Monday 2 August 2021

ಶ್ರೀನಿವಾಸ ನಿನಗೆ ನಾ ಮಣಿದು ಫಲವೇನೊ ankita gopalakrishna vittala

ಶ್ರೀನಿವಾಸ ನಿನಗೆ ನಾ ಮಣಿದು ಫಲವೇನೊ

ಕಾಣಿಸದೊ ನಿನಗೆನ್ನ ಕಷ್ಟ ಪ.

ಜಾಣತನವಿದನೆಲ್ಲಿ ಮಾನನಿಧಿ ಕಲಿತೆಯೊ

ಗಾನವಿಲೋಲ ಸ್ವಾಮಿ ಪ್ರೇಮಿ ಅ.ಪ.

ಎಷ್ಟು ಕೂಗಲು ದಯವು ಪುಟ್ಟಲಿಲ್ಲವೊ ನಿನಗೆ

ಕೃಷ್ಣಮೂರುತಿಯೆ ಕೇಳೊ

ಕಷ್ಟಪಡಿಸುವುದೀಗ ದಿಟ್ಟತನವೇ ನಿನಗೆ

ಶ್ರೇಷ್ಠ ನೀನೆನಿಸಿಕೊಂಡು

ಪಟ್ಟವ್ಯಾತಕೆ ನಿನಗೆ ಮೂರು ಲೋಕದ ರಾಜ್ಯ

ಬಿಟ್ಟು ಬಿಡು ನೀನೀಗಲೆ

ದೃಷ್ಟಿಯಿಂದಲಿ ನೋಡಿ ನಿನ್ನ ತೋರೆಂದೆನಲು

ಸೊಟ್ಟ ತಿರುಹಿರುವೆ ಮುಖವ ದೇವ 1

ತೋರೊ ಮೋರೆಯನೆನಲು ನೀರ ಪೋಗುವೆ ಬೆನ್ನು

ಭಾರ ಪೊತ್ತು ಕೋರೆ ತೆರೆವೆ

ಘೋರ ರೂಪವ ತೋರಿ ಈ ರೀತಿ ಬೆದರಿಸುವೆ

ದಾರಿ ಎನಗಿನ್ನಾವುದೊ

ನಾರಿಯನೆ ಪೆತ್ತು ನೀ ನಾರಿಯನೆ ಕೊಂದು ನಿನ್ನ

ನಾರಿ ಚೋರನ ವಧಿಸಿದೆ

ನಾರೆರೋಸ್ತ್ರವ ಕದ್ದು ನಾರಿಯರ ವ್ರತ ಕೆಡಿಸಿ

ಏರಿ ಓಡಿದೆ ಕುದುರೆಯ ಜೀಯಾ 2

ಈ ಪರಿಗೈದರೆ ಕಾಪಾಡುವವರ್ಯಾರೊ

ಭೂಪರೈವರ ಪೊರೆದನೆ

ತಾಪಪಡುವುದು ನಿನಗೆ ತೋರ್ಪುದಿಲ್ಲವೆ ದೇವ

ಪಾಪಿ ಎಂದೆನಬೇಡವೊ

ನೀ ಪಾರುಗೊಳಿಸಬೇಕೀಪರಿಯ ಬವಣೆಗಳ

ಶ್ರೀಪತಿಯೆ ಶ್ರೀನಿವಾಸ

ಗೋಪಾಲಕೃಷ್ಣವಿಠ್ಠಲನೆ ನೀನಲ್ಲದೆ

ಕಾಪಾಡುವವರನರಿಯೆ ದೊರೆಯೆ 3

****


No comments:

Post a Comment