ankita ತಂದೆವೆಂಕಟೇಶವಿಠಲ
ರಾಗ: ಬೇಗಡೆ /ಕಾಂಬೋಜಿ ತಾಳ: ಝಂಪೆ
ಆರ್ತನಾಭೀಷ್ಟವನು ಪೂರ್ತಿ ಮಾಡೋ ಪ
ಕಾರ್ತಸ್ವರಾಭವಪುಸ್ಫೂರ್ತಿ ಕೊಟ್ಟೆನಗೆ ಅ.ಪ
ಏಸೇಸು ವಿಧದಿ ಭವಕ್ಲೇಶ ಸಮನಿಸಿ ಮನೋ-
ಲ್ಹಾಸಗಳನನವರತ ಹ್ರಾಸಗೈಸುತಲಿ
ಲೇಸುನಿನ್ನಯ ಸ್ಮರಣೆಗಾಸೆಯಾಗದ ತೆರದಿ
ಮೋಸಪಡಿಸುವ ಕಲ್ಯಾವೇಶವನು ಬಿಡಿಸಿ 1
ಬಂದೆ ಪ್ರಾಕೃತಬಾಧೆಯಿಂದ ಮನನೊಂದು ಎಳ-
ಗಂದು ತಾಯಿಯ ಕಾಣದಂದು ಕಳೆಗುಂದಿ
ಹಿಂದೆಮುಂದರಚುತ ಸಂಬಂಧಿಗರ ಕಾಣದಲೆ
ಬೆಂದೊಡಲ ಕೊಡಹಿ ತಾಯ್ಮಂದಿರವ ಹೋಗುವಂತೆ 2
ಆದುದಾಯಿತು ಪೂರ್ಣಬೋಧರ ಸದಾಗಮ ಪ್ರ-
ಮೋದಮಾರ್ಗವ ತೋರಿ ಸಾಧುವರರಾ
ಪಾದಧೂಳಿಯ ಸುಪ್ರಸಾದ ಕರುಣಿಸಿ ಭವದ
ಬಾಧೆಯನು ಬಿಡಿಸೊ ಪ್ರಹ್ಲಾದÀಗುರುವೇ 3
ಏನು ಕಾರಣ ಕೈಯ ನೀನು ಪಿಡಿಯದಲಿರುವೆ
ಪ್ರಾಣರಾಯನ ಭಕ್ತಾಗ್ರಣಿಯೆ ಗುಣಮಣಿಯೇ
ದೀನಜನವತ್ಸಲನೆಂದಾನು ನಂಬಿದೆನಯ್ಯ
ಜ್ಞಾನದಾನವ ಕೊಡೊ ಮಹಾನುಭಾವ 4
ತುಂಗಾಸುವೇಶ್ಮಾಂತ ರಂಗದೊಳು ನೀ ನಿಂತು
ಭಂಗುರದ ವಿಷಯವಿಷ ಭಂಗಿಸುತಲನಿಶಾ
ಅಂಗಜನ ತಂದೆವೆಂಕಟೇಶವಿಠಲನ ಚರಣ
ಅಂಗುಲೀನಖದ್ಯುತಿ ಹೃದಂಗಣದಿ ತೋರೋ 5
***
ಕಾರ್ತಸ್ವರಾ ಭವಪುಸ್ಫೂರ್ತಿ=ಬಂಗಾರದಂತೆ
ಪ್ರಕಾಶಮಾನವಾದ ದೇಹ;
ಹ್ರಾಸಗೈಸು=ನಾಶ ಮಾಡು;
ಎಳಗಂದು=ಹೊಸದಾಗಿ ಹುಟ್ಟಿದ ಕರು;
ತಾಯ್ಮಂದಿರ=ತಾಯಿಯ ಸಮೀಪ;
ಸುವೇಶ್ಮಾ=ಸುಂದರವಾದ ಮನೆ;
ಭಂಗುರ=ಬೇಗನೆ ನಾಶ ಹೊಂದುವ;
ಅಂಗುಲೀ ನಖದ್ಯುತಿ=ಬೆರಳುಗುರಿನ ಕಾಂತಿ;
No comments:
Post a Comment