Monday 9 December 2019

ಅಚ್ಯುತಾನಂತನ ಕಂಡೆ vijaya vittala ankita suladi ಪಾಂಡುರಂಗ ಸುಳಾದಿ ACHCHYUTAANANTANA KANDE PANDURANGA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಪಾಂಡುರಂಗ ಸುಳಾದಿ
( ದಾಸರು ಪಾಂಡುರಂಗನ ಯಾತ್ರೆಗೆ ಹೋದಾಗ ರಚಿಸಿದ್ದು )

ರಾಗ ಮಧುವಂತಿ

ಧ್ರುವತಾಳ

ಅಚ್ಯುತಾನಂತನ ಕಂಡೆ 
ಸಚ್ಚಿದಾನಂದೈಕ ಸರ್ವೋತ್ತುಮನ ಕಂಡೆ 
ಅಚ್ಚಮಲ್ಲಿಗೆ ವನಮಾಲಾನ ಕಂಡೆ 
ಪಚ್ಚ ಕಡಗವಿಹ್ಯರಾ ಕಂಡೆ 
ನೆಚ್ಚಿದ ಭಕ್ತರ ಪೊರೆವ ದಾತನ ಕಂಡೆ ಅಚ್ಯುತಾನಂತನ 
ಅಚ್ಚರಿಯಾ ದೈವಾವೆ ವಿಜಯವಿಠ್ಠಲರೇಯಾ 
ನಿಚ್ಚಾ ಪಂಢರಪುರಿವಾಸಾ ರಂಗನ ಕಂಡೆ 
ವಾಸುದೇವನ ಕಂಡೆ ॥ 1 ॥

ಮಟ್ಟತಾಳ

ವಾಸುದೇವನ ಕಂಡೆ ವಾಮನನಾ ಕಂಡೆ 
ಕ್ಲೇಶನಾಶನ ಕಂಡೆ ಕೇಶವನಾ ಕಂಡೆ 
ವಾಸವಾನುಜನಾಗಿ ವಾಗೀಶಪಿತನ ಕಂಡೆ 
ಶ್ರೀಶ ವಿಜಯವಿಠ್ಠಲೇಶ ಚಂದ್ರಭಾಗಾ 
ವಾಸ ರಂಗನ ಕಂಡೆ ವರನಾ ಕಂಡೆ ॥ 2 ॥

ತ್ರಿವಿಡಿತಾಳ

ಕುಲಾಯಿ ಶಿರದಲ್ಲಿ ಇಟ್ಟ ಸೊಬಗು ಕಂಠ - 
ದಲ್ಲಿ ಮೆರೆವ ಎಳೆ ತುಳಸಿಮಾಲೆ ನವ - 
ಮಲ್ಲಿಕಾ ಸುರಗಿ ಜಾಜಿ ದಂಡೆ, ಉಡಿ - 
ಯಲ್ಲಿ ಗುಲ್ಲಿಯ ಚೀಲಾ ಸಿಗಿಸಿಕೊಂಡಾ ಗೋವ - 
ಳೆಲ್ಲಾರು ಒಂದಾಗಿ ತುರುವಿಂಡು ಕಾಯುವುತಾ 
ಇಲ್ಲಿಗೆ ಬಂದಾ ಶ್ರೀವಲ್ಲಭಾ ಯದುಪ 
ಚಲ್ಲಾಗಂಗಳ ಚಲುವ ವಿಜಯವಿಠ್ಠಲ ಸ್ವಾಮಿಯ 
ಎಲ್ಲಿಂದ ಬಂದ ಮತ್ತೆಲ್ಲಿಪ್ಪನ ಕಂಡೆ ॥ 3 ॥

ಅಟ್ಟತಾಳ

ಗೋಪಿಯ ನಂದನ ಗೋಪಿಯರರಸೆ 
ಗೋಪಾಲರ ಒಡಿಯಾ ಸಂದೀಪನ ಪ್ರೀಯಾ 
ದ್ರೌಪದಿಯಾ ಮಾನವ ಪರಿಪಾಲಕಾ 
ಕೋಪ ಕಾಳಿಂಗನ ತಾಪನಾಶನ ಸಂ - 
ತಾಪ ಹರ ನಮ್ಮ ವಿಜಯವಿಠ್ಠಲನ 
ಈ ಪಾಂಡುರಂಗಾ ಕ್ಷೇತ್ರದಲಿ ಕಂಡೆ ॥ 4 ॥

ಆದಿತಾಳ

ಮನುಜನಾಗಿ ಧನುವನು ಮುರಿದು 
ದನುಜನ ಕಾಲಿಲೆ ಒರೆಸಿದೆ 
ಮನುಜನಾಗಿ ಮಡಿಯನ್ನು ಉಟ್ಟು 
ತನುವಿಗೆ ಗಂಧವ ಪೂಸಿದಾ 
ಮನುಜನಾಗಿ ಹರನ ಸೋಲಿಸಿ 
ತನುಜ ತನುಜನ್ನ ಬಿಡಿಸಿದ 
ಮನುಜನಾಗಿ ಮನುಜ ಧರ್ಮವ 
ಜನರಿಗೆ ಸೋಜಿಗ ತೋರಿದ 
ಮನುಜನಲ್ಲ ಇದು ಮಾಯಾದ ಬೊಂಬೆ 
ಘನ ವಿಜಯವಿಠ್ಠಲನ ಕಂಡೆ 
ಮನುಜನಾಗಿ ಸೋಳಾ ಸಾಸಿರ ಗೋಪೇರ 
ಮನಸಿಗೆ ಒಪ್ಪಿದ ಮನುಜನಾಗಿ ॥ 5 ॥

ಜತೆ

ಆವಾಗ ಬಿಡದಿಲ್ಲಿ ಆಡುವವನ ಕಂಡೆ 
ದೇವೇಶಾ ವಿಜಯವಿಠ್ಠಲರಾಯನ ಕಂಡೆ ॥


***********

No comments:

Post a Comment