Friday, 27 December 2019

ಎಲ್ಲಿ ಹೋಗುವೆ ಮನದಿ ನಿಲ್ಲೊಂದು ಘಳಿಗೆ ankita varaha timmappa

by ನೆಕ್ಕರ ಕೃಷ್ಣದಾಸರು   
ರಾಗ :  ಸಾವೇರಿ   ತಾಳ : ಝಂಪೆ 

ಎಲ್ಲಿ ಹೋಗುವೆ ಮನದಿ ನಿಲ್ಲೊಂದು ಘಳಿಗೆ 
ಸೊಲ್ಲ ಲಾಲಿಸು ಲಕ್ಷ್ಮೀವಲ್ಲಭನೆ ನೀನು                             ।।ಪ।।

ನಡುನೀರೊಳಾಡುವೆಯೊ ಅನಿಮಿಷನು ನೀನಾಗಿ 
ಕಡುಭಾರದಿಂದಿಳಿವ ಗಿರಿಯನೆತ್ತುವೆಯೊ 
ಅಡವಿಯೊಳು ಚರಿಸುವೆಯೊ ಒಗೆದು ಬೇರನು ತಿನ್ನ 
ಲೊಡೆಯುವೆಯೊ ಕುಂಭವನು ಘನ ಮಹಿಮೆಯಿಂದ             ।।೧।।

ಬೇಡಿ ದೈತನ ನೀನು ಮೂರಡಿಯ ಭೂಮಿಯನು 
ಕಡು ಚೆಲ್ವ ಪಾದದಿಂದದಳೆಯ ಪೋಗುವೆಯೊ 
ಕೊಡಲಿಯೊಳು ಭೂಭುಜರ ಸಂತತಿಯ ಕೋಪದಿಂದ 
ಕಡಿದುಕೊಂದೆ ನೀನೆಂದು ಜಗವೆಲ್ಲ ಹೊಗಳುತಿದೆ                ।।೨।।

ವಾರಿಧಿಯ ಕಟ್ಟುವೆಯೊ ಬೆಟ್ಟವನು ತಂದಿಕ್ಕಿ 
ನಾರಿಯರ ಸೇರುವೆಯೊ ಕಡು ಮಮತೆಯಿಂದ ಶ-
ರೀರದೊಳು ನಾಚಿಕೆಯ ಹೊರಗಿಡುವೆಯೊ ನೀನು 
ವಾರುವನನೇರುವೆಯೊ ಇರೈದ ತೋರುವೆಯೊ                    ।।೩।।

ಬೆಟ್ಟದೊಳು ನಿಲ್ಲುವೆಯೊ ಕಟ್ಟುವೆಯೊ ರೊಕ್ಕವನು 
ಶೆಟ್ಟಿಗಾರನುಯೆಂದು ಪೆಸರಿಟ್ಟೆಯೊ 
ಸೃಷ್ಟಿಪಾಲಕ ವರಾಹ ತಿಮ್ಮಪ್ಪನೆಂಬುದನು 
ದೃಷ್ಟಿಯಲಿ ನೋಡಿ ಕಿವಿಗೊಟ್ಟು ಮಾತಾಡು                        ।।೪।।
*********

No comments:

Post a Comment