ankita ಮಂಗಳಾಂಗಹರಿವಿಠಲ
ರಾಗ: [ಕೇದಾರ/ಯಮನ್] ತಾಳ: [ಆದಿ]
ಬಂದ ಗುರು ರಾಘವೇಂದ್ರ ಬಂದ ನೋಡೆ
ಬಂದ ಭಕ್ತರ ಕಾಮಧೇನು ಬಂದ ನೋಡೆ ಪ
ನೊಂದ ಆರ್ತರ ಕಲ್ಪವೃಕ್ಷ ಬಂದ ನೋಡೆ
ಕುಂದದ ಜ್ಞಾನ ಭಕ್ತಿ ನೀಡುತ ಬಂದ ನೋಡೆ ಅ.ಪ
ನಾರದರುಪದೇಶ ಪಡೆದು ಬಂದ ನೋಡೆ
ನವವಿಧ ಭಕ್ತಿ ಭಾವ ತೋರಿ ಬಂದ ನೋಡೆ
ನಾನಾ ದೈತ್ಯರ ಬಾಲಕರುದ್ಧಾರಕ ಬಂದ ನೋಡೆ
ನಾರಸಿಂಹನ ಶಾಂತಗೊಳಿಸಿ ಬಂದ ನೋಡೆ 1
ಬಾಲಯತಿ ಬ್ರಹ್ಮಣ್ಯ ಕುವರ ಬಂದ ನೋಡೆ
ಭೂರಿ ವಾದಿಗಳನೆ ಜಯಿಸಿ ಬಂದ ನೋಡೆ
ಭಜಿಸಿ ಗೋಪಾಲ ಕೃಷ್ಣನ ಬಂದ ನೋಡೆ
ಭಾರಿ ಗ್ರಂಥಗಳನೆ ರಚಿಸಿ ಬಂದ ನೋಡೆ 2
ಮಂದ ಭಾಗ್ಯರ ಭಾಗ್ಯ ದೇವ ಬಂದ ನೋಡೆ
ಮಂಕುಹರಿಸಿ ಜ್ಞಾನವನೀವ ಬಂದ ನೋಡೆ
ಮಂಗಳಾಂಗಹರಿವಿಠಲನ ತೋರ್ವ ನೋಡೆ
ಮಂತ್ರಾಲಯದಿ ನಿಂತ ಯೋಗಿ ಬಂದ ನೋಡೆ 3
***
No comments:
Post a Comment