Wednesday, 1 September 2021

ಗತಿಸಿತಿನ್ನೊಂದು ವರ್ಷ ಎಂದರು ಗಣಿತಜ್ಞರು others

 ಹೊಸ ವರ್ಷ


ಗತಿಸಿತಿನ್ನೊಂದು ವರ್ಷ

   ಎಂದರು ಗಣಿತಜ್ಞರು |

ತಗ್ಗಿತೆಮ್ಮ ಶೇಷಾಯುಷ್ಯ

   ಎಂದರು ಹರಿ ಭಕ್ತರು ||


ವರ್ಷದ ಗಣನೆಗೆ ಹಲವು ಗಣಿತ

   ಉಂಟೆಂದರು ಗಣಿತಜ್ಞರು |

ಎಟುಕನಾವ ಗಣಿತಕು

   ಅನಂತನೆಂದರು ಹರಿಭಕ್ತರು ||


ಇಂದಿನ ಸೂರ್ಯೋದಯದಿಂದ

   ಮರುದಿನದ ಸೂರ್ಯೋದಯಕೆ

   ಒಂದು ದಿನ ಎಂದರು ಗಣಿತಜ್ಞರು |

ಭೂದೇವಿ ತನ್ನಂತರ್ಯಾಮಿಯ

   ನೆನೆದು ಸ್ವಪ್ರದಕ್ಷಿಣೆ ಗೈದಿಹಳು,

   ಬರಿದೆ ದಿನವಲ್ಲವ

   ಎಂದರು ಹರಿ ಭಕ್ತರು ||


ಇಂತಿಪ್ಪ ಮುನ್ನೂರ ಅರವತ್ತೈದು

   ದಿನಗಳಿಗೆ ಒಂದು ಸಂವತ್ಸರವು

   ಎಂದರು ಎಣಿಸುತ ಗಣಿತಜ್ಞರು |

ಬರಿದೆ ಸಂವತ್ಸರವಲ್ಲ ಭೂದೇವಿ

  ತನ್ನಿನಿಯ ಇನ ನಾರಾಯಣಗೆ ಗೈದ

  ಪ್ರದಕ್ಷಿಣೆಯದೆಂದರು ಹರಿ ಭಕ್ತರು ||


ಶುಕ್ಲ-ಕೃಷ್ಣ ಪಕ್ಷದ್ವಯಕೊಂದು

   ಮಾಸವು, ದ್ವಾದಶ ಮಾಸಕೊಂದು

   ಅನುವತ್ಸರವೆಂದರು ಗಣಿತಜ್ಞರು |

ಬರಿದೆ ಮಾಸವಲ್ಲವು, ಶಶಿಮಂಡಲ

  ಮಧ್ಯಸ್ಥ ಶಿವ ಗೈದಿಹ ಲಕುಮಿಕೆ

  ಪ್ರದಕ್ಷಿಣಿಯನೆಂದರು ಹರಿ ಭಕ್ತರು ||


ಇಪ್ಪತ್ತೇಳು ತಾರೆಗಳ 

   ದ್ವಾದಶ ಮಾಸದ ಮುನ್ನೂರ

   ಇಪ್ಪತ್ನಾಕು ದಿನದ ತಾರಾ

   ವತ್ಸರವೆಂದರು ಗಣಿತಜ್ಞರು |

ತಾರೆಯರು ಪೂಜಿಪರು 

   ತಮ್ಮಿನಿಯ ಶಶಿಯೊಳಗಿಪ್ಪ

   ಶಿವನೊಳಗಿಪ್ಪ ಪ್ರಾಣನೊಳಗಿಪ್ಪ ನರಹರಿಯನೆಂದರು ಹರಿ ಭಕ್ತರು ||


ಇವೆಲ್ಲ ತೊರೆದಿಹ ಅರ್ಥವಿಲ್ಲದ

   ವತ್ಸರವೊಂದನನುಸರಿಪರೀ ಜನ

   ಎಂದು ಹಳಿಯೆ ಗಣಿತಜ್ಞರು |

ವರ್ಷಕೊಮ್ಮೆ ಹಳಿದು ಬಳಿಕ

   ನೀವೂ ಅನುಸರಿಸುವುದು ಇದೇ

   ವತ್ಸರವ ಎಂದರು ಹರಿ ಭಕ್ತರು ||


ನೋಡಿ ಎಂತು ಕುಣಿದಾಡುತಿಹರು

   ಕುಡಿದು ನಲಿದು ಖಡಿದು ಜಗಿದು

   ಜಡಿದು ನುಲಿದು ಈ ಜನ 

   ಎನಲು ಗಣಿತಜ್ಞರು |

ಅದೆಂತೇ ಇರಲಿ ಸ್ವಾಗತಿಸುವ

   ನಾವೀ ನೂತನ ವ್ಯಾವಹಾರಿಕ 

   ವರ್ಷವ ನೆನೆಯುತ ಜನಾರ್ದನನ 

   ಎಂದರು ಹರಿ ಭಕ್ತರು ||

****


No comments:

Post a Comment