Friday 27 December 2019

ನೊಂದೆನಯ್ಯ ಭವದೊಳು ಸಿಂಧುಶಯನ ankita varaha timmappa

by ನೆಕ್ಕರ ಕೃಷ್ಣದಾಸರು
ರಾಗ - ಪೂರ್ವಿ ಆದಿತಾಳ

ನೊಂದೆನಯ್ಯ ಭವದೊಳು
ಸಿಂಧುಶಯನ ವೇಂಕಟೇಶ ||ಪ||

ಒಂದು ದಿನ ಸುಖವಿಲ್ಲ ಗೋ-
ವಿಂದ ಬಹಳ ಕರುಣದಿಂದ ನಿ-
ರ್ಬಂಧವನ್ನು ಕಳೆದು ಎನ್ನ
ತಂದೆ ನೀನೇ ರಕ್ಷಿಸಯ್ಯ ||೧||

ಕಪಟ ನಾಟಕಸೂತ್ರಧಾರಿ
ಅಪರಿಮಿತ ಮಹಿಮ ಎನ್ನ
ಅಪರಾಧವನು ಕ್ಷಮಿಸಿ ಮುಂದೆ
ಕಪಟವಿಲ್ಲದೆ ರಕ್ಷಿಸಯ್ಯ ||೨||

ಕಂದಪ್ರಹ್ಲಾದನಂತೆ
ತಂದೆ ಮುನಿದಾಡುವ ತೆರದಿ ಗ-
ಜೇಂದ್ರನಂತೆ ದೃಢವಿಲ್ಲ
ಮಂದಮತಿಯ ರಕ್ಷಿಸಯ್ಯ ||೩||

ನರಜನ್ಮದೊಳಗೆ ಪುಟ್ಟಿ
ನರಕಭಾಜನ ತಾನಾಗಿ
ದುರಿತ ಪಂಜರದೊಳಗೆ ನಾನು
ಸೆರೆಯ ಬಿದ್ದೆ ರಕ್ಷಿಸಯ್ಯ ||೪||

ಹಗಲು ದೃಷ್ಟಿ ಕಾಣದವಗೆ
ಮೊಗವುಗೊಂಡು ರಾತ್ರಿಯೊಳು
ಹಗೆಯ ವನದಿ ಸಿಕ್ಕಿದವನ
ಅಗಲಿ ಹೋಗದೆ ರಕ್ಷಿಸಯ್ಯ ||೫||

ಸಾವಿರ ಅಪರಾಧವನು
ಜೀವಿತಾತ್ಮನೆ ಕ್ಷಮಿಸಿ ಎನ್ನ
ಮೂವಿಧಿಯೊಳು ಸಿಲುಕದಂತೆ
ಭಾವಿಸಿಯೇ ರಕ್ಷಿಸಯ್ಯ ||೬||

ವರಾಹ ತಿಮ್ಮಪ್ಪ ಮನದ
ಘೋರ ದುಃಖವನ್ನು ಕಳೆದು
ಮೀರಿ ಬಂದಾಪತ್ತಿನೊಳು
ಕಾರಣಿಕನೆ ರಕ್ಷಿಸಯ್ಯ ||೭||
******


No comments:

Post a Comment