Friday, 19 November 2021

ಯಾರೂ ಸಂಗಡ ಬಾಹೋರಿಲ್ಲ ನಾರಾಯಣ ankita neleyadikeshava YAARU SANGADA BAAHORILLA NARAYANA


also ankita in purandara vittala
ankita neleyadikeshava

ankita neleyadikeshava




ಯಾರೂ ಸಂಗಡ ಬಾಹೋರಿಲ್ಲ ll ಪ ll 

ನಾರಾಯಣ ನಾಮ ನೆರೆ ಬಾಹೋದಲ್ಲದೆ ll ಅ ಪ ll

ಹೊತ್ತು ನವಮಾಸ ಪರ್ಯಂತರವು ಗರ್ಭದಲಿ
 ಅತ್ಯಂತ ನೋವು ಬೇನೆಗಳಿಂದಲಿ 
ತುತ್ತು ವಸ್ತ್ರವನಿಕ್ಕಿ ಸಲಹಿದ ತಾಯ್ತಂದೆ 
ಅತ್ತುಕರೆದೊಯ್ದವರಲ್ಲದೆ ಬೆನ್ಹತ್ತಿ ಬರುವರೆ ll 1 ll

ಗುರು ಬಂಧು ಬುಧ ಜನರು ನಿಂತಗ್ನಿ ಸಾಕ್ಷಿಯಾಗಿ 
ಕರವಿಡಿದು ಧಾರೆಯನೆರೆಸಿಕೊಂಡ
ತರುಣಿ ಇನಿಯನ ಹರಣ ಹೋಗಲು ತಾ ಕಂಡು
ಬರುವುದಕಂಜಿ ಮುಂದೆ ಯಾರು ಗತಿಯೆಂಬುವಳು ll 2 ll

ಮಡದಿ ಮಕ್ಕಳು ತಮ್ಮ ಧನಕೆ ಬಡಿದಾಡುವರು
ಧನಕಾಗಿ ನಿನ್ನನ್ನೆ ನಂಬಿದವರು
ಅನುಮಾನವೇಕೆ ಈ ಜೀವ ತೊಲಗಿದಾಕ್ಷಣದಿ 
ಮುಂದೊಂದು ಅರಗಳಿಗೆ ನಿಲ್ಲಗೊಡವರು ll 3 ll 

ಸುತ್ತಲು ಕುಳ್ಳಿರ್ದ ಮಿತ್ರ ಬಾಂಧವರೆಲ್ಲ
ಹೊತ್ತು ಹೋಯಿತು ಹೊರಗೆ ಹಾಕೆನುವರೋ
ಹಿತ್ತಲ ಕಸಕಿಂತ ಕಡೆಯಾಯಿತ ಈ ದೇಹ 
ಹೊತ್ತುಕೊಂಡೊಯ್ದು ಅಗ್ನಿಯೊಳು ಬಿಸುಡುವರು ll 4 ll

ಹರಣ ಹಿಂಗದ ಮುನ್ನ 
ಹರಿಯ ಸೇವೆಯ ಮಾಡಿ
ಪರಗತಿಗೆ ಸಾಧನವನ್ನು ಮಾಡಿಕೊಳ್ಳೊ 
ಕರುಣಾನಿಧಿ ಕಾಗಿನೆಲೆಯಾದಿ ಕೇಶವ ನಿನ್ನ 
ಚರಣವನು ನೆನೆನೆನೆದು ಸುಖಿಯಾಗೊ ಮರುಳೇ ll 5 ll
***

ankita purandara vittala 👇👇
ಯಾರೂ ಸಂಗಡ ಬಾಹೋರಿಲ್ಲ
ನಾರಾಯಣನ ನಾಮ ನೆರೆಬಾಹೋದಲ್ಲದೆ ||

ಹೊತ್ತು ನವಮಾಸ ಪರ್ಯಂತವು ಗರ್ಭದಲಿ
ಹೆತ್ತು ಬಲು ನೋವು ಬೇನೆಗಳಿಂದಲಿ
ತುತ್ತು ಬುತ್ತಿಯ ಕೊಟ್ಟು ಸಲಹಿದಂಥಾ ತಾಯಿ
ಅತ್ತು ಕಳಹುವಳಲ್ಲದೆ ನೆರೆ ಬಹಳೆ ||

ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನ
ಭಾವಶುದ್ಧದಿ ಧಾರೆಯೆರೆಸಿಕೊಂಡ
ದೇವಿ ತನ್ಸತಿ ತಲೆಗೆ ಕೈಯಿಟ್ಟುಕೊಂಡು ಇ-
ನ್ನಾವ ಗತಿಯೋ ಎಂದು ಅಳುತುಳಿವಳಲ್ಲದೆ ||

ಮತ್ತೆ ಪ್ರಾಣರು ತನುವ ಬಿಟ್ಟು ಹೋಗುವಾಗ
ಎತ್ತಿವನ ಹೊರಗೊಯ್ದು ಹಾಕೆಂಬರು
ಎತ್ತಿದ ಕಸಕಿಂತ ಕಡೆಯಾಯಿತೀ ದೇಹ
ವಿತ್ತವೆಷ್ಟಿದ್ದರು ಫಲವಿಲ್ಲ ಪ್ರಾಣಿ ||

ಪುತ್ರಮಿತ್ರರು ಸಕಲಬಂಧುಗಳು ಸತಿಯರು
ಹತ್ತಿರದೊಳ್ ನಿಂತು ನೋಡುವರಲ್ಲದೆ
ಮೃತ್ಯುದೇವಿಯು ಬಂದು ಪ್ರಾಣವನು ಸೆಳೆವಾಗ
ಜಾತ್ರೆ ಜನರಷ್ಟಿದ್ದು ಏನು ಮಾಡುವರು ||

ಯಮನ ದೂತರು ಬಂದು ಪಾಶವನು ತಗಲ್ಹಾಕಿ
ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು
ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ
ಕಮಲಾಕ್ಷ ಪುರಂದರವಿಠಲ ನೀನಲ್ಲದೆ ||
***


No comments:

Post a Comment