ಮಂಡೆ ಬೋಳಾದರೇನು ಮನಶುದ್ಧಿಯಿಲ್ಲವು || ಪ ||
ಕಂಡು ಹಯವದನನ್ನ ಒಲಸಿಕೊಂಡವ ಧನ್ಯ || ಅ.ಪ ||
ನಾರದರವತಾರವೆಂದು ಜಗಕೆ ತೋರಿ ಸಿರಿ
ಪುರಂದರದಾಸರ ಮನೆಯಲ್ಲಿ
ಪರಿಪರಿ ಲೀಲೆಯ ಮಾಡಿ ಬಿಡದೆ ನಿತ್ಯ
ಅರಿತು ಅವರ ಸಾಧನಕೆ ಸಾರಥಿಯಾದಿ || ೧ ||
ಗುರು ವ್ಯಾಸಮುನಿ ನಿಮ್ಮ ನೋಡುವೆನೆಂತೆಂದೊಡೆ
ಮರೆ ಮಾಡಿ ಮೂರು ರೂಪ ಜನುಮವೆಂದಿ
ಹರುಷದಿ ಕನಸಿನೊಳಗೆ ಬಂದುಭಯರಿಗೆ
ಅರುಪಿಸಿ ಸ್ವರೂಪ ಅರಿಯದಂತಿದ್ಯೊ ದೇವ || ೨ ||
ಅವರ ಮೇಲಿದ್ದ ದಯ ಎನ್ನ ಮೇಲೆಂದಿಗೋ ದೇವ
ಯಾವುದೂ ಭರವಸೆದೋರದಯ್ಯ
ಕವಿದೆಮ್ಮಭಿಮಾನ ಬಿಟ್ಟರೆ ಬಿಡದಯ್ಯ
ಅವಕಾಲಕ್ಕೆ ನಿನ್ನ ದಾಸನೆಂಬಂತೆ ಮಾಡೊ || ೩ ||
ನಮ್ಮ ಗುರುಗಳ ಸಮ್ಮತದಿಂದುಡುಪಿಯಲ್ಲಿ
ಗಮ್ಮನೆ ಪೇಳಿದೆನು ಸಟೆಯಲ್ಲವು
ಸುಮ್ಮನೆ ತಿಳಿಯದೆ ಅಲ್ಲವೆಂದವರ್ಗಿನ್ನು
ಗಮ್ಮನೆ ತಮಸಿನೊಳಿಹುದು ಸತ್ಯವು || ೪ ||
ಓದಿದಾಕ್ಷಣದಿಂದ ಧನ್ಯನೆಂದೆನು ನಾನು
ಸಾಧಿಸಲಾಪೆನೆ ನಿನ್ನ ಸೇವೆಯನು
ಆದಿಮೂರುತಿ ಸಿರಿಹಯವದನರೇಯ
ಮೋದದಿಂದ ನಿನ್ನ ದಾಸರ ಸಂಗದಲ್ಲಿಡು ಕಂಡ್ಯ || ೫ ||
*******
ರಾಗ: ವರಹಾಳಿ ತಾಳ: ತ್ರಿವಿಡಿ (raga, taala may differ in audio)
No comments:
Post a Comment