ankita ಸುಧಾಮವಿಠಲ
ರಾಗ: [ರೇವತಿ] ತಾಳ: [ಮಿಶ್ರನಡೆ]
ನೋಡಿರಿವರು ರಾಘವೇಂದ್ರರು ನಾಡಿನೊಳಗೆ ಬೆಳಗುತಿಹರು
ನೋಡಿರಿವರು ರಾಘವೇಂದ್ರರು ಪ
ನೋಡಿರಿವರು ರಾಘವೇಂದ್ರರು ನಾಡಿನೊಳಗೆ ಬೆಳಗುತಿಹರು
ಕಾಡಿ ಬೇಡಿ ಸೇವೆ ಮಾಳ್ಪರ ನೋಡಿ ದಯದಿ ಪಾಲಿಸೂವರೂ ಅ. ಪ.
ಕುಂದನೊಂದನೆಣೆಸದಿರುವರೂ ಸೇವಿಸುವರ ತಮ್ಮ
ಬಂಧುವೆಂದು ತಿಳಿದು ಪೊರೆವರೂ ಆನಂದವೀಯುತ
ತಂದ ಕಾಣಿಕೆ ಹರಿಕೆಗಳನು ಇಂದಿರಾಪತಿಗೆಂದು ಪಡೆದು
ಸುಂದರಾಂಗ ಸ್ಮರಣೆ ಮಾಡಿ ತಂದೆ ಸಲಹು ಇವರನೆಂದು
ವಂದಿಸುತ ಬೇಡಿಕೊಂಡು ಮಂದಿಗಳನು ಪೊರೆಯುವವರು 1
ಶ್ರೀಸುಧೀಂದ್ರ ಯತಿಕುವರರೂ ವಿಜಯೀಂದ್ರತೀರ್ಥರ ಪರಮ
ಶಿಷ್ಯರೂ ಮಾತು ಮಾತಿಗೂ ಹರಿಯ ಸ್ಮರಿಸಿ ದುರಿತರಾಸಿಗಳನು
ಹರಿಸಿ ಹರಿಸಿ ಶಿಷ್ಯರ ಸಲಹಿಕೊಳ್ಳುತ ಕರೆದು ಮಂತ್ರಾಕ್ಷತೆಯನಿತ್ತು
ಕರುಣದಿಂದಲಿ ಕಾಯುತಲಿರುವ ಪರಮಹಂಸರು ಯತಿರಾಘವೇಂದ್ರರು 2
ಮನೆಮಾಡಿ ಮಂತ್ರಾಲಯದಿ ನಿಂತರು ಶ್ರೀಕಾಂತನನ್ನು
ಕರೆದು ಪ್ರಾರ್ಥಿಸಿ ನಿಲಿಸಿಕೊಂಡರು ಕಲಿಯ ಕಲ್ಮಷ ದೋಷವಳಿಸಿ
ಸೇವಿಸುವರ ಪೊರೆಯೊ ಎಂದು ಕರುಣದಿಂದಲಿ ಬೇಡಿಕೊಂಡು
ಹರಿಯ ಕರುಣ ಪಡೆದು ತಮ್ಮ ಭಾಗ್ಯವಿತ್ತು ಶರಣರನ್ನು
ಪೊರೆಯುತಿರುವ ಶ್ರೀ ಸುಧಾಮವಿಠಲನ ಪ್ರೀತಿ ಪಾತ್ರರು 3
No comments:
Post a Comment