ಶ್ರೀಕೃಷ್ಣಾವತಾರವನ್ನು ಅದ್ಭುತವಾದ ರೀತಿಯಲ್ಲಿ ವರ್ಣಿಸಿದ್ದಾರೆ ,"ವರದ ಕೃಷ್ಣ" ಅಂಕಿತರಾದ ಶ್ರೀ ಗುರುನಾಥ ದೇಶಪಾಂಡೆಯವರು. ಓದಿ ಆನಂದಿಸಿರಿ.
ಅಷ್ಟ ದಿಕ್ಕಿನಲಿಪ್ಪ ಅಸುರರ
ಅಸುವ ಕೊಳ್ಳುವೆನೆಂದು ಸೂಚಿಸೆ
ಅಷ್ಟಮಿಯ ದಿನದಲ್ಲಿ ಶ್ರಾವಣ ಕೃಷ್ಣ ಪಕ್ಷದಲಿ |
ಕೃಷ್ಣಪೀತಾಂಬರಾಯುಧದಿ ವಿ
ಶಿಷ್ಟನಾಗುತ ಪ್ರಕಟ ಗೊಂಡನು
ನಿಶಿಚರರುಗಳ ಹಣಿಯಲೋಸುಗ ನಿಶೀಥ ಸಮಯದಲ್ಲಿ||
ನಳಿನ ನಯನನ ಚಲ್ವ ನಾಸಿಕ ನೀಲ ಮೇಘ ಶ್ಯಾಮ ವರ್ಣನ
ಪೊಳೆವ ಪಲ್ಗಳ ಪಂಕ್ತಿ ಲೊಪ್ಪುವ ಬಾಲ ಕೃಷ್ಣನನು|
ಸುಳಿಯ ನಾಭಿಯ ಶಂಖ ಕೊರಳನ
ಕುಳಿಯ ಗಲ್ಲಗಳಿಂದ ಶೋಭಿತ
ಹಲಧರನನುಜನ ಕಂಡು ಹರ್ಷಿತರಾದರಾಕ್ಷಣದಿ||
ನೋಡಿದರು ಮಾಧವನ ಎದುರಲಿ
ಮಾಡಿದರು ಪರಿಪರಿಯ ಸ್ತುತಿಗಳ
ಹಾಡಿ ಹೊಗಳಿದರವನ ಅದ್ಭುತ ವಾದ ಮಹಿಮೆಗಳ||
ಗಾಡಿಕಾರನು ಈರ್ವರಿಗು ತಾ
ನೀಡಿ ಪೂರ್ವ ರಹಸ್ಯ ಕೃತಿಯನು
ಪಡೆದ ಶಿಶುವಿನ ರೂಪ ಕೂಡಲೆ ಅವರ ಸಮ್ಮುಖದಿ||
***
No comments:
Post a Comment