ನೋಡಿದ್ಯಾ ಕೃಷ್ಣನ ರೂಪವ | ಪ್ರತಾಪವ
ಬೇಡಿದುದಿತ್ತುಕಾವ ಪ.
ವೃತ್ತ :
ಬಾಲಾರೂಪನು ಕೃಷ್ಣಗೋಕುಲದಲಿ ಲೀಲೆಯ ತೋರುತ್ತಲೀ
ಕಾಲಕಾಲದಿ ಗೋಪಿ ಬಾಲೆಯರಿಗೆ ಜಾಲವ ತೊರುತ್ತಲೀ
ನೀಲಾಕುಂತಳ ಕೊಳಲ ಪಿಡಿದು ವನದಿ ಲೋಲಾಕ್ಷಿಯರ ಕೂಡುತ
ಲೀಲೆ ಮಾಳ್ಪನು ನೀರೆ ಬಾರೆ ನೋಡೋಣವೆ
ಪದ:
ಶರದ ಚಂದ್ರನ ಅರ್ಧರಾತ್ರಿಯು ಕಾಂತಿಪೂರ್ತಿಯು
ವನದ ವೈಭವ ಶ್ರೀಯು
ಅರವಿಂದನಾಭನು ವನದಲ್ಲಿ ಯಮುನ ದಡದಲ್ಲಿ
ಕೊಳಲನೂದುತಲಲ್ಲಿ
ಪರಿಪರಿ ಆನಂದಪಡುತಿರೆ ಸುಖ ಬೆರೆತಿರೆ
ಸುರರು ನೋಡುತ್ತಲಿರೆ
ಅರವಿಂದ ಮುಖಿಯರು ಕೇಳುತ್ತ ಮೈಮರೆಯುತ್ತ
ಕೃಷ್ಣನಿದ್ದಲ್ಲಿ ಬರುತ 1
ವೃತ್ತ :
ಕೊಳಲ ಧ್ವನಿಯ ಕೇಳಿ, ಗೋಪಾಂಗನೆಯರು ಪೊಳಲೊಳು ತಂತಮ್ಮಯ
ಎಳೆಯ ಮಕ್ಕಳನೆಲ್ಲ ಬಿಟ್ಟು ನಳಿನಾಕ್ಷನಿದ್ದಲ್ಲಿಗೆ
ಸೆಳೆದ ಮನ ಹಿಂತಿರುಗಿಸದಲೆ ನಳಿ ತೋಳ ಆಭರಣಗಳ್
ಒಲವಿನಿಂ ವ್ಯತ್ಯಸ್ಥದಿಂದ ತೊಡುತ ಫಳಿಲನೆ ಬಂದರೊನಕೆ
ಪದ :
ಬಂದ ಗೋಪಿಯರನೆ ನೋಡಿದ ಮಾತಾಡಿದ
ನಲಿದಾಡುತ ನಿಂದ
ಇಂದೇಕೆ ಈ ಪರಿ ಬಂದಿರೆ ಎಲೆ ಸುಂದರೆ ನಿಮ್ಮ
ಪತಿಗಳ್ ಬಯ್ಯುವರೆÉ
ಕಂದರು ನಿಮ್ಮನು ಕಾಣದೆ ದಿಕ್ಕು ತೋರದೆ
ರೋದಿಪರಲ್ಲೆ ಬರಿದೆ
ಬಂದು ನೋಡಿದಿರೆನ್ನನು ಈಗ ಪೋಗಿರಿ ಬೇಗ
ಸಾಕು ನಿಮ್ಮಯ ಸಂಗ 2
ವೃತ್ತ :
ಪುಲ್ಲನಾಭನೆ ನಿನ್ನ ನಂಬಿ ನಮ್ಮ ವಲ್ಲಭರ ತೊರೆಯುತ್ತಲೀ
ಎಲ್ಲ ಹಂಬಲ ಬಿಟ್ಟು ಈಗ ನಿನ್ನಲ್ಲಿ ಬಂದಿಪ್ಪೆವೊ
ಸೊಲ್ಲು ಸೊಲ್ಲಿಗೆ ನಿನ್ನ ನೆನೆದು ನಾವು ಶ್ರೀನಲ್ಲ ಪೊರೆ ಎನ್ನುತ
ಇಲ್ಲಿಗೈತಂದ ಎಮ್ಮನೀಗ ನಿಲ್ಲದೆ ಪೋಗೆಂಬರೆ
ಪದ :
ನಂಬಿದ ಭಕ್ತರ ಬಿಡುವರೆ ಪೊರೆಯದಿರುವರೆ
ಪೋಗೆಂದು ಪೇಳುವರೆ
ಅಂಬುಜಾಕ್ಷನೆ ಕಾಮನಂಬಿಗೆ ಬಿದ್ದೆವು ಈಗೆ
ನೀ ಸಲಹದೆ ಪೋಗೆ
ಬೆಂಬಿಡಲಾರೆವೊ ಹರಿ ನಿನ್ನ ಪೋಷಿಸೊ ಘನ್ನ
ನಂಬಿಪ್ಪೆವೊ ನಿನ್ನ
ಕಂಬುಕಂಧರ ನಿನ್ನ ಸಂಗಕೆ ಆಯಿತು ಬಯಕೆ
ಬಂದೆವೊ ಅಂಗಸುಖಕೆ 3
ವೃತ್ತ :
ವನಿತಾಮಣಿಯರ ಮನದ ದೃಢಕೆ ವನಜಾಕ್ಷ ಒಲಿಯುತ್ತಲಿ
ಮನಸಿಜಾಪಿತನು ತನ್ನ ಲೀಲೆ ಮನವೊಪ್ಪಿ ತೋರುತಲಿ
ಘನ ನೀಲವರ್ಣ ಕೃಷ್ಣ ಶೋಭಿಸುತಿರೆ ವನಜಾಕ್ಷಿಯರ ಮಧ್ಯದಿ
ಮನದಲ್ಲಿ ಪುಟ್ಟಿತಾಗ ಮದ ಗರ್ವ ಸಮರ್ಯಾರು ನಮಗೆನ್ನುತ
ಪದ :
ಹರಿ ತಿಳಿದ ಸತಿಯರ ಗವರ್Àವ ಇದಕುಪಾಯವ
ಒಂದು ನೆನೆದ ಶ್ರೀದೇವ
ಅರವಿಂದನಾಭನು ಅವರಿಗೆ ಕಾಣದೆ ಪೋಗೆ
ಕಂಗೆಡುತಲಿ ಕೂಗೆ
ಸರಸಿಜಾಕ್ಷ್ಷನು ನಮ್ಮ ತೊರೆದನು ಬಿಟ್ಟು ಪೋದನು
ಹುಡುಕೋಣ ಬಾರೆ ಇನ್ನು
ಹರಿಣಾಕ್ಷಿಯರ ವನ ವನದಲ್ಲಿ ಹರಿಯನಲ್ಲಲ್ಲಿ
ಅರಸುತಲಿ ಪೋಗಲಲ್ಲಿ 4
ವೃತ್ತ :
ಕಂಡರಲ್ಲಿ ಹರಿಯ ಹೆಜ್ಜೆ ಗುರುತು ಬೆಂಡಾಗಿ ಬಾಲೆಯರು
ಪುಂಡರೀಕಾಕ್ಷ ಒಬ್ಬಳನೆ ಕರೆದುಕೋಂಡೀಗ ಬಂದಿಪ್ಪನೆ
ಮಂಡೆ ನೇವರಿಸಿ ಪೂ ಮುಡಿಸಿಹ ಶುಂಡಾಲ ವರದ ಹರಿ
ಕಂಡೆನೆ ಕಾಲಿನ್ಹೆಜ್ಜೆ ಗುರುತು ಭಂಡಾಳು ಅವಳ್ಯಾವಳೆ
ಪದ :
ಇಂತೆಂದು ಬರುತಿರೆ ವನದಲ್ಲಿ ಸುದತಿಯರಲ್ಲಿ
ಸಂಪಿಗೆ ಮರದಲ್ಲಿ
ಕಾಂತನ ಕಾಣದೆ ಕೊರಗುತ್ತ ತೂಗಾಡುತ ಬಹು
ಕಷ್ಟವ ಪಡುತ
ಇಂತಿದ್ದ ಸುದತಿಯ ತಾವ್ ಕಂಡು ಇಳುಹಿಸಿಕೊಂಡು
ಕೇಳೆ ನುಡಿದಳು ದುಃಖಗೊಂಡು
ಕಾಂತ ಕೃಷ್ಣನು ಎನ್ನ ಕರತಂದ ಪೂವ ಕೊಯ್ಯೆಂದ
ಇಂತು ಬಿಟ್ಟೆನ್ನ ಪೋದ 5
ವೃತ್ತ :
ಏನ ಹೇಳಲೆ ಹರಿಯು ಕರೆದು ತಂದು ನಾನಾ ಸುಖವಪಡಿಸಿದ
ನಾನೆ ಸುಂದರಿ ಎಂದು ಮನದಿ ತಿಳಿದೆ ನಾ ನಡೆಯಲಾರೆನೆಂದೆ
ದೀನನಾಥನು ಎನ್ನನೆತ್ತಿಕೊಂಡು ಬರಲು ಈ ನಳಿನ ಬೇಕೆಂದೆನೆ
ಶ್ರೀನಾಥ ಇಲ್ಲೆನ್ನ ಬಿಟ್ಟು ಪೋದ ಏನೆಂಬೆ ಈ ಕಷ್ಟವ
ಪದ :
ಎಷ್ಟು ಪುಡುಕಲು ಕೃಷ್ಣ ತೋರನೆ ಇಲ್ಲಿ ಬಾರೆನೆ
ಮನ ಕೆಟ್ಟಿತೆ ಇನ್ನೆ
ಒಟ್ಟುಗೂಡಿ ಎಲ್ಲ ನೆರೆಯೋಣ ಹರಿಯ ಕರಿಯೋಣ ಭಕ್ತಿ
ಭಾವ ಮಾಡೊಣ
ಇಷ್ಟಾರ್ಥ ಸಲಿಸುವ ಕುಲದೈವ ಎಮ್ಮನು ಕಾವ
ಬಿಡಿಸುವ ಭವನೋವ
ನಿಷ್ಠೆಯಿಂದಲಿ ಇಂತು ನೆನೆಯುತ್ತ ಮೈ ಮರೆಯುತ್ತ
ಕೃಷ್ಣ ಪೊರೆಯೊ ಎನ್ನುತ್ತ 6
ವೃತ್ತ :
ಶ್ರೀ ಕಮಲಭವ ರುದ್ರ ಇಂದ್ರಾದಿಗಳ್ ಲೋಕೇಶ ನಿನ್ನಂಘ್ರಿಯ
ಏಕಮಾನಸಿನಿಂದ ಭಜಿಸಿ ಸಾಕಲ್ಯಪೊಂದಿಪ್ಪರೊ
ಯಾಕಿಂತೀ ಪರಿ ನಿರ್ದಯವೊ ಎಮ್ಮ ಮೇಲೆ ಶೀಕಾಂತ ಕಾಪಾಡೆಲೊ
ಪಾಕ ಶಾಸನ ವಂದ್ಯ ಹರಿಯೆ ಎಮ್ಮ ಸಾಕುವ ನೀನಲ್ಲವೆ
ಪದ :
ಬಾಲಕತನದಲ್ಲಿ ದೈತ್ಯರ ಬಾಧೆಯ ಧೀರ ಬಿಡಿಸಿ
ಕಾಯ್ದೆಯೋ ಶೂರ
ಲೀಲೆಯಿಂದಲಿ ಗಿರಿ ಎತ್ತಿದೆ ಅಗ್ನಿ ನುಂಗಿದೆ ಕಾಳಿಯ
ಗರ್ವ ಮುರಿದೆ
ಪೇಳಲೊಳವೆ ನಿನ್ನ ಮಹಿಮೆಯ ಒಡಲೊಳ್
ಭೂಮಿಯ ತೋರ್ದೆ ಗೋಪಿಗೆ ಪ್ರಿಯ
ಪಾಲು ಮೊಸರು ಕದ್ದು ಮೆದ್ದೆಯೊ ತುರುವ
ಕಾಯ್ದೆಯೊ ನಾನಾ ಕಷ್ಟ ಬಿಡಿಸಿದೆಯೊ 7
ವೃತ್ತ :
ಇಂತು ಈ ಪರಿಕಾಯ್ದ ಹರಿಯೆ ಎಮ್ಮ ಸಂತಾಪ ಬಿಡಿಸೆನ್ನುತ
ಇತು ಮದಗರ್ವವಳಿದು ಸ್ತುತಿಸೆ ಶ್ರೀ ಕಾಂತ ತಾ ಮೆಚ್ಚುತ
ನಿಂತನಾಗಲೆ ಅವರ ಎದುರೊಳ್ ಕಂತುಪಿತ ಇನಕೋಟಿಯ
ಕಾಂತಿ ಮೀರುವ ತೇಜದಿಂದ ಕಾಂತಾಮಣಿಯರ ಮಧ್ಯದಿ
ಪದ:
ಮನ್ಮಥಕೋಟಿ ಲಾವಣ್ಯನು ನಿಂತನು ತಾನು
ರಾಸಕ್ರೀಡೆಯಾಡಿದನು
ವನಿತೇರಿಗೊಂದೊಂದು ರೂಪಾದ ಸುಖ ತೋರಿದ
ವೇಣುಗಾನಗೈದ
ಘನನೀಲವರ್ಣ ಹೊದ್ದಿಹ ನೀಲ ವಸ್ತ್ರವು ಫಾಲ
ತಿಲಕವು ವಿಶಾಲ
ಸನಕಾದಿಗಳ ವಂದ್ಯ ಗೋಪಾಲಕೃಷ್ಣವಿಠ್ಠಲ
ಎನ್ನ ಸಲಹೊ ಶ್ರೀ ಲೋಲ 8
****
No comments:
Post a Comment