ಶ್ರೀ ವ್ಯಾಸರಾಜ ವಿರಚಿತ ಕ್ಷಮಾಪಣಾ ಸುಳಾದಿ
ರಾಗ ನಾಟ
ಧ್ರುವತಾಳ
ಎನ್ನ ಮಹಾದೋಷಂಗಳು ಅನಂತವಾದರು ಅಂಜೆ ನಾ
ನಿನ್ನ ಕಲ್ಯಾಣ ಗುಣಗಳು ಅನಂತನಂತವಾಗಿರೆ
ಎನ್ನ ಅನ್ಯಥ ತಪ್ಪುಗಳು ಇನ್ನನಂತವಾದರೆ ಅಂಜೆ ನಾ
ನಿನ್ನಪಾರ ಕರುಣಾ ಅನಂತಾನಂತವಾಗಿರೆ ಬಾ -
ವನ್ನ ಸಾರಿದ ಬೇಂವು ತಾ ಬಾವನ್ನವಲ್ಲದೆ ಬೇವಹದೆ
ತನ್ನ ಶಿಶು ಮಾಡಿದ ತಪ್ಪಿಗೆ ಆ ಜನನಿ ಕೈ ಬಿಡುವಳೆ
ನಿನ್ನವರನೆಂಬೊದೊಂದೆ ಸಾಲದೆ
ಎನ್ನ ಜನುಮ ಜನುಮಕೆ ಸಿರಿಕೃಷ್ಣ ॥ 1 ॥
ಮಠ್ಯತಾಳ
ಹಿಂದಣ ಇಂದಣ ಮುಂದಣ ಚಂದಾ
ಚಂದದ ಕರ್ಮನಂತ ಒಂದಾ -
ನೊಂದು ಕರ್ಮಾನುಂಬ ಕಾಲದೊಳಗೆ ಮ -
ತ್ತೊಂದು ಕರ್ಮಾ ಬಂದೊದಗುತಲಿದೆ
ಎಂದು ತೀರುವದಯ್ಯಾ ಎಂದು ತೀರುವದಯ್ಯಾ
ತಂದೆ ಕೃಷ್ಣ ನಿನ್ನ ಸಂದರುಶನವಿಲ್ಲದೀ -
ದಂದುಗಾ ನೀಗುವಾ ಬಗೆ ಬೇರಿಲ್ಲಾ ॥ 2 ॥
ತ್ರಿಪುಟತಾಳ
ಶ್ರುತಿ ಸ್ಮೃತಿ ಸಂತತಿಗಳು
ತುತಿಸಿ ಬಣ್ಣಿಸಿ ನೆಲೆಯಗಾಣವು
ದಿತಿ ಸುತಾವೇಶದಿಂದಲಿ
ಅತಿ ಬೈದ ಶಿಶುಪಾಲಗೆ ಸ -
ದ್ಗತಿಯ ನೀನಿತ್ತ ದಯದಿ ಸಿರಿಕೃಷ್ಣ ॥ 3 ॥
ಅಟ್ಟತಾಳ
ಆದ್ಯಪರಾಧ ಮಿಥ್ಯಾಜ್ಞಾನ
ದ್ವಿತಿಯ ಹರಿಯ ವಿಸ್ಮರಣೆ
ತೃತಿಯ ನಿಷೇಧ ಕರ್ಮ ಕರಣ ವಿಹಿತಾಕರಣ
ಚತುರ್ಥ ಅಯೋಗ್ಯರಲ್ಲುಪದೇಶ
ಈಯಪರಾಧಕ್ಕೆಲವೊ ನಾನೆ ? ಸಿರಿಕೃಷ್ಣ ॥ 4 ॥
ಏಕತಾಳ
ಭಕುತಿ ಎಂಬ ಪ್ರಸಕುತಿ ಎನಗಿಲ್ಲ
ಜ್ಞಾನವೆಂಬುದು ಕಾಣಿನೋ
ಆಚಾರದಾ ವಿಚಾರವಿನಿತಿಲ್ಲ
ಜ್ಞಾನವೆಂಬುದು ಕಾಣೆನೋ
ವೈರಾಗ್ಯದ ವಾರುತಿ ದೊರಕೊಳ್ಳದು
ಜ್ಞಾನವೆಂಬುದು ಕಾಣೆನೋ
ಆನೊಬ್ಬನೆ ನಿನ್ನವರೊಳು ಸಿರಿಕೃಷ್ಣ
ಮಾನುಷ ಪಶುವಿನ ದಯದಿಂದ ನೋಡೊ ॥ 5 ॥
ಜತೆ
ನೆಚ್ಚಿದೆನಯ್ಯಾ ಕೃಷ್ಣ ಅಚ್ಚಾ ಕರುಣಿ ಎಂದು
ಎಚ್ಚೆಂಗೆದೆಯಾ ಲೊದ್ದಂಗೆ ಮುಕುತಿ ಇತ್ತೆ ॥
*************
ಶ್ರೀವ್ಯಾಸರಾಜರ ಸುಳಾದಿ ಶ್ರೀ ಕೃಷ್ಣನ ಮೇಲೆ
ಎನ್ನ ಮಹಾದೋಷಗಳನಂತವಾದರೆ ಅಂಜೆ ನಾನು
ನಿನ್ನಯ ಕರುಣ ಅನಂತಾನಂತವಾಗೆ
ನಿನ್ನ ಕಲ್ಯಾಣಗುಣ ಅನಂತಾನಂತವಾಗೆ
ಬಾವನ್ನವ ಸೇರಿದ ಬೇವು ಬಾವನ್ನವಲ್ಲದೆ ಬೇವಾಹುದೆ
ತನ್ನ ಶಿಶುವಿನ ತಪ್ಪಿಗೆ ಜನನಿ ಕೈಯ ಬಿಡುವಳೆ
ನಿನ್ನವನೆನಿಸುವದೊಂದೆ ಸಾಲದೆ ಎನಗೆ
ದಯಾಸಿಂಧು ಶ್ರಿ ಕೃಷ್ಣ ಒಂದೆ ಸಾಲದೆ ಎನಗೆ || ೧ ||
ಮಠ್ಯತಾಳ
ಹಿಂದಣ ಇಂದಿನ ಮುಂದಣ
ಚಂದಾಚಂದದ ಕರ್ಮವನಂತಾನಂತ
ಒಂದೊಂದನುಂಬ ಕಾಲದೊಳಗೆ ಮ-
ತ್ತೊಂದನಂತಾನಂತ ಕರ್ಮ ಕೂಡುತಲಿವೆ
ಅಯ್ಯಯ್ಯಯ್ಯಯ್ಯ ಇದೆಂದು ತೀರುವುದಯ್ಯ
ತಂದೆ ಶ್ರಿ ಕೃಷ್ಣ ಸಂದರುಶನವಿಲ್ಲದೆ ಈ
ದಂದುಗವ ನೀಗುವ ಬಗೆ ಬೇರಿಲ್ಲ || 2 ||
ತ್ರಿಪುಟತಾಳ
ಶ್ರುತಿಗಳು ಬಣ್ಣಿಸಿ ಸ್ತುತಿಸಿ ಸ್ತುತಿಸಿ ಅಂದದ ನಿನ್ನ
ದಿತಿಸುತಾವೇಶದಿ ಸಭೆಯೊಳಗತಿ
ಅತಿಬೈದ ಶಿಶುಪಾಲಗೆ ಮುಕುತಿಯ-
ನಿತ್ತೆ ಶ್ರಿ ಕೃಷ್ಣ ನಿನ್ನ ಭಕುತರಿಗೆಲ್ಲ
ಮಿತಿಯುಂಟೆ ನಿನ್ನ ದಯಕೆ ಹರಿ ಹರಿ
ನಿನ್ನ ಭಕುತರಲಿ ಮಿತಿಯುಂಟೆ ನಿನ್ನ ದಯಕೆ || 3 ||
ಅಟ್ಟತಾಳ
ಆದ್ಯಪರಾಧ ಮಿಥ್ಯಾಜ್ಞಾನ
ದ್ವಿತೀಯ ಹರಿಯ ವಿಸ್ಮರಣ
ತೃತೀಯ ನಿಷಿದ್ಧಾವಿಹಿತಾಚರಣ
ಚತುರ್ಥ ಅಯೋಗ್ಯನಲ್ಲುಪದೇಶಕರಣ
ಕರುಣಾಕರ ಈ ಅಪರಾಧಕೆಲ್ಲ ಶ್ರಿ ಕೃಷ್ಣ
ನೀ ದಯದಿಂದ ನೋಡಯ್ಯ || 4 ||
ಏಕತಾಳ
ಭಕ್ತಿಲೇಶದ ಪ್ರಸಕ್ತಿ ಎನಗಿಲ್ಲ
ಜ್ಞಾನವೆಂಬುದನೇನ ಕಾಣೆ ನಾ
ವೈರಾಗ್ಯದ ವಾರುತೆ ಸೇರದೆನಗೆ
ಆಚಾರ ವಿಚಾರ ಎನಗಿಲ್ಲ
ಜ್ಞಾನವೆಂಬುದನೇನ ಕಾಣೆ ನಾ
ಆನೊಬ್ಬನೆ ಕೃಷ್ಣ ನಿನ್ನವರೊಳು
ಮಾನುಷಪಶು ದಯೆಯಿಂದೆನ್ನ ನೋಡಯ್ಯ || 5 ||
ಜತೆ
ಮೆಚ್ಚಿದೆನೊ ಕೃಷ್ಣ ಅಚ್ಚ ಕರುಣಿಯೆಂದು
ಎಚ್ಚೆಂಗೆದೆಯನೊದ್ದಂಗೆ ಮುಕುತಿಯನಿತ್ತೆ
********
No comments:
Post a Comment