ankita ವಿಠಲೇಶ
ರಾಗ: ಪಹಾಡಿ ತಾಳ: ಕವ್ವಾಲಿ
ಸಾಗಿ ಬಂದೆ ಪ್ರಭುವೆ ಶ್ರೀಪಾದಕೆ ಪ
ಸಾಗಿ ಬಂದೆ ಭವನೀಗದೆ ನೊಂದು
ಬೇಗ ಕೈಪಿಡಿ ಗುರುರಾಘವೇಂದ್ರಾರ್ಯ ಅ
ದೇವಸ್ವಭಾವ ದಿವ್ಯಪ್ರಭಾವಾ
ಭಾವಿಕ ಭಕುತರ ತಾರಕ ತೇಜಾ
ಆವ ಪಥವೊ ಪ್ರಭು ತೀವಿದೆ ತಮವು
ಠಾವುಗಾಣಿಸು ಗುರುದೇವವರೇಣ್ಯಾ 1
ಸುಧೆಯಸೌರಭವಾ ಬುಧರಿಗೆ ಬೀರಿದ
ಪದುಮನಾಭನಪ್ರಿಯ ಸದಮಲಕಾಯಾ
ಅಧಮನಾದೆ ನಿನ್ನ ಸದನವ ಮರೆದು
ಒದಗಿಬಾರೋ ಪ್ರಭು ಯದುವರಹೃದಯಾ 2
ದುರುಮತಕರಿಭಕೆ ವರಮಹಕೇಸರಿ
ಧರಮ (?) ಪರಾಕ್ರಮಿ ಪರಮದಯಾಳು
ಅರಮನೆಗಾಣದೆ ಸೆರೆಮನೆ ಸಾರ್ದೆ
ಮೊರೆಯ ಕೇಳೋ ಪ್ರಭು ಗುರುಮಹರಾಜ 3
ಕಾಮಿತವೀಯುವ ಕೋಮಲಹೃದಯಾ
ಶ್ರೀಮಂತ್ರಾಲಯ ಸೋಮ ನಿಸ್ಸೀಮಾ
ನಾಮವ ನೆನೆಯದೆ ತಾಮಸಿಯಾದೆ
ನೀ ಮತಿಗಾಣಿಸೋ ಹೇ ಮಹಾಸ್ವಾಮಿ 4
ಸೂರಿಸುಧೀಂದ್ರರ ವೀರಕುಮಾರಾ
ಚಾರುಪದಾಂಬುಜ ಸಾರಿದೆ ಧೀರಾ
ಸಾರಭಕುತಿಪಥ ತೋರಿಸೋ ಪ್ರಭುವೆ
ಪಾರುಮಾಡೋ ವಿಠಲೇಶ ಸುಧ್ಯೇಯಾ 5
***
No comments:
Post a Comment