ankita ತಂದೆವೆಂಕಟೇಶವಿಠಲ
ರಾಗ: ಶಂಕರಾಭರಣ ತಾಳ: ಅಟ
ಗುರುರಾಜಾ ಪಾಲಿಸೋ ಎನ್ನ ಗುರುರಾಜಾ ಪ
ಗುರುರಾಜ ಪುರುಟಕಶ್ಯಪಜ ದಶ-
ಶಿರದಿತಿತನಯಾವರಜ ||ಅಹ||
ವರಬಹಲ್ಲೀಕ ಸದ್ಗುರು ವ್ಯಾಸಮಂಚಾಲಿ
ಪುರಧೀಶ ಪೊರೆಯನಿಶ ವರಹಸುತೇವಾಸ ಅ. ಪ
ಕರ್ಮಭುವಿಯ ಕುಂಭಕೋಣ ಕ್ಷೇತ್ರ ಧರ್ಮಾಶ್ರಯ ವಂಶೋದ್ಧರಣಮಾಡಿ
ಉರ್ಮಿಳಾಪತಿಭ್ರಾತೃ ಚರಣಧ್ಯಾನ ಕರ್ಮಮರ್ಮಾಸಕ್ತ ನಿಪುಣ ||ಅಹ||
ನಿರ್ಮಮದಿ ವಿದ್ಯುಕ್ತ ಧರ್ಮಾಚರಣೆಯ ಮಾಡಿ
ಪೇರ್ಮೆಯಿಂದಲಿ ಮೆರೆದೆ ದುರ್ಮಾಯಿಮತಕಾಲ 1
ಆರ್ತಭಕುತರನಾಶೀರ್ವದಿಸಿ ವಾಂಛಿತಾರ್ಥ ವರಗಳನೆಲ್ಲ ಸಲಿಸೀ ನಂದ-
ತೀರ್ಥ ಸಮಯಾಂಕಿತ ಧರಿಸೀ ಧ್ಯಾನ ಕೀರ್ತನೆಗೈವರುಪಚರಿಸೀ ||ಅಹ||
ಪಾರ್ಥಸಾರಥಿಚರಣಾರ್ಥಿ ಪುಟ್ಟಿಸಿ ಜನ್ಮ
ಸಾರ್ಥಕಾಗುವ ಪುರುಷಾರ್ಥಪ್ರದನಾದೆ 2
ಬೃಂದಾವನಸದ್ಮವಾಸ ಭಕ್ತಬೃಂದ ವಿನಮಿತ ಯತೀಶ ಗುಣ
ಬೃಂದ ಪ್ರಭಾಪಟಲಭಾಸ ವರಬೃಂದಾರಕಮುನಿದಾಸ ||ಅಹ||
ಕುಂದು ನಿಂದೇ ನೋಡದಂಧ ಬಧಿರ ಮೂಗ
ವಂಧ್ಯೆಯರಿಷ್ಟನೊರೊಂದಾಗಿ ಸಲಿಸುವ 3
ಅನ್ಯ ಜನ್ಮಾರ್ಜಿತವಾದಾನಿಷ್ಟಪುಣ್ಯವ್ರಯಕೆ ಯೋಚಿಸಿದ ಅಹಿಕ-
ವನ್ನ ಕೊಡುವೆ ಬಲ್ಲೆನಿದನೊಲ್ಲೆ ಬಿನ್ನಪ ಕೇಳ್ವುದಗಾಧ ||ಅಹ||
ಮನ್ನಣೆ ಮನೆ ಧನದುನ್ನತಿ ಬೇಡೆ ಪ್ರ-
ಸನ್ನನಾಗಿ ಶ್ರೀವರನ್ನ ಭಕ್ತಿಯ ನೀಡೋ 4
ಜಾಣಕಲೌಕಪ್ರವೀಣನಾಗಿ ಪ್ರಾಣೇಶದಯ ಸಂಗ್ರಹಣಮಾಡಿ
ತೂಣೀರಪಾಣಿ ಸತ್ಕರುಣಧಾರಿ ದ್ರೌಣಿಯೊಲ್ ಶಾಸ್ತ್ರಧುರೀಣ ||ಅಹ||
ವೇಣಿವೆಂಕಟ ವಿದ್ವತ್ಶ್ರೇಣಿಚಿಂತಾಮಣಿ
ಕ್ಷೋಣಿದಿವಿಜಘೃಣಿ ಮುನಿಕುಲಾಂಬರದ್ಯುಮಣಿ 5
ಕ್ಲುಪ್ತಕಾಲದಿ ದೇಹವಿಟ್ಟು ಮುಂದೆ ಸಪ್ತಶತವರ್ಷ ಭವಕಟ್ಟುಬಿಡಿಸೆ
ಗುಪ್ತಗುಪ್ತಾಚರಣೆ ತೊಟ್ಟು ವಿಶ್ವವ್ಯಾಪ್ತೋಪಾಸನೆಗೆ ಮನವಿಟ್ಟು ||ಅಹ||
ಪ್ರಾಪ್ತಕಾಲದಲ್ಲಿ ತಪ್ತಕಾಂಚನದಂತೆ
ದೀಪ್ತಬೃಂದಾವನ ವ್ಯಾಪ್ತನಾದೆಯೊ ದೇವಾ 6
ಜಯ ಜಯ ಗುರು ರಾಘವೇಂದ್ರ ಭವಭಯ
ತಾಪಹರತಾರಕೇಂದ್ರ ಮಂತ್ರಾ-
ಲಯಧಾಮ ಸಿರಿರಾಮಚಂದ್ರ ಧ್ಯಾನ ದಯದಿ ಪಾಲಿಸೊ
ಸುಯಮೀಂದ್ರ ||ಅಹ||
ವಿಯದ್ಗಂಗಾಪಿತ ತಂದೆವೆಂಕಟೇಶವಿಠಲನ್ನ
ದ್ವಯಪಾದಾರ್ಚಕ ನಿರಾಮಯನ ಮಾಡಿಸೊ ಎನ್ನ 7
***
ದಶಶಿರ ದಿತಿ ತನಯಾವರಜ=ರಾವಣನ ತಮ್ಮ ವಿಭೀಷಣ;
ಪೊರೆಯನಿಶ=ಯಾವಾಗಲೂ ಕಾಪಾಡು; ಪೇರ್ಮೆ=ಹೆಚ್ಚಳಿಕೆ;
ಕಾಲ=ಯಮ; ಪ್ರಭಾಪಟಲ=ಅತ್ಯಂತ ಪ್ರಕಾಶಮಾನವಾದ;
ವ್ರಯ=ಖರ್ಚು; ಅಹಿಕ=ಲೌಕಿಕ ವರಗಳು;
ತೂಣೀರ ಪಾಣಿ=ಶ್ರೀರಾಮ; ಘೃಣಿ=ಸೂರ್ಯ;
ದ್ಯುಮಣಿ=ಸೂರ್ಯ;
ಕ್ಲುಪ್ತ ಕಾಲ=ನಿಗದಿಯಾದ ಸಮಯ;
ತಾರಕೇಂದ್ರ=ಚಂದ್ರ; ವಿಯದ್ಗಂಗಾ ಪಿತ=ಆಕಾಶ
ಗಂಗೆಯ ಪಿತ-ಶ್ರೀಹರಿ; ನಿರಾಮಯ=ದುಃಖ-ರೋಗವಿಲ್ಲದ;
No comments:
Post a Comment