Audio by Mrs. Nandini Sripad
..
ಶ್ರೀವಿಜಯದಾಸಾರ್ಯ ವಿರಚಿತ ಶ್ರೀಕೃಷ್ಣಾವತಾರ ಸುಳಾದಿ
ರಾಗ ಹಂಸಾನಂದಿ
ಧ್ರುವತಾಳ
ಇಂದಿರಾಪತಿ ಬಂದಾ ಎನ್ನ ಮುಂದೆ ನಿಂದಾ
ಇಂದು ಕುಣಿದಾ ಧಿಂ ಧಿಂ ಧಿಮಿಯೆಂದು
ಧಂ ಧಂ ಧಳಾಯೆಂದು ಅಂದಂದಂದವಾಗಿ
ಅಂದಿಗೆ ಕಿರಿಗೆಜ್ಜೆ ಒಂದಾಗಿ ನುಡಿಯೇ
ಇಂದಿರಾಪತಿ ವೃಂದಾರಕ ವೃಂದ
ಒಂದಾಗಿ ಸ್ತುತಿಸಲು ದುಂದುಭಿವಾದ್ಯ
ಸಂದಣಿ ಎಸಿಯೆ ಒಂದು ಪಾದವನೆತ್ತಿ
ಒಂದು ಪಾದದೀ ವಸುಂಧರ ಮೆಟ್ಟಿ
ಸುಂದರ ವಿಗ್ರಹ ಇಂದಿರಾಪತಿ
ಎಂದೆಂದಿಗಿಲ್ಲದಾನಂದವೆ ಪೊಸತೆನೆ
ಪೊಂದಿಪ್ಪನಯ್ಯಾ ತನ್ನಂದವರಲ್ಲಿ ಗುಣ -
ಸಿಂಧು ಚಂದಿರಮೊಗ ಇಂದಿರಾಪತಿ ಬಂದಾ
ನಂದನಂದನ ಗೋಪಿಕಂದ ವಿಜಯವಿಟ್ಠ -
ಲಂದು ಮನದಿ ಸಂಬಂಧಿಗನೆಂದೆನೆ ॥ 1 ॥
ಮಟ್ಟತಾಳ
ಮುರುಬೆರಳವನಿಗೇ ಮುಟ್ಟಿ ಮುಟ್ಟಾದಿರೆ
ಕಂಬುಗೊರಳ ಕೃಷ್ಣ ಕೈಯಲಿ ಪೊಂಗೊಳಲು
ತುಂಬಿದ ರಾಗದಲಿ ತುತ್ತು ತುತ್ತುರಿಯನೇ
ಭೋಂ ಭೋಂ ಭೋಂ ಭೋಂಬೆಂಬ ಊದುವ ಸ್ವರಕೆ
ಅಂಬುಬಂಬೆಗಳ ಎಳೆಕರು ಮೊಲೆ
ಉಂಬುವ ಹಂಬಲ ಉತ್ಸಾಹದಿ ಮರೆದೂ
ಬೆಂಬಿಡದಲೆ ಸಾಲುವಿಡಿದು ಓಡುತ ಬರಲು
ರಂಬಿಸಿ ಕರೆಯುತಿರೆ ಬೆರಳೊಳಗೆ ತಿದ್ದಿ
ಕೊಂಬು ಬಾಗಿಸಿ ಕೆಲವು ತಮ್ಮ ಮೊಗವನ್ನು
ಅಂಬರಕೆ ಎತ್ತಿ ಅತಿ ತ್ವರಿತದಲ್ಲೀ
ಮುಂಬಲಿ ನಿಲ್ಲೆ ವಿಜಯವಿಟ್ಠಲ ನೀ -
ಲಾಂಬರನ ಕೂಡ ಬಾಲಾಟದಲ್ಲಿಪ್ಪಾ ॥ 2 ॥
ತ್ರಿವಿಡಿತಾಳ
ಚುಂಚುಗೂದುಲು ಮೃಗಲಾಂಛನದಂತೆ ತಿಲಕಾ
ಮಿಂಚುವ ಗಲ್ಲದಲ್ಲಿ ಮಾಗಾಯಿಯ ಬೆಳಕು
ಚಂಚಲಗಣ್ಣು ಮಂಡಿಯ ಮುಕುಟ ಪೂವು
ಗೊಂಚಲು ತುರುಬಿನ ತುಂಗ ವಿಕ್ರಮ ರಂಗ
ಚಿಂಚ ಬಿಳಪು ಮಾಸಾ ಹಂಡಾ ಬೂದಗಪ್ಪು
ಕೆಂಚಾವುಗಳ ಒಂದೆಶೆಯಲ್ಲಿ ಕರೆವುತಾ
ಹಂಚಿಕೆ ಮಾಡಿದಾ ಗೋಮಕ್ಕಳ ಕೂಡ
ತ್ವಂಚ ಹಂಚಾವೆಂದು ಹರಿದಾಡಿ ಜಿಗಿವುತಾ
ಕೊಂಚಾ ಬಲಿಷ್ಠನಂತೆ ಗೋಮಕ್ಕಳಿಂದ ಸೋತು
ವಂಚಕನಾಗಿ ಅಡಗಿ ಓಡ್ಯಾಡಿದಾ
ಕುಂಚಿಕೆಯಂತೆ ಮಾಡಿ ರತ್ನಗಂಬಳಿ ಪೊದ್ದು
ಲಂಚಾ ಕೊಡುವ ತನ್ನ ಕಂಡ ಗೋವಳರಿಗೇ
ಸಂಚಾರ ಮಾಡುವ ಗೆಳೆಯರೊಳಗೆ ಸುಳಿದ
ಮುಂಚಡಿಯೊಳಗೆ ಸಿಕ್ಕದಲೆ ಸುತ್ತಿಸುವ
ಸಂಚಿತಾಗಾಮಿ ಕಡಿಮೆ ಮಾಡುವಾ ವಿ -
ರಿಂಚಿ ಜನಕನೀತಾ ವಿಜಯವಿಟ್ಠಲರೇಯಾ
ಕಾಂಚನಮಯದಂತೆ ಥಳಥಳಿಸುತ ಸುಳಿದಾ ॥ 3 ॥
ಅಟ್ಟತಾಳ
ಚಪ್ಪಾಳೆ ಹಾಕುತಾ ಗೋಪಾಲಾ
ಕುಪ್ಪಳಿಸಿ ನೋಡಿ ಹಾರಾ
ಗುಪ್ಪಿಯ ಹಾರುವಾ ತಿರುಗಿ
ಸರ್ಪಾಕಾರದ ಗೆರಿಯಾ
ರೆಪ್ಪಿಯಾ ಇಡದೆ ದಾಟುವಾ
ತಪ್ಪದೇ ಗರಗ ಹೊಡಿವಾ
ಬಪ್ಪಾ ಕಂದುಕವ ತಟ್ಟುವಾ
ಅಪ್ಪಪ್ಪಾ ಈತನೇ ಬಲುದೈವ
ತಪ್ಪು ಹೊರಿಸಿ ವಾರಿಗೆವರ
ತಿಪ್ಪಾರ ದಂಡಾ ವಾಡಿಸುವ
ಅಪ್ಪಾರ ಮಹಿಮ ಇಷ್ಟರೊಳು
ಗೋಪಳ್ಳಿಯೊಳಗೆ ದಟ್ಟಡಿ
ಸಪ್ಪಳಿಲ್ಲದಂತೆ ಮನಿಮನಿಯ
ತುಪ್ಪಾ ಬೆಣ್ಣಿ ಪಾಲು ಮೊಸರು
ಚಪ್ಪರಿಸಿ ಮೆದ್ದು ಚಟ್ಟಗೆ
ದೊಪ್ಪನೆ ನೆಲಕೆ ಬಿಸುಟಾ
ಗಪ್ಪಚುಪ್ಪಾಗಿ ಪೊರಡುವಾ
ಆ ಪಥದೊಳು ನಾರೇರ
ಕುಪ್ಪಸಕ್ಕೆ ಕೈ ಹಾಕುವ
ಅಪ್ಪಿಕೊಂಡು ಮುದ್ದಾಡುವ
ತಪ್ಪಿಸಿಕೊಂಡು ಗೋಪಿಯ ಬಳಿಯಾ
ಇಪ್ಪಾನು ಬಲುಬಗೆ ತೋರುತ
ಇಪ್ಪಗೆ ಲೀಲೆಯ ವಾರಿಜ ಸಂಭವ
ಸರ್ಪಭೂಷಣ ಇಂದ್ರಾದಿಗಳು
ಅಪ್ರತಿ ಎನುತ ತಲೆವಾಗಿ ತುತಿಸಿ
ಅಪ್ರಮೇಯನ್ನ ಪೊಗಳಿದರು
ವಪ್ಪಿಡಿ ಅವಲಿಗೆ ಮೆಚ್ಚಿದ ವಿಜಯವಿಟ್ಠಲ ಸುಲಭಾ
ಅಪ್ಪಾ ನೌವಾರಪ್ಪಾ ಚಪ್ಪಾಳೆ ಹಾಕುತ ಗೋಪಾಲಾ ॥ 4 ॥
ಆದಿತಾಳ
ಮುನಿ ಮನುಗಳು ತಮ್ಮ ಮನಸಿಲಿ
ಎಣಿಸಿ ಗುಣಿಸಿ ಕಾಣಾರು
ಎಣೆಗಾಣೆನು ನಿನ್ನ ಬಾಲತ್ವಾ -
ತನದ ಕ್ರೀಡೆಗೆ ನಾನೆಲ್ಲಿ
ಮಣಿಗಣ ಮಿಕ್ಕಾದ ವೇದಿಕಾ
ಅನುದಿನಾ ಯಾಗದ ಶಾಲೇಲಿ
ಅನುವಾಗಿ ಇರಲು ಅದರಲ್ಲಿ
ಕೊನೆ ಬೆರಳಾದರು ಇಡದೇ
ಗಣಣೆ ಮಾಡದಲಿಪ್ಪೆ ಇತ್ತಲು
ಮನುಜ ವಿಗ್ರಹನಾಗಿ ಗೋವಾಳಾ
ವನಿತೇರ ಮನಿಯ ಅಂಗಣಾ
ಅನುಚಿತವಾಗಿರೇ ನೀನೊಲಿದು
ಇನಿತಾದರೆ ಪೋಗದಿರಹುದೆ
ದಿನದಿನ ಸಂಚಾರ ಮಾಡುವೆ
ಅನಿಮಿತ್ತ ಬಂಧು ವಿಜಯವಿಟ್ಠಲ
ನಿನಗೆ ನಮೋ ನಮೋ ನಿನ್ನ ಚರಿತಕೆ ನಮೋ ॥ 5 ॥
ಜತೆ
ಅಂದು ನಾರಂದ ಪುರಂದರದಾಸರಾ
ಮಂದಿರದೊಳು ಕುಣಿದಾ ವಿಜಯವಿಟ್ಠಲ ವೊಲಿದಾ ॥
****
No comments:
Post a Comment