯ ಛಾಯಾದಲ್ಲಿದ್ದು ವೈ-
ಭೋಗದಾಸೆಯ ಬಯಸುವ ಮನುಜನಾಹೆ
ಸಾಗರಶಾಯಿ ನಮ್ಮ ವಿಜಯವಿಠ್ಠಲ ಸ್ವಾಮಿ
ಪೂಗಾರರಂತೆ ಮೆಚ್ಚಿಸದೆ ಭವಸಾರ್ದೆ ॥ 1 ॥
ಮಟ್ಟತಾಳ
ಸ್ವರ್ಗ ನರಕ ಭೂಮಿ ಚರಿಸಿದೆ ಸರ್ವದಲ್ಲಿ
ಮುಗ್ಗಿ ಮುಂಗಾಣದೆ ನಾನಾ ಪೊಟ್ಟಿಯಲ್ಲಿ
ವೆಗ್ಗಳಿಸಿ ಪೊಕ್ಕು ವ್ಯಥೆ ಪಟ್ಟು ಮತ್ತೆ
ನುಗ್ಗಾದೆನೊ ಬಲು ದೇಹವನೆ ಧರಿಸಿ
ತಗ್ಗಿ ಪೋಗಲಿಲ್ಲ ತಗಲಿದ ಈ ಕರ್ಮ
ಸುಗ್ಗಿಯೊಳಗೆ ಬಿದ್ದು ಸುಖದುಃಖವನುಂಬೆ
ಹಿಗ್ಗುವೆನೊ ವಿಷಯಾ ಹಿತವೆಂದು ನಂಬಿ
ಮಗ್ಗಲೊಳಗೆಯಿದ್ದ ಮಾರಿಯ ಕಾಣದಲೆ
ಸ್ವರ್ಗ ನರಕ ಭೂಮಿ ಚರಿಸಿದೆ ಕರುಣಾದೆ (ಕಾಣದೆ)
ಕಗ್ಗತ್ತಲೆ ಮಧ್ಯ ಸಿಲ್ಕಿ ಬಳಲುತಿಪ್ಪೆ
ಅಗ್ಗಳಿಕಾದೈವ ವಿಜಯವಿಠ್ಠಲ ಎನ್ನ
ಯೋಗ್ಯತಿ ಬಲ್ಲವನೆ ಬಿನ್ನಪವನು ಕೇಳು ॥ 2 ॥
ತ್ರಿವಿಡಿತಾಳ
ಗಗನಾದಿಂದಲಿ ಮೇಘ ಪ್ರವೇಶವನು ಮಾಡಿ
ಮಿಗೆ ವರುಷದ್ವಾರದಲಿ ಧರಿಗೆ ಯಿಳಿದು
ಬಗೆ ಬಗೆ ಫಲದಲ್ಲಿ ಪೊಕ್ಕು ಪಕ್ವವಾಗಿ
ಹಗಲಿರುಳು ಬಳಲಿ ಅನ್ನಮುಖದಿಂದ
ವಿಗಡ ಮನುಜಾನಲ್ಲಿ ಪ್ರವಿಷ್ಠನಾಗಿದ್ದು
ಮಗುಳೆ ರೇತೋ ಕಣರೂಪದಿಂದ
ಜಿಗಳಿ ಮೂತ್ರದ್ವಾರ ಪೊಕ್ಕೆನಯ್ಯಾನಕಟ
ತ್ರಿಗುಣದಲಿ ಬೆಳೆವಾ ಪರಿಯೇನಂಬೆ
ರಗಳೆ ವೊಂದು ದಿವಸ ತ್ರಿರಾತ್ರಿಗೆ ಕಲಿಲವು
ಬಗೆ ಪಂಚರಾತ್ರಿಗೆ ಬೊಬ್ಬುಳಿಯಂತೆ
ಸೊಗಡು ದಶರಾತ್ರಿಗೆ ಪೇಶಾಂಡವು
ತಿಂಗಳಿಗೆ ಶಿರಸು ಬಾಹು ವಿಗ್ರಹ ರೂಪ
ಮುಗಿದ ತರುವಾಯ ಮೂರನೆ ತಿಂಗಳಿಗೆ ರೋಮ
ಉಗುರು ಚರ್ಮಸ್ಥಿ ನಿರ್ಮಾಣ ಛಿದ್ರ
ಚಿಗಿವ ಧಾತುಗಳು ನಾಲ್ಕನೆ ತಿಂಗಳಿಗೆನ್ನಿ
ದುಗುಡವಾಹದು ಐದನೆ ಮಾಸಕ್ಕೆ ಹಸಿವಿ
ತ್ರಿಗುಣಾತೀತ ನಮ್ಮ ವಿಜಯವಿಠ್ಠಲರೇಯ
ಯುಗಳ ಭಾವದಿಂದಲಿ ಈ ಪರಿ ಚರಿಸುವೆನು ॥ 3 ॥
ಅಟ್ಟತಾಳ
ಆರನೆ ಮಾಸಕ್ಕೆ ವಾಮಭಾಗದಿಂದ
ಭೋರನೆ ದಕ್ಷಣ ಭಾಗಕ್ಕೆ ಆವರ್ತಿ
ಈ ರೀತಿಯಲಿ ಶ್ರಮ ಜರಾಯುಜನಾಹ
ಮೇರೆಯಿಲ್ಲದೆ ಸಪ್ತಮಾಸಕ್ಕೆ ಜೀವಕ್ಕೆ
ಪೂರ್ವಜನ್ಮದ ಕರ್ಮ ಸ್ಮರಣೆವುಂಟು
ಭಾರಿ ಭಾರಿಗೆ ನೆನಿಸುವ ಸುಖ ದುಃಖ
ಪಾರಗಾಣದಲಿಪ್ಪ ತಿಂಗಳೆಂಟಕ್ಕೆ ಕಟು
ಕ್ಷಾರ ತೀಕ್ಷ್ಣ ಉಷ್ಣ ಸೀತಾಮ್ಲರಸದಲ್ಲಿ ವಿ -
ಕಾರ ಉಲ್ಬಣ ಯಾತನೆ ಬಾಧೆಯಾಗೋದು
ಭೋರನೆ ಒಂಭತ್ತು ತಿಂಗಳಿಗೆ ಕ್ರಿಮಿ
ಕ್ರೂರ ಕ್ಷತದಿಂದ ಸರ್ವಾಂಗ ಭಗ್ನದಿ
ಮೋರೆ ಕೆಳಗಾಗಿ ಮೊಳಕಾಲಸಂದಿಲಿ
ಘೋರ ನರಕ ಪೋಲುವ ಗರ್ಭದಲಿ ಬಿದ್ದು
ನಾರುವ ದುರ್ಗಂಧ ಸನ್ನಿರುದ್ಧವಾಗಿ
ದ್ವಾರಾಭಿ ಮುಖದಿಂದ ಅಳಲಿ ಬಳಲುತ
ಶಾರೀರ ಮುರಿದು ಮುಟ್ಟಿಗೆ ಮಾಡಿ ಕಟ್ಟಿದ
ಚೋರನಂದದಿಯಿಪ್ಪ ನಿರ್ಭಂದ ತೊಲಗದು
ಆರಿಗೆ ದೂರಲಿ ಆರು ಬಿಡಿಪರಿಲ್ಲ
ಆರಿಂದ ನಿರ್ವಹಿಸಿ ಆರು ಚಿಂತಿಪರಿಲ್ಲ
ಆರು ಎನಗೆ ಗತಿ ಕಾಣೆನೊ ಶೌರಿ ಮು -
ರಾರಿ ಶ್ರೀವಿಜಯವಿಠ್ಠಲರೇಯ
ತಾರಿ ಬೆಂಡಾಗುವ ತ್ರೈತಾಪ ವೋಡಿಸೋ ॥ 4 ॥
ಆದಿತಾಳ
ಸೂತಿಕ ಘಾಳಿಯಿಂದ ಹೊಡಿಸಿಕೊಂಡು ಬಲು
ಭೀತಿಗಾತುರನಾಗಿ ಸಂಕಟ ಬಟ್ಟು ಅಧೋ -
ಪೂತಿ ಗಂಧದಿಂದ ಪೊರಟು ಪ್ರಳಾಪದಿಂದ
ಭೂತಳದೊಳು ಬಿದ್ದು ಹೊರಳುವೆನೊ
ವಾತ ಶೈತ್ಯ ಪೈತ್ಯಾಧಾತುವಿನಲ್ಲಿ ಹೀನ
ಆತುರವಂತನಾಗಿ ಭವದಲ್ಲಿ ಮುಣಗಿ ಸರ್ವ
ಜಾತಿಯಲ್ಲಿ ಪುಟ್ಟಿಸುವಿ ಈ ಪ್ರಕಾರದಿ ಗರ್ಭ
ಯಾತನೆ ಪೇಳಲಳವೆ ಅಹೊ ಅಹೊ ಅಯ್ಯೊ
ಪಾತಕ ಮತಿಯಿಂದ ಪುಣ್ಯವ ಕಳಕೊಂಡು
ಜ್ಞಾತನುಷ್ಠಾನ ಮರದೆ ಮಮತೆಯಿಂದ
ಆತುಮಾ ಅಹಂ ಮಮತೆಯಲ್ಲಿ ಸಂಚರಿಸಿ ಕಾಲಾ -
ತೀತನಾದೆ ಸ್ವಧರ್ಮ ತೊರೆದು
ಮಾತು ಲಾಲಿಸಿ ಕೇಳೊ ಹೃದಯಾಕಾಶ ನಾಮಕನೆ
ಮಾತುರ ಕಾಲವಾದರೆ ಪೋತತನ ಧರಿಸಿ ಈ
ಮಾತೆ ಗರ್ಭದಲ್ಲಿ ಒಲ್ಲೆ ಒಲ್ಲೇ
ಭೂತಾದಿ ವರ್ತಮಾನ ಬಲ್ಲ ವೈಕುಂಠರಮಣ
ಭೌತಿಕ ಕಾಯವೆ ಬಿಡಿಸು ನಿನ್ನ ನಾಮವೆ ನುಡಿಸು
ಜೋತಿರ್ಮಯ ಮೂರ್ತಿ ವಿಜಯವಿಠ್ಠಲರೇಯ
ಕೌತುಕವಾಗಿದೆ ನಿನ್ನ ವ್ಯಾಪಾರ ನಿತ್ಯ ॥ 5 ॥
ಜತೆ
ಪುಟ್ಟಿಸುವದು ಬಿಡಿಸೊ ಪೂರ್ಣ ಕರುಣಾಂಬುಧೆ
ವಿಠ್ಠಲ ವಿಜಯವಿಠ್ಠಲ ಮತ್ಪ್ರೀಯಾ ॥
*******
No comments:
Post a Comment