Wednesday, 8 December 2021

ಇದೇ ಸಮಯ ರಂಗ ಬಾರೆಲೊ purandara vittala mundige IDE SAMAYA RANGA BAARELO ಮುಂಡಿಗೆ MUNDIGE



ಪಲ್ಲವಿ:
ಇದೇ ಸಮಯ ರಂಗ ಬಾರೆಲೊ ಇದೇ ಸಮಯ ಕೃಷ್ಣ ಬಾರೆಲೊ

ಚರಣಗಳು:
1: ಅತ್ತಿಗೆ ಲಕ್ಷಬತ್ತಿ ಶೀಲಳೋ ಅಷ್ಟು ಆಗದೆ ಅವಳೇಳಳೋ
ಅತ್ತೆ ಪುರಾಣದಿ ಲೋಲಳೊ ಸರಿ ಹೊತ್ತಿನ ವೇಳೆಗೆ ಬರುವಳೋ

2: ಮಾವ ಎನ್ನಲಿ ಅವಿಶ್ವಾಸಿಯೋ ಮದುವೆಯಾದ ಗಂಡ ಉದಾಸಿಯೋ
ಭಾವನು ಎನ್ನ ಸೇರ ಹೇಸಿಯೋ ನೀನೀ ವೇಳೆಗೆ ಬಂದರೆ ವಾಸಿಯೋ

3: ತಂದೆ ತಾಯಿ ಆಸೆ ಮಾಡೆನೊ ಎನ್ನ ಕಂದನ ಮೇಲೆ ಮನಸಿಡೆನೊ
ಮಂದರಧರ ಪುರಂದರ ವಿಟ್ಠಲ ನೀ ಬಂದರೆ ಚರಣ ಸೇವೆ ಮಾಳ್ಪೆನೋ
***


 ಶ್ರೀ ಪುರಂದರದಾಸಾರ್ಯರ ಮುಂಡಿಗೆ - ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ


ಇದೇ ಸಮಯ ರಂಗ ಬಾರೆಲೊ...

ಇದೇ ಸಮಯ ಕೃಷ್ಣ ಬಾರೆಲೊ..


ಅತ್ತಿಗೆ ಲಕ್ಷಬತ್ತಿ ಶೀಲಳೋ ಅಷ್ಟು ಆಗದೆ ಅವಳು ಏಳಳೊ

ಅತ್ತೆ ಪುರಾಣದಿ ಲೋಲಳೊ ಸರಿ ಹೊತ್ತಿನ ವೇಳೆಗೆ ಬರುವಳೋ


ಮಾವ ಎನ್ನಲಿ ಅವಿಶ್ವಾಸಿಯೋ ಮದುವೆಯಾದ ಗಂಡ ಉದಾಸಿಯೋ

ಭಾವನು ಎನ್ನ ಸೇರ ಹೇಸಿಯೋ ನೀನೀ ವೇಳೆಗೆ ಬಂದರೆ ವಾಸಿಯೋ...


ತಂದೆ ತಾಯಿ ಆಸೆ ಮಾಡೆನೊ ಎನ್ನ ಕಂದನ ಮೇಲೆ ಮನಸಿಡೆನೊ

ಮಂದರಧರ ಪುರಂದರ ವಿಟ್ಠಲ ನೀ ಬಂದರೆ ಚರಣ ಸೇವೆ ಮಾಳ್ಪೆನೋ...


by -Smt. Padma Sirish

ಹರಿವಾಯುಗುರುಗಳ ಅನುಗ್ರಹದಿಂದ ಅರ್ಥಾನುಸಂಧಾನದ ಅತ್ಯಲ್ಪ ಸಣ್ಣ ಪ್ರಯತ್ನ.......


👇🏽👇🏽👇🏽👇🏽👇🏽👇🏽👇🏽


ಇದೇ ಸಮಯ ರಂಗ ಬಾರೆಲೋ

ಇದೇ ಸಮಯ ರಂಗ ಬಾರೆಲೋ ಕೃಷ್ಣ ..... ಪಲ್ಲವಿ..


ಗೋಪಿಕಾ ಸ್ತ್ರೀಯರು ಕೃಷ್ಣ ಪರಮಾತ್ಮನ್ನು ಕರೆಯುವ ಅದ್ಭುತವಾದ ಕೃತಿ ಎಂದು ನೋಡಿದ ತಕ್ಷಣ ಗೊತ್ತಾಗುತ್ತದೆ. ಶ್ರೀಕೃಷ್ಣನನ್ನು ಸೇರಲು ಅಗ್ನಿಪುತ್ರರೆ ಗೋಪಿಕೆಯರಾಗಿ ಹುಟ್ಟಿಬಂದಿದ್ದಾರೆ... ಆ ಸ್ತ್ರೀಯರಿಗೆ ಪರಮಾತ್ಮನಾದ ಕೃಷ್ಣನನ್ನು ಸೇರುವುದು ಅರ್ಥಾತ್ ಮೋಕ್ಷವನ್ನು ಪಡೆಯಬೇಕಾದರೆ ಎಲ್ಲ ಲೌಕಿಕವಾದ ಸಂಬಂಧ ಬಾಂಧವ್ಯಗಳೂ ಕಾಣಿಸುವುದಿಲ್ಲ ಎನ್ನುವುದು ಸೂಕ್ಷ್ಮ.  ಪರಮಾತ್ಮ ನಮ್ಮ ಹೃದಯ ಕಮಲದಲ್ಲಿ ನೆಲೆಗೊಳ್ಳಬೇಕಾದರೆ ಮೊದಲಿಗೆ ನಮ್ಮ ಹೃದಯ ಸ್ವಚ್ಛವಾಗಿರಬೇಕೆನ್ನುವುದು ಸತ್ಯ..... 


ಕೃಷ್ಣ ಪರಮಾತ್ಮ ಜಾರ ಎನ್ನುವ ಸಾಧಾರಣವಾದ ಅರ್ಥ ತಗೊಂಡು ವಾದಮಾಡುವವರಿಗೆ ಬುದ್ಧಿ ಹೇಳುವ ಶ್ರೀ ದಾಸಾರ್ಯರ ಉಕ್ತಿಗಳೇ ಅದ್ಭುತ... 


       ಪರಮಾತ್ಮ ಜೀವಿಗಳಿಗೆ ಮನುಷ್ಯ ಜನ್ಮ ಕೊಡುವದು ಸಾಧನಕ್ಕಾಗಿ ಅಂತ ಜಗದ್ವಿದಿತ...  ಆದರೆ ಈ ಮನುಷ್ಯನು ಸಾಧನೆಯಲ್ಲಿ ತನ್ನ ಮನಸ್ಸನ್ನು ಲಗ್ನ ಮಾಡದೆ ಕೇವಲ ಐಹಿಕ, ವಿಲಾಸವಂತವಾದ ಲೌಕಿಕ ಜೀವನದಲ್ಲಿ ತನ್ನ ಮನಸ್ಸನ್ನು ತೊಡಗಿಸಿಕೊಳ್ಳುತ್ತಿದ್ದಾನೆ...

 

ಮನಸ್ಸಿನ ವಾಸನೆಗಳು ಎನ್ನುವವು ತುಂಬಾ  ಪ್ರಬಲವಾಗಿರ್ತವೆ. ಈ ಮನಸ್ಸೇ ಆಯಾ ಇಂದ್ರಿಯಗಳಲ್ಲಿ ಇಚ್ಛೆಯನ್ನು, ಆಸೆಯನ್ನು ಪ್ರೇರೇಪಿಸಿ ಪ್ರಬಲಗೊಳಿಸುವದು... ಇಂದ್ರಿಯಗಳ ಹಸಿವನ್ನು ಅಧಿಕಮಾಡುವುದು ಸಹ ಈ ಮನಸ್ಸೇ... ಅಲ್ಲದೆ ಭೋಗದ ಇಚ್ಛೆಯನ್ನೂ ಪ್ರಬಲಗೊಳಿಸುವದಾಗಿದೆ. ಕಾಮ, ಇಚ್ಛೆ, ಅಂಜಿಕೆ, ನಾಚಿಕೆ, ಚಂಚಲತೆ, ಸಂಶಯ, ತಿಳುವಳಿಕೆ, ಸಂಸ್ಕಾರ ಇವೆಲ್ಲವೂ ಮನಸ್ಸಿನ ರೂಪಗಳೇ ಆಗಿವೆ.  ಈ ಮನಸ್ಸು ಇಂದ್ರಿಯಗಳಲ್ಲಿ ಅಪಾರ ದಾಹವನ್ನು , ಇಚ್ಛಾ ಕ್ರಿಯೆಗಳನ್ನು ಹುಟ್ಟಿಸಿ ಎಲ್ಲಾ ವಿಧದ ಭೋಗಗಳಲ್ಲಿ ತೊಡಗಿಸುವದು... ಇಂತಹ ವಿಷಮ ಸಂದರ್ಭದಲ್ಲಿಯೇ ದಾಸಾರ್ಯರು ಪರಮಾತ್ಮನನ್ನು ಬೇಡಿಕೊಳ್ಳುತ್ತಿದ್ದಾರೆ... 

 ಹೇ ಪರಮಾತ್ಮನೇ !  ನನ್ನ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ ಇವೆಲ್ಲವುಗಳೂ ಆಕಡೆ ಈಕಡೇ ಹರಿದಾಡುತ್ತಿವೆ. ಹೀಗಾಗಿ ಇಂತಹಾ ಸಮಯದಲ್ಲೇನೇ ನೀನು ನನ್ನ ಮನಸ್ಸಿನಲ್ಲಿ ನೆಲೆಸಿ ನಿಶ್ಚಲವಾಗಿದ್ದು ಆ ನನ್ನ ಮನಸ್ಸು ನಿನ್ನ ಪಾದಾರವಿಂದಗಳಲ್ಲಿ ಮಾತ್ರ ನೆಲೆಗೊಳ್ಳುವಂತೆ ಅನುಗ್ರಹಿಸು ಎಂದು ಸರ್ವೋತ್ತಮನಾದ , ಮೋಕ್ಷಪ್ರದನಾದ ಭಕ್ತಜನರ ಪರಿಪಾಲಕನಾದ ಪರಮಾತ್ಮನನ್ನು ಅತ್ಯಂತ  ಭಕ್ತಿಯಿಂದ ಕರೆಯುತ್ತಿದ್ದಾರೆ ದಾಸಾರ್ಯರು... ಮನಸ್ಸು ಗೊಂದಲಕ್ಕೆ ಒಳಗಾಗುತ್ತಿರುವ ಈ ಸಮಯದಲ್ಲಿ ಬಾರೋ ಎಂದು... ಅದಕ್ಕೆ ಇದೇ ಸಮಯ ರಂಗ ಬಾರೆಲೋ ! ಇದೇ ಸಮಯ ಕೃಷ್ಣ ಬಾರೆಲೋ ಅಂತ ಜೀವದ ಭಕ್ತಿಯಿಂದ ತಮ್ಮ ಹೃದಯ ಮಂಟಪದಲ್ಲಿ ಪರಮಾತ್ಮನನ್ನು ಕರೆಯುತ್ತಿದ್ದಾರೆ...


 ಅತ್ತಿಗೆ ಲಕ್ಷಬತ್ತಿಶೀಲಳೋ ಅಷ್ಟು ಆಗದೇ ಅವಳೇಳಳೋ

ಅತ್ತೆ ಪುರಾಣದಿ ಲೋಲಳೋ ಸರಿ ಹೊತ್ತಿನ ವೇಳೆಗೆ ಬರುವಳೋ//


ಭಗವದ್ವಿಷಯಕವಾದ ಜ್ಞಾನವನ್ನು ಪಡೆದುಕೊಳ್ಳಬೇಕು ಅಂದರೇ ಪ್ರತ್ಯಕ್ಷ -ಅನುಮಾನ-ಆಗಮ ಎಂಬ3  ಪ್ರಮಾಣಗಳು ಅತ್ಯವಶ್ಯಕವಾದ ಆಯುಧಗಳು ಎಂದೇ ಹೇಳಬಹುದು. ಇಲ್ಲಿ ಈ ವಾಕ್ಯದಲ್ಲಿ ಪ್ರತ್ಯಕ್ಷವೆಂಬ ಪ್ರಮಾಣವು  ನಮಗೆಲ್ಲರಿಗೂ ಅಣ್ಣ  ಎಂದೆನಿಸಿಕೊಂಡರೇ, ಪ್ರತ್ಯಕ್ಷವನ್ನು ಅನುಸರಿಸಿಯೇ ಇರುವ  ಅನುಮಾನವೇ ಅವನ ಹೆಂಡತಿ ಎನಿಸಿಕೊಳ್ಳುವದು...   ಅಣ್ಣನ ಹೆಂಡತಿ ಅಂದರೇ ಅತ್ತಿಗೆ. 

ಹೀಗಾಗಿ ಈ ಅನುಮಾನ ಎಂಬ ಅತ್ತಿಗೆ  ಹೇಗೆ ಬೇಕೋ ಹಾಗೆ ಅನುಮಾನ ಮಾಡುವ ಸಾಧ್ಯತೆ ಇರುವದ್ದರಿಂದ ಕಾಮಚಾರಿ (ತನ್ನಿಷ್ಟ ಪ್ರಕಾರ ಕಾರ್ಯಗಳು ಮಾಡುವವಳು)  ಎನಿಸಿಕೊಂಡಿದೆ.  ಇಂತಹಾ ಕಾಮಚಾರಿಯಾದ ಅನುಮಾನವೆಂಬ ಅತ್ತಿಗೆಯ ಲಕ್ಷ ಅನೇಕ ವಿಷಯಗಳ ಕಡೆಗೆ ಹೋಗುವದರಿಂದ ದಾಸಾರ್ಯರು ಇಲ್ಲಿ ಅತ್ತಿಗೆ ಲಕ್ಷಬತ್ತಿಶೀಲಳೋ ಅಷ್ಟು ಆಗದೇ ಅವಳೇಳಳೋ ಎಂದಿದ್ದಾರೆ.. 

    ಬತ್ತಿ ಎನ್ನುವ ಪದದ ವಿಷಯಕ್ಕೆ ಬಂದರೆ... ನಮ್ಮ 

ಪೂರ್ವಜನ್ಮದ ಕರ್ಮಗಳೇ ಬೀಜ ಬಿಡಿಸಿದ ಹತ್ತಿ , ಅಂತಹಾ ಹತ್ತಿಯಿಂದಲೇ ಈ ಜನ್ಮದಲ್ಲಿ ಒಂದು ಕರ್ಮ ಮಾಡುವಾಗ ಮತ್ತೆ ಮತ್ತೆ ಅನೇಕ ಕರ್ಮಗಳು ಬೆಳೀತಾ ಬೆಳಿತಾ ಹೋಗ್ತವೆ ಹೀಗಾಗಿ  ಅವನ್ನೇ (ಕರ್ಮಗಳನ್ನೇ)  ಇಲ್ಲಿ ಬತ್ತಿಗಳು ಅಂದಿದ್ದಾರೆ... ನೋಡಿ ಅತ್ತಿಗೆ ಎನ್ನುವ ಅನುಮಾನದ ಕರ್ಮಚಾರಿಯ ಮನಸು ಸ್ಥಿರವಾಗಿರುವುದಿಲ್ಲ ಆಕೆಯ ಯೋಚನೆಯಿಂದ ಹುಟ್ಟಿ ಬಂದ ಒಂದು ಅನುಮಾನ ಎನ್ನುವ ಕರ್ಮ ದೇಹಾಚರಣಗೆ ಬಂದಾಗ ದುಷ್ಕರ್ಮವಾಗುತ್ತದೆ.. ಉದಾಹರಣೆಗೆ ಎಲ್ಲಿ ಅಗ್ನಿ ಇದೆಯೋ ಅಲ್ಲಿ ಹೊಗೆ ಇದೆ  ಅಂತ ಪ್ರತ್ಯಕ್ಷ ವಿಷಯಕ್ಕೆ ಗೋವುಗಳು ಓಡಾಡಿದಾಗ ಬಂದ ಹೊಗೆಯನ್ನ ನೋಡಿ ಅಲ್ಲಿ ಅಗ್ನಿ ಇದೆಯೇನೋ ಎನ್ನುವ ಅನುಮಾನ ಬರುವುದು... ಇದೇ ರೀತಿಯಲ್ಲಿ ಈ ಅತ್ತಿಗೆ ಎನ್ನುವವಳು ಸದಾ ಅನೇಕ ಅನುಮಾನಗಳಲ್ಲಿ ತೊಡಗಿ ಕರ್ಮಗಳು ಮಾಡುವವಳಿದ್ದಾಳೆ ಎಂದರ್ಥ


      ನಾಶ್ರಮಃ ಕಾರಣಂ ಮುಕ್ತೇದರ್ಶನಾನಿ ನ ಕಾರಣಮ್/

       ತಥೈವ ಸರ್ವಕರ್ಮಾಣಿ ಜ್ಞಾನಮೇವ ಹಿ ಕಾರಣಮ್// ಎನ್ನುವ ಗರುಡಪುರಾಣದ  ಉಕ್ತಿಯಂತೆ ಭಗವದ್ವಿಷಯಕವಾದ ಜ್ಞಾನವಿಲ್ಲದೇ ಆಚರಿಸಿದ ಯಾವುದೇ ಕರ್ಮವಾಗಲೀ, ವರ್ಣಾಶ್ರಮ ಧರ್ಮವಾಗಲೀ ಯಾವವೂ ಭಗವತ್ಪ್ರಸನ್ನತೆಗೆ ಕಾರಣವಾಗುವದಿಲ್ಲ. ಈ ಬುದ್ಧಿ ಎಂಬ ಅತ್ತೆಯು ಅನೇಕ ಧರ್ಮ ಕರ್ಮಾಚರಣೆಗಳನ್ನು ಮಾಡಿದರೂ ಸಹಾ ಪುರಾಣ ಪುಣ್ಯಕಥೆಗಳನ್ನು ಕೇಳ್ತಾಯಿದ್ರೂ ಸಹಾ ಕೇವಲ ಮನವಾರ್ತೆಯ ಹರಟೆ ಹೊಡೆಯುತ್ತಾ, ಲೌಕಿಕ ಸುಖಸಾಧನಗಳ ಬಗ್ಗೆ ಚಿಂತಿಸುತ್ತಿದ್ದಾಳಾದ್ದರಿಂದ  ಇಲ್ಲಿ ದಾಸಾರ್ಯರು ಅತ್ತೆ ಪುರಾಣದಿ ಲೋಲಳೋ ಎಂದು ತಿಳಿಸುತ್ತಾ ,  ಪುರಾಣ ಕೇಳುವಾಗ ಇರುವ ಬುದ್ಧಿ ನಮ್ಮ ಪ್ರತಿಕ್ಷಣದ ಕಾರ್ಯಗಳಲ್ಲಿ ಇರದೇ ಕೇವಲ ಸಂಕಟ ಬಂದಾಗ ಮಾತ್ರ ಪರಮಾತ್ಮನ ಸ್ಮರಣೆ ಬರುವದರಿಂದ ಸರಿ ಹೊತ್ತಿನ ವೇಳೆಗೆ ಬರುವಳೋ ಎಂದು ಛೇಡಿಸಿದ್ದಾರೆ....


ಮಾವ ಎನ್ನಲಿ ಅವಿಶ್ವಾಸಿಯೋ ಮದುವೆಯಾದ ಗಂಡನು ಉದಾಸಿಯೋ/

ಭಾವನು ಎನ್ನ ಸೇರ ಹೇಸಿಯೋ ನೀ ಈ ವೇಳೆಗೆ ಬಂದರೆ ವಾಸಿಯೋ/


    ಈ ನಮ್ಮ  ಮನಸ್ಸೆಂಬುದು   ಮಾವ ಇದ್ದಂತೆ, ಯಾಕೆಂದರೆ ಲೌಕಿಕದಲ್ಲಿ ತನ್ನ ಮಗನಿಗೆ ಯೋಗ್ಯ ಕನ್ಯೆ ಬೇಕು ಬೇಕು ಬೇಕು ಅಂತ ಅಲ್ಲಿ ಇಲ್ಲಿ ಅಂತ ಎಲ್ಲಾಕಡೆ ಹುಡಿಕಿ - ಹುಡಿಕಿ ಆರಿಸಿ ಕೊನೇಗೆ ಮಗನಿಗೆ ಮದುವೆ ಮಾಡಿದ ಮೇಲೆ ಅದೇ ಸೊಸೆ ಬೇಡವಾಗಿಬಿಡ್ತಾಳೆ ಅಲ್ವಾ ? ಅವಳು ಹೀಗಂದ್ಲು, ಹಾಗಂದ್ಲು, ಇವಳ ಪದ್ಧತಿ ಸರಿಯಿಲ್ಲ, ಇವರ ತಂದೆತಾಯಿ ಅದೇನ್ ಹೇಳಿಕೊಟ್ಟರೋ ಏನೋ? ನಮ್ಮ ಪದ್ಧತಿ ಸರಿಯಾಗಿ ಗೊತ್ತಿಲ್ಲ ಇವಳಿಗೆ ಹೀಗೆ ಏನೇನೋ ಮಾತುಗಳು ಸೊಸೆಯ ಕುರಿತಾಗಿ ಬರ್ತವು. ಅಂದರೆ ಮನಸು ಸಿಕ್ಕಿದ್ದಲ್ಲಿ ತೃಪ್ತಿ ಪಡದೇ ಇನ್ನೂ ಬೇಕುಗಳ ಚಿಂತೆಗೆ ಒಳಗಾಗಿರ್ತದೆ ಅನ್ನುವ ಅರ್ಥದಲ್ಲಿ ಇಲ್ಲಿ ಮನಸೇ ಮಾವ ಅಂತಾರೆ ಶ್ರೀಮತ್ಪುರಂದರದಾಸಾರ್ಯರು..


ಹಾಗೆಯೇ ಸಂಕಲ್ಪೋ ವಿಕಲ್ಪಃ , ನಾನಾವಿಧ ಕಾಮಃ , ಚಂಚಲಃ , ಸಂಶಯಃ , ಸರ್ವಂ ಮನಃ ತತ್ಕುರ್ಯಾಣಿ ಎಂಬ ಉಕ್ತಿಯಂತೆ ಈ ಮನಸ್ಸು  ಸಂಕಲ್ಪ-ವಿಕಲ್ಪದಿಂದ ಯುಕ್ತವಾದದ್ದು , ಸಮಸ್ತ ವಿಷಯಗಳಲ್ಲೂ , ಅದರಲ್ಲೂ ದೇವತಾರಾಧನೆಯ ವಿಷಯದಲ್ಲಿಯಂತೂ ಇಂತಹಾ ಧರ್ಮಕಾರ್ಯ ಮಾಡಬೇಕು, ಇವತ್ತು 1008 ಸಲ ಪಾರಾಯಣ ಮಾಡಬೇಕು, ಹಾಡುಗಳು ಹಾಡಬೇಕು, ದೇವಸ್ಥಾನಕ್ಕೆ ಹೋಗಿ ಬರಬೇಕು ಹೀಗೆ ಅಂತ ಮನಸ್ಸಲ್ಲೇನೇನೋ ಅಂದುಕೊಳ್ತಿವಿ, ಆದರೆ ಮತ್ತೆ ಸ್ವಲ್ಪ ಸಮಯದ ನಂತರ ಬೇಡ ಅನಸತ್ತೆ , ಹೀಗೆ ಮನಸ್ಸೆಂಬುದು ಸತ್ಕಾರ್ಯದಲ್ಲಿ ಬಹಳ ಸಂಕಲ್ಪ ವಿಕಲ್ಪಗಳನ್ನೇ ಮಾಡುತ್ತಿರುವದರಿಂದ ದಾಸಾರ್ಯರು ಇಲ್ಲಿ ಮಾವ ಎನ್ನಲಿ ಅವಿಶ್ವಾಸಿಯೋ ಎಂದಿದ್ದಾರೆ .

        

 ಈ ಜೀವನು ಬುದ್ಧಿಎಂಬ  ಕನ್ಯೆಯನ್ನು ಪಾಣಿಗ್ರಹಣಮಾಡಿದ ಗಂಡನಂತೆ ಪ್ರತ್ಯಕ್ಷವಿದೆ..  ಪ್ರತ್ಯಕ್ಷವಿರುವದಷ್ಟೇ ಅಲ್ಲ ಗಂಡನಂತೆ ಭರಣ ಮಾಡಿದ್ದರಿಂದ ಭರ್ತ ಎನಿಸಿದ್ದಾನೆ..  ಇಂತಹಾ ಜೀವನೆಂಬ ಗಂಡನು ತನ್ನ ಬುದ್ಧಿಯನ್ನು ಭಗವದಾರಾಧನೆಯಲ್ಲಿ ಉದಾಸೀನಗೊಳಿಸಿ ಕೇವಲ ಲೌಕಿಕ ವಿಷಯಗಳಲ್ಲಿ ತೊಡಗಿ ವಿಷಯಾಸಕ್ತನಾಗಿರುವದರಿಂದ ದಾಸಾರ್ಯರು ಇಲ್ಲಿ ಮದುವೆಯಾದ ಗಂಡನು ಉದಾಸಿಯೋ ಎಂದಿದ್ದಾರೆ . 

    

ಭಾವ ಅಂದರೆ ಪಾಶುಪತಾದಿ  ದುಃಶಾಸ್ತ್ರಗಳು . ಈ ದುಃಶಾಸ್ತ್ರಗಳು ನಮ್ಮ ಮನಸ್ಸಿಗೆ ಜುಗುಪ್ಸೆ ತರುವಂತಹವು ಸರಿ . ಅಹಂ ಬ್ರಹ್ಮಾಸ್ಮಿ , ನೇಹನಾನಾಸ್ತಿ ಕಿಂಚ ನ , ಜೀವಾಬ್ರಹ್ಮೈವ ನಾಪರಂ , ತತ್ತ್ವಮಸಿ ,  ಬ್ರಹ್ಮ ಸತ್ಯ ಜಗನ್ಮಿಥ್ಯಾ ....... ಇತ್ಯಾದಿ ಉಕ್ತಿಗಳ ಸರಿಯಾದ ಜ್ಞಾನವನ್ನು  ನೀಡುವದೇ ಇಲ್ಲ ಈ ಶಾಸ್ತ್ರಗಳು..  ಅಷ್ಟೇ ಅಲ್ಲದೇ  ಪರಮಾತ್ಮನ  ನಿರ್ಗುಣತ್ವ, ನಿರಾಕಾರತ್ವ , ಇತ್ಯಾದಿಯಾಗಿ ಸಲ್ಲದ ಆರೋಪ ಮಾಡುವವು ಈ ದುಃಶಾಸ್ತ್ರಗಳಲ್ಲಿನ ಭಾವವೂ, ನಮ್ಮ  ಜ್ಞಾನವು ಈ ರೀತಿ ತಿರೋಹಿತವಾಗಿರುವ ಸಂದರ್ಭದಲ್ಲೇ ಅಂದರೆ ಮನಸೆನ್ನುವ ಮಾವನಿಂದ, ಬುದ್ಧಿಯನ್ನು ಲಗ್ನವಾದಂತಹಾ ಜೀವ ಎನ್ನುವ ಗಂಡನು ಮಾಡುವ ದುಶ್ಚರ್ಯಗಳಿಂದ, ಪರಮಪವಿತ್ರವಾದ ಮಧ್ವಮತವಲ್ಲದೇ ಬೇರಿತರ ಪುರಾಣ, ಶಾಸ್ತ್ರ ತತ್ವಗಳಿಂದ ಹಾದಿ ತಪ್ಪುತ್ತಿರುವ ನನ್ನನ್ನು  ನೀನೇ ಬಂದು ರಕ್ಷಿಸಿ

ಗುರುಪ್ರಸಾದೋ ಬಲವಾನ್ ಎಂಬಂತೆ- 

ನನಗೆ ಸರಿಯಾದ ಗುರುಗಳನ್ನು ಕರುಣಿಸಿ ಸರಿಯಾದ ಅರ್ಥಾತ್  ಸಮೀಚೀನವಾದ ಜ್ಞಾನವನ್ನು ಕರುಣಿಸಿ ಈ ತರಹದ ಮಾವನಿಂದ, ಗಂಡನಿಂದ, ನನ್ನ ಬುದ್ಧಿಯನ್ನು ರಕ್ಷಿಸಬೇಕೆಂದು ಇಲ್ಲಿ ಭಕ್ತಿಯಿಂದ  ಬೇಡುವ ವಿಧಾನವನ್ನು ತಿಳಿಸಿಕೊಡ್ತಿದ್ದಾರೆ ಶ್ರೀಮತ್ಪುರಂದರದಾಸಾರ್ಯರು..


ತಂದೆತಾಯಿ ಆಸೆ ಮಾಡೆನೋ, ಎನ್ನ ಕಂದನ ಮೇಲೆ ಮನಸಿಡೆನೋ/

ಮಂದರಧರ ಪುರಂದರ ವಿಠಲ ನೀ ಬಂದರೆ ಚರಣ ಸೇವೆ ಮಾಳ್ಪೆನೋ//....

      

 ನಾಯಮತ್ಯಂತಸಂವಾಸಃ ಕಸ್ಯಚಿತ್ಕೇನಚಿತ್ಸಹ/

     ಅಪಿ ಸ್ವಸ್ಯ ಶರೀರೇಣ ಕಿಮುತಾನ್ಯೈಃ ಪೃಥಗ್ಜನೈಃ//


ಈ ಜಗತ್ತಿನಲ್ಲಿ ಯಾರೂ ಬಹಳ ದಿವಸ ಬಾಳಲಾರರು ಯಾರೂ ಶಾಶ್ವತವಲ್ಲ.  ಯಾಕೆಂದರೆ ಈ ಶರೀರವೇ ನಶ್ವರವಾಗಿದೆ ಸ್ವಪ್ನದಂತೆ ಅಸ್ಥಿರವಾಗಿದೆ.. ಇದಂತೂ ಎಲ್ಲರಿಗೂ ಗೊತ್ತಿರುವ ವಿಷಯವೇ.  ತಂದೆ-ತಾಯಿ - ಬಂಧು - ಬಳಗ- ಮಕ್ಕಳು  ಯಾರೂ ಸಹ ಶಾಶ್ವತರಲ್ಲ.. ಮೊದಲಿಗೆ ನಾವೇ ಶಾಶ್ವತವಲ್ಲ...

ಒಂದೊಂದು ಜನ್ಮದಲ್ಲಿ ಒಬ್ಬರೊಬ್ಬರು ತಂದೆ- ತಾಯಿ , ಮಕ್ಕಳು ಹೀಗೆ . ಆದರೆ ಅಂತಹ ಬಂಧಗಳಲ್ಲಿ ಆಸೆ ಮಾಡೋದಿಲ್ಲ ಅನ್ನೋದು ಒಂದರ್ಥವಾದರೆ - 


ತಾಯಿ-ತಂದೆ ಆಸೆ ಮಾಡೆನೋ -   ನನ್ನನ್ನು ಸಾಧನದ ಹಾದಿಯಿಂದ ತಪ್ಪಿಸಿ ದುರ್ಮಾರ್ಗಕ್ಕೆ ಪ್ರಚೋದಿಸುವ ತಾಯಿ-ತಂದೆಯ ಮೇಲೆ ಮೋಹ, ಆಸೆ ಸರ್ವಥಾ ಮಾಡೋದಿಲ್ಲ, ಜನ್ಮ ಜನ್ಮಗಳಲ್ಲೂ ಅಂದರೇ ನನ್ನ ಸಾಧನ ಪೂರ್ತಿ ಆಗೋ ವರೆಗೂ ನನ್ನನ್ನು ಸತ್ಸಾಧನ ಮಾರ್ಗದಲ್ಲೇ ಪ್ರಚೋದಿಸುವ ತಾಯಿ-ತಂದೆಗಳನ್ನು ದಯಪಾಲಿಸು ಎಂದು ಬೇಡಿಕೊಳ್ಳೋದೂ ನಮ್ಮ ಕರ್ತವ್ಯವೂ ಹೌದು. 


    ಯಥಾಹಿ ಪಥಿಕಃ ಕಶ್ಚಿಚ್ಛಾಯಾಮಾಶ್ರಿತ್ಯ ವಿಶ್ರಮೇತ್/

    ವಿಶ್ರಮ್ಯ ಚ ಪುನರ್ಗಚ್ಛೇತ್ತದ್ವದ್ಭೂತಸಮಾಗಮಃ//..


ದಾರಿಯಲ್ಲಿ ನಡೆಯುವ ದಾರಿಕಾರರು ಒಂದು ವೃಕ್ಷದ ನೆರಳಿನಲ್ಲಿ ಕುಳಿತು ಸ್ವಲ್ಪ ಹೊತ್ತು  ವಿಶ್ರಮಿಸಿ ಮತ್ತೇ ಮುಂದೆ ಹೋಗುವಂತೆ ಈ ತಾಯಿ-ತಂದೆ-ಅಣ್ಣ-ತಮ್ಮ-ಅಕ್ಕ-ತಂಗಿ-ಹೆಂಡತಿ - ಮಕ್ಕಳು - ಬಂಧು - ಬಾಂಧವರ ಸಮಾಗಮವಿರುತ್ತದೆ .. ನಮ್ಮ ತಾಯಿ ಒಂದು ಸುಲಭವಾದ ಉದಾಹರಣೆ ನೀಡ್ತಾರೆ ಇದಕ್ಕೆ,  ನಮ್ಮ ಜೀವನದ ಪಯಣ - ಬಸ್, ಅಥವಾ ರೈಲಿನಲ್ಲಿ ಪಯಣವಾದಂತೆ ಯೋಚನೆ ಮಾಡಿದರೆ ನಮ್ಮ ಜೊತೆ ಪಯಣಿಸಿದ,  ನಮಗೆ ಸಹಾಯಮಾಡಿದ, ನಮ್ಮ ಜೊತೆ ಕುಳಿತ , ಮಾತನಾಡಿದ ಎಲ್ಲಾ ವ್ಯಕ್ತಿಗಳು ಸಹಾ ಅವರವರ ಗಮ್ಯ ಬಂದಾಗ ಅವರವರು ಇಳಿದು ಹೋದಂತೆ,  ನಮ್ಮ ಗಮ್ಯ ಸ್ಥಾನ ಬಂದಾಗ ನಾವೂ ಇಳಿದು ಹೋಗ್ತೆವೆ .. ಅಂದರೆ ಇಲ್ಲಿ ಈ ಜೀವನದ ಪ್ರಯಾಣದಲ್ಲಿ ನಮ್ಮ ಕರ್ಮಾನುಸಾರವಾಗಿ ಒಬ್ಬರು ಬಯ್ತಾರೆ, ಒಬ್ಬರು ಇಷ್ಟ ಪಡ್ತಾರೆ, ಒಬ್ಬರು ನಮ್ಮ ಬಾಂಧವ್ಯದಲಿ ಸಿಲುಕಿರ್ತಾರೆ ಆದರೂ ಸಹಾ..


ಯಾರೂ ಸಂಗಡ ಬಾಹೋರಿಲ್ಲ  ಎನ್ನುವ ದಾಸಾರ್ಯರ ಉಕ್ತಿಯಂತೆ ಯಾರೂ ನಮ್ಮ ಜೊತೆ ಬರುವವರಂತೂ ಅಲ್ಲ.. ಹೀಗಾಗಿ ಯಾರ ಮೇಲೆಯೂ ಸಹ ಮೋಹವನ್ನು ತುಂಬಿಸಿಕೊಂಡು ಅದೇ ಚಿಂತೆಯಿಂದ ಒದ್ದಾಡುತ್ತಾ ಪರಮಾತ್ಮನು ಯಾಕೆ ಈ ವೈಷ್ಣವ ಜನ್ಮ ನೀಡಿದ್ದನು ಎಂಬೋದನ್ನು ಮರೆತು ಹೋಗುವಂತೆ ಮಾಡಬೇಡ ಸ್ವಾಮೀ ಅಂತ ಸದಾ ಪ್ರಾರ್ಥನೆ ಮಾಡಬೇಕು ಎಂಬೋದನ್ನು ಗಟ್ಯಾಗಿ ಶ್ರೀ ದಾಸಾರ್ಯರು ತಿಳಿಸಿ ಹೇಳ್ತಿದ್ದಾರೆ.. 


     ಯತ್ಪ್ರಾತಃ ಸಂಸ್ಕೃತಂ ಭೋಜ್ಯಂ ಸಾಯಂ ತಚ್ಚ ವಿನಶ್ಯತಿ/

     ತದನ್ನರಸಸಂಪುಷ್ಟೇ ಕಾಯೇ ಕಾ ನಾಮ ನಿತ್ಯತಾ //

ಎಲ್ಲಿಂದ ಬಂದಿದ್ದೇವೋ, ಎಲ್ಲಿಗೆ ಹೋಗುವವರಿದ್ದೀವೋ, ಯಾವುದೂ ಸಹಾ ನಮಗೆ ಗೊತ್ತಿಲ್ಲ , ಎಲ್ಲಾ ಪದಾರ್ಥಗಳೂ ನಶ್ವರವಿರುತ್ತವೆ, ನಾಶವಾಗ್ತವೆ. ಬೆಳಿಗ್ಗೆ ಮಾಡಿದ  ಅಡುಗೆ ಸಂಜೆಗೆ ಹಾಳಾಗ್ತದೆ . ಅಂದಮೇಲೆ ಅಂತಹಾ ಅನ್ನವನ್ನು ತಿಂದ  ಕಲಿಯುಗದ ಅನ್ನಗತ ಜೀವರಾದ ನಮ್ಮ  ಈ ದೇಹ ಶಾಶ್ವತವಾಗಿ ಹೇಗೆ ಉಳಿದೀತು ? ಅರ್ಥಾತ್ ಈ ಎಲ್ಲಾ ಲೌಕಿಕ ಸಂಬಂಧಗಳೂ ಸಹಾ ಅನಿತ್ಯವೇ ಆಗಿವೆ. ಯಾರಾದರೂ ತೀರಿಕೊಂಡರು ಅಂದರೆ ಆಗ ಇದನ್ನು ಗಟ್ಯಾಗಿ ಅಂದುಕೊಳ್ತಿವಿ, ಯಾವುದೂ ಶಾಶ್ವತ ಅಲ್ಲ, ದೇವರ ಸ್ಮರಣೆ ಶಾಶ್ವತ ಅಂತ, ಆದರೆ ಮತ್ತೆ ಸ್ಮಶಾನದಿಂದ ಮನೆಗೆ ಬಂದ ನಂತರ ಲೌಕಿಕ ಚಿಂತೆಗಳು, ಅದೇ ಹೊಟ್ಟೆ ಪಾಡು, ಇದನ್ನೇ ಸ್ಮಶಾನ ವೈರಾಗ್ಯ ಅಂತಾರೆ.. 


ಆದರೇ.. 

ಯತ್ರ ತ್ರಿಸರ್ಗೋ ಮೃಷಾ ಎನ್ನುವ ಶ್ರೀಮದ್ಭಾಗವತದ ವಾಕ್ಯದಂತೆ ಪರಮಾತ್ಮನಿಗೆ ನಮ್ಮಿಂದ ಏನೂ ಆಗಬೇಕಿಲ್ಲ, ಆತನು ಸ್ವರಮಣ, ಸರ್ವ ಸ್ವತಂತ್ರ,  ಸ್ವರಾಟ್ ಆದರೂ ಸಹಾ..ನಮಗೆ

ನಿತ್ಯ ಸಂಬಂಧಿಯಾಗಿ ಅನಿಮಿತ್ತ ಬಾಂಧವನಾಗಿ ನಮ್ಮಜೊತೆ ಪ್ರತಿಯೊಂದೂ ಕ್ಷಣದಲ್ಲೂ ನೆರಳಿನಂತೆ ಬಿಡದೇ ಇರ್ತಾನೆ.. ಏನೇ ಕಷ್ಟ ಬರಲೀ ಪರಮಾತ್ಮನೇ ಕಾಪಾಡಪ್ಪಾ ಅಂತ ಭಕ್ತಿಯಿಂದ ಬೇಡಿಕೊಂಡರೇ ಯಾವುದೋ ಒಂದು ರೂಪದಿಂದ ಬಂದು ನಮಗೆ ಸಹಾಯ ಮಾಡಿಯೇ ಮಾಡ್ತಾನೆ...  ಅದಕ್ಕೆ ತ್ವಮೇವ ಮಾತಾ ಚ ಪಿತಾ ತ್ವಮೇವ ಅಂತದೆ ಶಾಸ್ತ್ರ- ನೀನೇ ಶಾಶ್ವತ ನನಗೆ ನೀನೇ ತಂದೆ ತಾಯಿ ಅಂತ ಪರಮಾತ್ಮನನ್ನೇ ನಮ್ಮ ತಂದೆ ತಾಯಿ, ಬಂಧು ಬಳಗ ಅಂತಲೇ ತಿಳಿಯಬೇಕು... 


ಎನ್ನ ಕಂದನ ಮೇಲೆ ಮನಸ್ಸಿಡನೋ -  ಅನುಗ್ರಹವಿಲ್ಲದ ದುರ್ಮಾರ್ಗದಲ್ಲಿ ಸಾಗುವ ಮಗನ ಮೇಲೆ ಧೃತರಾಷ್ಟ್ರನ‌ ಕುರುಡು ಪ್ರೀತಿಯ ಹಾಗೆ ಆಸೆ ಮಾಡಲ್ಲ ಸ್ವಾಮೀ ನಾನು, , ಜನ್ಮ ಜನ್ಮಾಂತರದಲ್ಲೂ ಸನ್ಮಾರ್ಗದ ಪಥದಲ್ಲಿ ಸಾಗುವ ಪುನ್ನಾಮ ನರಕದಿಂದ ಪಾರುಮಾಡುವ ಮಕ್ಕಳನ್ನೇ ಕರುಣಿಸು ಅನ್ನೋದನ್ನ ಸದಾ ಬೇಡಿಕೊಳ್ಳಬೇಕು... 


ತ್ರಿಗುಣಹರಿತ ಪರಮಾತ್ಮನ ಧ್ಯಾನದಿ

ಹಗಲಿರುಳಿರಲು ನಿತ್ಯಾನಂದದಿ

ತೆಗೆದು ಪ್ರಪಂಚವಾಸನೆಯ ಬಿಟ್ಟವರಿಗೆ

ಮಗನಿದ್ದರೇನು ಇಲ್ಲದೆ ಹೋದರೇನು


ಪರಮದುಷ್ಟನಾಗಿ  ಮರೆತು ಸದ್ಧರ್ಮವ

ಗುರುಹಿರಿಯರ ಸಾಧುಗಳ ನಿಂದಿಸಿ

ಬೆತನ್ಯಜಾತಿಯ ಪರನಾರಿಯ ಕೂಡಿ

ಹಿರಿಯರ ಜರೆದು ತಾ ನರಕಕ್ಕೆ ಬೀಳುವ 


ಮಗನಿಂದ ಗತಿಯುಂಟೆ ಜಗದೊಳಗೆ

ನಿಗಮಾರ್ಥಸಾರ ವಿಚಾರದಿಂದಲ್ಲದೆ (ಪಲ್ಲವಿ)


ಅಂತಾರೆ ಶ್ರೀ ಯಮಾಂಶಸಂಬೂತರಾದ ಶ್ರೀ ಕನಕದಾಸಾರ್ಯರು. ದೇಹವನ್ನು ಸುಟ್ಟು, ಎಲ್ಲ ಕಾರ್ಯಗಳನ್ನು ಮಾಡಿ , ಪುನ್ನಾಮ ನರಕದಿಂದ ಪಾರು ಮಾಡುವ ಮಗನಿರಬೇಕು ಅಂತ ಹೇಳುತ್ತಲೇ ಕನಕದಾಸಾರ್ಯರು ಅಂತಾರೆ.. ಈ ತರಹದ ಮಗ ಇದ್ದರೂ ಒಂದೇ ಇಲ್ಲದೇ ಇದ್ದರೂ ಒಂದೇ ಅಂತ... 


ಸುತರಿಲ್ಲದವರಿಗೆ ಗತಿಯಿಲ್ಲವೆಂಬುದು

ಕೃತಕಶಾಸ್ತ್ರವು ಲೌಕಿಕಭಾವಕೆ

ಕ್ಷಿತಿಯೊಳು ಬಾಡದ ಆದಿಕೇಶವ ಜಗ-

-ತ್ಪತಿಯ ಧ್ಯಾನಿಪಗೆ ಸದ್ಗತಿಯಿರದೆ ಹೋಹುದೆ ಅಂತಾರೆ.... ಪುತ್ರ ಸಂತಾನವಿಲ್ಲದವರಿಗೆ ಸದ್ಗತಿಯಿಲ್ಲ ಎನ್ನುವ ಶಾಸ್ತ್ರ ಅದು ಮೇಲ್ನೋಟದ ಮಾತಾದರೆ , ಕ್ಷಣ ಬಿಡದೆ ಹರಿಯ ಧ್ಯಾನ ಮಾಡುವ ಸಜ್ಜನರಿಗೆ ಪರಮಾತ್ಮನ ಅನುಗ್ರಹ ಆಗದೇ ಇರುವುದೇ? ಅಂತಾರೆ ಶ್ರೀ ಕನಕದಾಸಾರ್ಯರು.. ಎಷ್ಟು ಅದ್ಭುತ ಅಲ್ವಾ..


ಹೀಗಾಗಿ ಕೆಟ್ಟ ವಿಷಯಗಳಲ್ಲಿ ಆಸಕ್ತನಾಗಿರುವ ಮಗನ ಮೇಲೆ ಆಸೆ ತೋರುವುದಿಲ್ಲ , ಅಂದರೆ  ತೋರಿಸಬಾರದು, ಅಂತಾರೆ ಶ್ರೀ ದಾಸಾರ್ಯರು ...


ಮಂದರಧರ ಶ್ರೀ ಪುರಂದರವಿಠಲ ನೀ ಬಂದರೆ ಚರಣ ಸೇವೆ ಮಾಳ್ಪೆನೋ 


ಮಂದರ ಪರ್ವತವನ್ನು ಹೊತ್ತಿದಂತಹಾ ಪರಮ ಪುರುಷನಾದ ಹೇ ನಾರಾಯಣನೇ , ಬ್ರಹ್ಮಾಂಡವನ್ನು ಹೊತ್ತ ನಿನಗೆ ನನ್ನ ಈ ಭವ ಬಂಧನವೆಂಬ ಭಾರ ಹೊತ್ತುವದೇನಷ್ಟು ಕಷ್ಟವಲ್ಲ ಸ್ವಾಮಿ! ಕಾಪಾಡಿ ನನ್ನ ಭಾರವನ್ನು ನೀನೇ ಹೊತ್ತು ನನ್ನ ಹೃದಯ ಕಮಲದ ಮಧ್ಯದಲ್ಲಿನ ಮಂಟಪದಲ್ಲಿ ಸುಖಾಸೀನನಾಗಿ ಕೂತರೆ ನಿನ್ನ ಚರಣಸೇವೆಯನ್ನು ಮಾಡುವುದರಿಂದ ನಿನ್ನ ಅನುಗ್ರಹಕ್ಕೆ ಪಾತ್ರನಾಗುವೆನೋ ಕೃಷ್ಣಾ ಅಂತಾರೆ ಶ್ರೀಮತ್ಪುರಂದರದಾಸಾರ್ಯರು.... 


ಈ ಮನುಷ್ಯ ಜನ್ಮಬರಲು ನಮ್ಮ ಅನಾದಿಕರ್ಮಗಳೇ ಒಂದು ರೀತಿಯಿಂದ ಕಾರಣವಾದ್ದರಿಂದ ಪರಮಾತ್ಮನೇ ತಂದೆ ಎನಿಸಿಕೊಳ್ತಾನೆ,  ಮೂಲ ಪ್ರಕೃತಿಯೇ ತಾಯಿ ಎನಿಸಿದ್ದಾಳೆ . ಈ ಸ್ಥೂಲ ಶರೀರದಲ್ಲಿ ಇವರಿಂದಲೇ ಜನನ,ಜೀವನ,ಮರಣ. ಆದರೇ ಈ ಜೀವ ಚೈತನ್ಯವೆಂಬ ಸ್ತ್ರೀಯು ಸಹಾ ಈ ಅನಾದಿಕರ್ಮಗಳು ಹಾಗೂ ಈ ಶರೀರವನ್ನು ಬಿಡಲು ಹುಟ್ಟಿ, ಊಹ ತಿಳಿದನಂತರದಿಂದಲೇ ಸಿದ್ಧರಾಗಲೇಬೇಕು... ಪರಮಾತ್ಮನಿಗಾಗಿ, ಲೌಕಿಕ ತಾಯಿ ತಂದೆ , ಬಂಧು ಬಳಗ ಇವರೆಲ್ಲರನ್ನೂ ಸಹಾ ಪರಮಾತ್ಮನ  ಪರಿವಾರವೆಂದೇ ತಿಳಿದುಕೊಂಡು ನಾವು ಈ ಭೂಮಿಮೇಲೆ, ಈ ದೇಹದಲ್ಲಿ ಇರುವವರೆಗೆ ಅವರ ಸೇವೆಯನ್ನು ಭಕ್ತಿಪೂರ್ವಕದಿಂದ ಮಾಡಿ ಆ ಸೇವೆಯನ್ನು ಅನಿಮಿತ್ತಬಂಧುವಾದ ಪರಮಾತ್ಮನ  ಪಾದಾರವಿಂದಗಳಲ್ಲಿ ವಿನಮ್ರಪೂರ್ವಕವಾಗಿ, ಭಕ್ತಿಯಿಂದ ಸಲ್ಲಿಸುವದೇ ಈ ಜೀವನದ ರಹಸ್ಯ ಎನ್ನುವುದನ್ನು ದಾಸಾರ್ಯರು ಇಲ್ಲಿ ತಿಳಿಸುತ್ತಾ ,  ಲೌಕಿಕವಿದ್ಯೆಯೆಂಬ ಗಂಡನಿಂದ ಜನಿಸಿದ ವಿಷಯಸುಖವೆಂಬ ಕಂದನ ಆರೈಕೆಯಲ್ಲಿಯೇ ನಮ್ಮ ಜೀವನವನ್ನು ವ್ಯರ್ಥ ಮಾಡಿಕೊಳ್ಳರಾದೇ ಪೂರ್ವ ಜನ್ಮಗಳಿಂದ ಲಬ್ದವಾದ ಪುಣ್ಯದಿಂದ  ಇಂತಹಾ ಅತೀ  ವಿರಳವಾದ ಈ ಮಾನುಷ ದೇಹದಿಂದ  ಗುರುಗಳ ಮುಖಾಂತರ ಸಮೀಚೀನವಾದ ಶಾಸ್ತ್ರಜನ್ಯವಾದ ಜ್ಞಾನವನ್ನು ಪಡೆದುಕೊಂಡು ನಿರಂತರ ಪರಮಾತ್ಮನ  ಪಾದಾರವಿಂದಗಳಲ್ಲೇ ನಮ್ಮ ಮನಸ್ಸನ್ನು ತೊಡಗಿಸಿಕೊಳ್ಳಬೇಕೆಂಬ ಕಿವಿಮಾತನ್ನು,  ಪರಮ ರಹಸ್ಯವನ್ನು ತಮ್ಮ ಇಂತಹಾ ಅಪರೂಪವಾದ ಮುಂಡಿಗೆಯ ಮುಖಾಂತರ ತಿಳಿಯಾಗಿ ತಿಳಿಸಿಕೊಟ್ಟ ಶ್ರೀಮತ್ಪುರಂದರದಾಸಾರ್ಯರ ಅಡಿದಾವರೆಗಳಲ್ಲಿ ಶಿರಸ್ಸನ್ನಿಟ್ಟು ಭಕ್ತಿಪೂರ್ವಕವಾಗಿ ನಮಸ್ಕಾರಗಳು ಸಲ್ಲಿಸುವುದು ಬಿಟ್ಟು ಬೇರೇನು ಮಾಡಲು ನಮಗೆ ಸಾಧ್ಯವಿದೆ ಹೇಳಿ? ನಾರಾಯಣನೆಂಬ ನಾಮದ ಬೀಜವ 

ನಾರದ ಬಿತ್ತಿದ ಧರೆಯೊಳಗೆ ಎಂದು ನಾರದರೇ ಹುಟ್ಟಿ ಬಂದು ನಾರಾಯಣ ನಾಮಸ್ಮರಣೆಯ ಮಾಹತ್ಮ್ಯವನ್ನು ಪ್ರಾಕೃತ ಭಾಷೆಯಲ್ಲಿ ಪದ, ಪದ್ಯ ಸುಳಾದಿಗಳಲ್ಲಿ ಪರಮಾತ್ಮನ ನೈವೇದ್ಯ ರೂಪವಾಗಿಯೇ ನಮಗೆ ನೀಡಿದರೆ ಆ ತಿರುಪತಿ ವೆಂಕಪ್ಪನ ಲಡ್ಡಿಗೆಯಂತೆ ರುಚಿಯಾಗಿರುವ ಆ ಪ್ರಸಾದವನ್ನು ಆ ಜೀವನಪರ್ಯಂತವೂ ಭಕ್ತಿಯಿಂದ ಸ್ವೀಕರಿಸೋಣ.. ಹೊನ್ನು, ಮಣ್ಣು  ,ಹೆಣ್ಣು, ತಂದೆ ತಾಯಿ,ಗಂಡ, ಮಕ್ಕಳು,   ಎಲ್ಲವೂ ನಮ್ಮ ಜೊತೆ ಬರುವುದಿಲ್ಲ ಹರಿನಾಮಸ್ಮರಣೆ ಹೊರತು ಪಡಿಸಿ..

ಶ್ರೀಮತ್ಪುರಂದರದಾಸಾರ್ಯರ ಗುರುಗಳು ಶ್ರೀಮಚ್ಚಂದ್ರಿಕಾಚಾರ್ಯರು ತಿಳಿಸಿದಂತೆ ಹರಿನಾಮ ಜಿಹ್ವೆಯೊಳಿರಬೇಕು ನರನಾದಮೇಲೆ ಎನ್ನುವ ಮಾತನ್ನು ಪದೇ ಪದೇ ಮನಸಿನಲ್ಲಿ ನೆನೆಯುತ್ತಾ ... ಸೂಕ್ತ ಶ್ಲೋಕಗಳನ್ನು ನೀಡಿದ ಶ್ರೀ ಜಯತೀರ್ಥ ಹಂಪಿಹೊಳಿ ಆಚಾರ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸುತ್ತಾ... 

ಅಸ್ಮದ್ ಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ

ಶ್ರೀ ಲಕ್ಷ್ಮೀ ವೆಂಕಟೇಶಾಭಿನ್ನ ಪುರಂದರವಿಠಲನ ಪದಪದ್ಮಗಳಲ್ಲಿ ಪುಟ್ಟ ಸೇವೆಯನ್ನು ಆರಾಧನಾ ಕುಸುಮದ ರೂಪದಲ್ಲಿ  ಸಮರ್ಪಣೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***


No comments:

Post a Comment