Monday 6 September 2021

ರಾಯರ ಭಜಿಸಿರೊ ನೀವೆಲ್ಲಾ ಗುರುರಾಯರ ಭಜಿಸಿರೊ ನೀವೆಲ್ಲಾ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಆರಭಿ ತಾಳ: ಆದಿ


ರಾಯರ ಭಜಿಸಿರೊ ನೀವೆಲ್ಲಾ ಗುರು

ರಾಯರ ಭಜಿಸಿರೊ ನೀವೆಲ್ಲಾ


ಭೀಯಪರಿಭವ ಭವಾಮಯತೋಯಧಿ

ಹಾಯುವ ಸುಲಭೋಪಾಯವ ತೋರಿದ ಅ.ಪ


ಕಾಕುಮತಿಯ ಖಳಾನೇಕ ಭಯಾನಕ

ವ್ಯಾಕುಲಾನೀಕ ದುರ್ಭೀಕರವಡಗಿಸಿ

ಶ್ರೀಕರನ ಮನೋವಾಕ್ಕಾಯದೊಳೊಲಿ-

ಸ್ಯಾಕಂಭದಲಿ ಮಹಾಕೃತಿ ತೋರಿದ 1

ಅಗ್ರಜ ಹರಿದ್ವೇಷಾಗ್ರಣಿ ದುಷ್ಟ ಮ-

ಹೋಗ್ರ ಕ್ರೋಧಾನಲ ವ್ಯಗ್ರಮಾನಸ ದು-

ರಾಗ್ರಹಿಯಾಗಿರೆ ಸುಗ್ರೀವೇಶನ-

ನುಗ್ರಹದಲಿ ಸಮರಾಗ್ರದಿ ಜೈಸಿದ 2

ದ್ವಾಪರದಲಿ ಕುರುಪಾ ಪಾಂಡವರನು 

ತಾಪಗೊಳಿಸಿ ಯುದ್ಧೋಪಕ್ರಮಿಸಿರೆ

ಆ ಪಕ್ಷದಿ ದ್ವೇಷೋಪಾಯದಿ ಬಕ-

ತಾಪಕನೊಲಿಸಿದ ಶ್ರೀಪ್ರತೀಪಭವ 3

ನಾರದಮುನಿಯ ಪದಾರಾಧನರತ

ನೀರಜಾಕ್ಷನಭಿಸಾರಿಕೆಯೊಳಗೀ-

ಧಾರುಣಿಯೊಳು ಬಂದೀರಸಮಯವಿ-

ಸ್ತಾರ ಮಾಡ್ದ ವ್ಯಾಸಾರ್ಯ ಶುಭಾಭಿಧ 4

ಆಗಮಾಲಯದೊಳೀಗಲು ಭಕುತರ 

ರೋಗ ಭಯಂಗಳನೀಗಿಸಿ ಹರಿಯನು

ರಾಗಸಂಪದವಿಯ ಭೋಗಿಸುತಿಹ ಗುಣ-

ಸಾಗರ ಶ್ರೀ ಗುರು ರಾಘವೇಂದ್ರರೆಂಬ 5

ಅಂಧಮೂಗಾದ್ಯರ ಸಂದೋಹಕೆ ಮುದ

ವಂ ದಯಗೈಯುತ ಬೃಂದಾವನದೊಳು

ನಿಂದು ಮೆರೆವ ಸತ್ಯಸಂಧ ವಾತಾಗಮ 

ಸಿಂಧುಪೂರ್ಣಶರಚ್ಚಂದ್ರರಾಗಿರುವ 6

ಬಿಂಕದಿ ಹರಿಗೃಹವಂ ಕಾಯುವರೊಳು

ಶಂಖುಕರಣನೆಂಬ ಅಂಕದಿ ಮೆರೆಯುತ

ಶಂಕರೇಶ ತಂದೆವೆಂಕಟೇಶವಿಠಲನ

ಕಿಂಕರ ಶ್ರೀಶಪರ್ಯಂಕಾವೇಷಿತ 7

***

ಭೀಯ=ಭಯಂಕರ; ಭವಾಮಯ=ಸಂಸಾರ ದುಃಖ, 

ಯಾತನೆ; ವ್ಯಗ್ರ=ಕಳವಳ-ಗಾಬರಿಗೊಂಡ; 

ದುರಾಗ್ರಹಿ=ಹಠಮಾರಿ; ಮಹೋಗ್ರ=ಮಹಾ ಉಗ್ರ, 

ಭಯಾನಕ; ಕ್ರೋಧಾನಲ=ಬೆಂಕಿಯಂತಹ ಕೋಪ; 

ಅನುರಾಗ ಸಂಪದ=ಅನುಗ್ರಹವೆಂಬ ಸಂಪತ್ತು; 

ಬಿಂಕ=ಠೀವಿ; ಶ್ರೀಶ ಪರ್ಯಂಕಾವೇಷಿತ=ಶ್ರೀಹರಿಯ 

ಹಾಸಿಗೆಯಾದ ಶೇಷಾವೇಷಿತ;


No comments:

Post a Comment