ankita ಪಂಡರೀನಾಥವಿಠಲ
ಸುಪ್ರಭಾತ
ರಾಗ: [ಭೌಳಿ] ತಾಳ: [ಖಂಡಛಾಪು]
ಏಳಯ್ಯ ಗುರುರಾಜ ಏಳಯ್ಯ ರವಿತೇಜ
ಏಳಯ್ಯ ಏಳು ಬೆಳಗಾಯಿತೂ ಪ
ಧೂಳಿದರುಶನಕಾಗಿ ಭಕುತರೆಲ್ಲರು ಬಂದು
ಕಾದಿಹರು ಕಾತರದಿ ಗುರು ರಾಘವೇಂದ್ರಾ ಅ.ಪ
ಯತಿ ಸುಧೀಂದ್ರರ ಕರಜ ಕ್ಷಿತಿಯೊಳಗೆ ಅಪ್ರತಿಮ
ಪ್ರತಿಗಾಣೆ ಮಂತ್ರಾಲಯನಿಲಯಾ
ಸತತ ಭಕ್ತೋದ್ಧಾರ ಸ್ತುತ್ಯ ನೀ ಗುಣಸಾಂದ್ರ
ಮತಿಯಿಂದ ಸ್ತುತಿಸುವೆನು ನಿಮ್ಮಂಘ್ರಿ ನಾನೂ 1
ವರಹಜೆಯ ತೀರಗನೆ ವರಹದೇವರ ಕರುಣ
ನಿರುತ ಪಾತ್ರನೆ ಮೌನಿ ಕುಲಶ್ರೇಷ್ಠಗುರುವೇ
ಪರಮಾತ್ಮ ಭೂಮಿಜೆಪತಿ ರಾಮಪದಭೃಂಗ
ಸುರತರುವೆ ಚಿಂತಾಮಣಿ ಕಲ್ಪವೃಕ್ಷಾ 2
ಶಂಕುಕರ್ಣನು ನೀನು ಪ್ರಹ್ಲಾದ ವ್ಯಾಸ ಮುನಿ
ವೆಂಕಟೇಶನ ದಯದಿ ಗುರು ರಾಘವೇಂದ್ರಾ
ಮಂಕುಮಾನವ ನಾನು ಶಂಕೆಯಿಲ್ಲದೆ ಕಾಯೋ
ಕಿಂಕರಾಗ್ರೇಸರನೆ ನಿನ್ನ ಸರಿ ಯಾರೂ 3
ದ್ವಾರದೊಳು ಕಾದಿಹರು ಕೋವಿದರು ಭಕ್ತಿಯಲಿ
ದಾರಿತೋರಿಸಿ ಗುರುವೆ ಮುಕ್ತಿ ಮಂಟಪಕೇ
ವೀರವೈಷ್ಣವ ಯತಿಯೆ ಕಾದಿಹರು ದರುಶನಕೆ
ಪಾರಗಾಣದ ಮಹಿಮೆ ಕೇಳಿ ಬಂದಿಹರೂ 4
ದಾಸರೆಲ್ಲರು ಸೇರಿ ನಿನ್ನ ಕೀರ್ತಿಸುತ್ತಿಹರು
ಶ್ರೀಶ ಕೃಷ್ಣನ ಭಜಕ ಕರುಣವಾರಿಧಿಯೇ
ಏಸೇಸೋ ಜನ್ಮದ ದೋಷವೆಲ್ಲವು ನಾಶ
ವಾಸವಾನುತ ಹರಿಯ ದಾಸ ನಿನನೀಕ್ಷಿಸಲು 5
ಸಂತಾನ ಸಂಪತ್ತು ಸುಜ್ಞಾನ ಭಕುತಿಯನು
ಸಂತಸದಿ ಕೊಡುವಂಥ ಶ್ರೀಮಂತ ನೀನೂ
ಸಂತರಿಂ ವಂದಿತನೆ ಸುಗುಣಸಾಗರ ಗುರುವೆ
ಸಂತತವು ತವಸ್ಮರಣೆ ಬರಲಿ ನಾಲಿಗೆಗೇ 6
ನಾರಿಯರು ನಿಂದಿಹರು ಆರತಿಯ ತಂದಿಹರು
ನೀರಜಾಕ್ಷನ ಕಂಡ ಕಾಷಾಯಧಾರೀ
ಸಾರುತ್ತ ನಿನ್ನ ಕೀರ್ತಿ ಕಾದಿಹರು ಕಾತರದಿ
ತೋರಯ್ಯ ಮುಖ ಕಮಲ ಮೂರಾವತಾರೀ 7
ಪರಿಮಳಾಚಾರ್ಯ ಗುರು ಪಾಲಿಪುದು ಕೃಪೆ ತೋರಿ
ದುರಿತ ದುಷ್ಕರ್ಮಗಳ ತರಿದು ಬೇಗ
ವರಭಕ್ತಿ ಜ್ಞಾನ ವೈರಾಗ್ಯ ಪಾಲಿಸು ಎನಗೆ
ಕರುಣದಲಿ ಶ್ರೀಹರಿಯ ದಾಸನಾದವಗೆ 8
ಮಂಗಳಾಂಗನ ಹೃದಯಕಮಲದೊಳು ತಂದು ನರ-
ಸಿಂಗ ಮೂರುತಿ ಕಾಂಬ ಭಾಗ್ಯವನೆ ಕೊಟ್ಟು
ಭಂಗ ಭವ ಬಿಡಿಸಿ ಪೊರೆ ಕಂಗಳಿಗೆ ಕಾಣುತ್ತ
ರಂಗ ಪಂಢರಿನಾಥವಿಠಲನ ದಾಸಾ 9
***
No comments:
Post a Comment