ಕಾಖಂಡಕಿ ಶ್ರೀ ಮಹಿಪತಿರಾಯರು
ಸನ್ಮಾರ್ಗಪಿಡಿದು ಸದ್ವಸ್ತಿಯೊಳು ಬೆರೆದಿಹ ಸದ್ಬ್ರಹ್ಮರಿಗೆ ನಮಸ್ಕಾರ 1
ಸದ್ಗುರು ಕೃಪೆಯಿಂದ ಸದ್ಗತಿಯ ಪಡೆದಿಹ ಸದ್ಭಕ್ತರಿಗೆ ನಮಸ್ಕಾರ 2
ಅಧ್ಯಾತ್ಮವಿದ್ಯ ಸಾದ್ಯ ಮಾಡಿಕೊಂಡಿಹ ಬುದ್ಧಿವಂತರಿಗೆ ನಮಸ್ಕಾರ 3
ಸಿದ್ಧಾಂತ ಅನುಭವದ ಸಾಧನವು ಬಲಿದಿಹ ಶುದ್ಧ ಬುದ್ಧರಿಗೆ ನಮಸ್ಕಾರ 4
ಇದೆ ನಿಜತಿಳಿದಿಹ ಸದ್ಬೋಧದಲ್ಲಿ ಪೂರ್ಣ ಸದ್ಭಾವಿಗಳಿಗೆ ನಮಸ್ಕಾರ 5
ಆದಿತತ್ವದ ನೆಲೆಯು ಭೇದಿಸಿ ಬೆರೆದಿಹ ಬುದ್ದಜನರಿಗೆ ನಮಸ್ಕಾರ 6
ಕ್ರೋಧ ಕಳೆದು ಸದಾ ಶಾಂತಪದಹೊಂದಿದ ಸಾಧುರಿಗೆ ನಮಸ್ಕಾರ 7
ಭಿನ್ನ ಭೇದವನಳಿದು ತನ್ನ ತಾ ತಿಳಿದ ಸುಜ್ಞಾನಿಗಳಿಗೆ ನಮಸ್ಕಾರ 8
ಮೇಲ್ಗಿರಿಯೊಳಗಿಪ್ಪ ಮೂಲಮೂರ್ತಿಯ ತಿಳಿವ ನೆಲೆವಂತರಿಗೆ ನಮಸ್ಕಾರ 9 ಮಾಯಮೋಹವನಳಿದು ಸೋಹ್ಯ ಸೊನ್ನೆಯ ತಿಳಿದ ಮಹಾಮಹಿಮರಿಗೆ ನಮಸ್ಕಾರ 10
ಆರುಮೂರನೆ ಗೆದ್ದು ಏರಿ ತ್ರಿಪುರ ದಾಟಿ ಮೀರಿಹರಿಗೆ ನಮಸ್ಕಾರ 11
ಮನಕರಗಿ ಘನ ಬೆರೆದು ತಾನೆ ತಾನಾಗಿಹ ಮೋನ ಮುಗ್ಧರಿಗೆ ನಮಸ್ಕಾರ 12
ತತ್ವಮಸಿ ಅರ್ಥದಿತ್ಯರ್ಥವನು ತಿಳಿದಿಹ ಮುಕ್ತಜನರಿಗೆ ನಮಸ್ಕಾರ 13
ತಾನರಿತು ಸುಖಿಯಾಗಿ ಇನ್ನೊಬ್ಬರಿಗೆ ಕಣ್ದೆರೆಸುತಿಹರಿಗೆ ನಮಸ್ಕಾರ 14
ತರಳ ಮಹಿಪತಿ ಹೊರೆವ ಅರುಹು ಕುರುಹವನಿತ್ತ ಗುರುಹಿರಿಯರಿಗೆ ನಮಸ್ಕಾರ 15
***
No comments:
Post a Comment