ಶ್ರೀಗೋಪಾಲದಾಸಾರ್ಯ ವಿರಚಿತ ಉಪಾಸನಾ ಸುಳಾದಿ
(ಭಗವದಪರೋಕ್ಷವಾಗಲು ಉಪಾಯ ತತ್ಸಾಧನೆ , ಖಂಡಾಖಂಡ ಧ್ಯಾನದ ವಿಚಾರ, ಸಕಲ ಮೂರ್ತಿಗಳ ಗುಣರೂಪಕ್ರಿಯಾದಿಗಳ ಬಿಂಬೈಕ್ಯ ಧ್ಯಾನ ಮುಖ್ಯ.)
ರಾಗ ಹಂಸಾನಂದಿ
ಧ್ರುವತಾಳ
ಅಪರೋಕ್ಷವೆಂಬುವದು ಬಹುದೂರವಿಲ್ಲವಿನ್ನು
ಸ್ವಪರೋಕ್ಷ ದಾರಢ್ಯದಂತೀಲಿ ಯಿಪ್ಪುವದು
ಅಪವಾದದ ಮಾತಲ್ಲ ಆಲಿಸಿ ತಿಳಿವದು
ಕಪಟ ರಹಿತರಾದ ಕೋವಿದರೂ
ಶಪಥ ಮಾಡಲಿ ಬೇಕು ಸರ್ವೋತ್ತಮ ಹರಿಯೆ ಎಂದು
ಚಪಲ ಸಂದೇಹವನ್ನು ಬಿಟ್ಟು
ತಪಸು ಎಂದು ತಿಳಿದು ತ್ರಿವಿಧ ತಾಪತ್ರಯವು
ಅಪವರ್ಗ ಸುಪವರ್ಗ ದಾರಿ ಹಿಡಿದು
ಕುಪಿತವಾಗದೆ ದುಷ್ಟ ಉಕ್ತಿ ಸುವಚನಕ್ಕೆ
ಕ್ಲಿಪುತಕ್ಕೆ ಅಧಿಕ ಹ್ರಾಸ ಇಲ್ಲವೆಂದು
ಗುಪಿತಾದಲ್ಲಿ ಹರಿಯ ಗುಣಗಳ ಕೊಂಡಾಡಿ
ಸ್ವಪನ ಜಾಗ್ರತಿ ವ್ಯಾಪಾರಗಳ ತಿಳಿದು
ರಿಪು ಮಿತ್ರಗಳ ವ್ಯಾಪಾರ ಹರಿಯೇ ಎಂದು
ಸಪುತ ಧಾತುಗಳನ್ಮಯಾದಿ ಕೋಶಗಳು
ಸಪುತ ದಶಸಹಸ್ರ ದ್ವಿ ನಾಡಿಯಲಿ
ಗುಪಿತನಾಗಿದ್ದ ಹರಿಯ ಗುಣರೂಪ ಕ್ರಿಯೆಗಳು
ಜಪಿಸು ಏಕೀಭೂತ ಬಿಂಬದಲ್ಲಿ
ಕಪಿಲ ಮೊದಲಾದ ಭಗವದವತಾರ
ತಪ ಮಾಡಿ ಚಿಂತಿಸು ಬಿಂಬಕ್ರೀಯಾ
ಗುಪಿತ ವ್ಯಕುತ ನಿತ್ಯ ಗೋಪಾಲವಿಟ್ಠಲ
ತಪಸಿಗೆ ಲಭ್ಯನಾಹ ಈ ಪರಿ ಚಿಂತಿಸೆ ॥ 1 ॥
ಅಟ್ಟತಾಳ
ಒಂದು ಮೂರುತಿ ಒಂದೆರಡು ಮೂರ್ತಿ
ಪೊಂದಿ ಲಿಂಗ ದೇಹ ಇಪ್ಪುವ ಮೂರ್ತಿ
ಒಂದು ಮೂರು ಮೂರ್ತಿ ಅನಿರುದ್ಧ ಕಾಯ -
ದಿಂದ ಒಳಹೊರಗೆ ವ್ಯಾಪ್ತವಾದ ಮೂರುತಿ
ಛಂದವಾದ ಹೃದಯಸದನದಲ್ಲಿ ಯಿಪ್ಪುವ ಮೂರುತಿ
ಒಂದೇಳು ದಳದಿ ಬಿಡದೆ ತಿರುಗುವ ಮೂರ್ತಿ
ಒಂದು ಹತ್ತು ಮೂರ್ತಿ ಚತುರ ವಿಂಶತಿ ಮೂರ್ತಿ
ಅಂದವಾದ ಐವತ್ತೊಂದು ಮೂರುತಿಗಳು
ಒಂದು ನವ ಮೂರುತಿ ಮತ್ಸ್ಯಾದಿಗಳಿನ್ನು
ವಂದಿಸಿರೊ ಕೃದ್ಧ್ಯೋಲ್ಕಾದಿ ಮೂರುತಿಗಳು
ಒಂದು ಮೂರು ಮೂರ್ತಿ ವಟು ಜಾಮದಗ್ನಿ
ಸಂದಿ ಸಂದಿಗೆ ವ್ಯಾಪ್ತ ಮೂರುತಿಗಳ ತಿಳಿದು
ವಂದಿಸಿದರೆ ಎಲ್ಲ ಒಂದೇ ಮೂರುತಿ ಕಾಣೊ
ಇಂದಿರೆಯರಸ ಗೋಪಾಲವಿಟ್ಠಲರೇಯಾ
ವಂದಿಸಿದಂತೆ ತನ್ನವರಲಿಪ್ಪುವನು ಬಿಡದೆ ॥ 2 ॥
ರೂಪಕತಾಳ
ಸಾಸಿರ ನಾಮಕ್ಕೆ ಸಾಸಿರ ಮೂರುತಿ
ಸಾಸಿರ ದಳದಲ್ಲಿ ವಾಸವಾದ ಮೂರ್ತಿ
ದಾಸೋಹಂ ಎಂದವಗೆ ಬಿಡದೆ ತೋರುವ ಮೂರ್ತಿ
ಲೇಸು ಹ್ರಾಸಗಳಿಗೆ ಹಿಗ್ಗಿ ಕುಗ್ಗದ ಮೂರ್ತಿ
ಕಾಸಿಗೆ ಬೆಲೆಯಾಗಿ ಕ್ರಯವಾಗದ ಮೂರುತಿ
ದೇಶ ದೇಶದಿ ವ್ಯಾಪ್ತವಾಗಿದ್ದ ಮೂರುತಿ
ನಾಶ ರಹಿತ ಸ್ವಪ್ರಕಾಶವಾದ ಮೂರುತಿ
ಶೇಷನ ಹಾಸಿಕೆಯಲಿ ಮಲಗಿಪ್ಪ ಮೂರುತಿ
ಈ ಸರ್ವಜಗವೆಲ್ಲ ವ್ಯಾಪಿಸಿದ ಮೂರ್ತಿ
ದೋಷರಹಿತ ಮೂರ್ತಿ ಗೋಪಾಲವಿಟ್ಠಲ
ವಾಸವಾಗಿ ಹೃದಯದೊಳಗಿಪ್ಪ ಮೂರುತಿ ॥ 3 ॥
ಝಂಪೆತಾಳ
ಕಣ್ಢಿನೊಳಗೆ ಇದ್ದು ಕಾಣಿಸುವ ಮೂರುತಿ
ಕರ್ನಂಗಳಲ್ಲಿ ನಿಂತು ಭಿನ್ನ ಭಿನ್ನ ಮೂರ್ತಿ ಬೀಜವಾದ ಮೂರ್ತಿ
ಅನ್ಯೋನ್ಯ ಆಶ್ರಯ ಆಗಿದ್ದ ಮೂರುತಿ
ತನ್ನ ನೆನೆವರಿಗೆ ತಗಲಿ ತೊಲಗದ ಮೂರುತಿ
ನಿನ್ನವನೆಂದವಗೆ ನೆಲೆಯಾದ ಮೂರುತಿ
ಚಿನ್ನುಮಯ ಮೂರುತಿ ಗೋಪಾಲವಿಟ್ಠಲ
ಅನ್ಯ ಜನರಿಗೆ ಅವೇದ್ಯನಾದ ಮೂರ್ತಿ ॥ 4 ॥
ತ್ರಿವಿಡಿತಾಳ
ಏಸು ಜನ್ಮದ ಉಪಾಸನೆ ಮಾಡಲು
ವಾಸನ ರೂಪದಿ ವೊಲಿದು ತೋರಿದ ಮೂರ್ತಿ
ಕೇಶವ ಮತ್ಸ್ಯಾದಿ ಅವತಾರ ರೂಪದಿ
ದಾಸ ಜನರಿಗೆ ಒಲಿದು ತೋರುವ ಮೂರುತಿ
ಈ ಶರೀರ ಹೃದಯಾಕಾಶದಲ್ಲಿ ನಿಂದು
ಸುಷುಪ್ತಿಲಾತ್ಮಗೆ ಸುಖವ ಉಣಿಸುವ ಮೂರುತಿ
ಭಾಸುರ ಮೂರುತಿ ಭವಗಳ ಕಳೆದಿನ್ನು
ವಾಸವಾಗಿ ನಿತ್ಯ ನಲಿದು ಆಡುವ ಮೂರ್ತಿ
ವಾಸುದೇವಾಚ್ಯುತ ಗೋಪಾಲವಿಟ್ಠಲ
ಶ್ರೀಶ ಕೃಷ್ಣ ಎನ್ನ ಪೋಷಿಪ ಮೂರುತಿ ॥ 5 ॥
ಅಟ್ಟತಾಳ
ಸೃಷ್ಠಿ ಸ್ಥಿತಿಯ ಕಾರಣ ಮೂರುತಿ
ಇಷ್ಟಾನಿಷ್ಟಪ್ರದವಾದ ಮೂರುತಿ
ಇಷ್ಟಾರಿಷ್ಟಕ್ಕೆ ತೊಡಕದ ಮೂರುತಿ
ಬಿಟ್ಟೆನೆಂದರೂ ಬಿಡಲೀಯದ ಮೂರುತಿ
ನಷ್ಟ ಜನರಿಗಿನ್ನು ವಂಚಿಸೊ ಮೂರುತಿ
ಮುಟ್ಟಿ ಭಜಿಸುವರಿಗೆ ಮುಂದೊಲಿದು
ಸ್ಪಷ್ಟವಾಗಿ ಸುಳಿದಾಡುವ ಮೂರುತಿ
ದಿಟ್ಟಿಸಿ ನೋಡಲು ಸರ್ವ ವಸ್ತುಗಳಿಗೂ
ಘಟ್ಟಿಯಾಗಿ ಬಿಂಬವಾಗಿದ್ದ ಮೂರುತಿ
ಇಷ್ಟ ದೈವವು ನಮ್ಮ ಗೋಪಾಲವಿಟ್ಠಲ
ಕಷ್ಟ ಸಂಸಾರದ ಕಡಲು ದಾಟಿಪ ಮೂರುತಿ ॥ 6 ॥
ಆದಿತಾಳ
ತಾರಕ ಕಾರಣವಾದ ಮೂರುತಿ
ತಾರಕ ಮಂತ್ರ ಉಪದೇಶಕ ಮೂರುತಿ
ಆರಬ್ದಾಂತ ಗಾಮಿನಿಯಾದ ಮೂರುತಿ
ಭಾರಕರ್ತ ಅನಿಮಿತ್ಯ ಬಂಧು ಮೂರುತಿ
ನಾರಿ ದ್ರೌಪದಿ ಅಭಿಮಾನ ಕಾಯ್ದ ಮೂರುತಿ
ನಾರಿಯರ ವ್ರತಕೊಲಿದಂಥ ಮೂರುತಿ
ಪೋರರ ಒಡಗೂಡಿ ಆಡಿದ ಮೂರುತಿ
ನಾರಾಯಣಿ ರೂಪವಾದ ಶ್ರೀ ಮೂರುತಿ
ವಾರಿಜೋದ್ಭವ ಪಿತ ಗೋಪಾಲವಿಟ್ಠಲ
ಕಾರಣನಾಗೆನ್ನ ಕಾಯ್ವಂಥ ಮೂರುತಿ ॥ 7 ॥
ಜತೆ
ಖಂಡಾಖಂಡ ಧ್ಯಾನ ಬಿಡದೆ ನಿತ್ಯವೂ ಮಾಡಾ -
ಖಂಡೇಶ ಗೋಪಾಲವಿಟ್ಠಲ ನಿನಗೆ ವೊಲಿವಾ ॥
****
No comments:
Post a Comment