Thursday, 5 August 2021

ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು ankita kamalanabha vittala

 ..

kruti by Nidaguruki Jeevubai


ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು

ರತಿಪತಿಪಿತನಿಗೆ ಅತಿಹರುಷದಿ

ಅತಿಶಯದ ಮಹಿಮೆಗಳ ಪೊಗಳುತಲಿ ಶ್ರೀಹರಿಗೆ

ಕುಶಲದಾರತಿ ಎತ್ತಿಬೆಳಗಿದರು

ಜಯಮಂಗಳಂ ನಿತ್ಯ ಶುಭ ಮಂಗಳಂ 1


ಅನಸೂಯ ಸಹಿತ ಅತ್ರಿಯರು ಬೇಗನೆ ಬಂದು

ನಳಿನಾಕ್ಷನ ಚರಣಕ್ಕೆರಗಿ ನಿಂದು

ವಿಧವಿಧದ ಆಟಗಳ ಆಡಿದ ಶ್ರೀಹರಿಗೆ

ಪದುಮದಾರತಿ ಎತ್ತಿ ಬೆಳಗಿದರು

ಜಯಮಂಗಳಂ ನಿತ್ಯ ಶುಭಮಂಗಳಂ 2


ಶೀಲವತಿಯಾದ ಸುಶೀಲೆ ಸಹಿತ

ಭಾರದ್ವಾಜ ಋಷಿಗಳು ತಮ್ಮ ಆಶ್ರಮದಲಿ

ಶ್ರೀಲಕುಮಿವಲ್ಲಭಗೆ ಶೀಘ್ರದಿಂದಲಿ ತಾವು

ಗೋಮೇಧಿಕದಾರುತಿ ಬೆಳಗಿದರು

ಜಯಮಂಗಳಂ ನಿತ್ಯ ಶುಭಮಂಗಳಂ 3


ಕುಮುದ್ವತಿ ಸಹಿತ ವಿಶ್ವಾಮಿತ್ರ ಋಷಿಗಳು

ಕನಕ ಮಂಟಪದಿ ಮೆರೆಯುವ ದೇವಗೆ

ಸನಕಾದಿವಂದ್ಯನಿಗೆ ವನಜಾಕ್ಷಿಯರಸನಿಗೆ

ಕನಕದಾರತಿ ಎತ್ತಿ ಬೆಳಗಿದರು

ಜಯಮಂಗಳಂ ನಿತ್ಯ ಶುಭಮಂಗಳಂ 4


ಪ್ರಹ್ಲಾದವರದನಿಗೆ ಅಹಲ್ಯೆಯ ಸಹಿತದಿ

ಫುಲ್ಲಲೋಚನಪ್ರಿಯಗೆ ಋಷಿಗೌತಮ

ಮಲ್ಲಿಗೆಹಾರಗಳು ಧರಿಸಿ ಶೋಭಿಪ ಹರಿಗೆ

ಚಲ್ವನವರತ್ನದಾರತಿ ಎತ್ತುತಾ

ಜಯಮಂಗಳಂ ನಿತ್ಯ ಶುಭಮಂಗಳಂ 5


ರೇಣುಕಾ ಸಹಿತ ಜಗದಗ್ನಿ ಋಷಿಗಳು ತಮ್ಮ

ಧ್ಯಾನಗೋಚರನಾದ ಪರಮಾತ್ಮನ

ಮಾನಿನಿಮಣಿ ಲಕುಮಿಯೊಡನೆ ಶ್ರೀಕೃಷ್ಣನಿಗೆ

ನೀಲಮಾಣಿಕ್ಯದ ಆರತಿ ಎತ್ತುತ

ಜಯಮಂಗಳಂ ನಿತ್ಯ ಶುಭಮಂಗಳಂ 6


ಪರಮಮಂಗಳೆಯಾದ ಅರುಂಧತೀ ಸತಿ ಸಹಿತ

ವಶಿಷ್ಠ ಋಷಿಗಳು ಇಷ್ಟಮೂರುತಿಯಾದ

ವರಕಮಲನಾಭ ವಿಠ್ಠಲನ ಸ್ಮರಿಸುತ ನಿತ್ಯ

ನವರತ್ನದಾರತಿ ಬೆಳಗಿದರು

ಜಯಮಂಗಳಂ ನಿತ್ಯ ಶುಭಮಂಗಳಂ 7


ಮಂಗಳಂ ಸಪ್ತಋಷಿಗಳು ಪರ್ಣಶಾಲೆಯೊಳು

ಗಾಂಗೇಯನುತನ ಪೂಜಿಸಿ ಹರುಷದಿ

ಸಂಗೀತಲೋಲನಿಗೆ ಶೃಂಗಾರ ಪುರುಷನಿಗೆ

ರಂಗಿನಾರತಿಯೆತ್ತಿ ಬೆಳಗಿದರು

ಜಯಮಂಗಳಂ ನಿತ್ಯ ಶುಭಮಂಗಳಂ 8

***


No comments:

Post a Comment