Friday 27 December 2019

ಸ್ಮಾರ್ತರು ನಾಮವ ಧರಿಸಿ ಯಥಾರ್ಥವು ankita varaha timmappa

by ನೆಕ್ಕರ ಕೃಷ್ಣದಾಸರು
ರಾಗ :ಮುಖಾರಿ ಅಷ್ಟತಾಳ 

ಸ್ಮಾರ್ತರು ನಾಮವ ಧರಿಸಿ ಯಥಾರ್ಥವು

ಹರಿನಾಮವ ಬಹಳ ವಿಸ್ತರಿಸಿ ||ಪ||

ಕಣ್ಣಿಗೆ ಕಾಣದೆ ಪೂರ್ಣವಾಗಿಹ ನಾಮ

ಚನ್ನಕೇಶವ ರಾಯನೆಂದೆಂಬ ನಾಮ
ಉನ್ನತವಾಗಿಹ ನಾರಾಯಣ ನಾಮ
ಮನ್ಮಥನಯ್ಯನು ಮಾಧವ ನಾಮವ ||೧||

ಅಂತರಂಗದಿ ಗೋವಿಂದನ ನಾಮವ

ಚಿಂತಿಸಿ ವಿಷ್ಣುವ ಸಿರಿನಾಮವ
ಸಂತತ ಮಧುಸೂಧನನೆಂಬ ನಾಮವ
ಪಂಥವಿಡಿದು ತ್ರಿವಿಕ್ರಮ ನಾಮವ ||೨||

ಮನದೊಳು ಅನುದಿನ ವಾಮನನಾಮವ

ವನಜಾಕ್ಷ ಶ್ರೀಧರಗುಣ ನಾಮವ
ವಿನಯದಿ ಹೃಷಿಕೇಶನೆನುತಿಹ ನಾಮವ
ತನುವಾದ ಪದುಮನಾಭನ ನಾಮವ ||೩||

ಅಂದದೊಳು ಧರಿಸಿರುವ ದಾಮೋದರ ನಾಮ

ಚಂದದಿ ವಾಸುದೇವನ ನಾಮವ
ಕುಂದದೆ ಸಂಕರ್ಷಣನೆಂಬ ನಾಮವ
ಬಂಧನ ಪರಿಹಾರ ಪ್ರದ್ಯುಮ್ನ ನಾಮವ ||೪||

ಅರ್ಥಿಯಿಂದಲೆ ಅನಿರುದ್ಧನ ನಾಮವ

ಉತ್ತಮ ಪುರುಷೋತ್ತಮ ನಾಮವ
ಭಕ್ತಿಯಿಂದಲೆ ಅಧೋಕ್ಷಜನೆಂಬ ನಾಮವ
ಮೃತ್ಯುವು ಕಾಣದ ನರಹರಿ ನಾಮವ ||೫||

ಆಶ್ಚರ್ಯವಾಗಿಹ ಅಚ್ಯುತನಾಮವ

ನಿಶ್ಚಯಿಸಿ ಜನಾರ್ಧನನಾಮವ
ಬಚ್ಚಿಡಬೇಡ ಉಪೇಂದ್ರನ ನಾಮವ
ಹಚ್ಚಿರೊ ಹರಿಯೆಂಬ ಸಿರಿನಾಮವ ||೬||

ದುಷ್ಟನಿಗ್ರಹವಾದ ಕೃಷ್ಣನ ನಾಮವ

ಬೆಟ್ಟದ ವರಾಹತಿಮ್ಮಪ್ಪನ ನಾಮವ
ಇಟ್ಟುಕೊಂಡರೆ ಅನುದಿನ ಘನನಾಮವ
ಸೃಷ್ಟಿಯೊಳು ಉತ್ತಮ ಸ್ಮಾರ್ತನೆ ವೈಷ್ಣವ ||೭||
*******

No comments:

Post a Comment