Audio by Mrs. Nandini Sripad
ರಾಗ ಸಾವೇರಿ
ಧ್ರುವತಾಳ
ಚಿನುಮಯ ಮೂರುತಿ ಪ್ರಳಯ ಜಲಧಿಯೊಳು
ವನಿತೆ ಶ್ರೀ ಭೂಮಿ ದುರ್ಗೆಯರೊಡನೆ
ತನ ಉದರದಲ್ಲಿ ಲಿಂಗವಿಶಿಷ್ಟರಾದ
ಇನಿತು ಜೀವರ ಹಿಡಿ ತುಂಬಾಕೊಂಡು
ತನಯನ ನೂರುವರುಷ ಪರಿಯಂತದಿ
ವನಜಾಕ್ಷ ವಟಪತ್ರ ಶಯನನಾಗಿ
ಜನರೆಲ್ಲ ತಮ್ಮ ತಮ್ಮ ಗತಿಗೆ ತಕ್ಕ ಸಾ -
ಧನವ ಸಾಧಿಸಿಕೊಳ್ಳಲೆಂದು ಕರುಣಿ
ಪುನರಪಿ ಸೃಷ್ಟಿಯ ಮಾಡುವೆನೆಂದು ಲಾ -
ಲನೆಗೆ ಪ್ರಕೃತಿಯ ಮಮತೆಯಿತ್ತು
ಗುಣತ್ರಯಾತ್ಮಕ ಸೂಕ್ಷ್ಮ ತತ್ವರಾಶಿಯ ಜೀವ
ರನು ಸೃಜಿಸಿದ ಹಯವದನ ಪ್ರಭು ॥ 1 ॥
ಮಠ್ಯತಾಳ
ಮಹತತ್ವವ ಸೃಜಿಸಿ ಮರುತ ಬ್ರಹ್ಮರಿಟ್ಟ
ಅಹಂಕಾರದಿ ಗರುಡ ಶೇಷ ರುದ್ರರಿಟ್ಟ
ಅಹಂಕೃತಿ ತೃತೀಯ ಭಾಗವನೆ ಮಾಡಿ
ಶ್ರೀಹಯವದನ ಭೂತೇಂದ್ರಿಯಗಳ ಮಾಡಿದ ॥ 2 ॥
ರೂಪಕತಾಳ
ತಾಮಸದಿಂದ ಪಂಚಭೂತಂಗಳ ಸೃಜಿಸಿ
ಯೋಮಾಂತರದಿ ಪಂಚದೇವರ ಕೂಡಿಸಿ
ಆ ಮುನ್ನೆ ತೈಜಸದಿ ಸಾಧಿಸಿದ ದಶೇಂದ್ರಿಯ
ಸೋಮ ಸೂರ್ಯಾದಿ ದೇವತೆಗಳನೆ ನೆಲಸಿ
ಶ್ರೀ ಮನೋಹರ ಹಯವದನ ವೈಕಾರಿಕದಿ
ಆ ಮನವ ದೇವತೆಗಳ ತನುವ ಮಾಡಿದ ॥ 3 ॥
ತ್ರಿಪುಟತಾಳ
ಇಂತೀ ತತ್ವವೇ ಸೃಷ್ಟಿಗೆ ಮೊದಲು
ಕಾಂತಿಯರಪ್ಪಿಕೊಂಡಿಪ್ಪ ಶ್ರೀಕೃಷ್ಣ ತಾನೆ
ಅಂತವಿಲ್ಲ ಸ್ವರೂಪವಿಲ್ಲ ವಿರೂಪನಲ್ಲಾ -
ನಂತಮೂರುತಿ ಸಿರಿ ಹಯವದನ ॥ 4 ॥
ಝಂಪೆತಾಳ
(ಶ್ಲೋಕ)
ತಥಾಸುರಾಣಾಂ ವಿಶದಾಸುರಾಣಾಂ
ರೂಪೇಣ ತೇಷಾಂ ಬಲವೀರ್ಯಚೋದಿತಾಂ
ವಂದೇ ಪರಂದೇವ ಗುಣೈಕ ವಿಷ್ಣೋ
ದೇವೇನನಾಗೇಂದ್ರ ಮತಃ ಪರೇಣ
ಪದ
ತಥ ಬ್ರಹ್ಮರುದ್ರಾದಿ ಜೀವರ ಸೃಜಿಸಿ
ತತ್ ಸ್ವರೂಪವ ಪೊಕ್ಕು ನಡಿಸಿದನು ಹಯವದನ ॥ 5 ॥
ಅಟ್ಟತಾಳ
ಅದರಿಂದ ತತ್ವದೇವತೆಗಳೆಲ್ಲರು ಕೂಡಿ
ಮುದದಿ ಬ್ರಹ್ಮಾಂಡ ಮಾಡಲರಿಯದೇ ಪೋಗಿ
ಪದುಮನಾಭನ ತುತಿಸಲು ಅವರೊಳು ಪೊಕ್ಕು
ಅದುಭೂತ ಬ್ರಹ್ಮಾಂಡವನು ರಚಿಸಿದನು
ಅದರೊಳು ಬಂದು ಬಹುಕಾಲ ಪರಿಯಂತರ
ಉದಕಶಾಯಿಯಾದ ಮುದದಿ ಹಯವದನ ॥ 6 ॥
ಆದಿತಾಳ
ಶಿಷ್ಟರನು ಶುಭ ಪಥಕೆ ನಡೆಸಿ ಉ -
ತ್ಕೃಷ್ಟ ಸುಗತಿಯನು ಕಡಿಯಲ್ಲೀವನು
ದುಷ್ಟರನ್ನು ದುರ್ಗತಿಯೈದಿಸುವನು
ಹೃಷ್ಟಮೂರುತಿ ಶ್ರೀಹಯವದನ ಈ
ಸೃಷ್ಟಿಯೊಳು ಮಧ್ಯಮರನು ಮಾಡಿದ ಎ -
ಳ್ಳಷ್ಟು ವೈಷಮ್ಯವಿಲ್ಲ ಕಾಣಿರೊ ॥ 7 ॥
ಜತೆ
ಇಂತೀ ತತ್ವಸೃಷ್ಟಿಯ ನೆನೆವ ಮಹಾತ್ಮರ
ಸಂತತ ಪೊರೆವ ಶ್ರೀಕಾಂತ ಹಯವದನ ॥
**********
No comments:
Post a Comment