Friday, 27 December 2019

ಮಾಯೆಯೆನ್ನ ಕಾಯ ಸುತ್ತಿ ಬಾಯ ಹೊಯ್ವುದು ankita varaha timmappa

by ನೆಕ್ಕರ ಕೃಷ್ಣದಾಸರು
ಮಧ್ಯಮಾವತಿ ರಾಗ ಆದಿತಾಳ

ಮಾಯೆಯೆನ್ನ ಕಾಯ ಸುತ್ತಿ ಬಾಯ ಹೊಯ್ವುದು
ಆಯ ತಪ್ಪಿ ಆಯ ಕೆಟ್ಟ ನ್ಯಾಯ ಬಪ್ಪುದು ||ಪ||

ಹೆತ್ತ ತಾಯಿ ತಂದೆಯನ್ನು ಒತ್ತಿ ಬಯ್ವುದು
ಅತ್ತೆಯನ್ನು ಕಂಡ ಹರುಷವಿತ್ತು ನಗುವುದು
ಮೃತ್ಯುವನ್ನು ತಂದು ತನ್ನ ಹತ್ತಿರಿಡುವದು
ಒತ್ತಿನವನ ಹೊರಗೆ ಸಾರೆನುತ್ತ ನುಡಿವುದು ||೧||

ಗುರುಗಳನ್ನ ಜರೆದು ಕರಕರೆಯ ತಪ್ಪುದು
ಕೊರಳು ಕೊಯ್ಕರನ್ನು ತಾನು ಸೆರಗ ಪಿಡಿವುದು
ಸಿರಿಯ ತಂದು ಹೊರಗೆ ಇರಿಸಿ ಮರವೆ ತೋರ್ಪುದು
ಗರುವತನದಿ ಪರರ ಒಡವೆ ಇರುಳು ಸುಲಿವುದು ||೨||

ದಾನದತ್ತವಾದುದನ್ನು ತಾನು ಸೆಳೆಯುವುದು
ಮಾನವನ್ನು ಹಿಡಿದು ಮೇಲೆ ಮಾನ ಇಡುವುದು
ಜ್ಞಾನಿಯನ್ನು ಕಂಡು ಮನದಿ ಬೇನೆ ತೋರ್ಪುದು
ಅನಾಥರನ್ನು ಕಂಡು ಮನದಿ ಹೀನ ನುಡಿವುದು||೩||

ಅನ್ನವನ್ನು ಇತ್ತವರ ಮುನ್ನ ಬೈವುದು
ಭಿನ್ನ ಭೇದ ತೋರಿ ಮನವ ಕನ್ನ ಕೊರೆವುದು
ತನ್ನವರ ಮರೆತು ಪರರ ಕನ್ಯೆಗಳುವುದು
ಹೊನ್ನ ಬೊಂಬೆಯಂತೆ ಮಾಯೆ ಬೆನ್ನ ಸುಳಿವುದು ||೪||

ತಪ್ಪಿ ನಡೆಯೆ ಈ ಪರಿಯೊಳಿಪ್ಪೆಯೆಂಬುದು
ಅಪ್ಪ ವರಾಹ ತಿಮ್ಮಪ್ಪನ ಸೇರಿಕೊಂಬುದು
ಒಪ್ಪಿ ತೋರ್ಪ ಮಾಯೆಯೆಲ್ಲ ತಪ್ಪಿ ಪೋಪುದು
ಉಪ್ಪರದ ದಾಸ ಪೇಳ ಒಪ್ಪಿಕೊಂಬುದು||
*******

No comments:

Post a Comment