ಶ್ರೀವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ
(ಡಂಭಾಚಾರದಿಂದ ವೃಥಾ ಜನರನ್ನು ಮೊಸಗೊಳಿಸದೆ, ದುರಾಚಾರ ದೂರಗೈದು,
ಡಾಂಭಿಕ ತೊರೆದು, ಅತಿ ಭಕುತಿಯಿಂದ ಶ್ರೀಹರಿಯನ್ನು ಗುಪ್ತದಲ್ಲಿ ಭಜಿಸುವದು.)
ರಾಗ ದರ್ಬಾರಿಕಾನಡ
ಧ್ರುವತಾಳ
ಜಾತಿಕಾರನು ಒಂದು ಜೋಳಿಗೆ ಮಾಡಿಕೊಂಡು
ಯಾತರ್ಯಾತರ ಮರದ ಬೇರರದು ಚೂರ್ಣ -
ವ ತುಂಬಿಕೊಂಡು ನಡುಬೀದಿಯೊಳಗೆ ಬಂದು
ತಾ ಥೂ ಎಂತೆಂಬ ಗಾರುಡ ಮಂತ್ರವ
ಮಾತುಗಾರಿಕೆಯಿಂದ ಕಣ್ಣು ಮಸಕನೆ ತೋರಿ
ಬಾತಿ ಬಸಿದು ಪೊಟ್ಟಿಯ ಪೊರೆವ
ಜಾತಿಕಾರನಂತೆ ನಾನೊಬ್ಬ ವೇಷ ಧರಿಸೀ
ನೂತನ ಮಾಯದ ಬೆಡಗಿನಿಂದ
ಭೂತ ಸೋಂಕಿದ ಮಾನವನಂತೆ ಹಲವು ನೀ -
ಕೇತನಗಳನು ತಿರುಗಿ ತಿರುಗೀ
ಆತುಮಾರ್ಥವಾಗಿ ಅಂಗಡಿ ವಿರಚಿಸಿ
ನೋತ ಪುಣ್ಯಗಳೆಲ್ಲ ಬರಿದು ಗೈದು
ಭೂತ ಮಹೇಶ್ವರ ವಿಜಯವಿಠ್ಠಲ ನಿನ್ನ
ಪ್ರೀತಿಯ ಬಡಿಸದೆ ಪಾಪಾತುರ ನಾನಾದೆ ॥ 1 ॥
ಮಟ್ಟತಾಳ
ಸೂಳೆ ಶೃಂಗಾರವನ್ನು ಮೇಲು ಮಾಡಿಕೊಂಡು
ವೇಳ್ಯ ವೇಳಿಗೆ ತನ್ನ ಕಾಲವ ಕಳೆವಂತೆ
ಆಳುಡಂಬಕನಾಗಿ ತೋಳು ಹಸ್ತವ ತಿರುಹಿ
ಕೇಳಿಕೆಯನು ಹೇಳಿ ಸಾಲುದಿನವ ಕಳೆದೆ
ಲೋಲ ಮಹಕೃತುವೆ ವಿಜಯವಿಟ್ಠಲ ಕರು -
ಣಾಳು ಹೀನನಾಗಿ ಬಾಳಿದೆನೊ ಬಂದೂ ॥ 2 ॥
ತ್ರಿವಿಡಿತಾಳ
ಅನ್ನದಾನೀ ಎಂಬೊ ಪೆಸರು ಒಂದಲ್ಲದವನ
ಮನೆಯಲ್ಲಿ ಗಂಗಾಮೃತವೇ ವರ್ಜ -
ವನ್ನು ಮಾಡಿಕೊಂಡು ಕೀರ್ತಿಯ ಪಡೆದಂತೆ
ಎನ್ನ ಭಾಗವತತನ ಇಂತಿಪ್ಪದಯ್ಯಾ
ಅನ್ಯರ ಕಣ್ಣಿಗೆ ಬಲುರಮ್ಯವಾಗಿ ಪಾ -
ವನ್ನನೆಸಿಕೊಂಡೆ ಬಹಿರದಲ್ಲಿ
ಬಣ್ಣವಲ್ಲದೆ ಲೇಶ ಅಂತರ ಶುಚಿ ಇಲ್ಲಾ
ಬಿನ್ನಣದಲಿ ಹಗಲಿರುಳು ಪರರ
ಬಣ್ಣಿಸಿ ಹರಿದಾಸನೆಂದೆನಿಸಿದೆನೊ
ಎನ್ನ ನೋಡು ಬೃಹತ್ತ ವಿಜಯವಿಟ್ಠಲರೇಯ
ನಿನ್ನಂಘ್ರಿ ಭಕ್ತಿ ಮಾರ್ಗವನ್ನು ಕಾಣೆನೊ ಜೀಯಾ ॥ 3 ॥
ಅಟ್ಟತಾಳ
ಭಕುತಿಯ ತೋರುವೆ ಭಕುತಿಗೋಸುಗ ಪೋಗಿ
ಕಕುಲಾತಿ ತೊರಿಯದೆ ಸಕಲ ಸೊಗಸಿನಿಂದ
ಹಕಲ ಮನಸಿನಲ್ಲಿ ಬಕನು ಕುಳಿತು ತನ್ನ
ಭಕುತಿಗೆ ಒಂದು ಕುಯುಕುತಿಯ ನಡಿಸಿ ಉ -
ದಕ ತೀರವಿದ್ದಂತೆ ಭಕುತಿಯ ತೋರುವೆನು
ಸಕಲ ಜನರ ಮುಂದೆ ಭಕುತಿಯ ತೋರುವೆನು
ಸಕಲೇಶ ಕ್ಷೇತ್ರಜ್ಞ ಶ್ರೀವಿಜಯವಿಟ್ಠಲರೇಯ
ಅಕಳಂಕನಾಗದೆ ಅಕಟ ಕುಮತಿಯಾದೆ ॥ 4 ॥
ಆದಿತಾಳ
ಚೋರನು ಸುಗುಣನಾಗಿ ಊರ ಒಳಗೆ ತಿರುಗಿ ಪರರಾ -
ಪಾರ ವಸ್ತು ಅಪಹರಿಸಿ ತೋರುವ ಸಜ್ಜನನಾಗಿ
ಊರು ಕೇರಿಯೊಳಗೆ ನಾನು ಸಾರಹೃದಯನೆನಿಸಿ ವಿ -
ಕಾರತನವನು ಎಲ್ಲ ಬೀರಿ ಭಾಗ್ಯವಂತರಲ್ಲಿ
ಸೂರಿಗೊಂಬೆ ಹೊನ್ನು ಹಣವ ಮಾರಿಗೆ ನಿನ್ನ ಮಹಿಮೆ
ಮಾರಿ ಧನ್ಯನಾಗಿ ಉದರ ಪೂರವಾಗಿ ಪೊರೆದೆ ರಂಗ
ಶ್ರೀರಮಣ ಮಹಕ್ಷಯ ವಿಜಯವಿಟ್ಠಲ ನಿನ್ನ
ಆರಾಧನೆ ಬಿಟ್ಟು ವೃಥಾ ಭಾರವಾದೆ ಧರಣಿಯಲ್ಲೀ ॥ 5 ॥
ಜತೆ
ಗುಪ್ತದರ್ಚನೆ ಕೊಡೊ ಗುಣಗಣ ನಿಲಯಾನೆ
ಸಪ್ತವಾಹನ ನಮ್ಮ ವಿಜಯವಿಟ್ಠಲ ನಿರುತಾ ॥
****
No comments:
Post a Comment