Thursday, 5 August 2021

ಬಾಗಿಲು ತೆಗೆಯಲೆ ಭಾಮತಿ ರನ್ನಳೆ ಈಗ ನಾ ಬಂದೆನು ಇಂದುಮುಖಿ ankita kamalanabha vittala

 ..

kruti by Nidaguruki Jeevubai

ಬಾಗಿಲು ತೆಗೆಯಲೆ ಭಾಮತಿ ರನ್ನಳೆ

ಈಗ ನಾ ಬಂದೆನು ಇಂದುಮುಖಿ ಪ


ನಾಗವೇಣಿಯೆ ನಿನ್ನೀಗಲೆ ನೋಡಲು

ಬೇಗನೆ ಬಂದೆನು ತೆಗಿ ಕದವಾ ಅ.ಪ


ಯಾರದು ಈ ಸಮರಾತ್ರಿಯ ವೇಳದಿ

ಬಾಗಿಲು ತೆಗೆ ಎಂದೆನುತಿಹರು

ತೋರದು ಎನಗೊಂದಾಲೋಚನೆ ನಿಮ್ಮ

ನಾಮವು ಪೇಳಲು ತೆಗೆಯುವೆನು 1


ನೀಲವೇಣಿಯೆ ಕೇಳೆನ್ನ ಮಾತನು

ಬಹಳ ಚಿಂತೆಯಾತಕೆ ಮನದಿ

ನೀಲಕಂಠನೆಂದೆನ್ನನು ಕರೆವರು

ಕೇಳು ಮನಸು ಚಂಚಲ ಬಿಟ್ಟು 2

ನೀಲಕಂಠನೆಂದರೆ ನೆನಪಾಯಿತು

ನವಿಲಿನ ಮರಿ ಬಂದಿಹುದೆಂದು

ನಾರಿಯರೆಲ್ಲರು ಹಾಸ್ಯವ ಮಾಳ್ಪರು

ಸಾರುತ ವನಗಳ ಚರಿಸೆಂದು 3


ಬೆದರದೆ ತೆರೆ ಕದ ಸುದತಿಮಣಿಯೆ ನಾ

ಬದಲೊಂದು ನಾಮವ ಪೇಳುವೆನು

ಬುಧ ಜನರೆಲ್ಲರು ಭಕುತಿಲಿ ಸ್ಥಾಣು-

ವೆನ್ನುತ ನಾಮವ ಕೊಂಡಾಡುವರು4


ಬೂಟಾಟಿಕೆ ಮಾತುಗಳನ್ನ ಏತಕೆ

ಸಾಟಿಯಾರು ಜಗದೊಳಗಿನ್ನು

ಮೋಟುಮರಕೆ ಸ್ಥಾಣುವೆನ್ನುತ ಕರೆವರು

ಈ ಪೃಥ್ವಿಯ ಮೇಲಿನ ಜನರು 5


ಬಿಸುಜಮುಖಿಯೆ ಇನ್ನೊಂದು ಪೆಸರು ಕೇಳೆ

ಪಶುಪತಿಯೆಂದು ಕರೆವರೆನ್ನ

ವಸುಧೆಯ ಮೇಲಿನ ಪೆಸರುಗಳಿಗೆ ನೀ

ಪ್ರತಿಯಾಗರ್ಥವ ಕಲ್ಪಿಸುವಿ 6


ವೃಷಭರಾಜ ನೀನಾದರೆ ಮುಂದಕೆ

ಪಶುಗಳ ಮಂದೆಗೆ ತೆರಳುವದು

ಕುಸುಮಗಂಧಿಯರ ಸದನದಿ ಕಾರ್ಯವು

ವೃಷಭರಾಜಗಿಲ್ಲವು ಕೇಳೌ 7


ಶೀಲವಾಣಿಯೆ ಸುಶೀಲೆಯೆ ಎನ್ನಯ

ವಾಣಿ ಕೇಳಿ ಕದವನು ತೆಗಿಯೆ

ಪೇಳುವೆ ಮತ್ತೊಂದು ನಾಮವ ಎನ್ನನು

ಶೂಲಿ ಎಂದು ಕರೆವರು ಜನರು 8

ಶೂಲಿಯಾದರೆ ನಿನ್ನ ಬಾಧೆಯ ಕಳೆಯಲು

ಯಾರಿಗೆ ಸಾಧ್ಯವು ಜಗದೊಳಗೆ

ನಾರಿಯರಿಗೆ ಹೇಳದೆ ಮುಂದಕೆ ನಡೆ

ಶೂರರಾದ ವೈದ್ಯರ ಬಳಿಗೆ 9


ಕರಿಯ ಮುಖನ ಮಾತೆಯೆ ತಡಮಾಡದೆ

ಕನಕಮಯದ ಕದ ತೆರೆ ಬೇಗ

ಕಮಲನಾಭ ವಿಠ್ಠಲನನು ಪಾಡುತ

ಶಿವನ ನಮಿಸಿ ತೆಗೆದಳು ಕದವ 10

***


No comments:

Post a Comment