Saturday, 4 September 2021

ಎಚ್ಚರ ಕೇಳೊ ಮನವೆ vijaya vittala ankita suladi ಸಾಧನ ಸುಳಾದಿ ECHCHARA KELO MANAVE SADHANA SULADI

.ರಾಗ ಮೋಹನ


Audio by Mrs. Nandini Sripad

ಶ್ರೀವಿಜಯದಾಸಾರ್ಯ ವಿರಚಿತ 


 ಸಾಧನ ಸುಳಾದಿ 


(ಅಸ್ಥಿರವಾದ ದೇಹ ನಂಬಬೇಡ, ಸಂಸಾರದಿ ಸುಖವಿಲ್ಲ. ಪರಮ ಸಖನಾದ ಶ್ರೀಹರಿಯನ್ನು ಭಜಿಸು.) 


 ಧ್ರುವತಾಳ 


ಎಚ್ಚರ ಕೇಳೊ ಮನವೆ ನೆಚ್ಚದಿರು ಈ ಕಾಯ

ನಿಚ್ಚಲ ನಿನ್ನಾಧೀನ ಅಚ್ಚಟ ಇಪ್ಪನೆಂದು

ಬಚ್ಚಲಗಲ್ಲಿಗೆ ನೀಚತನವುಂಟೆ

ರೊಚ್ಚಲ್ಲದೆ ನೋಡೆ ಹೆಚ್ಚಳವಾಗದು

ಹೆಚ್ಚಿನ ಮಮಕಾರ ಪಚ್ಚಿಕೊಂಡಿದ್ದರೆ

ಬೆಚ್ಚಿಸಿದಂತೆ ದೇಹ ಕಚ್ಚಿಕೊಳತಕ್ಕದೆ

ಎಚ್ಚತ್ತು ತಿಳಿದುಕೋ ಹುಚ್ಚಾಗದಿರು ನೀನು

ಮುಚ್ಚುಮರೆ ಇಲ್ಲದೆ ಚೆಚ್ಚಾರದಲ್ಲಿ ನುಡಿದೆ

ಸಚ್ಚಿತ್ತನಾಗಿ ಬಾಳು ಕುಚ್ಚಿತ ಪ್ರವರ್ತಿಸೆ

ಕೆಚ್ಚೆದೆ ಯಮಭಟರು ಚೆಚ್ಚೆಬಟ್ಟಿಯ ಮಾಡಿ

ಬಿಚ್ಚಿ ಭಂಗ ಬಡಿಪರು ಬಚ್ಚಿಟ್ಟರೀದಾರಿ

ಇಚ್ಛಕನಾಗು ಕಾಲೋಚಿತವೆಂದು ಗ್ರಹಿಸು

ರಚ್ಚಿಗೊಳಗಾಗದೆ ಕೊಚ್ಚಿ ಹರಿವ ನದಿ

ನೆಚ್ಚಿಕೆ ಇಪ್ಪದಕ್ಕೆ ಮಚ್ಚುಗೊಂಡಿರದಿರು

ಎಚ್ಚರ ಕೇಳು ಮನವೆ

ಅಚ್ಚುತಾನಂತ ನಮ್ಮ ವಿಜಯವಿಟ್ಠಲ ಹರಿಯ

ಸಚ್ಚರಿತವ ನೆನೆದು ಅಚ್ಚಗತಿಯನೈದು ॥ 1 ॥ 


 ಮಟ್ಟತಾಳ 


ಹರಿವ ಹರಿಯ ಉದಕ ಕರದಿಂದಲಿ ತಡದು

ಹಿರಿದಾಗಿ ನಿಲಿಸಿ ಮರಳೆ ಈಸುವೆನೆಂದೀ -

ಪರಿ ಚಿಂತಿಸಿದಂತೆ ಧರಣಿಯೊಳಗೆ ಬಂದ

ಶರೀರ ಎನ್ನದೆನಲು ಹುರಳಿಲ್ಲದ ಮಾತು

ಬರಿದೆ ಪೋಗುವದು ಹೊರಗೆ ಹೋಗುವ ಉ -

ಸುರು ನಿನ್ನಾಧೀನ ಇರಬಲ್ಲದೆ ಮನವೆ

ಬರಿದೆ ನಂಬದಿರು ಮರುಳಾಟದ ಲೀಲೆ

ಸುರಪಾಲಕ ನಮ್ಮ ವಿಜಯವಿಟ್ಠಲನ್ನ 

ಸ್ಮರಣೆಯಲ್ಲಿ ವಾಸರವನೆ ಪೋಗಾಡು ॥ 2 ॥ 


 ತ್ರಿವಿಡಿತಾಳ 


ಎಂಥ ದಯವಂತ ಯದುಕುಲತಿಲಕ ಶ್ರೀ -

ಕಾಂತನು ಕರುಣಿಸಿ ಇತ್ತ ಸಾಮ್ರಾಜ್ಯವ

ಎಂತು ಪೇಳಲಿ ಮನವೆ ಚನ್ನಾಗಿ ಲಾಲಿಸು

ಸಂತತ ತೊಲಗದೆ ಹಗಲಿರಳು

ಅಂತರಂಗದೊಳು ಅಪಾರ ಮಹಿಮನು

ನಿಂತು ನಿಮಿಷ ಬಿಡದೆ ರಕ್ಷಿಸುವ

ಕಂತುಜನಕ ನಮ್ಮ ವಿಜಯವಿಟ್ಠಲ ಹರಿಯ

ಚಿಂತಿಸು ಚಿರಕಾಲ ಚತುರಗುಣದಲ್ಲಿ ॥ 3 ॥ 


 ಅಟ್ಟತಾಳ 


ಕರ ಚರಣ ಚಕ್ಷು ನಾಸ ವದನ ಕರ್ನ

ತರುವಾಯ ಜಿಹ್ವೆ ನಾನಾ ಉಪಾಯವ

ಹರಿ ಪ್ರೇರಕನಾಗಿ ದಿನಪ್ರತಿ ನಡೆಸುತ್ತ

ದುರಿತಗಳಟ್ಟಿ ಕಾಡದಂತೆ ಪರಿ ಪರಿ

ಕರುಣದಿಂದಲಿ ಪರಿಪಾಲಿಸಿ ಸಂಗಡ

ತಿರುಗುತ್ತಲಿಪ್ಪನು ತನ್ನವನಿವನೆಂದು

ಮರುಳೆ ಮನಸೆ ನೀನು ಹಲವು ಹಂಬಲಿಸಿ ಪಾ -

ಮರನಾಗಿ ಕೆಡದಿರು ಸಂಸಾರವೆಂಬೋದು

ಉರಲು ಪಾಶವು ಕಾಣೊ ಗೆಲಿಪರೊಬ್ಬರಿಲ್ಲ

ಹರಣ ಮೊದಲಾದ ಸಕಲ ಒಡವಿ ವಸ್ತ

ಹರಿಪಾದಕ್ಕರ್ಪಿಸಿ ಸುಖಿಯಾಗು ಮನವೆ

ಪರಮಪುರುಷ ನಮ್ಮ ವಿಜಯವಿಟ್ಠಲನ್ನ 

ನೆರೆನಂಬೊ ನೆರೆನಂಬೊ ನೆರೆದು ಸಜ್ಜನರೊಡನೆ ॥ 4 ॥ 


 ಆದಿತಾಳ 


ಧರ್ಮ ಮರಿಯದಿರು ನಿರ್ಮತ್ಸರದಲ್ಲಿರು

ಕರ್ಮರ ಕೂಡದಿರು ದುರ್ಮತಿಯಾಗದಿರು

ದುರ್ಮದದಿರದಿರು ದುರ್ಮಾಯಾ ಬಯಸದಿರು

ನಿರ್ಮಳ ತೊರಿಯದಿರು ಮಾರ್ಮಲತು ನಡಿಯದಿರು

ಮರ್ಮವ ಪೇಳದಿರು ವರ್ಮವ ಬಿಡದಿರು

ಚರ್ಮದೇಹಕ್ಕೆ ಒಂದು ಮಾರ್ಗವ ತಿಳಿಯೋದು

ಕರ್ಮದಾರಿಯ ಬಿಡು ಧರ್ಮನು ಮೆಚ್ಚುವನು

ಪೆರ್ಮೆ ಎಂಬೋದ ದಾಟಿ ದುರ್ಮಾರ್ಗ ಪಿಡಿಯದಿರು

ನಿರ್ಮಳವಾಗಿದ್ದ ಅರ್ಮಿಪುರವ ಸೇರು

ಕೂರ್ಮಾವತಾರ ನಮ್ಮ ವಿಜಯವಿಟ್ಠಲನ್ನ ಸ -

ತ್ಕರ್ಮವ ನೆನದು ಅಧರ್ಮವ ಕಳಿಯೊ ॥ 5 ॥ 


 ಜತೆ 


ಸುಖವಿಲ್ಲ ಸುಖವಿಲ್ಲ ಸಂಸಾರವೆಂಬೋದು

ಸಖನಾದ ವಿಜಯವಿಟ್ಠಲನ್ನ ನೆನಿಸು ಮನವೆ ॥

***


ಎಚ್ಚರ ಕೇಳೊ ಮನವೆ ನೆಚ್ಚದಿರು ಈ ಕಾಯ

ನಿಚ್ಚಲ ನಿನ್ನಾಧೀನ ಅಚ್ಚಟ ಇಪ್ಪನೆಂದು

ಬಚ್ಚಲಗಲ್ಲಿಗೆ ನೀಚತನವುಂಟೆ

ರೊಚ್ಚಲ್ಲದೆ ನೋಡೆ ಹೆಚ್ಚಳವಾಗದು

ಹೆಚ್ಚಿನ ಮಮಕಾರ ಪಚ್ಚಿಕೊಂಡಿದ್ದರೆ

ಬೆಚ್ಚಿಸಿದಂತೆ ದೇಹ ಕಚ್ಚಿಕೊಳತಕ್ಕದೆ

ಎಚ್ಚತ್ತು ತಿಳಿದುಕೋ ಹುಚ್ಚಾಗದಿರು ನೀನು

ಮುಚ್ಚುಮರೆ ಇಲ್ಲದೆ ಚೆಚ್ಚಾರದಲ್ಲಿ ನುಡಿದೆ

ಸಚ್ಚಿತ್ತನಾಗಿ ಬಾಳು ಕುಚ್ಚಿತ ಪ್ರವರ್ತಿಸೆ

ಕೆಚ್ಚೆದೆ ಯಮಭಟರು ಚೆಚ್ಚೆಬಟ್ಟಿಯ ಮಾಡಿ

ಬಿಚ್ಚಿ ಭಂಗ ಬಡಿಪರು ಬಚ್ಚಿಟ್ಟರೀದಾರಿ

ಇಚ್ಛಕನಾಗು ಕಾಲೋಚಿತವೆಂದು ಗ್ರಹಿಸು

ರಚ್ಚಿಗೊಳಗಾಗದೆ ಕೊಚ್ಚಿ ಹರಿವ ನದಿ

ನೆಚ್ಚಿಕೆ ಇಪ್ಪದಕ್ಕೆ ಮಚ್ಚುಗೊಂಡಿರದಿರು

ಎಚ್ಚರ ಕೇಳು ಮನವೆ

ಅಚ್ಚುತಾನಂತ ನಮ್ಮ ವಿಜಯವಿಟ್ಠಲ ಹರಿಯ

ಸಚ್ಚರಿತವ ನೆನೆದು ಅಚ್ಚಗತಿಯನೈದು ॥


 ಎಚ್ಚರ ಕೇಳೋ ಮನವೆ ನೆಚ್ಚದಿರು ಈ ಕಾಯ -  ದಾಸಾರ್ಯರು ಈ ಸಾಲಿನ ಮುಖಾಂತರ ಈ ಸಾಧನಶರೀರದ ನಶ್ವರತೆ ಹಾಗೂ ಮಹತ್ವವನ್ನು ತಿಳಿಸುತ್ತಾ , ಎಂಭತ್ತನಾಲ್ಕು ಜೀವ ರಾಶಿಗಳನ್ನು ದಾಟಿ ಬಂದ ಈ ಮಾನವದೇಹ ತುಂಬಾ ತುಂಬಾ ನಶ್ವರವಾದುದು ಅಷ್ಟೇ ಮಹತ್ವವಾದುದು . ಕುಪಿತಾಹಿ ಫಣಚ್ಛಾಯಾ.. ಎಂಬ ಶ್ರೀಟೀಕಾಕೃತ್ಪಾದರ ಉಕ್ತಿಯಂತೆ ಒಂದು ಹಸಿದ ಘಟಸರ್ಪ ಸಿಟ್ಟಿಗೆದ್ದು ಭುಸುಗುಟ್ಟುತ್ತಾ ತನ್ನ ಹೆಡೆಯನ್ನು ಬಿಚ್ಚಿ ಆಡಿಸುತ್ತಿರುವಾಗ ಒಂದು ಕಪ್ಪೆ ನೆಳನ್ನು ಅರಿಸುತ್ತಾ ಅರಿಸುತ್ತಾ ಆ ಘಟಸರ್ಪದ ಹೆಡೆಯ ನೆಳಲನ್ನು ನೋಡಿ ಆಹಾ ನೆಳಲು ಸಿಕ್ಕಿತಲ್ಲಾ ಅಂತ ಸಂತೋಷಗೊಂಡು ಅದರಬುಡದಲ್ಲಿ ಬಂದು ಕಳಿತು , ಎಷ್ಟು ಹಿತವಾಗಿದೆ ಈ ನೆರಳು ಅಂತ ಮೈಮರೆತು ತನ್ನ ಸಮೀಪದಲ್ಲಿ ಬರುತ್ತಿರುವ ಕ್ರಿಮಿ ಕೀಟಗಳನ್ನು ತನ್ನ ನಾಲಿಗೆ ಚಾಚಿ ಚಾಚಿ ತಿನ್ನುತ್ತಾ ಸುಖಪಡುತ್ತಿರುವ ಸಮಯದಲ್ಲೇ ಹಠಾತ್ತಾಗಿ ಆ ಘಟಸರ್ಪ ಈ ಕಪ್ಪೆಯನ್ನು ಹಿಡಿದು ನುಂಗಿ‌ಬಿಡತ್ತೆ . ಹೇಗೋ ಹಾಗೆಯೇ ಈ ಮಾನವ ದೇಹಧಾರಿಗಳಾದ ನಾವು ಈ ಸಂಸಾರವೆಂಬ ನೆರಳು ಎಷ್ಟು ಸುಖವಾಗಿದೆಯಲ್ಲಾ ಅಂತ ಮೈಮರೆತು ಭೋಗಲಾಲಸೆಗಳಲ್ಲಿ ಮಗ್ನರಾಗಿ ಸಾಧನೆಯ ಕಡೆ ಗಮನ ಹರಿಸದೇ ಮುಂದೆ ಸಾಧನೆ ಮಾಡಿದರಾಯಿತು ಅಂತ ಕಾಲವನ್ನು ವ್ಯರ್ಥಗೊಳಿಸಿದರೆ ನಮ್ಮನ್ನು ಕಾಲಸ್ವರೂಪಿ ಘಟಸರ್ಪವು ಯಾವಕ್ಷಣದಲ್ಲಿ ನುಂಗಿಬಿಡ್ತದನೋ ಗೊತ್ತಿಲ್ಲಾ . ಇದನ್ನೇ ಪ್ರಹ್ಲಾದರಾಜರು ಕೌಮಾರ ಆಚರೇತ್ ಪ್ರಾಜ್ಞೋ ಧರ್ಮಾನ್ ಭಾಗವತಾನಿಹ| ದುರ್ಲಭಂ ಮಾನಷಂ ಜನ್ಮ ತದಪ್ಯಧ್ರುವಮರ್ಥದಮ್|| ಎಂದು ದೈತ್ಯಬಾಲಕರಿಗೆ ಉಪದೇಶ ಮಾಡುತ್ತಾ , ಮಕ್ಕಳೇ ! ಜ್ಞಾನಿಯಾದವನು ಬಾಲ್ಯದಿಂದಲೇ ಭಾಗವತಧರ್ಮಗಳನ್ನು ಆಚರಿಸಲೇಬೇಕು , ಏಕೆಂದರೆ ಈ ಮನುಷ್ಯಜನ್ಮವು ಅತ್ಯಂತ ಅತ್ಯಂತ ದುರ್ಲಭವಾದದ್ದು , ಏನಾದರೂ ಪುರುಷಾರ್ಥಗಳನ್ನು ಪಡೆಯುವದಾದರೆ ಅದು ಈ ಮನುಷ್ಯದೇಹದಿಂದ ಮಾತ್ರ , ಎಂಬುದಾಗಿ ಎಚ್ಚರಿಸಿದ್ದಾರೆ . ಇದನ್ನೇ ದಾಸಾರ್ಯರು ಇಲ್ಲಿ ಎಚ್ಚರ ಕೇಳೋ ಮನವೇ ನೆಚ್ಚದಿರು ಈ ಕಾಯ ಎಂಬುದಾಗಿ ತಿಳಿಸಿದ್ದಾರೆ .


 ನಿಚ್ಚಲ ನಿನ್ನಾಧೀನ ಅಚ್ಚಟ ಇಪ್ಪನೆಂದು 

     ಈ ಶರೀರ ನನ್ನ ಅಧೀನ ನಾನು ಚಿರಂಜೀವಿ ಅನ್ನೋ ಭ್ರಮೆಯಲ್ಲಿ ಜೀವನ ಸಾಗಿಸುವವನು ಶತಮೂರ್ಖ ಎಂದು ಹೇಳುತ್ತಿದ್ದಾರೆ . ಮನುಷ್ಯರಿಗೆ ಸಾಮಾನ್ಯವಾಗಿ ನೂರು ವರ್ಷ ಆಯುಷ್ಯ , ಅದರಲ್ಲಿ ನಿದ್ರೆಗಾಗಿ ಐವತ್ತು ವರ್ಷಗಳನ್ನು ಕಳೆಯುತ್ತೇವೆ . ಬಾಲ್ಯ ಕೌಮಾರಗಳಲ್ಲಿ ಆಟಕ್ಕಾಗಿ ಇಪ್ಪತ್ತು ವರ್ಷ ಕಳೆದುಹೋಗುತ್ತದೆ . ಅಂತ್ಯಕಾಲದಲ್ಲಿ ದೇಹಗಳು ಶಿಥಿಲವಾಗಿ ಇಪ್ಪತ್ತು ವರ್ಷಗಳು ಕಳೆದುಹೋಗುತ್ತವೆ . ಉಳಿದ ಅಲ್ಪ ಸಮಯವವೂ ಮನೆ ಮಡದಿ ಎಂದು ಆಸಕ್ತನಾದವನಿಗೆ ಕಾಮ-ಮೋಹದಿಂದ ಕಳೆದುಹೋದರೆ ಸಾಧನೆಗೆಲ್ಲಿ ಸಮಯ ಉಳಿಯಿತು ? ಇಷ್ಟರ ಮಧ್ಯೆ ಮಿಂಚಿನಂತೆ ಚಂಚಲವಾದ ಅಸ್ಥಿರವಾದ ಬದುಕಿನಲ್ಲಿ ಪ್ರಾಣಪಕ್ಷಿ ಯಾವಾಗಬೇಕಾದರೂ ಹಾರಿಹೋಹಬಹುದು . ಪ್ರಯಾಣ‌ಮಾಡುವಾಗ ಸಾಯಬಹುದು , ಹಾವು ಚೇಳು ಮುಂತಾದ ವಿಷಜಂತುಗಳು ಕಚ್ಚಿ ಸಾಯಬಹುದು . ಹೀಗೆ ಮೃತ್ಯುವಿನ ಪಾಶ ಕುತ್ತಿಗೆಯಲ್ಲೇ ಇದೆ ಹೀಗಾಗಿ ಈ ದೇಹ ನಿನ್ನ ಅಧೀನ ಅಂತ ನೆಚ್ಚಬೇಡ ಇದು ಭಗವದಧೀನವಾದ ದೇಹ  , ಆತನು ಸಾಧನೆಗಾಗಿ ದಯದಿಂದ ಕೊಟ್ಟ ದೇಹ ಇದು ಎಂದು ತಿಳಿದುಕೊಂಡು ತಡಮಾಡದೇ ತತ್ಕ್ಷಣದಿಂದಲೇ ಸಾಧನೆಯಲ್ಲಿ ತೊಡಗು ಎಂಬುದಾಗಿ ಎಚ್ಚರಿಸುತ್ತಿದ್ದಾರೆ . ಈ ವಿಷಯವನ್ನು ಅವಧೂತಶಿರೋಮಣಿಗಳಾದ ಶ್ರೀಮದ್ವಿಷ್ಣುತೀರ್ಥರು - ಲಬ್ಧ್ವಾ ಸುದುರ್ಲಭಮಿದಂ ಬಹುಸಂಭವಾಂತೇ | ಮಾನಷ್ಯಮರ್ಥದಮನಿತ್ಯಮಪೀಹ ಧೀರಃ| ತೂರ್ಣಂ ಯತೇತ ನ ಪತೇದನಮೃತ್ಯು ಯಾವನಿಃಶ್ರೇಯಸಾಯ ವಿಷಯಃ ಖಲು ಸರ್ವತಃ ಸ್ಯಾತ್|| - ಅನೇಕ ಯೋನಿಗಳಲ್ಲಿ ಸುತ್ತುಸುತ್ತಾಡಿಬಂದು , ಬೆನ್ನ ಹಿಂದೆಯೇ ಹೊಂಚುಹಾಕಿ ನಿಂತಿರುವ ಮೃತ್ಯುವಿನಿಂದ , ಅನಿತ್ಯ-ಅಶಾಶ್ವತವಾದರೂ ಪುರುಷಾರ್ಥ ಪ್ರಾಪ್ತಿಗೆ ಸಾಧನವಾಗಿರುವ ಈ ಮಾನವ ಶರೀರವನ್ನು ಪಡೆದು , ಸಾಧನೆಯವಿಷಯದಲ್ಲಿ ಇಂದು ನಾಳೆ ಎಂದು ಮುಂದಕ್ಕೆ ಹಾಕಲಾರದೇ ತ್ವರೆಯಿಂದಲೇ ಸಾಧನಕ್ಕೆ ಪ್ರಯತ್ನ ಮಾಡಬೇಕು ಎಂದಿದ್ದಾರೆ .


 ಬಚ್ಚಲಗಲ್ಲಿಗೆ ನೀಚತನವುಂಟೆ ರೊಚ್ಚಲ್ಲದೇ ನೋಡೆ ಹೆಚ್ಚಳವಾಗುವದು ಹೆಚ್ಚಿನ ಮಮಕಾರ ಪಚ್ಚಿಕೊಂಡಿದ್ದರೆ ಬಿಚ್ಚಿಸದಂತೆ ದೇಹ ಕಚ್ಚಿಕೊಳ್ಳತಕ್ಕದೆ 

      ಶ್ರೀಮದ್ಭಾಗವತದಲ್ಲಿ ಬರುವ ಗಜೇಂದ್ರಮಖಮೋಕ್ಷದ ಕಥೆಯೊಂದಿಗೆ ದಾಸಾರ್ಯರು ನಮ್ಮನ್ನು ಈ ಸಾಲಿನ ಮುಖಾಂತರ ಎಚ್ಚರಿಸುತ್ತಿದ್ದಾರೆ . ಈ ಸಂಸಾರವೆಂಬುವುದು ಬಚ್ಚಲಿನ ರೊಜ್ಜಿನಂತೆ ಇದೆ , ಬಚ್ಚಲಿನ ರೊಜ್ಜು ಬಹಳ ಜಿಗುಟು ಅದನ್ನು ನೋಡೋಕೆ ತುಂಬಾ ಹಸಿರಾಗಿದೆಯಲ್ಲಾ ಅಂತ ಏನಾದ್ರೂ ನಾವು ಅದನ್ನು ಮುಟ್ಟಿದ ತಕ್ಷಣ ಅದರ ಜಿಡ್ಡು ಬಿಡೋದು ಬಹಳ ಕಷ್ಟ . ಕ್ಷೀರಸಮುದ್ರದ ಮಧ್ಯದಲ್ಲಿ ತ್ರಿಕೂಟವೆಂಬ ಪರ್ವತ ಆ ಪರ್ವತದಲ್ಲಿ ಬಂಗಾರಮಯ ರಜತಮಯ ಹಾಗೂ ಕಬ್ಬಿಣಮಯ  ಮೂರು ಶಿಖರಗಳು . ಅಲ್ಲಿ ವರುಣನ ಉದ್ಯಾನವನ ಅದರಲ್ಲಿ ಒಂದು ಸರೋವರ . ಅಲ್ಲಿ ಇಂದ್ರದ್ಯುಮ್ನ (ಹಾಹಾ ಗಂಧರ್ವ)  ಶಾಪಗ್ರಸ್ತನಾಗಿ ಆನೆಯಾಗಿ ಹುಟ್ಟಿದರೆ ಹೂಹೂ ಗಂಧರ್ವ ಮಕರವಾಗಿ ಹುಟ್ಟಿದ . ಒಂದು ದಿನ ಆ ಗಜರಾಜ  ಋತುಮತ್ ಎಂಬ ಆ ಉದ್ಯಾನವನದಲ್ಲಿ ಸ್ವಚ್ಛಂದವಾಗಿ ವಿಹಾರ ಮಾಡುತ್ತಿರುವಾಗ ದಿನಕರನ ತಾಪಕ್ಕೆ ಗುರಿಯಾಗಿ ಬಾಯಾರಿ ನೀರಿಗಾಗಿ ಪರಿತಪಿಸುತ್ತಾ ಸರೋವರನ್ನು ಸಮೀಪಿಸಿ ನೀರು ಕುಡಿದು ಸ್ನಾನಮಾಡಿ ತನ್ನ ಪರಿವಾರದೊಂದಿಗೆ ಜಲಕೇಳಿಯಲ್ಲಿ ಮೈಮರೆತಾಗ , ಆತನ ಕಾಲನ್ನು ಮೊಸಳೆ ಹಿಡಿದುಕೊಂಡಿತು , ಗಜರಾಜನ ಬಲವೆಲ್ಲವೂ ನೀರಲ್ಲಿ ನೀರಾಗಿ ಹೋಯಿತು , ಕರಿರಾಜ ದಡಕ್ಕೆಳೆದರೆ ಮಕರ ಒಳಕ್ಕೆಳೆಯಿತು ‌.ಕರಿಮಕರಿಗಳ ಹೋರಾಟದಲ್ಲಿ ಸಾವಿರ ವರ್ಷಗಳು ಕಳೆದು ಹೋದವು!! ಸುಖಕಾರಣರೆಂದು ತಿಳಿದವರಾರೂ ರಕ್ಷಿಸಲಿಲ್ಲ ! ಬಂಧುಗಳೆಲ್ಲರೂ ದೂರವಾದರು .!! 

    ಗಜೇಂದ್ರನ ವಿಹಾರಕ್ಷೇತ್ರ ತ್ರಿಕೂಟಪರ್ವತದಂತೆ ನಮ್ಮೆಲ್ಲರ ವಿಹಾರ ಕ್ಷೇತ್ರ ಈ ದೇಹ . ಈ ದೇಹವೇ ತ್ರಿಕೂಟ ಪರ್ವತ , ಈ ದೇಹವೆಂಬ ತ್ರಿಕೂಟಪರ್ವತದ ಶಿಖರಗಳೆಂದರೆ ಸಾತ್ವಿಕ ರಾಜಸ ತಾಮಸ ಗುಣಗಳು . ಬಂಗಾಳ ಬೆಳ್ಳಿ ಕಬ್ಬಿಣಗಳು ಇವುಗಳ ಸಂಕೇತ . ತ್ರಿಕೂಟಪರ್ವತದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಆನೆಯಂತೆ ನಾವೂ ಅಹಂಕಾರ ಮಮಕಾರಗಳಿಂದ ಮತ್ತರಾಗಿ ವಿಹರಿಸುತ್ತಿದ್ದೇವೆ . ಭೋಗಾಸಕ್ತನಾದ ಕರಿರಾಜನಿಗೆ ತನ್ನ ಮೃತ್ಯುವಿನ ಎಚ್ಚರವಿರಲಿಲ್ಲ ಹಾಗೆಯೇ ನಮಗೂ ಎಚ್ಚರವಿಲ್ಲ .! ಮೃತ್ಯುವೆಂಬ ಘೋರಾಹಿ ಬಾಯ್ತೆತೆರೆದು ನುಂಗುತ್ತಿದ್ದರೂ , ಹಾವಿನ ಬಾಯಲ್ಲಿ ಕುಳಿತ ಕಪ್ಪೆ ನೊಣ ನುಂಗಬಯಸುವಂತೆ ವಿಷಯಪದಾರ್ಥಗಳನ್ನೇ ಬಯಸುತ್ತಿದ್ದೇವೆ . ಬಚ್ಚಲಿನ ರೊಜ್ಜಿನಂತಿಹ ಈ ಬಂಧು ಬಾಂಧವರು ಎಂಬ ಮಮಕಾರವನ್ನು ಮೈಗೆ ಮೆತ್ತಿಕೊಳ್ಳುತ್ತಿದ್ದೇವೆ !! ಮೃತ್ಯುವಿನ ಕಲ್ಪನೆಯೇ ಇಲ್ಲವಾಗಿದೆ . ಯಾವಾಗ ಗಜೇಂದ್ರನಿಗೆ ನಿಜವಾದ ರಕ್ಷಕನ ನೆನಪಾಗಿ ನಾರಾಯಣಾಖಿಲಗುರೋ ಭಗವನ್ನಮಸ್ತೇ ಎಂದು ಜೋರಾಗಿ ಆರ್ತನಾಗಿ ಭಕ್ತ್ಯುದ್ರೇಕದಿಂದ ಕೂಗಿದನೋ ಆಗ ಆತನ ಆ ಪ್ರಾರ್ಥನೆ ಮುಗಿಯುವಷ್ಟರಲ್ಲೇ ಭಗವಂತ ಕೆಳಗಿಳಿದು ಬಂದು ಚಕ್ರದಿಂದ ನಕ್ರನನ್ನು ಕತ್ತರಿಸಿ ಗಜರಾಜನನ್ನು ರಕ್ಷಿಸಿದ. ಹಾಗೆಯೇ ನಾವೂ ಈ ಮನೆ ಮಡದಿ ಮಕ್ಕಳು ಐಶ್ವರ್ಯ ಎಂಬ ರೊಜ್ಜನ್ನು ಮೈಗೆ ಅಂಟಿಸಿಕೊಳ್ಳಲಾರದೇ ಭಗವಂತನ ಪಾದಾರವಿಂದಗಳ ಮಹಿಮೆ ಎಂಬ ಮಕರಂದದಲ್ಲಿ ಭೃಂಗದಂತೆ ಸದಾ ಆಸಕ್ತರಾಗಿರಬೇಕು . ಎಂಬ ಸಂದೇಶವನ್ನು ದಾಸಾರ್ಯರು ಈ ಸಾಲಿನ ಮುಖಾಂತರ ತಿಳಿಸಿದ್ದಾರೆ .


ಎಚ್ಚತ್ತು ತಿಳಿದುಕೋ ಹುಚ್ಚಾಗದಿರು ನೀನು ಮುಚ್ಚುಮರೆ ಇಲ್ಲದೇ ಚೆಚ್ಚಾರದಲಿ ನುಡಿದೆ  ಸಚ್ಚಿತ್ತನಾಗಿ ಬಾಳು ಕುಚ್ಚಿತ ಪ್ರವರ್ತಿಸೆ ಕೆಚ್ಚದೆ ಯಮಭಟರು ಚೆಚ್ಚೆಬಟ್ಟಿಯ ಮಾಡಿ ಬಿಚ್ಚಿ ಭಂಗ ಬಡಿಪರು ಬಚ್ಚಿಟ್ಟರೀದಾರಿ ಇಚ್ಛಕನಾಗು ಕಾಲೋಚಿತವೆಂದು ಗ್ರಹಿಸು 

       ಧೃತರಾಷ್ಟ್ರ ದುರ್ಘಟನೆಗಳ ಸುರಿಮಳೆಯಲ್ಲಿ ಸ್ನಾನ ಮಾಡಿದವ . ತನ್ನ ವಂಶದ ಕುಡಿಗಳೆಲ್ಲಾ ತನ್ನ ಕಣ್ಣೆದುರಿಗೇ ಪುಡಿಪುಡಿಯಾದರೂ ತಾನು ಮಾತ್ರ ರಾಜ್ಯಸುಖದಲ್ಲಿಯೇ ಮೈಮರೆತಿದ್ದಾನೆ . ವೈರಾಗ್ಯದ ವಾಸನೆಯೂ ಇಲ್ಲದವನಾಗಿದ್ದಾನೆ . ಈ ಸಂದರ್ಭದಲ್ಲಿ ನೀತಿವಂತನಾದ ವಿದುರ ಧೃತರಾಷ್ಟ್ರನ ಸದನಕ್ಕೆ ನಡೆದ ನೀತಿಬೋಧಕ ನುಡಿಗಳನ್ನು ಏನು ಹೇಳಿದ್ದಾನೋ ಅದನ್ನೇ ದಾಸಾರ್ಯರು ಈ ಸಾಲುಗಳ ಮುಖಾಂತರ ಸಂಗ್ರಹಿಸಿದ್ದಾರೆ . 

    ಧೃತರಾಷ್ಟ್ರ ! ಎಚ್ಚತ್ತುಕೋ !! ಅಂತ್ಯಕಾಲದಲ್ಲಿಯೂ ವಿಷಯಭೋಗ ಸಲ್ಲದು. ಇನ್ನಾದರೂ ರಾಜ್ಯದಾಹವನ್ನು ಬಿಡು . ವಿರಕ್ತನಾಗಿ ಬುದುಕು . ಕರಾಳಮೃತ್ಯುವು ನಿನ್ನಮೇಲೆ ಆಕ್ರಮಣ ನಡರಸುತ್ತಿದ್ದರೂ ವಿಷಯಗಳಿಗೆ ವಶನಾಗಿಯೇ ಇರುವಿಯಲ್ಲಾ !! ಅಹೋ ನಿನ್ನ ಮೌಢ್ಯವೇ !! ಭೋಗ ಸಾಕು . ವಿರಕ್ತನಾಗಿ ಕಾಡಿಗೆ ನಡೆ ಎಂದ . ಇದು ಕೇವಲ ವಿದುರನ ಮಾತು ಅಲ್ಲ ಶ್ರೀರಾಮಚಂದ್ರನ ಮಾತುಗಳೂ ರಾಮಾಯಣದಲ್ಲಿ ಅತ್ಯಂತ ಹೃದಯಸ್ಪರ್ಶಿಯಾಗಿವೆ . ಇಂದು ಹೊಸ ಯುಗಾದಿ ಎಂದೊಡನೆ ನಲಿಯುತ್ತೇವೆ . ದೀಪಾವಳಿ ಹಬ್ಬ ಬಂದರೆ ಹೊಸಬಣ್ಣದ ಜಗತ್ತನ್ನೇ ನಿರ್ಮಿಸುತ್ತೇವೆ. ಹುಟ್ಟುಹಬ್ಬ ಬಂದರಂತೂ ಕೈ ತಟ್ಟಿ ಕುಣಿಯುತ್ತೇವೆ . ಅತವತ್ತು ಸಂವತ್ಸರಗಳನ್ನು ಕಳೆದರೆ ಸಂತಸದ ತೀರ ಮುಟ್ಟಿದೆವು ಎನ್ನುತ್ತೇವೆ . ಆದರೆ ಇದು ಸಂತೋಷದಿಂದ ನಲಿಯುವ ಸಂದರ್ಭವಲ್ಲ . ಗಂಭೀರವಾಗಿ ಆಲೋಚಿಸಬೇಕಾದ ಸಮಯ . ಹೊಸ ಸಂವತ್ಸರಕ್ಕೆ ಕಾಲಿಟ್ಟೆವೆಂದರೆ ಮೃತ್ಯುವಿನ ಬಾಯಿಗೆ ಒಂದ್ಹೆಜ್ಜೆ ಮುಙದಿಟ್ಟೆವೆಂದರ್ಥ . ಈ ಮೃತ್ಯುವಿನ ಆಕ್ರಮಣವನ್ನರಿಯದೇ ಚಪ್ಪಾಳೆತಟ್ಟಿ ಕುಣಿಯುತ್ತೇವೆ ! ಎಂತಹ ಸೋಜಿಗ !! ಎನ್ನುತ್ತಾನೆ ಶ್ರೀರಾಮ . ವಿದರುನ ಮಾತುಗಳೂ ಇದಕ್ಕೆ ಹೊರತಾಗಿಲ್ಲ . ಪ್ರತಿಕ್ರಿಯಾ ನ ಯಸ್ಯೇಹ ಕುತಶ್ಚಿತ್ಕರ್ಹಿಚಿತ್ಪ್ರಭೋ| ಸ ಏವ ಭಗವಾನ್ ಕಾಲಃ ಸರ್ವೇಷಾಂ ನಃ ಸಮಾಗತಃ ||  ಪರಿಹಾರವೇ ಇಲ್ಲದ ಅಂತ್ಯಕಾಲ ಸಮೀಪಿಸುತ್ತಿದೆ ಎಚ್ಚತ್ತುಕೋ ಎಂದ . ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ಚಿಂತೆಯನು ಬಿಟ್ಟು ಶ್ರೀಹರಿಯ ನೆನೆಮನವೆ| ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬ ಮತ್ತೊಬ್ಬ ಮಗನ ಉಪನಯನ ನಾಳೆ ಅರ್ತಿಯಾಗಿದೆ ಬದುಕು ಸಾಯಲಾರೆನು ಎನಲು ಮೃತ್ಯು ಹೆಡೆ ತಲೆಯಲ್ಲಿ ನಗುತಿರ್ಪುದರಿಯೆ|| ಎಂಬ ದಾಸಾರ್ಯರ ಎಚ್ಚರಿಕೆಯೂ ಇದಕ್ಕೆ ಹೊರತಾಗಿಲ್ಲ . 

    ಯಮನ ಕಾಲವೆಂದರೆ ಅಪರಿಹಾರ್ಯ CALL ಎಂದರ್ಥ . ಈ CALL ಗೆ ತಡೆ ಇಲ್ಲವೇ ಇಲ್ಲ . ಕಾಲನ CALL ಗೆ ನಾವೆಲ್ಲರೂ ಬದ್ಧರು. 

    ಕಾಡಿನಲ್ಲಿ ಚಿಗರೆಯೊಂದು ಚಿಗುರೆಲೆಗಳನ್ನು  ಮೇಯುತ್ತಾ ಅದರಲ್ಲೇ   ಮಗ್ನವಾಗಿ ತೋಳದ ಬಯಕೆಗೆ ಆಹಾರವಾಗಿಬಿಡುತ್ತದೆ . ಸಂಸಾರವೆಂಬ ಕಾಡಿನಲ್ಲಿ ಸುಖಕ್ಕಾಗಿ ಅಲೆಯುವ ನಮ್ಮ ಸ್ಥಿತಿಯೂ ಹೀಗೆಯೇ ಆಗಿದೆ . ವಿಷಯಮಗ್ನರಾದ ನಮಗೆ ಮೃತ್ಯುವಿನ ಆಕ್ರಮಣದ ಅರಿವೇ ಇಲ್ಲ . ಮೃತ್ಯುವಿನ ಆಕ್ರಮಣಕ್ಕೆ ತುತ್ತಾಗುವದೊರಳಗಾಗಿಯೇ ಸಾಧನೆಯ ಸೋಪಾನಗಳನ್ನೇರಬೇಕು , ಸಾರ್ಥಕ ಬಾಳ್ವೆಯನ್ನು ನಡೆಸಬೇಕು ಎಂಬ ಶ್ರೀಮದ್ಭಾಗವತದ ಸಾರವನ್ನು ತಿಳಿಸಿರುವ ಅರಣ್ಯಕಾಚಾರ್ಯರ ಸಂದೇಶವನ್ನೇ ದಾಸಾರ್ಯರು ಈ ಸಾಲುಗಳ ಮುಖಾಂತರ ತಿಳಿಸಿದ್ದಾರೆ .


 ರಚ್ಚಿಗೊಳಗಾಗದೆ ಕೊಚ್ಚಿ ಹರಿವ ನದಿ ನೆಚ್ಚಿಕೆ ಇಪ್ಪದಕ್ಕೆ ಮೆಚ್ಚುಕಗೊಂಡರದಿರು ಎಚ್ಚರ ಕೇಳು ಮನವೆ ಅಚ್ಯತಾನಂತ‌ ನಮ್ಮ ವಿಜಯವಿಟ್ಠಲ ಹರಿಯ ಸಚ್ಚರಿತವ ನೆನೆದು ಅಚ್ಚಗತಿಯನೈದು|| 

      ರಚ್ಚಿಗೊಳಗಾಗದೇ ಅಂದ್ರೆ ಈ ಸಂಸಾರದಲ್ಲಿನ ರಾಡಿ ಅರ್ಥಾತ್ ವ್ಯಾಮೋಹಕ್ಕೆ ಒಳಗಾಗದೇ ಈ ಸಂಸಾರವೆಂಬ ನದಿಯ ಪ್ರವಾಹ ಯಾವಾಗ ಕಡಿಮೆಯಾಗುವದೋ ಅಂತ ದಾರಿ ಕಾಯ್ತಾ ಕಾಯ್ತಾ ಕೂಡದೇ ಈಗಿಂದೀಗಲೇ ಎಚ್ಚತ್ತುಕೊಂಡು ಚ್ಯುತಿಯಿಲ್ಲದ ಶಶ್ವದೇಕಪ್ರಕಾರನಾದ ನಮ್ಮ ವಿಜಯವಿಟ್ಠಲನ ಸಚ್ಚರಿತ್ರೆಯನ್ನು ತಿಳಿಸುವ ಶ್ರೀಮದ್ಭಾಗವತವನ್ನು ತತ್ಕ್ಷಣದಿಂದಲೇ ಶ್ರವಣ ಮಾಡಿ ಆತನ ಪರಮಾನುಗ್ರಹದಿಂದ ಮೋಕ್ಷವೆಂಬ ಪದವಿಯನ್ನು ಪಡೆದು ಧನ್ಯನಾಗು ಎಂದು ನಮ್ಮ ಮನಸ್ಸಿಗೆ ಶ್ರೀವಿಜಯದಾಸಾರ್ಯರು ತುಂಬಾ ಮಾರ್ಮಿಕವಾದ ಎಚ್ಚರಿಕೆಯನ್ನು ಈ ಕೃತಿಯ ಮುಖಾಂತರ ಕೊಟ್ಟಿದ್ದಾರೆ .

 ‌(received in WhatsApp)

***

 

No comments:

Post a Comment