ಯಾತರ ಸುಖವಯ್ಯಾ ಇದು ಇನ್ಯಾತರ ಸುಖವಯ್ಯಾ ಪ
ಶ್ರೀ ತರುಣೀಶನ ಮರೆತು ಸಂಸಾರದಿ ಬಾಳುವುದೆಂತೆನೆ ಅ.ಪ.
ಹಣ ಉಳ್ಳ ಮನುಜಂಗೆ ಗುಣವುಳ್ಳ ಸತಿಯಿಲ್ಲ
ಗುಣವುಳ್ಳ ಸತಿಯಿರೆ ಗುಣಡೊಂಕುಪತಿಯು
ಅನುಕೂಲವಿರೆಎರಡು ತನಯರೊಬ್ಬರು ಇರರು
ಗುಣಿಸಿ ನೋಡಲು ಎಲ್ಲು ನ್ಯೂನತೆ ಸರಿಯೈ 1
ವಿತ್ತವಿದ್ದರೆ ಹಿತರು ಬಂಧು ಬಳಗವೆಲ್ಲ
ವಿತ್ತವಿಲ್ಲಾದಿರಲು ನಿಂದಿಸಿ ನಗುತಿಹರು
ಬತ್ತಲೆ ಬಂದುದು ಬತ್ತಲೆ ಪೋಪುದು
ಮತ್ತೆ ಮಮತೆ ಯಾಕೊ ಮಧ್ಯೆ ಮತ್ತಿದ್ದುದಕೆ 2
ಸಂತೆಯತೆರಸರಿ ಸತಿಸುತ ಪರಿಜನ
ನಿಂತು ಪೋಪರು ತಮ್ಮಯ ಋಣತೀರೆ
ಅಂತ್ಯವಿಲ್ಲ ಸಂಸಾರದ ಶರಧಿಗೆ
ಸಂತಸಪ್ರದವೆಂಬ ಭ್ರಾಂತಿಯ ನೀಗಯ್ಯ 3
ಜನನ ಮರಣವೆಂಬ ದುಃಖವೆ ತಾಕಿರೆ
ದಿನದಿನ ಪ್ರತಿದಿನ ರೋಗದ ಕಾಟಗಳು
ಗುಣಿಸಿ ನೋಡಲು ಮತ್ತೆ ಮನಕೆ ನೆಮ್ಮದಿ ಇಲ್ಲ
ಅನಿಲ ಮಂದಿರ ನೊಲಿಸಿ ಗುಣದೂರನಾಗಯ್ಯ 4
ಕಾಲನೆಡೆಗೆ ಜನ ಬೀಳ್ಪುದು ನೋಡಿಯು
ಬಾಳು ಸ್ಥಿರವೆಂದು ಕೇಳಿಲಿ ಮುಳುಗುವುದೇ
ಬಾಲ ಯೌವ್ವನ ಮತ್ತೆ ಮುಪ್ಪಿಲಿ ಬೀಳುವ
ಸ್ಥೂಲ ಶರೀರವೆ ಗೋಳಿನ ಸೆರೆಮನೆಯೈ5
ಊಟ ತಿಂಡಿಗೆ ಮೇಲ್ನೋಟದ ಕೀಟಗೆ
ಪಾಟು ಪಡುತ ಕರ್ಮ ಮೂಟೆಯ ಘಳಿಸುವರೇ
ಏಟು ತಿನ್ನದೆ ಭವ ಕಾಟಕ ದಾಟಲು
ಘೋಟಕಾಸ್ಯನ ಪದವಾರಿಜ ಪಿಡಿಯೈಯ್ಯ 6
ಮಂದನಾಗದೆ ಬಹು ಮುಂದಿನ ಗತಿ ನೋಡು
ವಂದಿಸಿ ಜಯತೀರ್ಥ ವಾಯ್ವಾಂತರ್ಗತ
ಇಂದಿರೆ ಪತಿ ಕೃಷ್ಣವಿಠಲನ ಭಜಿಸಲು
ಕುಂದುಗಳಿಲ್ಲದೆ ಶಾಶ್ವತಾನಂದವು ಕೇಳಯ್ಯ 7
****
No comments:
Post a Comment