Friday, 27 December 2019

ಜ್ಞಾನವಾವುದು ಅಜ್ಞಾನವಾವುದು ಮಾನವಾವುದು ankita varaha timmappa

by ನೆಕ್ಕರ ಕೃಷ್ಣದಾಸರದು

ಪೂರ್ವಿ ರಾಗ , ರೂಪಕ ತಾಳ

ಜ್ಞಾನವಾವುದು ಅಜ್ಞಾನವಾವುದು
ಮಾನವಾವುದು ದುಮ್ಮಾನವಾವುದು ||ಪ||

ಹರಿಯ ಸ್ಮರಣೆಯಿರಲದೊಂದು ಜ್ಞಾನವಲ್ಲವೆ
ಕೊರಳ ಸೆರೆಯ ಕಾಣದಿಪ್ಪುದಜ್ಞಾನವಲ್ಲವೆ
ಪರರ ಸತಿಯ ತೊರೆವುದೊಂದು ಮಾನವಲ್ಲವೆ
ಪರರ ಸೇವೆಗಿರುವದವಮಾನವಲ್ಲವೆ ||೧||

ಧನ್ಯರನ್ನು ಮನ್ನಿಸುವುದು ಜ್ಞಾನವಲ್ಲವೆ
ಹೊನ್ನ ಹುಗಿದು ಅನ್ನ ತೊರೆವುದಜ್ಞಾನವಲ್ಲವೆ
ತನ್ನ ಸತಿಯ ಕೂಡಿರಲು ಮಾನವಲ್ಲವೆ
ಅನ್ಯರೊಡನೆ ಕಳುವುದವಮಾನವಲ್ಲವೆ ||೨||

ಹಸಿದವರನು ಕಂಡು ಇಕ್ಕಲು ಜ್ಞಾನವಲ್ಲವೆ
ಹುಸಿಕನಾಗಿ ಅಸತ್ಯಮಾಳ್ಪುದು ಅಜ್ಞಾನವಲ್ಲವೆ
ಹಸನವಾಗಿ ನಡೆವ ಕೃತ್ಯ ಮಾನವಲ್ಲವೆ
ಎಸೆವ ಜೂಜು ತಪ್ಪಲವಮಾನವಲ್ಲವೆ ||೩||

ಸ್ಥಿರವಿದಲ್ಲವೆಂಬ ಜೀವಿ ಜ್ಞಾನಿಯಲ್ಲವೆ
ನರಕ ಭಯವ ಮರೆವ ಜಡನಜ್ಞಾನಿಯಲ್ಲವೆ
ಹಿರಿಯರಿಂದ ಅನಿಸಿಕೊಂಬುದು ಮಾನವಲ್ಲವೆ
ಬರಿಯ ಕ್ಷುದ್ರವೆಸಗಲವಮಾನವಲ್ಲವೆ ||೪||

ಕ್ರೋಧವನ್ನು ತೊರೆದ ಮನುಜ ಜ್ಞಾನಿಯಲ್ಲವೆ
ವೇದವನ್ನು ಜರೆದ ನರನಜ್ಞಾನಿಯಲ್ಲವೆ
ಸೋದರರು ಕೂಡಿರಲು ಮಾನವಲ್ಲವೆ
ಮಾದಿಗರ ಸಂಗವದವಮಾನವಲ್ಲವೆ ||೫||

ಗುರು-ಹಿರಿಯರನುಸರಿಸೆ ಜ್ಞಾನವಲ್ಲವೆ
ಸಿರಿಯ ವೇಶ್ಯಸ್ತ್ರೀಗೆ ಕೊಡಲಜ್ಞಾನವಲ್ಲವೆ
ದೊರೆಯು ಕರೆದು ಉಚಿತವೀಯೆ ಮಾನವಲ್ಲವೆ
ತಿರುಕರಂತೆ ತಿರಿವುದು ಅವಮಾನವಲ್ಲವೆ ||೬||

ವರಾಹ ತಿಮ್ಮಪ್ಪ ಒಲಿದರದು ಜ್ಞಾನವಲ್ಲವೆ
ಮರೆದು ಕ್ಲೇಶಕೆರಗುವುದಜ್ಞಾನವಲ್ಲವೆ
ಕರೆದು ಪರರಿಗಿಕ್ಕುವುದು ಮಾನವಲ್ಲವೆ
ಕರೆಕರೆಯ ಮಾತು ಅವಮಾನವಲ್ಲವೆ||೭||
*********

No comments:

Post a Comment