Sunday, 8 December 2019

ಚಿಂತನೆ ಮಾಡು ಮನವೆ vijaya vittala suladi ಅಜಾದಿ ಸುಳಾದಿ CHINTANE MAADU MANAVE AAJAADI SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ಕೃತ  ಅಜಾದಿ ಸುಳಾದಿ 
( 51 ಅಕ್ಷರಗಳ ವಿವರ , ಅಲ್ಲಿಪ್ಪ ಹರಿರೂಪ )

 ರಾಗ ರೇವಗುಪ್ತಿ 

 ಧ್ರುವತಾಳ 

ಚಿಂತನೆ ಮಾಡು ಮನವೆ ಚಿನ್ಮಯದೇವನ್ನ ಏ |
ಕಾಂತದಲಿಯಿದ್ದು ಎಲ್ಲಕಾಲ |
ಸಂತರ ಒಡಗೂಡಿ ಸಾರಿಸಾರಿಗೆ ನಿನ್ನ |
ಅಂತರಂಗದಲ್ಲಿ ಆಲೋಚಿಸಿ |
ನಿಂತಲ್ಲಿ ಕುಳಿತಲ್ಲಿ ನಾನಾ ವ್ಯಾಪಾರದಲ್ಲಿ |
ಚಿಂತಿಸು ಶ್ರೀಹರಿಯಾನಂತ ರೂಪ |
ಇಂತೆಂತು ನೋಡಿದರದರಂತೆ ತೊರುತಲಿಪ್ಪ |
ಮಂತ್ರ ತಂತ್ರಕ್ಕೆ ಶಿಲುಕನು ಭಕ್ತಿಗೊಶನೊ |
ಸಂತತ ನಿರ್ದೋಷ ಭಕ್ತವತ್ಸಲ ಕರುಣಿ |
ಅಂತಕನಂತಕವು ಉಭಯ ಜೀವಿಗಳಿಗೆ |
ಸಂತೋಷದಲಿ ಚರಿಯಾ ಮಾತ್ರ ಲೀಲಾ |
ಕಂತುಕೋಟಿ ಲಾವಣ್ಯಮಿಗೆ ಶೋಭಿಸುವ ಆ |
ದ್ಯಂತ ಕಾಲರಹಿತ ತ್ರಿಗುಣಾತೀತ |
ಸಂತಾಪನಾಶ ಒಂದಾರಂಭಿಸಿಕೊಂಡು |
ನಂತ ಸೂರ್ಯಪ್ರಕಾಶ ತರತಮ್ಯದಿ |
ತಂತುನಾಳದಿಂದ ದಿಗ್ದಂತಿ ಬಿಡಿಸಿಕೊಂಡು |
ನಿಂತಂತೆ ನಿಂತುಕೊಂಡಿಪ್ಪ ಮಹಿಮ |
ಎಂತು ಭಾವಿಸಲು ಉಪಾಸ್ತಿಯ ಕೊಡುವ ಶ್ರೀ |
ಕಾಂತನು ಪ್ರಸಿದ್ಧದಿಂದ ತಾನೆ |
ಚಿಂತಾಯಕ ನಮ್ಮ ವಿಜಯವಿಠ್ಠಲರೇಯ |
ಮುಂತಿ (ತೆ) ನಲಿದಾಡುವ ಭಾಗ್ಯವ ಬೇಡು ನೋಡು ॥ 1 ॥

 ಮಟ್ಟತಾಳ 

ಕಾ ಮೊದಲು ಕ್ಷಾ ಕಡೆ ಮೂವತ್ತೈದು |
ಈ ಮಹವರ್ಣಗಳು ಇದರ ವಿವರ ತಿಳಿವದು |
ಆ ಮರಿಯಾದಿಗಳು ಪದಿನಾರು ಉಂಟು |
ವ್ಯೋಮ ವ್ಯಾಪಿಸಿದಂತೆ ಸರ್ವದ ವರ್ಣಗಳು |
ಸಾಮಸ್ತ ಬಗೆಯಿಂದ ವ್ಯಾಪ್ತವಾಗಿವೆ ನೋಡಿ |
ಸಾಮ ಮಿಗಿಲಾದ ಶಾಸ್ತ್ರ ವೈದಿಕ ಶಬ್ದ |
ಭೂಮಿಯೊಳಗಾಡುವ ಲೌಕಿಕ ಶಬ್ದಗಳು |
ಈ ಮಹವರ್ಣದಲಿ ಪ್ರವರ್ತಕವಲ್ಲದಲೆ |
ಕಾಮಿಸಿದರೆ ಒಂದು ಪ್ರಯೋಗ(ಜನ) ವಿನ್ನಿಲ್ಲ |
ಭೂಮ ಭೂತೇಶ್ವೇರ ವಿಜಯವಿಠಲರೇಯನ 
ನಾಮಮೂರ್ತಿಗಳೆಂದು ಚಿಂತಿಸು ಪ್ರಣವದಲ್ಲಿ ॥ 2 ॥

 ತ್ರಿವಿಡಿತಾಳ 

ಕಾ ವಂದು ಗುಣಿಸಿದರೆ ಹದಿನಾರು ಬಗೆವುಂಟು |
ಆವಾವ ಕಾಲಕ್ಕೆ ನೋಡಿದರು |
ಭಾವಿಸು ಕ ಕಿ ಕು ಕೆ ಕೈ ಕೊ ಕೌ ಕಂ |
ಈ ವಿಧ ಹ್ರಸ್ವ ಯಿದರಂತೆ ದೀರ್ಘ |
ಯಾವತ್ತು ಈ ಪರಿ ಯಿದರಂತೆ ನಿಜವೆಂದು
ಕೋವಿದನಾಗಿ ನೀ ತಿಳಿಯಬೇಕು |
ಕಾ ವರಣದ ರೂಪದಿ ಕಪಿಲಾದಿ ಹದಿನಾರು |
ಈ ಒಳಗಿನ ಹದಿನಾರು ರೂಪ |
ದೇವನ್ನ ನಾಮಗಳು ಅಜಾದಿಗಳ ಸಂಖ್ಯ |
ಮೂವತ್ತೆರೆಡು ಭಗವದ್ರೂಪಗಳು |
ಪಾವನ ಮೂರುತಿ ವಿಜಯವಿಠ್ಠಲರೇಯ |
ಆವಾಗ ವರ್ಣಾಧಿಷ್ಟಾನದಲ್ಲಿಯಿಪ್ಪ ॥ 3 ॥

 ಅಟ್ಟತಾಳ 

ಇದರ ವಿಹಿತವೊಂದು ವರಣಕ್ಕೆ |
ಅದರಂತೆ ಕ ಚ ಟ ತ ಪ ಯ ಶ ವ |
ರ್ಗದಲಿ ಯೆಣಿಸಿ ಕ ಷ ಮಿಳಿತವಾದ |
ಇದನ್ನೆಲ್ಲ ಕೂಡಿಸಿ ಪಂಚತ್ರಿಂಶತಿ ಯಾ -
ದದು ಕಾಣೊ ಇದರೊಳು ಅ ಆ ಇ ವುಂ ಎಂಬ |
ಹದಿನಾರು ಇಡಲಾಗಿ ಕ ಅಃ ವಾಹೆದು |
ಇದನ್ನೆಲ್ಲ ವೊಂದೊಂದು ಏಕಾಕ್ಷರದಿಂದ |
ಪದುಮನಾಭನು ಕರಸಿಕೊಂಬನು ಕೇಳಿ |
ಆದೆ ಆದೆ ನಾಮ ಮತ್ತದೆ ಅದೆ ರೂಪದಿ |
ಒದಗಿ ಎಣಿಸಲಾಗಿ ಮೂವತ್ತೆರೆಡು ನಾಮ |
ಸದಮಲವಾಗಿವೆ ಅರವತ್ತು ನಾಲಕು |
ಮೊದಲಾರಂಭಿಸಿ ಮೂವತ್ತೈದಕ್ಕೆ ನೋಡು |
ಮುದದಿಂದ ಗುಣಿಸಲು ವೊಂದೊಂದು ವರ್ಣಕ್ಕೆ 
ಅದೆ ಪ್ರಕಾರದಲಿ ಅರವತ್ತು ನಾಲ್ಕುವುಂಟು |
ಅಧಿಕಾರತನ ಭೇದ ಧ್ಯಾನ ಮಾಡುವುದಕ್ಕೆ |
ಪದುಮಗರ್ಭನಯ್ಯ ವಿಜಯವಿಠ್ಠಲರೇಯ |
ಪದವಿಯ ಕೊಡುವನು ಈ ಪರಿ ಕೊಂಡಾಡೆ ॥ 4 ॥

 ಆದಿತಾಳ 

ಆವನಾದರು ಹಳಿಯಲಿ ಉಗುಳಲಿ |
ಆವನಾದರು ಬೈಯ್ಯಲಿ ಕಾಯಲಿ |
ಆವನಾದರು ಹೊಡೆಯಲಿ ತಡೆಯಲಿ |
ಆವನಾದರು ಪೊಗಳಲಿ ಅಟ್ಟಲಿ |
ಆವನಾದರು ಉಣಿಸಲಿ ಉಡಿಸಲಿ |
ಆವನಾದರು ಛೀ ಛೀ ಎನಲಿ |
ಆವನಾದರು ಥೂ ಥೂ ಯೆನಲಿ ಆವನಾದರು ಭಂಗಿಸಲಿ ಮ |
ತ್ತಾವನಾದರು ಹಂಗಿಸಲಿ |
ಆವನಾದರು ಯೇನೇನಲಿ |
ಆವನಾದರೋ ಈ ವರ್ಣಗಳು ಭಗವನ್ನಾಮಗಳೊ |
ಜೀವನ ಮುಕ್ತನು ಈ ವಿಧದಿ ತಿಳಿದವನು |
ನೋವು ನೋವುಗಳಲ್ಲಿ ಪಾವನವಾದ ಭಕುತಿಯಲಿ ಸ್ವ |
ಭಾವಿತ ನೀನಾಗೊ ಜ್ಞಾನಿ ನೀನಾಗೊ |
ಯಾವತ್ತು ಇಂದ್ರಿಯಗಳ ವ್ಯಾಪಾರ ಸೇವೆ ಶ್ರೀಹರಿಗೆನ್ನು |
ತ್ರೈವಿಧ ಜೀವರು ಇದನೆ ತೊರೆದು ಮ |
ತ್ತಾವದು ಆಡುವರೊ ವರ್ಣಗಳಿಲ್ಲದಲೆ |
ದೇವ ದೇವೇಶನ್ನ ಒಲಿಸಬೇಕಾದರೆ |
ಈ ಉಪಾಯವ ಬೇಕು ಎಲ್ಲಿದ್ದರು ಕೇಳು |
ಕಾವ ಜನಕ ನಮ್ಮ ವಿಜಯವಿಠ್ಠಲರೇಯ |
ಆವಾವ ವರ್ಣಗಳಂತೆ ಒಳಗಿದ್ದು |
ಕಾವನು ಶರಣರನು ಒಡನೊಡನೆ ಬರುವ ॥ 5 ॥

 ಜತೆ 

ಅಕ್ಷರಾಕ್ಷರದಿಂದ ಭಗವನ್ನಾಮವೆ ಚಿಂತಿಸು |
ಅಕ್ಷರ ಕ್ಷರ ಪುರುಷ ವಿಜಯವಿಠ್ಠಲ ಸುಳಿವ ॥
************

No comments:

Post a Comment