..
kruti by Nidaguruki Jeevubai
ಸ್ಮರಿಸಿ ಬೇಡುವೆ ಗುರುವರರ ಪಾದ-
ಸರಸಿಜ ಸ್ಮರಿಪರಘುಪರಿಹರಿಸುವರಪ
ಇಂದಿರೇಶನ ಮಹಿಮೆ ಬಲ್ಲ ಭಕ್ತ
ಸಂದಣಿಯೊಳು ಇವರಿಗೆ ಸಮರಿಲ್ಲ
ತಂದೆ ವೆಂಕಟೇಶ ವಿಠ್ಠಲನೆಂದು
ಸಂಭ್ರಮ ಪಡುವ ಶಿಷ್ಯರಿಗೆಣೆಯಿಲ್ಲ 1
ಸಿರಿವೆಂಕಟೇಶನ್ನ ಸ್ಮರಿಸಿ ಬಹು
ಪರಿಯಿಂದ ಪಾಡಿ ಕೊಂಡಾಡಿ ಸ್ತುತಿಸಿ
ಗಿರಿಯ ವೆಂಕಟನನ್ನು ಭಜಿಸಿ ನಮ್ಮ
ಉರಗಾದ್ರಿವಾಸ ವಿಠ್ಠಲದಾಸರೆನಿಸಿ2
ಸದ್ವೈಷ್ಣವರ ಸುರಧೇನು ಸರ್ವ
ರುದ್ಧಾರವಾಗಲು ಜನಿಸಿದರಿನ್ನು
ಬುದ್ಧಿ ಶಿಷ್ಯರಿಗೊರೆದರಿನ್ನು ತಂದೆ
ಮುದ್ದು ಮೋಹನ್ನ ವಿಠ್ಠಲದಾಸರನ್ನು 3
ಸುಂದರ ಮೂರ್ತಿಯ ತಂದು ದುರ್ಗ
ಮಂದಿರದಲಿ ಸ್ಥಾಪಿಸಿದರೊ ಅಂದು
ಛಂದದಿ ಸೇವಿಸಿರೆಂದು ಶಿಷ್ಯ
ಮಂಡಲಿಗಳಿಗೆ ಬೋಧಿಸಿದರೆಂತೆಂದು 4
ಕಳವಳ ಪಡುತಿಹೆನಲ್ಲ ಕಾಲ
ಕಳೆದು ಹೋಗುತಲಿದೆ ಅರಿವು ಬರಲಿಲ್ಲ
ಪರಮ ಭಕ್ತರ ಪರಿಯನೆಲ್ಲ
ತಿಳಿವಕಮಲನಾಭ ವಿಠ್ಠಲನಲ್ಲದಿಲ್ಲ 5
***
No comments:
Post a Comment