Monday, 6 September 2021

ಆರಾಯರ ಪದ ನೀರಜ ಯುಗ ಮನೋವಾರಿಜದಲಿ ನಾ ಭಜಿಸುವೆನು ankita gurujagannatha vittala

 ರಾಗ: ಶಂಕರಾಭರಣ ತಾಳ: ಏಕ


ಆ ರಾಯರ ಪದ ನೀರಜ ಯುಗ ಮನೋ-

ವಾರಿಜದಲಿ ನಾ ಭಜಿಸುವೆನು


ಸಾರಿದ ಜನರಘÀ ದೂರದಿ ಓಡಿಸಿ

ಧಾರುಣಿಯೊಳು ಸುರಸೌರಭಿ ಎನಿಸಿಹ ಅ.ಪ


ಆವರ ಪದಜಲ ಈ ಭುವನತ್ರಯ

ಪಾವನತರವೆಂದೆನಿಸುವದೋ

ಆವರ ಪದಯುಗ ಕೋವಿದಜನರು

ಭಾವದಿ ದಿನದಿನ ಸೇವಿಪರೊ

ಆವರ ಹೃದಯದಿ ನಾರಾಯಣ ಚ-

ಕ್ರಾವತಾರವ ಧರಿಸಿಹನೊ

ಶ್ರೀವರ ಹರಿ ಕರುಣಾವಲೋಕನದಿ

ದೇವಸ್ವಭಾವವನೈದಿಹರೊ 1

ಆವ ಮಾನವನಿವರ ಚರಣ 

ಸೇವಕತೆರನೆಂದೆನಿಸುವನೋ1

ಭಾವಿಪರವನೀತಳದೊಳು ಮತ್ತೆ 

ಕೋವಿದ ಜನರೆಲ್ಲರು ಆವನ-

ಧೀನನಾಗುವರು ಅವನೇ ಅವನಿ- 

ದೇವೋತ್ತಮನೆಂದೆನಿಸುವನು

ಪಾವನಿ ಮುಖ ದೇವೋತ್ತಮರೆಲ್ಲರು

ಈ ವಿಧ ಮಹಿಮೆಯ ತೀವ್ರದಿ ತೋರುವರು 2

ಆವರು ಅವನಿ ದೇವತೆಗಳಿಗೆ

ಜೀವನವಿತ್ತು ಪೊರೆದಿಹರೊ

ಪಾವಕಗ್ಹಾಕಿದ ಹಾರವ ಮತ್ತೆ

ಭೂವರನಿಗೆ ತಂದಿತ್ತಿಹರೊ

ಮಾವಿನ ರಸದಲಿ ಬಿದ್ದಿಹ ಶಿಶುವಿಗೆ

ಜೀವನವಿತ್ತು ಕಾಯ್ದಿಹರೋ

ಶೈವನ ನಿಜ ಶೈವವ ಬಿಡಿಸಿ ತಮ್ಮ

ಸೇವೆಯನಿತ್ತು ಕಾಯ್ದಿಹರೊ 3

ಸಲಿಲವ ತಂದಿರುತಿಹ ನರನಿಗೆ

ಸುಲಲಿತ ಮುಕ್ತಿಯನಿತ್ತಿಹರೊ

ಚಲುವ ತನಯನಾ ಪುಲಿನದಿ ಪಡೆದಿಹ

ಲಲನೆಯ ಚೈಲದಿ ಕಾದಿಹರೊ

ಸಲಿಲವು ಇಲ್ಲದೆ ಬಳಲಿದ ಜನಕೆ 

ಸಲಿಲವನಿತ್ತು ಸಲಹಿದರೊ

ಇಳೆಯೊಳು ಯತಿಕುಲತಿಲಕರೆಂದೆನಿಸಿ

ಸಲಿಸದಂಥದು ತಾವು ಸಲಿಸಿಹರೊ 4

ಅನುದಿನದಲಿ ತಮ್ಮ ಪದಕಮಲವನು

ಮನದಲಿ ಬಿಡದೆ ಭಜಿಸುವ

ಜನರಿಗೆ ನಿಜಘನಸುಖವನು ಕೊಟ್ಟವ-

ರನುಸರಿಸಿ ಇರುತಿಹರ

ಮನೋವಾಕ್ಕಾಯದಿ ನಂಬಿದ ಜನಕೆ

ಜನುಮವನ್ನು ನೀಡರು ಇವರ

ಘನಗುಣನಿಧಿ ಗುರುಜಗನ್ನಾಥವಿಠಲ-

ನಣುಗಾಗ್ರೇಸರನೆನಿಸಿಹರ 5

***


No comments:

Post a Comment