Friday 27 December 2019

ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ ankita varaha timmappa

by ನೆಕ್ಕರ ಕೃಷ್ಣದಾಸರು
ಸೌರಾಷ್ಟ್ರ ರಾಗ ಆದಿತಾಳ

ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ
ಕಾವುದಯ್ಯ ವೇಂಕಟೇಶ ಕರುಣದಿಂದೆನ್ನ ||ಪ||

ಕಣ್ಣಿಗೆ ಕಾಣದ ನೋವು ಹುಣ್ಣುಗಳಿಲ್ಲದ ನೋವು
ಬಣ್ಣವು ಮಾಸಿದ ನೋವು ಬಲುಹಾದ ನೋವು
ಎಣ್ಣಿಮೆಯಿಲ್ಲದ ನೋವು ಎಣಿಕೆಗೊಳ್ಳದ ನೋವು
ಬಣ್ಣನೆಯ ನುಡಿಯ ನೋವು ಬಂದೀತು ನೋವು ||೧||

ದುಷ್ಟರಿಂದ ನೊಂದ ನೋವು ಹೊಟ್ಟೆಯೊಳ್ಹುಟ್ಟಿದ ನೋವು
ಕಷ್ಟಗಳ ಬಿಟ್ಟ ನೋವು ಕಡುಹಾದ ನೋವು
ನಿಷ್ಠುರದ ನುಡಿಯ ನೋವು ನಿಂದೆಯ ಮಾತಿನ ನೋವು
ಇಷ್ಟರು ಇಲ್ಲದ ನೋವು ಇಂತಾದ ನೋವು||೨||

ಬಡವನಾಗಿಹ ನೋವು ಒಡೇಯರಿಲ್ಲದ ನೋವು
ಕೆಡುಗರ ನುಡಿಯ ನೋವು ಕೆಟ್ಟಿಹ ನೋವು
ಪಡೆದ ಕರ್ಮದ ನೋವು ಪಾಪವೆಂಬುದು ನೋವು
ಕಡೆಯ ಕಾಲದ ನೋವು ಕಾಳಾಹಿ ನೋವು ||೩||

ವಿದ್ಯೆಯಿಲ್ಲದ ನೋವು ಬುದ್ಧಿ ಕೆಟ್ಟಿಹ ನೋವು
ಸಿದ್ಧಿಯಿಲ್ಲದ ನೋವು ಸಿಟ್ಟೊಂದು ನೋವು
ಇದ್ದು ಇಲ್ಲದ ನೋವು ಇಚ್ಛೆಗೊಳ್ಳದ ನೋವು
ಬದ್ಧವಾಗಿಹ ನೋವು ಬಳಲುವ ನೋವು||೪||

ಇಂತು ನೋವುಗಳೆನ್ನ ಭ್ರಾಂತಿಯನು ಬಡಿಸುತಿವೆ
ಪಂಥ ಬೇಡವೊ ಲಕ್ಷ್ಮಿಕಾಂತ ಎನ್ನಯ ಬಳಿಗೆ
ಅಂತರಂಗದಿ ಬಂದು ಚಿಂತಿತಾರ್ಥವನೀಯೊ
ಯಂತ್ರದಾಯಕನಾದ ವರಾಹ ತಿಮ್ಮಪ್ಪರಾಯ ||೫||
*******

No comments:

Post a Comment