..
ಶ್ರೀವಿಜಯದಾಸಾರ್ಯ ವಿರಚಿತ
ಶ್ರೀಕೃಷ್ಣಾವತಾರ ಸುಳಾದಿ
ರಾಗ ಮುಖಾರಿ
ಝಂಪಿತಾಳ
ಮುತ್ತು ನವರತ್ನಮಯ ಪವಳ ಸಂಗತಿಯಿಂದ
ಕೆತ್ತಿಸಿದ ಮುಕುಟ ಶಿರದಲ್ಲಿ ಧರಿಸಿಪ್ಪದೇನೋ
ನೆತ್ತಿಗೆ ಗಿಡದೆಲೆ ನಾನಾಕ ಬಳ್ಳಿಗಳು
ಸುತ್ತಿ ಸಣ್ಣವರೊಡನೆ ಪಾರಾಡುವದೆತ್ತ
ಹತ್ತುಸಾವಿರ ವೇದ ಸ್ತುತಿಸಿ ಬಾಯಾರಿ ಬೇ -
ಸತ್ತು ಸುಮ್ಮನೆ ನಿನ್ನ ಮಹಿಮೆ ಅರಸುವದೇನೋ
ಚಿತ್ತಕ್ಕೆ ಬಂದಂತೆ ಗೋಮಕ್ಕಳ ಕೈಯ್ಯಾ
ಹತ್ತು ನೂರಾರುಗಳ ಬೈಸಿಕೊಂಬುವದೆತ್ತ
ನಿತ್ಯ ತೃಪ್ತ ಪರಮ ನಿತ್ಯಾನಂದನೆಂದು
ತೆತ್ತೀಸ ಕೋಟಿ ಆದಿತ್ಯರು ಪೊಗಳಲೇನು
ಹೊತ್ತು ಹೊತ್ತಿಗೆ ಕಲ್ಲಿಬುತ್ತಿ ಉಣಲು ಸಾಲದೆ
ತತ್ತಪಸಿಗಳ ಯಾಗದಲ್ಲಿ ಉಂಡದ್ದೇನೋ
ಉತ್ತಮೋತ್ತಮ ವೈಕುಂಠವನ್ನು ಬಿಟ್ಟು
ಮರ್ತ್ಯ ಲೋಕದಲ್ಲಿ ನಿನ್ನ ಲೀಲಾವಿನೋದವೇನೋ
ಸತ್ಯಸಂಕಲ್ಪ ಸಿದ್ಧ ವಿಜಯವಿಟ್ಠಲ ನಿನ್ನ
ಚಿತ್ತಕ್ಕೆ ಬಂದದ್ದಲ್ಲದೇ ಪ್ರತಿಯುಂಟೇ ॥ 1 ॥
ಮಟ್ಟತಾಳ
ಜನನ ಮರಣ ದೋಷ ವಿದೂರ
ಎನಿಸಿಕೊಂಡು ಮೆರೆವದೇನೋ
ಮನುಜ ಕಾಯ ಧರಿಸಿ ದೇವಕಿ
ತನುಜನಾಗಿ ಪುಟ್ಟುವದೆತ್ತ
ವಿನಯತಾ ಸಾಕ್ಷಿ ವಿಜಯವಿಟ್ಠಲ
ಅಣುಮಹತ್ತೆ ಗುಣಗಣ ನಿಲಯಾ ॥ 2 ॥
ರೂಪಕತಾಳ
ದನುಜ ದಲ್ಲಣನೆಂಬೊ ಘನ ಪೆಸರು ನಿನಗೇನು
ದನುಜಗಂಜಿ ಪೋಗಿ ವನಧಿಯೊಳಡಗಿದೆ
ಸನಕಾದಿಗಳು ನಿನ್ನ ಬಿಡದೆ ಕಾಯುವದೇನೋ
ವಿನಯದಿಂದಲಿ ನೀನು ದನಗಾವಿನೆನಿಸಿದೆ
ವನಜಭವಾದಿಗಳು ನಿನ್ನ ವಾಲಗವೇನು
ಧನಂಜಯಗೆ ನೀನು ರಥವನು ನಡೆಸುವದೇನು
ವಿನಯೋಜ ನಾಮ ಸಿರಿ ವಿಜಯವಿಟ್ಠಲ ನೀನು
ನೆನದಾಟವಲ್ಲದೇ ಅನಿಮಿಷರು ಬಲ್ಲರೇ ॥ 3 ॥
ಝಂಪೆತಾಳ
ಸಿರಿಗೆ ನಿನಗೆ ನೋಡೆ ಎಂದಿಗೆ ವಿಯೋಗವಿಲ್ಲ
ಭರದಿಂದ ರುಕ್ಮಿಣಿಯ ತಂದೆನೆಂಬುವದೇನೋ
ಸರಸಿಜಜಾಂಡಗಳೆಲ್ಲ ಹೊತ್ತ ಮಹಮಹಿಮನೆ
ಗಿರಿಧರಿಸಿದನೆಂಬ ಕೀರ್ತಿ ಪಡೆದದೇನೋ
ವರವೇದಗಳ ಸೆರೆ ಬಿಡಿಸಿದ ಧೀರಗೆ
ತರುಣೇರ ಬಿಡಿಸಿದ್ದು ಸೋಜಿಗವೆ ನಿನಗೆ
ಸರಿಯಾದ ದೈವಂಗಳು ಇಲ್ಲದ ಕಾರಣದಿಂದ
ಬೆರಗು ತೋರುವಿ ಜಗಕೆ ಸತ್ವ ವಿಜಯವಿಟ್ಠಲಾ ॥ 4 ॥
ತ್ರಿವಿಡಿತಾಳ
ಅನಿಲಾಸನನ ಮೇಲೆ ಯೋಗನಿದ್ರೆವುಳ್ಳವಗೆ
ವನದೊಳು ಕಂಡಲ್ಲಿ ಮಲಗಿ ಏಳುವದೇನೋ
ಮಣಿಕಾಂಚನ ವಸನ ಉಟ್ಟು ಉನ್ನತನೆ ರ -
ತುನಗಂಬಳಿ ಚಲ್ಲಣದ ಶೃಂಗಾರವೇನೋ
ಚಿನುಮಯನಾಗಿ ಕಾಣಿಸದಿಪ್ಪ ದೈವವೇ
ಮನೆಮನೆ ಪೊಕ್ಕು ನವನೀತ ಕದಿವದೇನು
ಸನಾತ್ಸನಾತನ ನಾಮ ಸಿರಿ ವಿಜಯವಿಟ್ಠಲರೇಯಾ
ಅಣುವಾಗಿ ಎಲ್ಲರೊಳು ಜುಣಗಿಯಾಡಿದದೇನೋ ॥ 5 ॥
ಅಟ್ಟತಾಳ
ಸ್ವರಮಣ ನೀನಾಗಿ ಸುಖಿಸುವ ದೈವವೇ
ಕರಡಿಯ ಮಗಳನು ಕೂಡಿದ ಬಗೆ ಏನೋ
ಸುರ ಪಾರಿಜಾತ ಮಂದಾರ ಪುಷ್ಪ ಮುಡಿದಿಪ್ಪ
ಧರಿಸಿದೆ ಮಾಲಾಗಾರರು ಹಾರವನು ತಾರೆ
ಶರಧಿಯೊಳಗೆ ಬಂದು ಸುಧಿಯ ನೆರದವನೆ
ಕರದ ನೊರೆಪಾಲು ಕುಡಿದನೆನಸಿದನೇನೋ
ಸುರುಚಿರ ನಾಮ ನಮ್ಮ ವಿಜಯವಿಟ್ಠಲ ನಿನ್ನ
ಚರಿತೆ ಒಂದೊಂದು ಉಚ್ಚರಿಸಲೆನ್ನಳವೇ ॥ 6 ॥
ಆದಿತಾಳ
ಪರಾಪರಾವ ಪ್ರಾಕೃತ ಶರೀರವೆನಿಸುವದೇನು
ಜರಾಮರಣನೆಂದು ತೋರಿ ಧರಿಗೆ ಎನಿಸುವದೇನು
ಹರಿ ನಿನ್ನ ಮಾಯಾಲೀಲೆ ಆವಾದಾವದಾವದಯ್ಯಾ
ಅರಿದರೆ ಚೇತನ ಅಚೇತನದೊಳಗೆ ಯಿಲ್ಲಾ
ಚರಾಚರದಲ್ಲಿ ನಿತ್ಯವರಸಿ ನೋಡಿದರೊಂದು
ಪರಿಗೆ ಅನಂತಪರಿ ನೂತನವೆನಿಸುತಿದೆ
ಸುರೇಶ್ವರನಾಮ ಸಿರಿ ವಿಜಯವಿಟ್ಠಲ ನಿನ್ನ
ತರಳತನದ ಲೀಲೆಗಳು ದನುಜರ ಕುಲಕೆ ಕಷ್ಟಾ ॥ 7 ॥
ಜತೆ
ನಿಮ್ಮ ಮಹಿಮೆಗೆ ಅನಂತಾನಂತ ನಮೋ
ಬೊಮ್ಮಗೆ ಪರಬೊಮ್ಮ ಗಹನ ವಿಜಯವಿಟ್ಠಲಾ ॥
***
No comments:
Post a Comment